ಪುಸ್ತಕ ವಿಮರ್ಶೆ: ‘ಎದೆಗೆ ಬಿದ್ದ ಅಕ್ಷರ’

ವಿಶೇಷ ಸೂಚನೆ: ಈ ಬರಹದಲ್ಲಿರುವ ವಿಚಾರಧಾರೆಗಳು ವಿಮರ್ಶಕರ ವೈಯಕ್ತಿಕ ಅಭಿಪ್ರಾಯಗಳೇ ಹೊರತು ಅದಕ್ಕೂ ಸುದ್ದಿ ಸಂತೆ ನ್ಯೂಸ್ ಪೋರ್ಟಲ್ಲಿನ ವಿಚಾರಧಾರೆಗಳಿಗೂ ಯಾವುದೇ ಸಂಬಂಧವಿರುವುದಿಲ್ಲ. ವಿಮರ್ಶಕನ ಖಾಸಾ ತತ್ವ-ಸಿದ್ಧಾಂತಗಳಿಗೆ ಸುದ್ದಿ ಸಂತೆ ಬಾದ್ಯಸ್ಥರಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ.

ಸಂಪಾದಕರು, ಸುದ್ದಿ ಸಂತೆ

ಅದೊಂದು ದಿನ ನಡುರಸ್ತೆಯಲ್ಲಿಯೇ ಸೋಲಿಗೆ ಕಾರಣ ಏನೆಂದು ,ಗೆಲ್ಲಲು ಬೇಕಾದ ಸಾಧ್ಯತೆಗಳೇನೆಂದು ,ಮತ್ತು ಸೋಲಿಗೆ ಪ್ರತೀಕಾರವೇನೆಂದು ಯೋಚಿಸುತ್ತಾ ನಡೆಯುತ್ತಿದ್ದೆ.ಆಗ ಸಿಕ್ಕಿದರು ದ.ಸಂ.ಸಮಿತಿಯ ಜಿಲ್ಲಾ ಸಂಚಾಲಕರಾದ ಹೆಚ್ ಎಲ್ ದಿವಾಕರ್.

ಸು.ಐದು ವರ್ಷಗಳಿಂದ ನಾನು ದ.ಸಂ.ಸಮಿತಿಯಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದೆ.ನಾನು ಸಂಘಟನೆಗೆ ಸೇರುವ ಮೊದಲೇ “ಎದೆಗೆ ಬಿದ್ದ ಅಕ್ಷರ” ಯಾಕೆ ನನ್ನ ಕೈ ಸೇರಲಿಲ್ಲ ಎಂದು ಬಹಳಷ್ಟು ಚಿಂತೆಗೀಡಾಗಿದ್ದೇನೆ. ಇಷ್ಟು ತಡವಾಗಿ ಸೇರಿದ್ದಕ್ಕೂ ಒಂದು ರೀತಿಯ ಆಶ್ಚರ್ಯವಾಗಿದೆ ಎನ್ನಬಹುದು. ದ.ಸ.ಸಮಿತಿ ಪ್ರೊ.ಕೃಷ್ಣಪ್ಪನವರ ಅಧ್ಯಕ್ಷತೆಯಲ್ಲಿ ಮೊಟ್ಟಮೊದಲು ಹುಟ್ಟಿಕೊಳ್ಳುವಾಗ ಅವರ ಜೊತೆಗಿದ್ದ ದಲಿತ ಬಂಡಾಯ ಸಾಹಿತ್ಯದ ದಿಗ್ಗಜರಾದ ದೇವನೂರ್ ಮಹಾದೇವ ಅವರ ಸಂಘಟನೆ ,ತಳಸಮುದಾಯಗಳ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆ ಆಚರಣೆ, ದೇವರು ಧರ್ಮಗಳು ಮತ್ತು ದೇವರು ಧರ್ಮಗಳನ್ನು ಆಧಾರವಾಗಿಸಿಕೊಂಡು ರಾಜಕೀಯ ಮಾಡುತ್ತಿರುವ ಕೆಲವು ಅನಿಷ್ಟಗಳ ಬಗ್ಗೆ ಸವಿಸ್ತಾರವಾಗಿ ಬರೆದಿರುವ “ಎದೆಗೆ ಬಿದ್ದ ಅಕ್ಷರವನ್ನು ” ಇದೀಗ ಓದಿಮುಗಿಸಿ ಹೀಗನ್ನಿಸುತ್ತಿರುವುದು ನಿಜ.

ನಿಜ‌ ಹೇಳಬೇಕೆಂದರೆ ಇದೀಗ ಅಂಬೇಡ್ಕರ್ ವಿಚಾರವಾಗಲೀ ಪ್ರಸ್ತುತ ರಾಜಕೀಯದ ವಿಚಾರವಾಗಲೀ ಗಂಟೆಗಟ್ಟಲೆ ಮಾತನಾಡುವ ನಾನು ಐದು ವರ್ಷಗಳ ಹಿಂದೆ ಸಾಧಾರಣ ಯುವಕನಾಗಿದ್ದೆ.ಅಂಬೇಡ್ಕರ್ ವಿಚಾರಧಾರೆಗಳ ಬಗ್ಗೆ ಒಂದಿಷ್ಟೂ ತಿಳಿದುಕೊಳ್ಳದಿರುವ ನಾನು ಹಿಂದಿನ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನನ್ನ ತಂದೆಗಾದ ಸೋಲಿಗೆ ತಕ್ಕ ಉತ್ತರ ನೀಡಬೇಕೆಂದೇ ದ.ಸಂ.ಸಮಿತಿಯ ಸದಸ್ಯನಾಗಬೇಕೆಂದುಕೊಂಡಿದ್ದು.ಅದೇ ಸಮಯದಲ್ಲಿ ದ.ಸಂ.ಸಮಿತಿಯ ಜಿಲ್ಲಾ ಸಂಚಾಲಕರಾದ ದಿವಾಕರ್ ಅವರು ಅನಿರೀಕ್ಷಿತವಾಗಿ ಭೇಟಿಯಾಗಿ ಸಂಘಟನೆಯನ್ನು ಪರಿಚಯಿಸಿದ ಮೇಲೆ ಮೇಲೆ‌ ಹೇಳಿದಂತೆ ಸೋಲಿನ ಪ್ರತೀಕಾರಕ್ಕೆ ದ. ಸಂ. ಸಮಿತಿ ಉತ್ತಮ ವೇದಿಕೆಯೆಂದೇ ಅಂದುಕೊಂಡು ಸದಸ್ಯನಾಗಲು ಒಪ್ಪಿಕೊಂಡೆ.

ಆದರೆ ಯಾವಾಗ ನನಗೆ ಅಂಬೇಡ್ಕರ್ ಚಿಂತನೆಗಳ ಪರಿಚಯವಾಯಿತೋ ಅವತ್ತಿನಿಂದ ಇಲ್ಲಿಯವರೆಗೆ ಅಂಬೇಡ್ಕರ್ ಸಿದ್ದಾಂತಕ್ಕೆ ಬದ್ದನಾಗಿ ನಾನು ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ.ಅವುಗಳಲ್ಲಿ ಬಹಳಷ್ಟು ಹೋರಾಟಗಳಲ್ಲಿ ಜಯಶಾಲಿಯಾಗಿ ಸವರ್ಣೀಯರ ಮನದಲ್ಲಿ ಭಯ ಹುಟ್ಟಿಸುವಲ್ಲಿಯೂ ಯಶಸ್ವಿಯಾಗಿತ್ತು ನಮ್ಮ ಸಂಘಟನೆ.ಆದರೂ ಬಹಳ ದಿನಗಳಿಂದ ತಳಸಮುದಾಯದ ಜನರನ್ನು ಸಂಘಟಿಸಲು ನನ್ನಲ್ಲಿ ವಿಚಾರಗಳ ಕೊರತೆ ಇದೆಯೆಂಬ ಅಳುಕು ನನ್ನನ್ನು ಕಾಡುತ್ತಿತ್ತು.ಇತ್ತೀಚಿಗೆ ಮೊಬೈಲ್ನಲ್ಲಿರುವ ತಾಂತ್ರಿಕತೆಯಿಂದಾಗಿ ಕೆಲವು ಪ್ರಗತಿಪರ ಚಿಂತಕರು,ಹೋರಾಟಗಾರರ ಮಾತುಗಳನ್ನು ಕೇಳಿಸಿಕೊಂಡು ನನ್ನನ್ನು ನಾನು ನವೀಕರಿಸಿಕೊಳ್ಳುತ್ತಿದ್ದೆಯಾದರೂ ಅರೆಬೆಂದ ಕೂಳು ತಿನ್ನಲು ಯೋಗ್ಯವಲ್ಲವೆಂಬಂತೆ ನನ್ನೆಲ್ಲಾ ವಿಚಾರಗಳು ಅರ್ಧಂಬರ್ಧವಾಗುತ್ತಿತ್ತು.

ಆಗ ನನಗೆ ಸಿಕ್ಕಿದ್ದೇ ಸಾಹಿತ್ಯ. ನನ್ನೆಲ್ಲಾ ವಿಮರ್ಶೆಗಳಲ್ಲಿ ನನ್ನ ಗೆಳೆಯನನ್ನು ನೋಡಿ ಓದುವವರಿಗೆ ಬೇಸರವೆನಿಸಬಹುದು.ಆದರೆ ನನಗೆ ಸಾಹಿತ್ಯದ ಪರಿಚಯ‌ಮಾಡಿ ನನ್ನೊಳಗಿನ ವಿಚಾರಗಳ ನವೀಕರಿಸುವಿಕೆಗೆ ಮೂಲಕಾರಣ ಆತನೇ.ಅವನೇ ರಂಜಿತ್ ಕವಲಪಾರ. ಈತ ಪರಿಚಯಿಸಿದ ಸಾಹಿತ್ಯವನ್ನು ಓದುತ್ತಾ ಓದುತ್ತಾ ನನ್ನೊಳಗಿನ ವಿಚಾರಗಳನ್ನು ನನಗೇ ತಿಳಿಯದಂತೆ ನಾನು ಅಪ್ಡೇಟ್ ಗೊಳಿಸಿಕೊಳ್ಳುತ್ತಿದ್ದೆ.ದಲಿತರ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆ ಆಚರಣೆ ಹಾಗೂ ಇನ್ನಿತರ ಸಾಮಾಜಿಕ ಪಿಡುಗುಗಳ ಬಗ್ಗೆ ಅತಿಯಾಗಿ ಯೋಚಿಸತೊಡಗಿದ್ದೆ.ಆಗ ನನಗೆ ದೊರಕಿತು ದಲಿತ ಬಂಡಾಯ ಸಾಹಿತಿಯಾದ ದೇವನೂರು ಮಹಾದೇವರವರ “ಎದೆಗೆ ಬಿದ್ದ ಅಕ್ಷರ” .

ಇದೇ ಮೊದಲು ದಲಿತ ಬಂಡಾಯ ಸಾಹಿತ್ಯವನ್ನು ಓದುತ್ತಿರುವುದಾದರೂ ಇಲ್ಲಿಯವರೆಗೆ ಓದಿದಂತಹ ಎಲ್ಲಾ ಕಥೆ ಕಾದಂಬರಿಗಳು ನನ್ನ ಸಂಘಟನೆ ಮತ್ತು ರಾಜಕೀಯ ಭವಿಷ್ಯಕ್ಕಾಗಿ ವಸ್ತು ವಿಚಾರಗಳನ್ನು ನೀಡಿದ್ದವು.ಆದರೆ ಇವತ್ತು ಓದಿ ಮುಗಿಸಿದೆ ನೋಡಿ ,ಅದು ನಿಜವಾದ ಒಬ್ಬ ಸಂಘಟನೆಗೆ ಸಿಗಬೇಕಾದ ಸಾಹಿತ್ಯ.

ಈ ಪುಸ್ತಕದಲ್ಲಿ ಸು.ತೊಂಭತ್ತು ಲೇಖನಗಳು ಪ್ರಕಟವಾಗಿದ್ದು ,ಲೇಖಕರು ತಮ್ಮ ಲೇಖನದಲ್ಲಿ ಸಮಾಜದ ಬಗೆಗಿನ ಕಾಳಜಿಯನ್ನು ಅಸ್ಪೃಶ್ಯತೆ ಆಚರಣೆ, ದೇಶದ ಕುಲಗೆಟ್ಟ ರಾಜಕೀಯದ ಕುರಿತಾದ ವೇದನೆಯನ್ನು ಓದುಗನ ಮನಸ್ಸಿನಲ್ಲಿ ಬೀಜಬಿತ್ತುವಂತೆ ಎಳೆಎಳೆಯಾಗಿ ಉದಾಹರಣೆಗೆ ಸಹಿತವಾಗಿ ಬಿತ್ತುವ ಪ್ರಯತ್ನ ಮಾಡಿದ್ದಾರೆ .

ಇಲ್ಲಿ ಎರಡು ವಿಚಾರಗಳ ಬಗ್ಗೆ ನಾನು ಹೇಳಲೇಬೇಕು.
ಹೇಗಾದರು ಬೌದ್ಧ ಧಮ್ಮವನ್ನು ಸ್ವೀಕಾರ ಮಾಡಲೇಬೇಕಲ್ಲಾ ಎಂದು ಆಲೋಚಿಸುತ್ತಿದ್ದ ನಾನು ತಿಳಿದಿರುವವರೊಂದಿಗೆ ಸಂಘಟಕರೊಂದಿಗೆ ಪ್ರಗತಿಪರ ಚಿಂತಕರೊಂದಿಗೆ ನಿರಂತರವಾಗಿ ಚರ್ಚಿಸುತ್ತಿದ್ದೆ. ಯಾರೊಂದಿಗಾದರೂ ಎಲ್ಲೇ ಚರ್ಚೆಗೆ ಕುಳಿತರೂ ಅವರಿಂದ ಒಂದು ಪ್ರಶ್ನೆ ನನಗೆ ಎದುರಾಗುತ್ತಿತ್ತು. ‘ಬೌದ್ಧ ಧಮ್ಮದ ಸ್ವೀಕಾರದ ಅಗತ್ಯತೆ ಏನು?ಒಬ್ಬ ದಲಿತನ‌ ಬದುಕು ಬೌದ್ಧ ಧಮ್ಮದ ಸ್ವೀಕಾರದಿಂದ ಹೇಗೆ ಬದಲಾಗುತ್ತದೆ? ಎನ್ನುವ ಪ್ರಶ್ನೆ ಮೂಡಿದಾಗಲೆಲ್ಲಾ ಉತ್ತರವಿಲ್ಲದೇ ನಾನು ಸುಮ್ಮನಾಗುತ್ತಿದ್ದೆ. ಆದರೆ ‘ಬುದ್ಧನೆಡೆಗೆ ನಮ್ಮ ನಡಿಗೆ ‘ಯಲ್ಲಿ ಬೌದ್ಧ ಧಮ್ಮದ ಸ್ವೀಕಾರದಿಂದ ತನಗೆ ತಾನೇ ಕೀಳು ಎಂದು ಒಪ್ಪಿಕೊಂಡಿರುವ ತಳ‌ಸಮುದಾಯಗಳು ತಾನು ಮೇಲು ಅಲ್ಲ ಕೀಳು ಅಲ್ಲ ,ನಾವು ಎಲ್ಲರಂತೆ ಸಮಾನರು ಎಂಬ ಆತ್ಮಸ್ತೈರ್ಯ ಹುಟ್ಟಿ ತಳಸಮುದಾಯದ ಏಳಿಗೆಗೆ ಕಾರಣವಾಗುತ್ತದ್ದೆ ಎನ್ನುವ ನಗ್ನಸತ್ಯ ನನಗೆ ತಿಳಿಯಲು ಸಹಾಯವಾಯಿತು.

ಹಾಗೆಯೇ ನಮ್ಮ ದೇಶದ ದೇವರು ಧರ್ಮದ ಬಗ್ಗೆ ಹೇಳುತ್ತಾ ಅವರವರ ಧರ್ಮ ಅವರವರ ಮನೆಯಲ್ಲಿರಲಿ ,ಸಂವಿಧಾನವೇ ಭಾರತದ ಮೊದಲ ಧರ್ಮವಾಗಬೇಕು.ಅವರವರ ಪ್ರಜ್ಞೆ ಅವರವರ ದೇವರಾಗಬೇಕು.ಈಗಿರುವ ದೇವರುಗಳ ಬಳಿ ತಪ್ಪಿಗೆ ಕ್ಷಮೆಇದೆ.ಮಾಡುವ ತಪ್ಪನ್ನೆಲ್ಲಾ‌ಮಾಡಿ‌ ಕ್ಷಮಿಸಿಬಿಡಿ ಎಂದು ಕೇಳುವ ಅವಕಾಶವಿದೆ.ಆದರೆ ಪ್ರಜ್ಞೆಯ ಮುಂದೆ ಸುಳ್ಳು ಹೇಳಬೇಕಾಗಿಲ್ಲ.ಕ್ಷಮೆ ಕೇಳಬೇಕಾಗಿಲ್ಲ ಎಂದಿದ್ದಾರೆ ಲೇಖಕರು.
ಈ ಎರಡು ವಿಚಾರಗಳು ಓದಿನ ನಂತರವೂ ನನ್ನನ್ನು ಬಹಳಷ್ಟು ಚಿಂತನೆಗೀಡು ಮಾಡಿದೆ.ಇತ್ತೀಚೆಗೆ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ಮೀಸಲಾತಿಯನ್ನು ಪ್ರಶ್ನಿಸುತ್ತಿದ್ದಾರೆ.ಅದಕ್ಕೆ ರಘುವಂಶದ ಉದಾಹರಣೆಯೊಂದಿಗೆ ಲೇಖಕರು ಉತ್ತರ ನೀಡಿದ್ದಾರೆ. ರಘು ವಂಶದ ರಾಜರುಗಳು ತಮಗೆ ತೊನ್ನೆಯಾದರೆ ತೊನ್ನೆಯಾದ ದೇಹದ ಭಾಗವನ್ನು ಮುಚ್ಚಿ ಉಳಿದ ಭಾಗವನ್ನು ಮಾತ್ರ ತೋರಿಸುತ್ತಿದ್ದರು. ಒಂದು ದಿನ ಆ ತೊನ್ನೆ ಇಡೀ ದೇಹಕ್ಕೆ ಹರಡಿ ದೇಹದ ಸಣ್ಣ ಭಾಗ‌ ಮಾತ್ರ ಉಳಿದು ಅದನ್ನು ಮಾತ್ರ ತೋರಿಸುವಂತಾಗಿತ್ತು. ಹಾಗೆಯೇ ದೇಶದ ತಳಸಮುದಾಯಕ್ಕೆ ಸೇರಿದ ಕೆ‌ಲವೊಂದು ಜನ ಮೀಸಲಾತಿಯ ಬಳಕೆಯಿಂದ ಸಮಾಜದ‌ ಮುಖ್ಯ ವಾಹಿನಿಗೆ ಬಂದಿದ್ದು ರಾಜರ ತೊನ್ನೆಗೆ ಒಳಪಟ್ಟ ಭಾಗದಂತೆ ಬಹುಪಾಲು ಜನರು ಅಸ್ಪೃಶ್ಯತೆ ಆಚರಣೆಗೆ ಒಳಪಟ್ಟು ಸಮಾಜದ‌ ಮುಖ್ಯವಾಹಿನಿಗೆ ಬರಲಾಗದೇ ಹಾಗೆಯೇ ಇದ್ದಾರೆ.ಆದರೆ ರಾಜ ತೊನ್ನೆಯಾಗದ ಭಾಗವನ್ನು ತೋರಿಸಿದಂತೆ‌ ಸಾಮಾಜಿಕವಾಗಿ ಅಭಿವೃದ್ಧಿ ಆದ ಕೆಲವೇ ಕೆಲವು ದಲಿತರನ್ನು ತೋರಿಸಿ ಮೀಸಲಾತಿಯನ್ನು ನಿಲ್ಲಿಸುವ ಪ್ರಯತ್ನದಲ್ಲಿದ್ದಾರೆ.ಈ ವಿಚಾರ ಕೂಡ ನನ್ನನ್ನು ಆತಂಕಕ್ಕೀಡು ಮಾಡಿದ್ದೂ ನಿಜ.

ಇನ್ನೂ ಹಲವಾರು ವಿಚಾರಗಳ‌ ಬಗ್ಗೆ ಚರ್ಚಿಸಬಹುದು. ಆದರೆ ಈ ವಿಮರ್ಶೆಯನ್ನು ಓದುವ ಎಲ್ಲರೂ ಸಮಾಜದಲ್ಲಿ ಸಮಾನತೆಯನ್ನು ಬಯಸುವ ಈ‌ ಪುಸ್ತಕವನ್ನು ಓದಬೇಕಾಗಿ ನಾನು ವೈಯುಕ್ತಿಕವಾಗಿ ಕೇಳಿಕೊಳ್ಳುತ್ತೇನೆ.

ದಲಿತ ಬಂಡಾಯ ಸಾಹಿತ್ಯದ ಎರಡು ಆಧಾರ ಸ್ತಂಭದಂತಿದ್ದ ಡಾ.ಸಿದ್ದಲಿಂಗಯ್ಯ ಮತ್ತು ದೇವನೂರು ಮಹಾದೇವರವರು ದಲಿತ ಸಾಹಿತ್ಯ ಅಪಾರವಾದ ಕೊಡುಗೆ ನೀಡಿದ್ದಾರೆ. ಸಿದ್ದಲಿಂಗಯ್ಯ ರವರ ಮರಣದವರೆಗೂ ಅವರನ್ನು ಓದುವ ಭಾಗ್ಯ ನನಗೆ ದೊರಕಿಲ್ಲವಾದರೂ ಇವರಿಬ್ಬರ ಎಲ್ಲಾ ಬರಹಗಳನ್ನು ಓದಬೇಕೆಂಬ ಬಯಕೆ‌ ನನ್ನಲ್ಲಿ ಹೆಚ್ಚುತ್ತಿದೆ.ಏಕೆಂದರೆ ಮೇಲೆ ಹೇಳಿದ ಆಧಾರಸ್ತಂಭಗಳಲ್ಲಿ ಒಂದು ಕೊಂಡಿ ಕಳಚಿದೆಯಾದರೂ ಈಗ ನಮಗುಳಿದಿರುವ ಭರವಸೆ ಅವರೊಬ್ಬರೆ .ಅವರು ದೇವನೂರು ಮಹಾದೇವ.

“ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಇಂದಲ್ಲಾ ನಾಳೆ‌ಫಲ ಕೊಡುವುದು ” ಎನ್ನುವ ಶೀರ್ಷಿಕೆಯೊಂದಿಗೆ ಪ್ರಾರಂಭವಾಗುವ ಈ‌ ಪುಸ್ತಕವನ್ನು ಓದಿ ನನ್ನ ಸಂಘಟನೆ ಮತ್ತು ರಾಜಕೀಯ ಭವಿಷ್ಯಕ್ಕೆ ಬೇಕಾದ‌ ಅನೇಕ ವಿಚಾರವಸ್ತುಗಳನ್ನು ತಿಳಿದಿಕೊಂಡೆ.ಈ ವಿಚಾರಧಾರೆಗಳು ಇಂದಲ್ಲಾ‌ನಾಳೆ ಫಲ ಕೊಡುವುದೆನ್ನುವ ನಂಬಿಕೆಯೊಂದಿಗೆ..

ದೀಪಕ್ ಪೊನ್ನಪ್ಪ
error: Content is protected !!