ಪೆಟ್ರೋಲ್, ಡೀಸಿಲ್ ಜಿ.ಎಸ್.ಟಿ ವ್ಯಾಪ್ತಿಗೆ ಬಂದರೆ ಏನಾಗುತ್ತೆ!?

ಪೆಟ್ರೋಲ್ ಮತ್ತು ಡೀಸೆಲ್‍ನ್ನು ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ವ್ಯಾಪ್ತಿಗೊಳಪಡಿಸಲು ಕೇಂದ್ರ ಸರ್ಕಾರ ಮುಂದಾಗಿರುವುದರಿಂದ ರಾಜ್ಯದ ಸರ್ಕಾರದ ಮೂಲ ಆದಾಯಕ್ಕೆ ಕೊಡಲಿ ಪೆಟ್ಟು ಬೀಳುವ ಆತಂಕ ಎದುರಾಗಿದೆ.
ಏಕೆಂದರೆ ಇದೇ 17ರಂದು ಉತ್ತರಪ್ರದೇಶದ ರಾಜಧಾನಿ ಲಖ್ನೋದಲ್ಲಿ ಜಿಎಸ್‍ಟಿ ಕೌನ್ಸಿಲ್ ಮಹತ್ವದ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಕೋವಿಡ್ 19 ಚಿಕಿತ್ಸಾ ಉಪಕರಣ ಮತ್ತು ಔಷಧ ಸೇರಿದಂತೆ ಕೆಲ ಅಗತ್ಯ ವಸ್ತುಗಳಿಗೆ ಸುಂಕ ವಿನಾಯಿತಿಯನ್ನು ವಿಸ್ತರಿ ಸುವ ಬಗ್ಗೆಯೂ ಮಂಡಳಿಯು ಪರಿಶೀಲನೆ ನಡೆಸುವ ಸಾಧ್ಯತೆ ಇದೆ. ಒಂದು ವೇಳೆ ಪೆಟ್ರೋಲ್ ಮತ್ತು ಡಿಸೇಲ್‍ನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದರೆ ರಾಜ್ಯ ಸರ್ಕಾರದ ಶೇಕಡಾ 30ರಷ್ಟು ಮೂಲ ಆದಾಯ ಕೈ ತಪ್ಪಲಿದೆ.
ರಾಜ್ಯ ಸರ್ಕಾರ ಪ್ರತಿ ಲೀಟರ್ ಡೀಸೆಲ್ ಮತ್ತು ಪೆಟ್ರೋಲ್‍ಗೆ 11ರಿಂದ 13 ರೂ. ಮಾರಾಟ ತೆರಿಗೆಯನ್ನು ಹಾಕುತ್ತದೆ. ಪ್ರತಿ ದಿನ ಸರ್ಕಾರದ ಬೊಕ್ಕಸಕ್ಕೆ ಕೋಟಿ ಗಟ್ಟಲೇ ಆದಾಯ ಬರುತ್ತಿದೆ. ಒಂದು ವೇಳೆ ಜಿಎಸ್‍ಟಿ ವ್ಯಾಪ್ತಿಗೆ ಒಳಪಟ್ಟರೆ ಇದರ ಆದಾಯ ಕೇಂದ್ರ ಸರ್ಕಾರಕ್ಕೆ ಹೋಗಲಿದೆ.
ಅಡುಗೆ ಅನಿಲ (ಎಲ್‍ಪಿಜಿ), ಸೀಮೆಎಣ್ಣೆ, ನಾಫ್ತಾಗಳಿಗೆ ಜಿಎಸ್‍ಟಿ ಅನ್ವಯವಾಗುತ್ತಿದೆ. ಆದರೆ ಡೀಸೆಲ್, ಪೆಟ್ರೋಲ್, ನೈಸರ್ಗಿಕ ಅನಿಲ, ಕಚ್ಚಾ ತೈಲ ಮತ್ತು ವಿಮಾನ ಇಂಧನವನ್ನು ಸದ್ಯಕ್ಕೆ ಜಿಎಸ್‍ಟಿಯಿಂದ ಹೊರಗೆ ಇಡಲಾಗಿದೆ. ರಾಜ್ಯ ಸರ್ಕಾರಗಳು ಮದ್ಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ಬಿಟ್ಟುಕೊಡಲು ಮುಂದಾಗದ ಹಿನ್ನೆಲೆಯಲ್ಲಿ ಇವುಗಳು ಜಿಎಸ್‍ಟಿ ವ್ಯಾಪ್ತಿಗೆ ಸೇರ್ಪಡೆಯಾಗಿಲ್ಲ.
ರಾಜ್ಯ ಸರ್ಕಾರಗಳಿಗೆ ಅತಿಹೆಚ್ಚು ಆದಾಯ ಮೂಲವೇ ತೈಲ. ಕೇಂದ್ರ ಸರ್ಕಾರ ಅಬಕಾರಿ ಸುಂಕ ಹಾಕಿದರೆ ರಾಜ್ಯ ಸರ್ಕಾರ ವ್ಯಾಟ್ ಹಾಕುತ್ತವೆ. ಈ ಮೂಲಕ ರಾಜ್ಯದ ಬೊಕ್ಕಸವನ್ನು ತುಂಬಿಸಿಕೊಳ್ಳುತ್ತದೆ. ಅಷ್ಟೇ ಅಲ್ಲದೇ ಸುಲಭವಾಗಿ ಆದಾಯ ಸಂಗ್ರಹವಾಗುತ್ತದೆ. ಸದ್ಯ ರಾಜ್ಯ ಸರ್ಕಾರಕ್ಕೆ ಮೂಲ ಆದಾಯವೇ ತೈಲ ಮಾರಾಟ. ಇದರ ಜೊತೆಗೆ ಅಬಕಾರಿ, ಮುದ್ರಣ ಮತ್ತು ನೋಂದಣಿಯಿಂದಲೂ ವರಮಾನ ಬರುತ್ತದೆ. ಈಗೇನಾದರೂ ಡೀಸೆಲ್-ಪೆಟ್ರೋಲ್ ಕೈ ತಪ್ಪಿದರೆ ಬಹುಪಾಲು ಆದಾಯದ ಕೊರತೆಯನ್ನು ಎದುರಿಸಬೇಕಾಗುತ್ತದೆ.
ಕಳೆದ ಎರಡು ವರ್ಷಗಳಿಂದ ದೇಶ ಸೇರಿದಂತೆ ಎಲ್ಲೆಡೆ ಕೋವಿಡ್ ಆವರಿಸಿದ್ದ ಕಾರಣ ಬಹುತೇಕ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ಪದೇ ಪದೇ ಲಾಕ್‍ಡೌನ್ ಮತ್ತು ರಾತ್ರಿ ಕಫ್ರ್ಯೂ ವಿಧಿಸಿದ ಪರಿಣಾಮ ಆದಾಯದ ಮೂಲ ಕೈಕೊಟ್ಟಿದೆ. ವಿರೋಧ ಸಾಧ್ಯತೆ: ಒಂದು ವೇಳೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್‍ನ್ನು ಜಿಎಸ್‍ಟಿ ವ್ಯಾಪ್ತಿಗೆ ತರಲು ಮುಂದಾದರೆ ಬಹುತೇಕ ಎಲ್ಲ ರಾಜ್ಯಗಳು ಇದನ್ನು ವಿರೋಧಿಸುವ ಸಾಧ್ಯತೆ ಹೆಚ್ಚಾಗಿದೆ.
ಯಾವ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಕೇಂದ್ರ ಸರ್ಕಾರದ ಈ ಪ್ರಸ್ತಾವನೆಯನ್ನು ಒಪ್ಪುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ತಮ್ಮ ಆದಾಯದ ಮೂಲವನ್ನು ಕೈಬಿಟ್ಟು ನಾವೇಕೆ ಕೇಂದ್ರ ಸರ್ಕಾರದ ಮುಂದೆ ಕೈಕಟ್ಟಿ ನಿಲ್ಲಬೇಕು ಎಂಬುದು ಬಹುತೇಕರ ಪ್ರಶ್ನೆಯಾಗಿದೆ. ಇನ್ನು ರಾಜ್ಯ ಸರ್ಕಾರ ಕೂಡ ಇದಕ್ಕೆ ಸಮ್ಮತಿಸುವ ಸಾಧ್ಯತೆಗಳೂ ಇಲ್ಲ.
ಸರ್ಕಾರಿ ನೌಕರರು ಸಂಬಳಕ್ಕೂ ಪರದಾಡುತ್ತಿರುವ ಸಂದರ್ಭದಲ್ಲಿ ಸರ್ಕಾರದ ಮೂಲ ಆದಾಯವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಸಭೆಯಲ್ಲಿ ನಾವು ರಾಜ್ಯದ ನಿಲುವನ್ನು ತಿಳಿಸುತ್ತೇವೆ ಎಂದು ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ. ಇಲ್ಲಿಯವರೆಗೆ ರಾಜ್ಯ ಸರ್ಕಾರಗಳು ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‍ಟಿ ವ್ಯಾಪ್ತಿಗೆ ತರಲು ವಿರೋಧ ವ್ಯಕ್ತಪಡಿಸುತ್ತಿವೆ. ಜಿಎಸ್‍ಟಿ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕಾದರೆ ಮಂಡಳಿ ಸದಸ್ಯ ರಾಜ್ಯಗಳ ಮೂರನೇ ಎರಡರಷ್ಟು ಬಹುಮತ ಬೇಕು.
ಮಾಜಿ ಸಿಎಂ ಕುಮಾರಸ್ವಾಮಿ ಅವರು ತಮ್ಮ ಅಧಿಕಾರ ಅವಧಿಯಲ್ಲಿ ರೈತರ ಸಾಲಮನ್ನಾ ಮಾಡಲು, ಆರ್ಥಿಕ ಸಂಪನ್ಮೂಲ ಹೆಚ್ಚಿಸಲು, ಪೆಟ್ರೋಲ್-ಡೀಸೆಲ್ ಮೇಲೆ ಹೆಚ್ಚುವರಿ ತೆರಿಗೆ ಹಾಕಿದ್ದರು. ಸದ್ಯಕ್ಕೆ ರಾಜ್ಯ ಸರ್ಕಾರಕ್ಕೆ ಸಂಪನ್ಮೂಲ ಹೆಚ್ಚಳ ಮಾಡಲು ಇರುವ ಏಕೈಕ ಮಾರ್ಗ ಎಂದರೆ ತೈಲ. ಹೀಗಾಗಿ ಯಾವುದೇ ಸರ್ಕಾರ ಪೆಟ್ರೋಲನ್ನು ಜಿಎಸ್‍ಟಿ ವ್ಯಾಪ್ತಿಗೆ ತರಲು ಒಪ್ಪಿಗೆ ನೀಡುತ್ತಿಲ್ಲ.