fbpx

‘ಪಾಗಲ್ ಪ್ರೇಮಿ’

ಬರಹ: ಹೇಮಂತ್ ಸಂಪಾಜೆ

ಪತ್ರಕರ್ತನಿಗೆ ದಿನನಿತ್ಯ ಸುದ್ದಿಗಳ ಜತೆ ಬಡಿದಾಡುವುದೇ ಕಾಯಕ, ಬರವಣಿಗೆಯೇ ಜೀವನ, ದಿನನಿತ್ಯದ ಸುದ್ದಿಗಳ ಬಗ್ಗೆ ಗಮನ ಹರಿಸದಿದ್ದರೆ ಬಹುಶಃ ಅಂದು ಆತನಿಗೆ ನಿದ್ರೆಯೆ ಬಾರದು, ಜಬಾವ್ದಾರಿಯುತ ಪತ್ರಕರ್ತ ಸುದ್ದಿ ಲೋಕದಲ್ಲಿ ಅಷ್ಟೊಂದು ಆಳವಾಗಿ ಬೆರೆತು ಕಳೆದೇ ಹೋಗಿರುತ್ತಾನೆ, ಕುತೂಹಲ ಹುಟ್ಟಿಸುವ ಹೊಸ ವಿಷಯಗಳ ಬೆನ್ನೇರಿ ಸದಾ ಸಾಗುತ್ತಿರುತ್ತಾನೆ.


ಇತ್ತೀಚಿಗೆ ನಾನು ದಿನನಿತ್ಯದ ಕಚೇರಿ ಕೆಲಸದಲ್ಲಿ ನಿರತನಾಗಿದ್ದೆ, ಈ ವೇಳೆ ನನ್ನ ಡೆಸ್ಕ್ ಗೆ ಸಂಬಂಧ ಪಡದ ಸುದ್ದಿಯನ್ನು ಗಮನಿಸಿದೆ, ‘ಪ್ರೀತಿ ನಿರಾಕರಿಸಿದ ಹುಡುಗಿಗೆ ಆ್ಯಸಿಡ್ ಎರಚಿದ ಪಾಗಲ್ ಪ್ರೇಮಿ’ ಹೆಡ್ಡಿಂಗ್ ನೋಡಿದೆ, ಕೊರೊನಾ ಕಾಲದಲ್ಲಿ ಇದೇನಪ್ಪ? ಅಂತ ಒಳಗಿನ ಸುದ್ದಿಯನ್ನು ಗಂಭೀರವಾಗಿ ಓದಿ ಮುಗಿಸುವಷ್ಟರಲ್ಲಿ ಅದೇಕೋ ಮನಸ್ಸು ಭಾರವಾಯಿತು.

ಪ್ರೀತಿ ಅಂದರೆ ಇಷ್ಟೆನಾ? ಹಿಂಸೆಯೆ? ಅಷ್ಟು ಪ್ರೀತಿಸಿದವನಿಗೆ ಆಕೆಯನ್ನು ಒಲಿಸಿಕೊಳ್ಳಲು ಪ್ರಯತ್ನಿಸಬಹುದಿತ್ತು, ಅದನ್ನು ಬಿಟ್ಟು ಆ್ಯಸಿಡ್ ಸುರಿಯಬೇಕಿತ್ತಾ?, ಹೆಣ್ಣಿನ ಜೀವನ ಹಾಳು ಮಾಡಬೇಕಿತ್ತಾ? ಹೆತ್ತೊಡಲ ಕಣ್ಣೀರು ದುಷ್ಟನನ್ನು ಸುಮ್ಮನೆ ಬಿಡುವುದೆ? ಎಂದೆಲ್ಲ ಅನಿಸಲು ಶುರುವಾಯಿತು, ಅಂದು ರಾತ್ರಿ ನಿದ್ರೆಯೆ ಬರಲಿಲ್ಲ, ಹಾಗೆ ಯೋಚಿಸುತ್ತಾ ಹೋದಾಗ, ಸ್ನೇಹಿತನ ವನ್ ಸೈಡ್ ಲವ್ ಸ್ಟೋರಿಯೊಂದು ನೆನಪಾಯಿತು…..


ಬಹಳ ವರ್ಷಗಳ ಹಿಂದಿನ ಕಥೆಯಿದು (2003-04). ಆಗ ತಾನೆ ನಾವು ಹೈಸ್ಕೂಲ್ ಮೆಟ್ಟಿಲು ಏರಿದ ಸಮಯ, ಪ್ರೀತಿ ಅಂದ್ರೆ ಏನು ಅಂತ ಗೊತ್ತೇ ಇರದ ವಯಸ್ಸು, ಪ್ರತಿ ಬೇಸಿಗೆ ರಜೆ ಬಂದಾಗ ಕೊಡಗಿನಲ್ಲಿದ್ದ ನೆಂಟರ ಮನೆಗೆ ಹೋಗುತ್ತಿದ್ದೆವು. ಅಲ್ಲಿನ ಕಾಫಿ ತೋಟ, ಮಳೆ ನನಗೆ ತುಂಬಾ ಇಷ್ಟವಾದ ಸಬ್ಜೆಕ್ಟ್ .

ಒಂದು ಸಲ ರಜೆಯಲ್ಲಿ ಹೀಗೆ ಹೋಗಿದ್ದಾಗ ನೆಂಟರ ಮನೆಯಲ್ಲಿ ನಗು ಮೊಗದ ಚೆಲುವೆಯೊಬ್ಬಳ ದರುಶನವಾಯಿತು, ಅವಳ ನೋಡಿದ ದಿನದಿಂದ ನನ್ನ ಸ್ನೇಹಿತನ ನಿದ್ದೆ, ಕನಸನ್ನೆಲ್ಲ ಹಾರಿ ಹೋಗಿತ್ತು, ಅವನಿಗೆ ಒಂಥರಾ ಮುಂಗಾರು ಮಳೆ ಫೀಲಿಂಗ್!, ಆತನಿಗೆ ಅರಿವಿಲ್ಲದೆ ತನ್ನೊಳಗೆ ಏನಿದು ಹೀಗಾಗುತ್ತಿದೆಯಲ್ಲ ಅನಿಸಲು ಶುರುವಿಟ್ಟುಕೊಂಡಿತು, ಪರಿಚಯದ ಪಕ್ಕದ ಮನೆ ಹುಡುಗಿ ಆಗಿದ್ದರಿಂದ ಆಗಾಗ್ಗೆ ನೆಂಟರ ಮನೆಗೆ ಬಂದು ಹೋಗುತ್ತಿದ್ದಳು, ಈ ನೆಪದಲ್ಲಿ ಅವಳ ಪರಿಚಯವಾಯಿತು, ಆಕೆ ನನ್ನ ಗೆಳೆಯನೊಂದಿಗೆ ಸಹಜವಾಗಿಯೇ ಮಾತನಾಡುತ್ತಿದ್ದಳು, ನಿಷ್ಕಲ್ಮಶ ಮನಸ್ಸು, ಕೆಂದಾವರೆಯಂತೆ ನಗು, ಪಟ್ ಪಟಾಕಿ ಮಾತು, ಅವನ ಜೀವನದ ದಾರಿಯನ್ನೇ ಬದಲಿಸಿತು, ಇಂತಹ ಸಮಯದಲ್ಲಿ ನನ್ನ ಬಗ್ಗೆ ಆಕೆ ಮನಸ್ಸಿನಲ್ಲಿ ಏನಿದೆ ?ಎನ್ನುವ ತಿಳಿಯುವ ಪ್ರಯತ್ನವನ್ನೂ ಗೆಳೆಯ ಮಾಡಲಿಲ್ಲ.

ಒಂಟಿ‌ ಪಿಶಾಚಿಯಂತೆ ಕನಸುಗಳ‌ ಮೂಟೆ ಕಟ್ಟಿಕೊಂಡ. ಕುಂತರೂ, ನಿಂತರೂ ಅವಳದ್ದೇ ಧ್ಯಾನ. ಯಾವಾಗ ಮತ್ತೆ ಬೇಸಿಗೆ ರಜೆ ಬರುತ್ತದೆ ಎನ್ನುವ ತವಕ, ಆಕೆಯನ್ನು ಎಂದು ಕಾಣುವೆನೋ ಎಂಬ ಹಂಬಲ. ಐದಾರು ವರ್ಷ ಕಳೆದರೂ‌ ಅವನ ವನ್ ಸೈಡ್ ಲವ್ ಹೀಗೆ ಮುಂದುವರಿದೇ ಇತ್ತು, ರಜೆಯಲ್ಲಿ ಹೋಗುವುದು, ಆಕೆಯನ್ನು ಮಾತನಾಡಿಸುವುದು, ವಾಪಸ್ ತನ್ನೂರಿಗೆ ಬಸ್ ಹತ್ತಿ ಕನಸು ಹೊತ್ತು ಬರುವುದು ಇಷ್ಟಕ್ಕೆ ಮಾತ್ರ ಸೀಮಿತವಾಯಿತು ಅವನ ಜೀವನ. ಕೊನೆಗೂ ಆಕೆಯ ಜತೆ ಭಾವನೆಗಳನ್ನು ಹೇಳಿಕೊಳ್ಳಲು ಅಥವಾ ಹಂಚಿಕೊಳ್ಳಲು ಸ್ನೇಹಿತನಿಗೆ ಸಾಧ್ಯವಾಗಲಿಲ್ಲ.


ಹಾಗಂತ ಎಂದಿಗೂ ಆಕೆಯ ಮನಸ್ಸನ್ನು‌ ಅವನು ನೋವು ಮಾಡಲಿಲ್ಲ, ಪ್ರೀತಿಯ ವಿಷಯ ಹೇಳಿದರೆ ಎಲ್ಲಿ ಆಕೆ ನನ್ನ ಸ್ನೇಹ ಕಡಿದುಕೊಳ್ಳುವಳೊ ಎಂದು ಆತ ಹೆದರಿದ್ದ, ಅವಳು ಬದುಕಿನುದ್ದಕ್ಕೂ ಚೆನ್ನಾಗಿರಲಿ ಎಂದೇ ಬಯಸಿದ, ಈಗ ಆಕೆಗೂ ಮದುವೆಯಾಗಿದೆ (ಬೇರೆ ಹುಡುಗನ ಜತೆ), ಸಂಸಾರವಿದೆ, ಎಲ್ಲಿದ್ದರೂ ಆಕೆ ಚೆನ್ನಾಗಿರಲಿ ಎನ್ನುವ ನನ್ನ ‘ಪಾಗಲ್’ ಗೆಳೆಯನ ತುಂಬು ಮನಸ್ಸಿನ ಹಾರೈಕೆ ಇದೆ, ಇದೆ ಅಲ್ವಾ ನಿಜವಾದ ಪ್ರೀತಿ…?

ಹೇಮಂತ್ ಸಂಪಾಜೆ
error: Content is protected !!