fbpx

ನೌಷಾದ್ ಜನ್ನತ್ ಅವರ ‘ಕಡಮ್ಮಕಲ್ಲು ಎಸ್ಟೇಟ್’ನ ಕುರಿತು ನನ್ನ ವಿಶ್ಲೇಷಣಾತ್ಮಕ ನೋಟ…

ಸುದ್ದಿ ಸಂತೆ ಸಂಪಾದಕರಿಂದ ಕಿರು ಕಾದಂಬರಿಯ ವಿಮರ್ಶೆ

‘ಕಡಮ್ಮಕಲ್ಲು ಎಸ್ಟೇಟ್’ ಕಿರು ಕಾದಂಬರಿಯಲ್ಲಿ ಬಹಳ ಚುಟುಕಾಗಿ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತಾ, ಕಥೆಗಳನ್ನು ಹೆಣೆಯಲಾಗಿದೆ. ಈ ಕಿರು ಕಾದಂಬರಿಯಲ್ಲಿ ಬಡವ ಹಾಗು ಶ್ರೀಮಂತನ ನಡುವಿನ ಅಂತರ, ಅಸಹಾಯಕ ಬಡ ಜನರ ಮೇಲೆ ನಡೆಯುವ ಶೋಷಣೆ, ಪುರುಷ ಪ್ರಾಧಾನ್ಯತೆ, ಲಿಂಗ ಅಸಮಾನತೆ, ಹಸಿ ಬಿಸಿ ವಾಂಛೆ, ಉಳ್ಳವರು ಇಲ್ಲದವರ ಮೇಲೆ ನಡೆಸುವ ದೌರ್ಜನ್ಯಗಳ ವಿಚಾರಗಳೆಲ್ಲವೂ ಇದರಲ್ಲಿ ಅಡಕವಾಗಿದೆ.

   ಕೂಲಿ ಕಾರ್ಮಿಕ ಕುಟುಂಬಗಳು ಹೇಳಿಕೊಳ್ಳಲೂ ಆಗದೆ, ಅನುಭವಿಸಲೂ ಆಗದೆ ಪಡುವ ಸಂಕಟಗಳನ್ನು ಕಥೆಯ ರೂಪದಲ್ಲಿ ಹೆಣೆಯಲಾಗಿದೆ. ಇದನ್ನು ಹಚ್ಚ ಹಸಿರ ಕೊಡಗಿನ ವಾತಾವರಣಕ್ಕೆ ಕಟ್ಟಿಕೊಟ್ಟಿರುವುದು ವಿಶೇಷ. ಬಡತನವೆಂಬುದು ಯಾವೆಲ್ಲಾ ತರಹದ ಕಷ್ಟಗಳನ್ನು ಅನುಭವಿಸುವ ಹಾಗೆ ಮಾಡಿ ಬಿಡುತ್ತದೆ ಎಂಬುದನ್ನು ತಿಳಿಸುತ್ತದೆ.

ನೌಷಾದ್ ಅವರ ಚೊಚ್ಚಲ ಪ್ರಥಮ ಕಾದಂಬರಿ ಇದಾಗಿದ್ದು, ಪಾತ್ರಗಳ ಪೋಷಣೆ ಇನ್ನೂ ವಿಸ್ತಾರವಾಗಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸಿತು. ಪದಗಳ ಬಳಕೆ, ವಾಕ್ಯ ರಚನೆ ಕುರಿತು ಮತ್ತಷ್ಟು ಮುತುವರ್ಜಿ ವಹಿಸಿದ್ದರೆ ಇನ್ನೂ ಚಂದವಿರುತ್ತಿತ್ತು ಅನ್ನಿಸಿತು.
ಅದರೊಂದಿಗೆ ಕೆಲ ಜಾತಿ ಸೂಚಕ ಪಾತ್ರಗಳನ್ನು ಬಳಸದಿದ್ದರೆ ಒಳ್ಳೆಯದಿತ್ತು.

‘ಕಡಮ್ಮಕಲ್ಲು ಎಸ್ಟೇಟ್’ ಕಿರು ಕಾದಂಬರಿ ಬರೆದ‌ ನೌಷಾದ್ ಜನ್ನತ್ ಅವರ ಚಿತ್ರ

ಈ ಕಾದಂಬರಿ ಬರೆದ ನೌಷಾದ್ ಜನ್ನತ್ ಅವರು ಬಿಎ ಪದವೀದರರಾಗಿದ್ದು, ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡು ತಮ್ಮದೇ ಆದ ಸ್ನೇಹಿತರ ಬಳಗವನ್ನು ಕಟ್ಟಿ, ನಮ್ಮ ಕೊಡಗು ತಂಡ ಎಂಬ ಹೆಸರಿನಡಿಯಲ್ಲಿ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಕೂಡ ಆಗಿದ್ದಾರೆ. ಸದ್ಯ ಕುಶಾಲನಗರದ ನಿವಾಸಿಯಾದ ಇವರು ಗಡಿಭಾಗ ಕೊಪ್ಪದಲ್ಲಿ  ಉದ್ಯಮಿಯಾಗಿದ್ದಾರೆ.
    
 ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಸಹಾಯ ಧನ ಪಡೆದ ಈ ಕೃತಿ ಕೇವಲ ಎರಡು ದಿನಗಳಲ್ಲಿ 1,000 ಪ್ರತಿಗಳು ಮಾರಾಟವಾಗಿದ್ದು, ಈ ಕಿರು ಕಾದಂಬರಿಯ ಹೆಗ್ಗಳಿಕೆ. ಎರಡನೇ ಮುದ್ರಣಕ್ಕೂ ಇದು ಸಿದ್ಧವಾಗಿರುವುದು ಅಚ್ಚರಿ ಮೂಡಿಸುವ ವಿಷಯ.

ಒಟ್ಟಿನಲ್ಲಿ ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲಿ ಮೇಲಿಂದ ಮೇಲೆ ಕೃತಿಗಳು ಬಿಡುಗಡೆಯಾಗಿ, ಯುವ ಬರಹಗಾರರು ಜನತೆಯ ಗಮನ ಸೆಳೆಯುತ್ತಿರುವುದು ಸ್ವಾಗತಾರ್ಹ. ಜೊತೆಗೆ ಜನರಲ್ಲಿ ಓದಿನ ಅಭಿರುಚಿ ಆ ಮೂಲಕ ಬೆಳೆಯುತ್ತಿರುವುದು ಹರ್ಷದ ಸಂಗತಿಯೇ ಆಗಿದೆ.

ರಜತ್ ರಾಜ್ ಡಿ.ಹೆಚ್, ಸುದ್ದಿ ಸಂತೆ ಸಂಪಾದಕರು
error: Content is protected !!