ನಿಸ್ವಾರ್ಥ ಸೇವೆಯ ಉಪನ್ಯಾಸಕಿ.. ನಮ್ಮ ಹೆಮ್ಮೆಯ ಮೇಡಂ ಶ್ರೀಮತಿ ಜಾನಕಿ

ನಿಸ್ವಾರ್ಥ ಸೇವೆಯ ಉಪನ್ಯಾಸಕಿ.. ನಮ್ಮ ಹೆಮ್ಮೆಯ ಮೇಡಂ ಶ್ರೀಮತಿ ಜಾನಕಿ.. ಶ್ರೀಮತಿ ಆನೇರ ಜಾನಕಿ ಮೋಹನ್. “ಜಾನಕಿ” ಎಂಬ ಹೆಸರಿಗೆ ಅನ್ವರ್ಥವೆಂಬಂತೆ, ನೇರ ನುಡಿಯ, ಶಾಂತ. ಸ್ವಭಾವದ, ಸದಾ ಮುಗುಳ್ನಗೆ ಬೀರುವ ಇವರು ನನ್ನಂತಹ ಸಾವಿರಾರು ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಜಾನಕಿ ಮೇಡಂ. ಪ್ರಸ್ತುತ ಭಾಗಮಂಡಲದ ಶ್ರೀ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲೆಯಾಗಿ ಕಾರ್ಯ ನಿರ್ವಹಿಸಿದ್ದು, ಬರೋಬ್ಬರಿ 33 ವರ್ಷಗಳಲ್ಲಿ 22 ವರ್ಷಗಳ ಕಾಲ ಯಶಸ್ವಿ ಪ್ರಾಂಶುಪಾಲೆಯಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ನಿಮ್ಮದು. ಇಂದು ನಿವೃತ್ತಿ ಯಾಗಲಿರುವ ನೀವು ಈ ವಿದ್ಯಾಸಂಸ್ಥೆ ಗೆ ಸಲ್ಲಿಸಿದ ಸೇವೆ ಅಪಾರ. ಭಾಗಮಂಡಲ ಸಮೀಪದ ಕುಂದಚೇರಿ ಗ್ರಾಮದ ಮತ್ತಾರಿ ಶ್ರೀಮತಿ ‌‌‌ಸುಬ್ಬಮ್ಮ ಮತ್ತು ಶ್ರೀ ಕಾರ್ಯಪ್ಪ ರವರ ಮಗಳಾಗಿ ಜನಿಸಿದ ನೀವು ಚೆಟ್ಟಿಮಾನಿಯ ಸರ್ಕಾರಿ ಪ್ರಾಥಮಿಕ ಶಾಲೆ ಯಲ್ಲಿ, ಪ್ರಾಥಮಿಕ ಶಿಕ್ಷಣವನ್ನು , ಪ್ರೌಢ & ಪದವಿ ಪೂರ್ವ ಶಿಕ್ಷಣವನ್ನು ಶ್ರೀ ಕಾವೇರಿ ಕಾಲೇಜಿನಲ್ಲಿ , ಪದವಿಯನ್ನು ಸುಳ್ಯದ ಆಗಿನ ಎನ್.ಎಮ್.ಸಿಯಲ್ಲಿ ಮತ್ತು ಸ್ನಾತಕೋತ್ತರ ಪದವಿಯನ್ನು ಮಂಗಳ ಗಂಗೋತ್ರಿ ಯಲ್ಲಿ ಮುಗಿಸಿ, ತಾನೇ ಓದಿದ ಶ್ರೀ ಕಾವೇರಿ ಕಾಲೇಜಿಗೆ ಕನ್ನಡ ಉಪನ್ಯಾಸಕಿಯಾಗಿ ನೇಮಕಗೊಂಡಿದ್ದು , ಅಲ್ಲಿಂದ 1987 ರಿಂದ 2021 ರ ತನಕ ನೀವು ನಡೆದು ಬಂದ ಸುದೀರ್ಘ ದಾರಿ ಸುಲಭದ್ದೇನಲ್ಲ ಎನ್ನುವುದು ವಾಸ್ತವಿಕ ಸತ್ಯ. ಗುರುಗಳ ಪ್ರಧಾನ ಶಕ್ತಿಯೇ ಅವರ ತಾಳ್ಮೆ, ನನ್ನ ವಿದ್ಯಾಭ್ಯಾಸದ ಎರಡು ವರ್ಷಗಳ ಅವಧಿಯಲ್ಲಿ ನಾನು ನೀವು ಕೋಪಗೊಂಡಿದ್ದಾಗಲಿ, ತಾಳ್ಮೆ ಕಳೆದುಕೊಂಡದ್ದನ್ನು ನೋಡಿಯೇ ಇಲ್ಲ. ಸಂಯಮದ ಪ್ರತಿರೂಪವೇ ಆಗಿದ್ದಿರಿ ನೀವು. ನಿಮ್ಮ ಬೋಧನಾ ವೈಖರಿ ಎಲ್ಲಾ ವಿದ್ಯಾರ್ಥಿಗಳಿಗೆ ಅಚ್ಚು ಮೆಚ್ಚು. ನಮ್ಮೆಲ್ಲರ ಪ್ರಥಮ ಭಾಷೆ ಕನ್ನಡ ಆಗಿದ್ದರಿಂದ ನಮಗೆ ಏನೂ ಕನ್ನಡ ಕಷ್ಟದ ಸಬ್ಜೆಕ್ಟ್ ಆಗಿರಲಿಲ್ಲ. ಆದರೂ ಅಂಕಗಳಿಕೆಯೇನೂ ಸುಲಭ ವಿರಲಿಲ್ಲ, ಇದನ್ನರಿತಿದ್ದ ನೀವು ನಮಗೆ ಕನ್ನಡದಲ್ಲಿ ಅಂಕಗಳಿಕೆ ಸುಲಭವಿಲ್ಲವೆಂದೂ, ಪರೀಕ್ಷೆ ಯನ್ನು ಹಗುರವಾಗಿ ತೆಗೆದುಕೊಳ್ಳದಿರಿಯೆಂದು ಪ್ರತಿ ಬಾರಿಯೂ ಮನದಟ್ಟು ಮಾಡಿಸುತ್ತಲೆ ಇರುತ್ತಿದ್ರಿ. ತನ್ನ ವಿಷಯದ ಪಾಠಗಳನ್ನು ಮುಗಿದಿದರೆ ಸಾಕಪ್ಪಾ ಎಂದು ನಿಟ್ಟುಸಿರು ಬಿಡುವ ಅಧ್ಯಾಪಕರ ‌ಪೈಕಿ ನೀವು ವಿಭಿನ್ನವಾಗಿ ನಿಲ್ಲುತ್ತಿದ್ದಿರಿ ಪ್ರತಿವಾರದಲ್ಲೊಂದು ದಿನ ತರಗತಿಯ ವಿದ್ಯಾರ್ಥಿಗಳ ಮಧ್ಯೆ ರಸಪ್ರಶ್ನೆ ಮತ್ತು ಚರ್ಚಾಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ರಿ. ಕೆಲವೊಮ್ಮೆ ಹುಡುಗರ ಮತ್ತು ಹುಡುಗಿಯ ರ ಮಧ್ಯೆ ಸ್ಪರ್ದೆ. ಒಂದೊಂದು ವಾರ ಒಬ್ಬೊಬ್ಬರು ಪ್ರಶ್ನೆಗಳನ್ನು ರೆಡಿ ಮಾಡಿಕೊಂಡು ಬರಬೇಕು. ಪ್ರಸ್ತುತ ವಿಷಯ ಆರಿಸಿ ಅದರ ಪರ – ವಿರೋಧ ಚರ್ಚೆ ಮಾಡಿಸುತ್ತಿದ್ರಿ. ಕೆಲವೊಂದು ಸಲ ಸಹಪಾಠಿಗಳೊಂದಿಗೆ ಚರ್ಚೆ ನಡೆದು, ಅದು ಪರಾಕಾಷ್ಠೆ ಗೆ ಹೋಗಿ ಜಗಳವಾಡಿಕೊಂಡಿದ್ದೂ ನೆನಪಾಗಿ ಈಗ ನಸುನಗೆ ಮೂಡುತ್ತಿದೆ. ಚಿನ್ನ- ಬೆಳ್ಳಿ, ವಜ್ರ- ವೈಡೂರ್ಯ ಗಳಿಗಿಂತಲೂ ನನಗೆ ವಿದ್ಯಾರ್ಥಿಗಳೇ ಆಭರಣಗಳು , ನಿಮ್ಮೆಲ್ಲರ ಮುಂದೆ ಇವೆಲ್ಲಾ ನಗಣ್ಯ ಎಂದು ನುಡಿದಾಗ ನನ್ನ ಕಣ್ಣಾಲಿಗಳೂ ತುಂಬಿ ಬಂದಿತ್ತು. ಮೂರು ದಶಕಗಳ ಕಾಲ ನಮ್ಮಂತಹ ಸಾವಿರಾರು ಶಿಷ್ಯಂದಿರನ್ನು ನೀವು ಆಭರಣಗಳಾಗಿ ಧರಿಸಿದ್ದೀರಿ , ನಾವುಗಳೇ ಧನ್ಯರು ಮೇಡಂ. ನಾನು ಓದುತ್ತಿದ್ದ ಸಮಯದಲ್ಲಿ ವಿದ್ಯಾರ್ಥಿನಿಯರ ಸಮವಸ್ತ್ರ ವಿನ್ಯಾಸ ಬದಲಾವಣೆಗೆ ನನ್ನ ನೇತೃತ್ವದಲ್ಲಿ ಬೇಡಿಕೆ ಇಟ್ಟಾಗ ಹಿಂದೆ ನಿಂತು ಬೆನ್ನು ತಟ್ಟಿದವರು ನೀವು. ಮಳೆ- ಗಾಳಿ, ಬಿಸಿಲು ಲೆಕ್ಕಿಸದೆ ಕಾಲೇಜಿಗೆ ಹಾಜಾರಾಗುತ್ತಿದ್ದ ನಿಮ್ಮ ಕಾರ್ಯ ವೈಖರಿಗೆ ನನ್ನ ಮನಸ್ಸಿನಿಂದ ನಮೋ ನಮಃ. ನಿಮ್ಮ ಮಾರ್ಗದರ್ಶನ ಹಾಗೂ ಮೇಲುಸ್ತುವಾರಿಯಲ್ಲಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮಗಳು ನೂರಾರು ಇರಬಹುದಾದರೂ ನಿಮ್ಮ ಸಾರಥ್ಯದಲ್ಲಿ ನಡೆದ ಕಾಲೇಜಿನ ಸುವರ್ಣ ಮಹೋತ್ಸವ ಮರೆಯಲು ಅಸಾಧ್ಯ. ಬಹಳ ವಿಜೃಂಭಣೆಯಿಂದ ನಡೆದ ಪ್ರತಿ ಕಾರ್ಯಕ್ರಮವೂ ಶ್ಲಾಘನೀಯ. ಓದಿದ ಶಾಲೆಯಲ್ಲಿ ಕಲಿಸಿದ ಗುರುಗಳೊಂದಿಗೆ ಮಕ್ಕಳಿಗೆ ಕಲಿಸುದಿದೆಯಲ್ಲಾ ಅದು ಎಲ್ಲರಿಗೂ ಸಿಗುವ ಭಾಗ್ಯವಲ್ಲ, ಅದು ನಿಮಗೆ ಲಭಿಸಿದೆ. ಹೆಣ್ಣು ಮಗಳು ಏನು ಮಾಡಿಯಾಳು ಎಂದು ಕುಹಕವಾಡದವರು ಇರಬಹುದೇ? ಅಂತವರಿಗೆ ಇಪ್ಪತ್ತೆರಡು ವರ್ಷ ಪ್ರಾಂಶುಪಾಲೆಯೆಂಬ ಪದಕ ಧರಿಸಿ ಪ್ರತ್ಯುತ್ತರ ನೀಡಿದ್ದೀರಿ ಇದಕ್ಕಾಗಿಯೆ ನಮ್ಮೆಲ್ಲರ ಹೃದಯಪೂರ್ವಕ ಚಪ್ಪಾಳೆ. “ತುಂಬಿದ ಕೊಡ ತುಳುಕುವುದಿಲ್ಲ” ಎಂಬ ಗಾದೆಗೆ ಜ್ವಲಂತ ಸಾಕ್ಷಿಯೇ ನೀವು. ನಿಮಗಿದ್ದ ಜ್ಞಾನದ ಹಿರಿಮೆಯನ್ನು ಎಂದೂ ಆಡಿಕೊಂಡವರಲ್ಲ ,ಸದಾ ಮಂದಸ್ಮಿತೆ, ಶಾಂತ ಸ್ವಭಾವದ ನೀವು ನನ್ನಂತ ಸಾವಿರಾರು ವಿದ್ಯಾರ್ಥಿಗಳಿಗೆ ಗುರುಗಳಾಗಿ ವಿದ್ಯೆ ಧಾರೆ ಎರೆದಿದ್ದೀರಿ, ಮಾರ್ಗದರ್ಶನ ನೀಡಿ, ತಪ್ಪಿದ್ದಾಗ ತಿದ್ದಿ ನಡೆಸಿದ್ದೀರಿ, ಕಾಣದಂತೆ ಸಹಾಯ ಹಸ್ತ ಚಾಚಿದ್ದೀರ, ಎಲ್ಲಕ್ಕಿಂತ ಮಿಗಿಲಾಗಿ ಅಮ್ಮನಂತೆ ಮಕ್ಕಳಿಗೆ ಮಮತೆ ನೀಡಿದ್ದೀರ. ಗುರು- ಶಿಷ್ಯರ ಸಂಬಂಧ ವಿಶಿಷ್ಟ, ವಿನೂತನ. ಗಟ್ಟಿಯಾಗಿ ಹೀಗೆಯೇ ಇರಲಿ ಈ ಅನುಬಂಧ.ಬರೆಯುತ್ತಾ ಹೋದರೆ ಇನ್ನೂ ಇದೆ. ನಿಮ್ಮ ಪ್ರತಿಯೊಬ್ಬ ವಿದ್ಯಾರ್ಥಿಯು ಜೀವನದಲ್ಲಿ ಎಷ್ಟೇ ಮುಂದೆ ಪ್ರಯಾಣಿಸಿದರೂ ನಿಮ್ಮ ಹಾರೈಕೆ ಸದಾ ಅವರ ಮುಂದಿರಲಿ .ನಿವೃತ್ತಿ ಜೀವನಕ್ಕೆ ಕಾಲಿಡುತ್ತಿರುವ ಈ ಸಂಧರ್ಭದಲ್ಲಿ ನಿಮ್ಮ ಮುಂದಿನ ಜೀವನ ಸದಾ ಹಸಿರಾಗಿ ಸುಖ- ಸಂತೋಷ ಹಾಗು ಉತ್ತಮ ಆರೋಗ್ಯದೊಂದಿಗೆ ಮೇಳೈಸುತ್ತಿರಲಿ. ಕೊನೆಯದಾಗಿ,

ನಿಮ್ಮೊಲವಿನ ವಿದ್ಯಾರ್ಥಿನಿ , ‘ಶಿರಿನ್ ವಿಶ್ವನಾಥ್’, ಮೈಸೂರು
error: Content is protected !!