ನಿರ್ಮಾಣಗೊಳ್ಳಲಿದೆ ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ ‘ವಿರಾಟ್ ರಾಮ ಮಂದಿರ’!

ಬಿಹಾರದ ಪೂರ್ವ ಚಂಪಾರಣ್‌ ಜಿಲ್ಲೆಯಲ್ಲಿ ಶ್ರೀರಾಮ ದೇಗುಲ ನಿರ್ಮಾಣಗೊಳ್ಳಲಿದೆ. ಮಹಾವೀರ್‌ ಮಂದಿರ್‌ ಟ್ರಸ್ಟ್‌ ವತಿಯಿಂದ ನಿರ್ಮಾಣವಾಗಲಿರುವ ‘ವಿರಾಟ್‌ ರಾಮಾಯಣ್‌ ಮಂದಿರ್‌’ ಎಂಬ ಹೆಸರಿನ ಈ ದೇಗುಲ ನಿರ್ಮಾಣ ಪೂರ್ತಿಯಾದ ಮೇಲೆ ವಿಶ್ವದ ಅತೀ ದೊಡ್ಡ ಹಿಂದೂ ದೇವಸ್ಥಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಬಿಹಾರದ ಪೂರ್ವ ಚಂಪಾರಣ್‌ ಜಿಲ್ಲೆಯಲ್ಲಿ ಕೇಸರಿಯಾ ಎಂಬಲ್ಲಿ ಈ ದೇಗುಲ ನಿರ್ಮಾಣವಾಗಲಿದೆ. ಈಗಾಗಲೇ 100 ಎಕರೆ ಜಾಗವನ್ನು ದೇಗುಲ ನಿರ್ಮಾಣಕ್ಕೆ ನೀಡಲಾಗಿದ್ದು, ಇನ್ನೂ 25 ಎಕರೆಗಳಷ್ಟು ಭೂಸ್ವಾಧೀನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಒಂದೆರಡು ತಿಂಗಳಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದೆ. 2013ರಲ್ಲಿ ಬಿಡುಗಡೆಯಾಗಿದ್ದ ನೀಲನಕ್ಷೆಗೆ ಕಾಂಬೋಡಿಯಾ ಆಕ್ಷೇಪ ವ್ಯಕ್ತಪಡಿಸಿತ್ತು. ಮೂಲ ನಕ್ಷೆಯಲ್ಲಿ ಮಾರ್ಪಾಡು ಮಾಡಿ ಒಪ್ಪಿಗೆ ಪಡೆಯಲಾಗಿದೆ.

ವಿಶಾಲವಾದ ದೇಗುಲ
ಈ ದೇಗುಲ ಅಂತಸ್ತುಗಳ ಬದಲಿಗೆ, ಲೇಯರ್‌ಗಳ ಮಾದರಿಯಲ್ಲಿ ಕಟ್ಟಲಾಗುತ್ತಿದೆ. 270 ಅಡಿ ಎತ್ತರವಿರುವ ಈ ದೇಗುಲ, 20,000 ಮಂದಿಗೆ ಕುಳಿತುಕೊಳ್ಳುವಷ್ಟು ವಿಶಾಲವಾಗಿರಲಿದೆ. ದೇಗುಲ ದಲ್ಲಿ ಶ್ರೀರಾಮ, ಸೀತೆ, ಲವ, ಕುಶ ಹಾಗೂ ವಾಲ್ಮೀಕಿ ಯವರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ.

ಅತೀ ದೊಡ್ಡ ಶಿವಲಿಂಗ
ದೇಗುಲ ಪ್ರಾಂಗಣದಲ್ಲಿ 18 ಇತರ ದೇವರ ದೇಗುಲಗಳು ನಿರ್ಮಾಣವಾಗಲಿದ್ದು, ಅವುಗಳಲ್ಲಿ ಮೊದಲು ಶಿವನ ದೇಗುಲ ಪೂರ್ಣಗೊಳ್ಳುತ್ತದೆ. ಇದರಲ್ಲಿ 250 ಮೆಟ್ರಿಕ್‌ ಟನ್‌ ತೂಕವಿರುವ, 33 ಅಡಿ ಎತ್ತರ, 33 ಅಡಿ ಅಗಲವಿರುವ ಶಿವಲಿಂಗ ಪ್ರತಿಷ್ಠಾಪಿಸಲಾಗುತ್ತಿದ್ದು, ಅದು ವಿಶ್ವದ ಅತೀ ದೊಡ್ಡ ಶಿವಲಿಂಗವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಈ ಶಿವಲಿಂಗ ನಿರ್ಮಾಣವಾಗಲಿದೆ.

error: Content is protected !!