fbpx

ನೈವೇದ್ಯಕ್ಕೆ ಇಟ್ಟ ಮದ್ಯವನ್ನು ಕದ್ದು ಸಿಕ್ಕಿ ಬಿದ್ದ ಕುಡುಕ!

ಇದು ಸುಂಟಿಕೊಪ್ಪ ಸಮೀಪದ ಕೆದಕಲ್ ಸೆವೆಂತ್ ಮೈಲ್ ಎಂಬಲ್ಲಿರುವ ಸ್ವಾಮಿ ಕೊರಗ ತನಿಯ ಕೊರಗಜ್ಜನ ದೇವಸ್ಥಾನ. ಇಲ್ಲಿಗೆ ಬರುವ ಭಕ್ತರು ಇಷ್ಟಾರ್ಥ ನೆರವೇರಿಕೆಗಾಗಿ ವಸ್ತು, ಮದಿರೆ ಅಥವಾ ಇನ್ಯಾವುದೋ ರೂಪದಲ್ಲಿ ಹರಕೆಯನ್ನು ಸಮರ್ಪಿಸುತ್ತಾರೆ. 15 ದಿವಸಗಳ ಹಿಂದೆ ಹರಕೆಯಾಗಿ ನಿರಂತರವಾಗಿ 2 ಕ್ವಾರ್ಟರ್ ಮಧ್ಯವನ್ನಿರಿಸಲಾಗಿತ್ತು. ಅದನ್ನು ಮರುದಿನ ಅಥವಾ ಇನ್ನಿತರ ದಿನಗಳಲ್ಲಿ ವಯೋವೃದ್ಧರಿಗೋ ಅಥವಾ ಮದ್ಯದ ಅವಶ್ಯವಿರುವವರಿಗೆ ಪ್ರಸಾದವಾಗಿ ನೀಡುತ್ತಿದ್ದುದು ವಾಡಿಕೆಯಾಗಿತ್ತು. ಆದರೆ ಕಳೆದ ಒಂದು ವಾರದಿಂದ ಕೊರಗಜ್ಜನಿಗೆ ಮೀಸಲಿಡುತ್ತಿದ್ದ ಎರಡು ಕ್ವಾರ್ಟರ್ ಗಳು ಕಾಣೆಯಾಗುತ್ತಿದ್ದವು. ತೀರಾ ಇತ್ತೀಚೆಗೆ ದರ್ಶನ ನೀಡಿದ ಸಂದರ್ಭ ಕೊರಗಜ್ಜ ತನಗೆ ಹರಕೆಯಾಗಿ ಬರುತ್ತಿರುವ ಕ್ವಾರ್ಟರ್ ಅನ್ನು ಕದ್ದೊಯ್ಯುತ್ತಿರುವುದಾಗಿ ನುಡಿಯಾಡಿದ್ದರು. ಬೆಳಗ್ಗೆದ್ದು ನೋಡುವಾಗ ಕ್ವಾರ್ಟರ್ ಬಾಟಲಿ ಕಾಣೆಯಾಗುವುದು ಮತ್ತು ಕೊರಗಜ್ಜ ಕಳ್ಳತನವಾಗುತ್ತಿರುವ ಬಗ್ಗೆ ನುಡಿ ನೀಡಿದ್ದರಿಂದ ಆಶ್ಚರ್ಯಚಕಿತರಾದ ದೇವಾಲಯ ಸಮಿತಿಯವರು ಹೊಸದಾಗಿ ಸಿ.ಸಿ. ಕ್ಯಾಮರಾ ಅಳವಡಿಸಿದರು. ಈ ನಡುವೆ ಇವರ ನಿರೀಕ್ಷೆ ಸುಳ್ಳಾಗಲಿಲ್ಲ. ನಡು ರಾತ್ರಿ ಮಾಸ್ಕ್ ಧರಿಸಿ ಬಂದ ಯುವಕನೋರ್ವ ಎರಡು ಕ್ವಾರ್ಟರ್ ಗಳನ್ನು ಎಗರಿಸಿಕೊಂಡು ಹೋಗುತ್ತಿದ್ದುದು ಸಿ.ಸಿ. ಟಿ.ವಿ. ಯಲ್ಲಿ ಸೆರೆಯಾಗಿದೆ. ಆದರೆ ಈತ ಯಾರೆಂದು ಗುರುತು ಪತ್ತೆಯಾಗಿರಲಿಲ್ಲ. ಹೀಗಾಗಿ ದೇವಾಲಯದ ಪೂಜಾರಿ ಹರಕೆ ಕಟ್ಟಿ ಕಳ್ಳ ಯಾರೆಂದು ಪತ್ತೆ ಮಾಡಿಕೊಡುವಂತೆ ಪ್ರಾರ್ಥಿಸಿಕೊಂಡಿದ್ದರು. ಇದಾದ ನಂತರ ಸ್ಥಳೀಯ ಮದ್ಯ ವ್ಯಸನಿಯೋರ್ವನ ಕಣ್ಣಿನ ಸುತ್ತಲೂ ಕಪ್ಪು ಬಣ್ಣ ಆವರಿಸಿಕೊಂಡಿದೆ. ಅಲ್ಲದೇ ಕಣ್ಣೆರೆಡೂ ಮುಚ್ಚಿಕೊಂಡಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ದೇವರಿಗಿಟ್ಟಿದ್ದ ಮದ್ಯವನ್ನು ಕಳ್ಳತನ ಮಾಡಿ ಸೇವಿಸುತ್ತಿದ್ದುದೇ ತನ್ನ ಈ ದುಸ್ಥಿತಿಗೆ ಕಾರಣವೆಂದು ಅಂಜಲಾರಂಭಿಸಿದ. ಹೀಗಾಗಿ ದೇವಾಲಯಕ್ಕೆ ಬಂದ ಈತ ಮದ್ಯ ಕದ್ದಿರುವ ಬಗ್ಗೆ ಅರುಹಿದ್ದಾನೆ. ಅಲ್ಲದೇ ತಪ್ಪು ಒಪ್ಪಿಕೊಂಡಿದ್ದಾನೆ. ದೇವಾಲಯ ಸಮಿತಿಯವರ ಮಾತಿನಂತೆ ತಪ್ಪು ಕಾಣಿಕೆ ಒಪ್ಪಿಸಿದ್ದಾನೆ. ಇದಾದ ನಂತರ ಕಣ್ಣಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎನ್ನಲಾಗಿದೆ.

ಈ ಘಟನೆಯನ್ನು ಕೊರಗಜ್ಜನ ಪವಾಡ ಎಂಬುವುದು ಆಸ್ತಿಕರ ನಂಬಿಕೆಯಾದರೆ ಕಾಕತಾಳೀಯ ಎಂಬುವುದು ನಾಸ್ತಿಕರ ವಾದ. ಅವರವರ ನಂಬಿಕೆ ಅವರವರಿಗೆ ಬಿಟ್ಟಿದ್ದು. ಇಲ್ಲೊಂದು ಕುತೂಹಲದ ಅಂಶವೇನೆಂದರೆ, ಅಷ್ಟೂ ದಿನ ಈ ಗುಂಡುಪ್ರಿಯ ಕ್ವಾರ್ಟರ್ ಅನ್ನು ಮಾತ್ರ ಎಗರಿಸುತ್ತಿದ್ದನೇ ವಿನಃ ಬಹುದಿನಗಳಿಂದ ಅಲ್ಲಿದ್ದ ದುಬಾರಿ ಬೆಲೆಯ ಫುಲ್ ಬಾಟಲ್ ಅನ್ನು ಮುಟ್ಟಿರಲಿಲ್ಲ!!!

error: Content is protected !!