ಪಂಜಾಬಿನ ನೂತನ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕಾರ

ಚಂಡೀಗಢ್: ಪಂಜಾಬ್ ನ ನೂತನ ಮುಖ್ಯಮಂತ್ರಿಯಾಗಿ ಆಮ್ ಆದ್ಮಿ ಪಕ್ಷದ ಭಗವಂತ್ ಮಾನ್ ಬುಧವಾರ(ಮಾರ್ಚ್ 16) ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಹುಟ್ಟೂರಾದ ಖಟ್ಕರ್ ಕಲನ್ ನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಈ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್, ಪಕ್ಷದ ಹಿರಿಯ ಮುಖಂಡರು ಉಪಸ್ಥಿತರಿದ್ದರು.
ಪಂಜಾಬ್ ನ ಇತಿಹಾಸದ ಪುಟದಲ್ಲಿ ಸ್ವರ್ಣ ಅಧ್ಯಾಯ ಆರಂಭವಾಗಲಿದ್ದು, ರಾಜ್ಯದ ಪ್ರತಿಯೊಬ್ಬ ಜನರ ಪರವಾಗಿ ಕಾರ್ಯನಿರ್ವಹಿಸುವುದಾಗಿ ಮಾನ್ ಪ್ರಮಾಣವಚನ ಸ್ವೀಕರಿಸಿದ ನಂತರ ಮಾತನಾಡುತ್ತ ತಿಳಿಸಿದರು.
ಆಮ್ ಆದ್ಮಿ ಪಕ್ಷಕ್ಕೆ ಮತಚಲಾಯಿಸದವರು ಸೇರಿದಂತೆ ನಾನು ಪಂಜಾಬ್ ನ ಪ್ರತಿಯೊಬ್ಬರ ಮುಖ್ಯಮಂತ್ರಿಯಾಗಿದ್ದೇನೆ. 1970ರ ನಂತರ ಮಾನ್(48ವರ್ಷ) ಪಂಜಾಬ್ ರಾಜ್ಯದ ಯುವ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಗವಂತ್ ಮಾನ್ ಗೆ ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಪ್ರತಿಜ್ಞಾ ವಿಧಿ ಬೋಧಿಸಿದರು. ಧೀರ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜ್ ಗುರು ಮತ್ತು ಸುಖ್ ದೇವ್ ಅವರನ್ನು ಬ್ರಿಟಿಷರು ಗಲ್ಲಿಗೇರಿಸುವಾಗ ಹಾಡಿದ್ದಾರೆನ್ನಲಾದ ರಂಗ ದೇ ಬಸಂತಿ (ರಾಮ್ ಪ್ರಸಾದ್ ಬಿಸ್ಲಿಲ್ ಅವರ ಹಾಡು) ವಿಷಯ ಆಧರಿಸಿ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ನಡೆಸಲಾಯಿತು ಎಂದು ವರದಿ ತಿಳಿಸಿದೆ.
117 ಮಂದಿ ಶಾಸಕರ ಬಲವನ್ನು ಹೊಂದಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 92 ಸ್ಥಾನಗಳಲ್ಲಿ ಭರ್ಜರಿ ಜಯಗಳಿಸುವ ಮೂಲಕ ಅಧಿಕಾರದ ಗದ್ದುಗೆಗೆ ಏರಿತ್ತು. ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಸಂಗ್ರೂರ್ ಜಿಲ್ಲೆಯ ಧುರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, ಕಾಂಗ್ರೆಸ್ ನ ದಲ್ವೀರ್ ಸಿಂಗ್ ಗೋಲ್ಡೈಯನ್ನು 58,206 ಮತಗಳ ಅಂತರದಿಂದ ಪರಾಜಯಗೊಳಿಸಿ ಗೆಲುವು ಸಾಧಿಸಿದ್ದರು.