ನೀವು ವರ್ಜಿನಾ? ಎಂದು ಕೇಳಿದಳು!

ಈ ಶೀರ್ಷಿಕೆಯ ಹಿಂದಿನ ಕಥೆಯನ್ನು ನಾನು ಈ ವಾರ ಹೇಳಬೇಕು ಅಂದುಕೊಂಡಿದ್ದೇನೆ. ಆದರೆ ಹೇಗೆ ಹೇಳಬೇಕು ಎಂದು ತಿಳಿಯುತ್ತಿಲ್ಲ. ಅದಕ್ಕೂ ಮೊದಲು ಒಂದು ಹುಡುಗಿಯ ಕುರಿತು ಹೇಳುತ್ತೇನೆ. ಚುರುಕು ಕಂಗಳ, ಗುಂಗುರು ಕೂದಲಿನ ಆ ಹುಡುಗಿ ಯಾಕೋ ನನ್ನೊಡನೆ ಮಾತನಾಡುವಾಗ ತೀರ ಸಾಹಿತ್ಯಿಕವಾಗಿ ಮಾತನಾಡುತ್ತಿದ್ದಾಳೆ ಅನಿಸುತ್ತದೆ. ಹಾಗೆ ಅನಿಸಲು ಸಾಕಷ್ಟು ಕಾರಣಗಳೂ ಇವೇ. ಮುಖ್ಯ ಕಾರಣ ಅವಳೂ ಸಾಹಿತ್ಯ ಬರೆಯುತ್ತಾಳೆ ಎಂದಿರಲೂ ಬಹುದು. ಚಂದಗೆ ಬರೆಯುವ ಅವಳು ಎಲ್ಲೂ ಅವಳ ಬರಹಗಳನ್ನು ಪ್ರಕಟಿಸಲು ಮುಂದಾಗುವುದಿಲ್ಲ "ಹೀಗೆ ಬರೆದು ಬರೆದೂ ನೀ ಇಟ್ಟರೆ ಅದು ಮರಿ ಹಾಕುವುದಿಲ್ಲ ಮಾರಾಯ್ತಿ ನೀನು ಇದನ್ನು ಯಾವುದಾದರೂ ಪತ್ರಿಕೆಗೆ ಕಳುಹಿಸು" ಎಂದರೇ ಮತ್ತದೇ ಸಾಹಿತ್ಯದ ದಾಟಿಯಲ್ಲಿ ಮಾತನಾಡಿ ನನ್ನ ಬಾಯಿ ಮುಚ್ಚಿಸುತ್ತಾಳೆ. ನಾ ಬರೆದ ಅಷ್ಟೂ ಲೇಖನಗಳನ್ನು ಓದುವ ಅವಳು ಕರಾರುವಾಕ್ಕಾಗಿ ಅದಕ್ಕೆಲ್ಲ ಪ್ರತಿಕ್ರಿಯೆ ನೀಡುತ್ತಾಳೆ ಹಾಗು ಕೆಲ ಪ್ರಶ್ನೆಗಳನ್ನು ಕೇಳಿ ತಬ್ಬಿಬ್ಬು ಮಾಡುತ್ತಾಳೆ. ಅವಳು ಬರೆದದ್ದನ್ನು ನನಗೆ ಮಾತ್ರ ಕಳುಹಿಸಿ "ಓದಿ ಹೇಗಿದೆ ಹೇಳಿ" ಎಂದು ಒತ್ತಾಯ ಮಾಡುತ್ತಾಳೆ.

‌‌‌ ನಾನು ಓದಿ, ಅವಳಂತೆಯೇ ಸಾಹಿತ್ಯಿಕ ಧಾಟಿಯಲ್ಲಿ ವಿಮರ್ಶೆ ಮಾಡಲು ಶುರುಮಾಡಿದರೆ ಅವಳು ಆಕಳಿಸಲು ಶುರುಮಾಡುತ್ತಾಳೆ. ಅವಳಿಗದು ಮಹಾ ಬೋರು ಹೊಡೆಸುತ್ತಿದೆ ಅನ್ನಿಸುವಾಗ ನಾನು ಅವಳ ಲೇಖನಗಳ ಕುರಿತ ವಿಮರ್ಶೆಯನ್ನು ಅಲ್ಲಿಗೆ ಕೈ ಬಿಟ್ಟು ಅದಕ್ಕಿಂತಲೂ ಬೋರೆನಿಸುವ ನನ್ನ ಪ್ರೇಮ ಕಥೆಗಳನ್ನು ಅವಳಿಗೆ ಉಣಬಡಿಸುತ್ತೇ‌ನೆ. ನನಗೆ ಸಿಕ್ಕಾಪಟ್ಟೆ ಬೋರು ಅನ್ನಿಸುವ ನನ್ನ ಭಗ್ನ ಪ್ರೇಮದ ಕಥೆಗಳನ್ನು ಅವಳು ಮಾತ್ರ ತುಂಬಾ ಆಸಕ್ತಿಯಿಂದ ಕೇಳುತ್ತಾಳೆ.
ಕೊಡಗಿನ ಬಿರುಗಾಳಿ ನಾಡಿನಿಂದ ದೂರದ ಬೆಂಗಳೂರಿಗೆ ಹೋಗಿ ಹಗಲು, ರಾತ್ರಿ ಎನ್ನದೆ ಕಂಪ್ಯೂಟರ್ ಕುಟ್ಟುತ್ತಿರುವ ಅವಳಿಗೆ ನನ್ನ ಕಥೆಗಳು ಮನಸ್ಸಿಗೆ ಉಲ್ಲಾಸವನ್ನೂ ಒಂದಿಷ್ಟು ನೆಮ್ಮದಿಯನ್ನೂ ಕೊಡುತ್ತದೆ ಅನ್ನಿಸಿ ನಾನು ನನ್ನ ಕಥೆಗಳಿಗೆ ಸುಣ್ಣಾ ಬಣ್ಣ ಬಳೆದು ವರ್ಣರಂಜಿತ ಮಾಡಿ ಹೇಳತೊಡಗುತ್ತೇನೆ. ಅವಳು ಮಧುರವಾಗಿ ಹ್ಞೂಂ ಗುಡಲು ತೊಡಗುತ್ತಾಳೆ.

ನನ್ನ ಪ್ರೇಯಸಿರ ಕುರಿತು ವಿವರಿಸುವಾಗ ಅವಳಿಗೆ ನಿನ್ನ ಹಾಗೆ ಗುಂಗುರು ಕೂದಲಿತ್ತು, ದೊಡ್ಡ ಕಂಗಳಿತ್ತು, ನಿನ್ನಷ್ಟೇ ಕೆಂಪಗಿನ ತುಟಿಗಳಿತ್ತು, ಸಣ್ಣ ಮೂಗಿತ್ತು ಎಂದು ಹೋಲಿಕೆ ಮಾಡಿ ಹೇಳಿದರೆ ಸ್ವಲ್ಪ ನಾಚುತ್ತಾಳೆ ಆದರೂ ನಾಚಿಕೆಯನ್ನು ತೋರ್ಪಡಿಸದೆ ನನ್ನ ಕಥೆಗಳಿಗೆ ಕಿವಿಯಾಗುತ್ತಾಳೆ.
ಕಥೆ ಮುಗಿದ ನಂತರ ಎಂದಿನಂತೆ ಇದನ್ನೆಲ್ಲ ನೀವ್ಯಾಕೆ ಬರೆಯುವುದಿಲ್ಲ? ಎಂದೂ ಇದನ್ನು ನೀವು ಬರೆಯಬೇಕು ಎಂದು ಕಾಡಲು ಶುರು ಮಾಡುತ್ತಾಳೆ. ನಾನೋ ಅಯ್ಯೋ ನಿನಗೆ ಕಥೆ ಹೇಳುವಾಗ ಸಿಗುವ ಸುಖ ಈ ಬರೆಯುವಾಗ ಸಿಗಲ್ಲ ಸುಂದರೀ. ಎಂದು ಅವಳ ಕಾಲು ಎಳೆಯುತ್ತೇನೆ ಮತ್ತೆ ನಾ ಬರೆದ ಕಥೆಗಳನ್ನು ನೀ ಓದುವಾಗ ನಿನ್ನ ಮಧುರ ಕಂಠದಿಂದ ಹೊರಡು ‘ಹ್ಞೂಂ’ ಸದ್ದು ನನಗೆ ಕೇಳಿಸದು ನೋಡು ಎಂದು ಸ್ವಲ್ಪ ಫ್ಲರ್ಟ್ ಮಾಡುತ್ತೇನೆ‌. ಅವಳು ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೆ “ಇದನ್ನೆಲ್ಲ ಬರೆದು ಪ್ರಕಟಿಸಿ ಸೂಪರ್ ಆಗಿರುತ್ತೆ” ಅನ್ನುತ್ತಾ ನನಗೆ ಬರೆಯಲು ಪ್ರೇರೇಪಿಸಲು ನೋಡುತ್ತಾಳೆ.

ನೀನು ನನಗೆ ಬರೆಯಲು ಹೇಳುತ್ತೀಯ ನೀನು ಮಾತ್ರ ಬರೆದೂ ಬರೆದು ಸುಮ್ಮನಿಡುತ್ತೀಯ ನೀನದನ್ನು ಪ್ರಕಟಿಸಬಾರದೇ? ಎಂದರೆ. ಅವಳು ನನ್ನನ್ನೇ ಕಾಪಿ ಮಾಡುವವಳಂತೆ ಮಾತನ್ನು ಎತ್ತಲಿಗೋ ತಿರುಗಿಸಿ, ನನಗೆ ಬೈಯ್ಯಲು ತೊಡಗುತ್ತಾಳೆ. ಅವಳು ಪ್ರತಿ ಬಾರಿಯೂ ಒಂದೇ ಕಾರಣಕ್ಕೆ ಬೈಯ್ಯುವುದರಿಂದ ನನಗೆ ಆ ಬೈಗುಳವೂ ನನ್ನನ್ನು ಮುದ್ದಿಸುವ ಹಾಗೆ ಅನಿಸುತ್ತದೆ.
ಅವಳಿಗೆ ಒಂದು ಸಣ್ಣ ಅಸಮಾಧಾನ, ಅವಳ ‘ಮುಟ್ಟಿನ ದಿನಗಳ’ ತುಮುಲಗಳನ್ನು ಬರೆದು ನನಗೆ ಮಾತ್ರ ಓದಲು ಕೊಟ್ಟಿದ್ದಳು‌. ನಾನು ಓದಿದವನೇ ಅದನ್ನು ಫೇಸ್ ಬುಕ್ಕಿನಲ್ಲಿ ಪ್ರಕಟಿಸಿ ಬಿಟ್ಟೆ. “ನಿಮಗೆ ಓದಲು ಕೊಟ್ಟರೇ ನೀವೆಂತ ಫೇಸ್ ಬುಕ್ಕಿಗೆ ಹಾಕೋದು?” ಅಂತ ಸಿಕ್ಕಾಪಟ್ಟೆ ರೇಗಿದ್ದಳು. ನಾನು “ಬಿಡು ಮಾರಾಯ್ತಿ ನೀನು ಬರೆದದ್ದು ನಾ ಬರೆಯುವುದಕ್ಕಿಂತ ಚಂದ ಉಂಟು ಅನಿಸಿತು ಅದಕ್ಕೆ ಪ್ರಕಟಿಸಿದೆ ಅಷ್ಟಕ್ಕೂ ನಿನ್ನ ಹೂವಿನ ಹೆಸರನ್ನೇನೂ ಅಲ್ಲಿ ಹಾಕಿಲ್ಲವಲ್ಲಾ” ಎಂದು ಮೂದಲಿಸುತ್ತೇನೆ. ಅವಳು ಅದೇ ನೆಪಮಾಡಿಕೊಂಡು ನನಗೆ ಬೈಯ್ಯಬೇಕು ಅನಿಸಿದಾಗಲೆಲ್ಲ ಅದೇ ಕಾರಣ ತೆಗೆದು ಬೈಯ್ಯುತ್ತಿರುತ್ತಾಳೆ. “ಹಾಗೆ ಯಾಕೆ ಬೈಯ್ಯುತ್ತೀಯ ಬಿಟ್ಟು ಬಿಡು ದಮ್ಮಯ್ಯ” ಎಂದರೆ. ನೀವು ಬೇರೆ ಏನಾದರೂ ಪ್ರಕಟಿಸಿದರೆ ಪರವಾಗಿತ್ತಿಲ್ಲ ಆ ಲೇಖನ ಬೇಡದಿತ್ತು ಎಂದು ಸಣ್ಣಗೆ ಹತಾಶೆಗೆ ಒಳಗಾಗುತ್ತಾಳೆ.

“ಬಿಡು ಬಿಡು” ಎಂದು ನಾನು ನನ್ನ ಉದ್ದಕ್ಕಿದ್ದ ಪ್ರೇಯಸಿಯ ಕಥೆ ಹೇಳಲು ತೊಡಗುತ್ತೇನೆ.
ನಾ ಅವಳಿಗೆ ಹೇಳುವ ಪ್ರತೀ ಕಥೆಯನ್ನು ಅವಳು ನಾನು ಸುಳ್ಳು ಸುಳ್ಳೇ ಹೇಳುತ್ತಿದ್ದೇನೆ ಎಂದು ಈವರೆಗೂ ನಂಬಿದ್ದಳಂತೆ. ಆದರೇ ನನ್ನ ಉದ್ದನೆಯ ಪ್ರೇಯಸಿಯ ಕಥೆ ಮಾತ್ರ ತೀರ ನಿಜ ಕಥೆಯಂತೆ ಇದೆ ಎಂದಿದ್ದಳು.
ನಾನು “ನಾ ಈವರೆಗೆ ಹೇಳಿದ ಎಲ್ಲಾ ಕಥೆಯೂ ನಿಜ, ಈ ಉದ್ದಕ್ಕಿದ್ದ ಟೀಚರಮ್ಮನ ಕಥೆಯಂತು 916 ಗೋಲ್ಡಿನಷ್ಟೇ ನಿಜ” ಎಂದು ಹಾಸ್ಯ ಮಾಡುತ್ತೇನೆ.

‌”ನಿಮ್ಮ ಪ್ರೇಯಸಿಯರು ಎಲ್ಲಾ ಯಾಕೆ ನಿಮ್ಮನ್ನ ಕಂಡರೆ ದೂರ ಓಡುತ್ತಾರೆ”? ಎನ್ನುವ ಅವಳ ಪ್ರಶ್ನೆಗೆ “ನಾನೊಬ್ಬ ಮಹಾ ಬೋರು‌ ಮನುಷ್ಯ ಕಣೇ ಹುಡುಗಿ” ಅನ್ನುತ್ತೇನೆ. “ನನಗೇನೋ ಹಾಗೆ ಅನಿಸೋದಿಲ್ಲಪ್ಪ” ಎಂದು ತುಂಬಾ ಮುಗ್ಧವಾಗಿ ಅವಳು ಹೇಳುವಾಗ “ನೀನು ನನ್ನ ಪ್ರೇಯಸಿಯಲ್ಲವಲ್ಲ ಅದಕ್ಕೆ ಬೋರಾಗಿಲ್ಲ” ಅನ್ನುತ್ತೇನೆ. ಅವಳು ಸರಿ ಎನ್ನುವಂತೆ ಹ್ಮೂಂ ಗುಟ್ಟುತ್ತಾಳೆ.

ಇತ್ತೀಚ್ಚೆಗೆ ನಾನು ರೆಸ್ಟೋರೆಂಟ್ ಒಂದಕ್ಕೆ ಹೋದಾಗ ನನ್ನನ್ನು ರೆಸ್ಟೋರೆಂಟ್ ಹುಡುಗ ಒಳಕ್ಕೆ ಬಿಟ್ಟಿಲ್ಲ ಎನ್ನುವ ಕಥೆಕೇಳಿ ಕಣ್ಣೀರೇ ಹಾಕಿ ಬಿಟ್ಟಿದ್ದಳು.
ಅಂದಹಾಗೆ ನಿಮಗೆ ಆ ಕಥೆ ಗೊತ್ತಿಲ್ಲ. ನಾನು ಎಂದಿನಂತೆ ರೆಸ್ಟೋರೆಂಟ್ ಒಂದಕ್ಕೆ ಹೋದೆ. ಆದರೇ ಒಬ್ಬನೇ ಹೋಗಿದ್ದೆ. ದ್ವಾರದಲ್ಲೇ ಸಪ್ಲೈಯರ್ ಹುಡುಗ ನನ್ನನ್ನು ತಡೆದು, “ಇದರೊಳಗೆ ನಿಮಗೆ ಪ್ರವೇಶವಿಲ್ಲ. ಆ ಬದಿ ಹೋಗಿ” ಅಂದಾ. ಅರೇ ನಾನು ನನ್ನ ಉದ್ದದ ಹುಡುಗಿ ಅಷ್ಟೊಂದು ಬಾರಿ ಬಂದು ಹೋದಾಗಲೂ ನಗುಮುಖದಲ್ಲಿ ಸ್ವಾಗತಿಸಿ, ಒಳಗೆ ಕರೆದು ಕೂರಿಸಿ, ನಮ್ಮಿಬ್ಬರಿಗೆ ಕುಡಿಯಲು ಹೊಟ್ಟೆ ತುಂಬಾ ಬಿಯರನ್ನೂ ತಿನ್ನಲು ಚಿಲ್ಲಿ ಪೂರ್ಕನ್ನೂ ಕೊಟ್ಟು ಖುಷಿಪಡಿಸುತ್ತಿದ್ದ ಈ ಹುಡುಗನಿಗೆ ಇಂದೇನಾಯ್ತು?” ಎಂದು ನಾನು ಅಚ್ಚರಿ ಪಟ್ಟಿದ್ದೆ.

ಅಸಲಿಗೆ ನನ್ನ ತಲೆ ಕೂದಲು ಇಲ್ಲದಿರುವ ಕಾರಣ ಗುರುತು ಸಿಕ್ಕಿಲ್ಲ ಅನಿಸಿ, “ನಾನು ತಮ್ಮ ನಾನು ಗೊತ್ತಾಗಿಲ್ಲವೇ?” ಅಂದೆ. “ಗೊತ್ತಾಯ್ತು ಸರ್” ಅಂದ. “ಮತ್ತೇ ಯಾಕೆ ಇದರೊಳಗೆ ಬಿಡುತ್ತಿಲ್ಲ?ಆ ಬದಿಗೆ ಯಾಕೆ ಹೋಗಲಿ?” ಕೇಳಿದೆ. “ಸರ್ ಇದು ಫ್ಯಾಮಿಲಿ ರೂಮ್ ಮೇಡಮ್ಮ್ ಜೊತೆ ಬಂದರೆ ಇಲ್ಲಿ ಹೋಗಬಹದು ನೀವೊಬ್ಬರೆ ಆದರೆ ಆಚೆ ಹೋಗಿ‌” ಎಂದು ಮುಲಾಜಿಲ್ಲದೆ ಹೇಳಿಬಿಟ್ಟ.

“ನಾನು ಸಾವರಿಸಿಕೊಂಡು ಮೇಡಮ್ಮು ಇನ್ನುಮುಂದೆ ನನ್ನ ಜೊತೆ ಬರಲ್ಲ. ನನಗೂ ಮೇಡಮ್ಮಿಗೂ ದೊಡ್ಡ ವೈಮನಸ್ಸು ಉಂಟಾಗಿ, ನಾವು ನಮ್ಮ ಸ್ನೇಹಕ್ಕೆ ಡೈವರ್ಸ್ ಮಾಡಿಕೊಂಡಿದ್ದೇವೆ” ಅಂದೆ.

“ನೀವು ಬೇರೆ ಮೇಡಮ್ ಜೊತೆ ಬಂದ್ರು ಒಳಗೆ ಬಿಡುತ್ತೇನೆ ಆದರೇ ಒಬ್ಬರನ್ನು ಮಾತ್ರ ಬಿಡುವುದಿಲ್ಲ” ಎಂದು ಆತ ಹೇಳಿಬಿಟ್ಟ.

“ಛೇ ಇದೆಂತಹಾ ವಿಧಿ ನನ್ನದೂ ನಾನು ಮೇಡಮ್ಮನ್ನು ತುಂಬಾ ನೆನಪಾಗಿ ಮೇಡಮ್ಮೂ ನಾನೂ ಕೂತು ಕುಡಿಯುತ್ತಿದ್ದ ಸ್ಥಳದಲ್ಲಿ ಕುಳಿತು, ಒಂದೂವರೆ ಬಾಟಲಿ ಬೀಯರ್ ಕುಡಿಯುವ ಉಮೇದು ಇಟ್ಟುಕೊಂಡು ಬಂದರೆ ನೀನೂ ಅವಳ ಅನುಪಸ್ಥಿತಿಯ ನಷ್ಟಗಳನ್ನು ತೋರಿಸಿಕೊಟ್ಟು ಮತ್ತಾಷ್ಟು ನೋಯಿಸಿದೆ” ಎಂದು ಬೇಸರ ವ್ಯಕ್ತಪಡಿಸಿದಾಗ, ಆತನಿಗೂ ನನ್ನ ವಿರಹವೇದನೆ ಅರಿವಾಗಿ “ಬೇಕಾದರೆ ಹೋಗಿ ನೀವು ಅವರು ಕೂರುತ್ತಿದ್ದ ಸ್ಥಳದಲ್ಲಿ ಕೂತು ಬನ್ನಿ. ಆದರೇ ಅಲ್ಲಿ ಕುಡಿಯುವ ಹಾಗಿಲ್ಲ‌” ಎಂದು ಸಣ್ಣ ವಿನಾಯಿತಿ ಕೊಟ್ಟ. ನಾನು ಹೋಗಿ ಅಲ್ಲಿ ಕುಳಿತು ಒಂದಿಷ್ಟು ಸವಿನೆನಪುಗಳನ್ನು ಮೆಲಕು ಹಾಕಿ, ಹೊರ ಬಂದು, ಅವನಿಗೆ ಥ್ಯಾಂಕ್ಯು ಹೇಳಿದೆ.
ರೆಸ್ಟೋರೆಂಟಿನ ಇನ್ನೊಂದು ಬದಿಗೆ ಹೋಗಿ ಎಂದಿಗಿಂತ ಕಾಲು ಬಾಟಲಿ ಬಿಯರ್ ಅಂದು ಜಾಸ್ತಿಯೇ ಕುಡಿದಿದ್ದೆ.

ಈ‌ ಕಥೆಯನ್ನು ಭಾವನಾತ್ಮಕವಾಗಿ ನಾನು ನಮ್ಮ ಗುಂಗುರು ಕೂದಲಿನ ಹುಡುಗಿಗೂ ಹೇಳಿದ್ದೆ. ಅವಳು ಯಾಕೋ ಗಳಗಳ ಎಂದು ಅಳಲು ಶುರುಮಾಡಿದ್ದಳು.

ಅಳುತ್ತಲೇ, “ನೋಡಿ ನಾನು ಬೇಕಾದ್ರೆ ಮುಂದಿನ ಬಾರಿ ರಜೆಯಲ್ಲಿ ಬಂದಾಗ ಜೊತೆಗೆ ಬರುತ್ತೇನೆ, ನೀವು ಅಲ್ಲೇ ಕೂತು ಕುಡಿಯಿರಿ ಆದರೇ ನಾನು‌ ಕುಡಿಯಲ್ಲ” ಅಂದು ಬಿಟ್ಟಳು. ನಾ ಹೇಳಿದ ಈ ಕಥೆ ಅಷ್ಟೊಂದು ಭಾವ ತೀವ್ರತೆಯಿಂದ ಕೂಡಿದೆಯೇ? ಎಂದು ನನಗೆ ಅನುಮಾನ ಉಂಟಾಯ್ತು. ಮತ್ತೆ ಅಳುವನ್ನು ಸ್ವಲ್ಪ ಸಹಿಸಿಕೊಂಡ ಅವಳು
‌”ನಿಮಗೆ ತುಂಬಾ‌ ಕಾಡುವ ಘಟನೆಯಾವುದು?” ಎಂದು‌‌ ಕೇಳಿದಳು.

ನಾನು‌ ನನ್ನ ಡಿಗ್ರಿ ಕಾಲೇಜಿಲ್ಲಿರುವಾಗ ನನಗೋಸ್ಕರ ಸುಂದರಿ ಒಬ್ಬಳು ಕಾಫಿ ಗಿಡಕ್ಕೆ ಸಿಂಪಡಿಸುವ ಕೀಟನಾಶಕ ಗ್ರೌಂಡಿಂಗ್ ಸೇವಿಸಿದ ಮತ್ತೊಂದು ಕಥೇ ಹೇಳತೊಡಗಿದೆ.

ಕೇಳಿ ಮುಗಿಸಿದ ಅವಳು ಯಾಕೋ‌ ಏನೋ “ನಾನೊಂದು ಕೇಳಲಾ? ಎಂದು ಸ್ವಲ್ಪ ಸೀರಿಯಸ್ ಆಗೇ ಕೇಳಿದಳು. ನಾನು “ಕೇಳು” ಅಂದೆ. ಒಂದೆರಡು ಕ್ಷಣ ಸಮಯ ತೆಗೆದುಕೊಂಡ ಅವಳು “ಫೋನಿನಲ್ಲಿ ಬೇಡ, ಮೆಸೇಜಿನಲ್ಲಿ ಕೇಳುತ್ತೇನೆ” ಎಂದಳು. ಸರಿ ಎಂದು ಅವಳ ಮೆಸೇಜಿಗೆ ಕಾಯುತ್ತಾ ಕುಳಿತೆ “ತಪ್ಪು ತಿಳಿಬೇಡಿ ನೀವು ವರ್ಜಿನಾ?” ಎನ್ನುವ ಮೆಸೇಜ್ ಆಚೆಯಿಂದ ಬಂತು.

ನಾನು ಅವಳ ಪ್ರಶ್ನೆಗೆ ಅಸಂಬದ್ಧವಾಗಿ ” ಈ‌ ಪ್ರಪಂಚದಲ್ಲಿ ಬಹುತೇಕರೆಲ್ಲರೂ ಹಸ್ತಮೈಥುನ ಮಾಡಿಕೊಳ್ಳುವವರೇ” ಅಂದೆ. “ಅದು ನಿಜವೇ ಬಿಡಿ” ಅಂದಳು. ನಾನು ಆ ವಿಷಯವನ್ನು ಅಲ್ಲಿಗೆ ಬಿಟ್ಟೆ. ಅವಳಿಗೆ ಮುಂದಿನ ಕಥೆ ಹೇಳಲು ಅಣಿಯಾದೆ…

ರಂಜಿತ್ ಕವಲಪಾರ

error: Content is protected !!