ನುಗ್ಗೆ ಕಾಯಿ ಕಳ್ಳತನ ಮಾಡಿದ ಇಬ್ಬರು ಪೊಲೀಸರು!

ಕಟಕ್​: ಖದೀಮರನ್ನು ಹಿಡಿದು ಶಿಕ್ಷೆಗೆ ಗುರಿಯಾಗಿಸಿ ಸರಿ ದಾರಿಗೆ ತರಬೇಕಾದ ಕರ್ತವ್ಯ ಪೊಲೀಸರದ್ದು. ಆದರೆ, ಕೆಲ ಪೊಲೀಸರೇ ಕಳ್ಳತನಕ್ಕೆ ಇಳಿದಾಗ ಅದಕ್ಕಿಂತ ನಾಚಿಕಿಗೇಡಿನ ಸಂಗತಿ ಬೇರೊಂದಿಲ್ಲ. ಒಂದು ರೀತಿಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗುವುದು. ಇದೇ ರೀತಿಯ ಪ್ರಸಂಗ ಒಡಿಶಾದಲ್ಲಿ ಜರುಗಿದೆ.

ತಪ್ಪು ಮಾಡುವ ಜನರಿಗೆ ಬುದ್ಧಿವಾದ ಹೇಳುವ ಸ್ಥಾನದಲ್ಲಿರುವ ಪೊಲೀಸರಿಬ್ಬರು ಸ್ವತಃ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ. ಕೇವಲ ನುಗ್ಗೆಕಾಯಿ ಕದಿಯುವ ಮೂಲಕ ಪೊಲೀಸ್​ ಸಿಬ್ಬಂದಿ ತನ್ನ ಸಣ್ಣತನ ಪ್ರದರ್ಶಿಸಿದ್ದಾರೆ.

ಅಂದಹಾಗೆ ಈ ಘಟನೆ ನಡೆದಿರುವುದು ಒಡಿಶಾದ ಕಟಕ್ ನಗರದ ಸಿಡಿಎ ಸೆಕ್ಟರ್-7 ಏರಿಯಾದಲ್ಲಿ. ಈ ಪ್ರದೇಶದಲ್ಲಿ ವಾಸವಿರುವ ಹಿರಿಯ ನಾಗರಿಕ ಬಾಸುದೇವ್ ಮಿಶ್ರಾ ಎಂಬುವರ ಮನೆಯಲ್ಲಿ ಒಡಿಶಾ ಸಹಾಯಕ ಪೊಲೀಸ್ ಪಡೆ (ಒಎಪಿಎಫ್)ಯ ಸಿಬ್ಬಂದಿ ಕಳ್ಳತನ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಮಿಶ್ರಾ ಜತೆ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಿಶ್ರಾ, ಇಬ್ಬರು ಒಎಪಿಎಫ್ ಸಿಬ್ಬಂದಿ ಎರಡು ಪಿಸಿಆರ್​ ಬೈಕ್​ನಲ್ಲಿ ಮಾರ್ಚ್​ 4ರ ಬೆಳಗ್ಗೆ ನನ್ನ ಮನೆಯ ಬಳಿ ಬಂದರು. ನನ್ನ ಮನೆಯೆದುರು ನಾನು ಬೆಳೆಸಿದ್ದ ನುಗ್ಗೆ ಮರದಲ್ಲಿ ನುಗ್ಗೆಕಾಯಿಯನ್ನು ಕೀಳಲು ಆರಂಭಿಸಿದರು. ಅವರು ಕದಿಯುವುದು ನನ್ನ ಗಮನಕ್ಕೆ ಬಂದು ಅದನ್ನು ವಿರೋಧಿಸಿದೆ. ಆದರೆ, ಅವರು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು. ಸುಮಾರು 25 ಕೆಜಿ ತೂಕದ ನುಗ್ಗೆಕಾಯ ಕಿತ್ತುಕೊಂಡು ಬೈಕ್​ನಲ್ಲಿ ಹೊರಟು ಹೋದರು ಎಂದು ಆರೋಪಿಸಿದ್ದಾರೆ.

ಮಿಶ್ರಾ ಅವರು ಈ ಬಗ್ಗೆ ಮರ್ಕಾತ್​ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಟಕ್​ ನಗರದ ಡಿಸಿಪಿ ಘಟನೆ ಸಂಬಂಧ ಆದಷ್ಟು ಬೇಗ ಉತ್ತರ ನೀಡುವಂತೆ ಮರ್ಕಾತ್​ ನಗರ ಠಾಣೆಯನ್ನು ಕೇಳಿದ್ದಾರೆ.

error: Content is protected !!