ಪಾಕ್ ಗ್ರಾಹಕರು,ಸೇನಾ ಘಟಕದ ಸಂಪರ್ಕ! ಇಬ್ರಾಹಿಂ ಪುಲ್ಲಟ್ಟಿಯಿಂದ ಸ್ಫೋಟಕ ಮಾಹಿತಿ ಬಹಿರಂಗ

ಬೆಂಗಳೂರು : ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಕೇರಳ ಮೂಲದ ಇಬ್ರಾಹಿಂ ಪುಲ್ಲಟ್ಟಿ ಪಾಕಿಸ್ಥಾನದಲ್ಲಿ ನೂರಾರು ಮಂದಿ ಗ್ರಾಹಕರನ್ನು ಹೊಂದಿದ್ದ ಎಂಬ ಸ್ಫೋಟಕ ಮಾಹಿತಿ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಪೈಕಿ ಯಾರೋ ಒಬ್ಬರು ಪೂರ್ವ ಭಾರತದ ಸೇನಾ ಘಟಕ್ಕೆ ಕರೆ ಮಾಡಿರುವ ಸಾಧ್ಯತೆಯಿದೆ ಎಂದು ತನಿಖಾ ಸಂಸ್ಥೆಗಳು ಅನುಮಾನ ವ್ಯಕ್ತ ಪಡಿಸಿವೆ.

ಬೆಂಗಳೂರಿನಲ್ಲಿ ಈ ದಂಧೆಯಲ್ಲಿ ಸಕ್ರಿಯನಾಗಿರುವ ಈತ, ಪಾಕ್‌ನ ಲ್ಲಿಯೂ ಸಹಚರರನ್ನು ನೇಮಿಸಿಕೊಂಡಿದ್ದಾನೆ. ಅವರ ಮೂಲಕ ಅಲ್ಲಿಯೂ ನೂರಾರು ಮಂದಿ ಗ್ರಾಹಕರನ್ನು ಹೊಂದಿದ್ದಾನೆ.

ತನಿಖಾ ಸಂಸ್ಥೆಯ ಮೂಲಗಳ ಪ್ರಕಾರ ಸುಮಾರು 600 ಅಧಿಕ ಮಂದಿ ಪಾಕ್‌ ಗ್ರಾಹಕರಿದ್ದು, ನಿತ್ಯ ಅವರು ಭಾರತದಲ್ಲಿ ರುವ ತಮ್ಮ ಸಂಬಂಧಿ, ಸ್ನೇಹಿತರಿಗೆ ಈತನ ಮೂಲಕ ಕರೆ ಮಾಡುತ್ತಿದ್ದರು.

ಹೀಗಾಗಿ ಅವರಿಗೆ ಪ್ರತೀ ಅಂತಾರಾಷ್ಟ್ರೀಯ ಕರೆಗೆ ತಗಲುವ ವೆಚ್ಚ ಶೇಕಡಾವಾರು ಕಡಿಮೆಯಾಗುತ್ತಿತ್ತು. ಈ ಸಹಾಯಕ್ಕೆ ಗ್ರಾಹಕರು ಮಾಸಿಕ ಇಂತಿಷ್ಟು ಹಣವನ್ನು ಆರೋಪಿಗೆ ನೀಡಬೇಕಿತ್ತು. ಆದರೆ ಇಬ್ರಾಹಿಂ ಈ ಹಣವನ್ನು ಪಾಕ್‌ನಲ್ಲಿರುವ ತನ್ನ ಸಹಚರರಿಂದ ಹವಾಲಾ ಮೂಲಕ ತನಗೆ ವರ್ಗಾಯಿಸಿಕೊಳ್ಳುತ್ತಿದ್ದ.

ಡೇಟಾ ಇಲ್ಲ!
ಸುಮಾರು ಒಂದೂವರೆ ವರ್ಷದಿಂದ ಈ ದಂಧೆ ನಡೆಸುತ್ತಿರುವ ಇಬ್ರಾಹಿಂ ಪುಲ್ಲಟ್ಟಿ ಬಳಿ ಗ್ರಾಹಕರ ವಿವರ ಇಲ್ಲ. ಅದನ್ನು ಆತ ಸಂಗ್ರಹಿಸಿಯೂ ಇಲ್ಲ. ಆತನಿಂದ ವಶಕ್ಕೆ ಪಡೆದುಕೊಂಡಿರುವ ಸಿಮ್‌ ಬಾಕ್ಸ್‌ ಮತ್ತು 960 ಸಿಮ್‌ ಕಾರ್ಡ್‌ಗಳಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕಿದೆ. ಕರೆಗಳ ಪರಿವರ್ತನೆಯಿಂದ ಬರುತ್ತಿದ್ದ ಹಣದಲ್ಲಿ ಆತ ಹವಾಲಾ ದಂಧೆ ನಡೆಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಸಿಮ್‌ ಕಾರ್ಡ್‌ ದಂಧೆ
ಇಬ್ರಾಹಿಂ ಪುಲ್ಲಟ್ಟಿ ಕರ್ನಾಟಕ ಮಾತ್ರವಲ್ಲದೆ ನೆರೆಯ ಕೇರಳ, ಆಂಧ್ರ, ತ.ನಾಡಿನಿಂದಲೂ ಸಿಮ್‌ ಕಾರ್ಡ್‌ಗಳನ್ನು ತರಿಸಿಕೊಂಡಿದ್ದಾನೆ ಎಂಬುದು ಗೊತ್ತಾಗಿದೆ. ತನ್ನ ಸ್ವಂತ ಊರಾದ ಕೇರಳದ ಮಲಪ್ಪುರಂನಿಂದಲೇ ಹೆಚ್ಚು ಸಿಮ್‌ ಕಾರ್ಡ್‌ಗಳು ಬಂದಿವೆ ಎಂದು ಆತ ಬಾಯಿ ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಗ್ರಾಹಕರ ಸೋಗಿನಲ್ಲೇ ಕರೆ
ಇಬ್ರಾಹಿಂನ ನೂರಾರು ಗ್ರಾಹಕರ ಪೈಕಿ ಒಬ್ಬ ಅಥವಾ ಕೆಲವರು ಪಾಕ್‌ ಗುಪ್ತಚರ ಅಧಿಕಾರಿ ಎಂದು ಪೂರ್ವ ಭಾರತದ ಸೇನಾ ಕಚೇರಿಗೆ ಕರೆ ಮಾಡಿರುವ ಸಾಧ್ಯತೆಯಿದೆ. ಆದರೆ ಆತ ಯಾರು, ಯಾವ ಕಾರಣಕ್ಕೆ ಕರೆ ಮಾಡಿದ್ದಾನೆ, ಆತನ ಹಿನ್ನೆಲೆ ಏನು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

error: Content is protected !!