ನಾಳೆ ಕೊನೆಯ ದಿನ ಬಿಗ್ ಬಾಸ್

ಇಷ್ಟು ದಿನ ಕಿಚ್ಚ ಸುದೀಪ್​ ಬಿಗ್​ಬಾಸ್​​ ವಾರಾಂತ್ಯದ ಎಪಿಸೋಡ್​ಗೆ ಯಾಕೆ ಬರ್ತಿಲ್ಲ ಅನ್ನುತ್ತಿದ್ದವರಿಗೆ ಬಿಗ್​ಬಾಸ್​ ಈಗ ಬಿಗ್​ ಶಾಕ್​ ನೀಡಿದೆ. ಅಂತಿಂತ ಶಾಕ್​ ಅಲ್ಲ.. ಎಪ್ಪಂತ್ತೊಂದು ದಿನಗಳ ಸುದೀರ್ಘ ಜರ್ನಿಯನ್ನ ಅಂತ್ಯಗೊಳಿಸುವ ಶಾಕ್​. ಹೌದು.. ನಾಳೆಗೆ ಬಿಗ್​ಬಾಸ್​ ಸೀಸನ್​ 8 ಕೊನೆಯಾಗಲಿದೆ. ಅಂದ್ಹಾಗೇ ಇದೇ ಮೊದಲ ಬಾರಿ ಬಿಗ್​ಬಾಸ್​ ಕನ್ನಡ ಶೋ ಅರ್ಧಕ್ಕೆ ನಿಲ್ಲುತ್ತಿರೋದು.

ಬಿಗ್ಬಾಸ್ ಸೀಸನ್ 8 ಶುರುವಾದ ದಿನದಿಂದಲೂ ಬಹಳ ಅಡೆ-ತಡೆಗಳಿತ್ತು. ಕೊರೊನಾ ಬಂದು ಎಲ್ಲವೂ ಸ್ಥಗಿತವಾದ ಕಾರಣ ಈ ಬಾರಿ ಬಿಗ್ಬಾಸ್ ನಡೆಯುತ್ತೆ ಅನ್ನೋ ವಿಶ್ವಾಸವೂ ಇರಲಿಲ್ಲ. ಈ ನಿರೀಕ್ಷೆಯನ್ನ ಸುಳ್ಳಾಗಿಸಿದ್ದು ಬಿಗ್ಬಾಸ್ ಸೂತ್ರಧಾರ ಪರಮೇಶ್ವರ್ ಗುಂಡ್ಕಲ್. ಯೆಸ್.. ಬಿಗ್ಬಾಸ್ ಈ ಬಾರಿ ನಡೆಯುವುದೇ ಇಲ್ಲ ಅಂತಿದ್ದವರಿಗೆ ಶೋ ನಡೆಸಿ ಉತ್ತರ ನೀಡಿದ್ದರು.

ಆದ್ರೆ ಇದೀಗ ಸೀಸನ್​ 8ನ್ನ ನಿಲ್ಲಿಸಬೇಕಾದ ಪರಿಸ್ಥಿತಿ ಬಂದೊದಗಿದೆ.

ಈ ಬಗ್ಗೆ ಸ್ವತಃ ಪರಮೇಶ್ವರ್​ ಗುಂಡ್ಕಲ್​ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟ ಪಡಿಸಿದ್ದಾರೆ. ಒಂದಷ್ಟು ನೋವಿನ ಜೊತೆಗೆ ಈ ತೀರ್ಮಾನ ಅದ್ಯಾಕೋ ಸಮಾಧಾನ ಕೊಟ್ಟಿದೆ ಅನ್ನೋದು ಪರಮೇಶ್ವರ್​ ಗುಂಡ್ಕಲ್​ ಮಾತು.

ಬಿಗ್ ಬಾಸ್ ಶುರುವಾಗಿ ಇವತ್ತಿಗೆ ಎಪ್ಪತ್ತೊಂದನೇ ದಿನ. ಪಿಸಿಆರ್​ನಲ್ಲಿ ನಿಂತು ಈ ಮನೇಲಿರೋ ಹನ್ನೊಂದು ಜನ ಓಡಾಡುತ್ತಿರುವುದನ್ನು ನೋಡಿದಾಗ ಒಂದಕ್ಕಿಂತ ಹೆಚ್ಚು ಭಾವನೆಗಳು ಒಂದೇ ಸಲಕ್ಕೆ ಬಂದು ಮನಸ್ಸಿಗೆ ವಿಚಿತ್ರವಾದ ತಳಮಳ. ಹೊರಗಡೆ ಎದುರಾಗಿರುವ ಕಷ್ಟದ ಸವಾಲು ಗೊತ್ತಿಲ್ಲದೇ ಒಳಗಡೆ ಇರುವವರೆಲ್ಲಾ ಖುಷಿಯಾಗಿದ್ದಾರೆ. ಐಸೋಲೇಷನ್​​ನಲ್ಲಿ ಇರುವುದರಿಂದ ಸುರಕ್ಷಿತವಾಗಿಯೂ ಇದ್ದಾರೆ. ಎಲ್ಲರಿಗೂ ಹೊರಗಡೆ ಆಗಿರುವ ಬೆಳವಣಿಗೆ ತಿಳಿಸಿ ನಾಳೆ ಹೊರಗಡೆ ಕರೆಯುತ್ತಿದ್ದೇವೆ. ಅನಂತರ ಅವರನ್ನು ಮತ್ತು ತಂಡವನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ವ್ಯವಸ್ಥೆ ಆಗುತ್ತಿದೆ.

ನೂರಾರು ದಿನಗಳ ಕೆಲಸ. ನೂರಾರು ಜನರ ಕೆಲಸ. ಎಲ್ಲವನ್ನೂ ಪಕ್ಕಕ್ಕಿಟ್ಟು ಶ್ರದ್ಧೆಯಿಂದ ಕೆಲಸ ಮಾಡಿದ ಒಂದು ತಂಡದ ಕನಸು ಅರ್ಧಕ್ಕೇ ನಿಂತಿದೆ. ಕಷ್ಟದ ತೀರ್ಮಾನವಾದರೂ ಸಮಾಧಾನ ಕೊಟ್ಟ ತೀರ್ಮಾನ. ಮನಸ್ಸು ಭಾರವಾಗಿದೆ. ಈ ಶೋ ನಿಲ್ಲುತ್ತಿದೆ ಅಂತಲ್ಲ, ಹೊರಗಡೆ ಗಾಳಿಯಲ್ಲಿ ಓಡಾಡುತ್ತಿರುವ ಕಣ್ಣಿಗೆ ಕಾಣದ ಅನಿಶ್ಚಿತತೆಯಿಂದ ಇನ್ನಿಲ್ಲದ ಕಳವಳ. ಎಲ್ಲರಿಗೂ ಈ ಕಳವಳಕ್ಕೊಂದು ಉತ್ತರ ಬೇಗ ಸಿಗಲಿ. ಸುರಕ್ಷಿತವಾಗಿರಿ.

ಪರಮೇಶ್ವರ್​ ಗುಂಡ್ಕಲ್​, ಕಲರ್ಸ್​ ಕನ್ನಡ ಬ್ಯುಸಿನೆಸ್​ ಹೆಡ್​

ಸದ್ಯ ಬಿಗ್​ಬಾಸ್​ ಬಗೆಗಿನ ತಳಮಳಕ್ಕೆ ತೆರೆಬಿದ್ದಿದ್ದು, ನಾಳೆಯಿಂದ ಬಿಗ್​ಬಾಸ್​ ಮನೆ ಖಾಲಿಯಾಗಿರಲಿದೆ. ಲಾಕ್​ಡೌನ್​ ಕಾರಣ ತೆಗೆದುಕೊಂಡ ಈ ನಿರ್ಧಾರದಿಂದ ಅದೆಷ್ಟೋ ಜನರಿಗೆ ನೋವಾಗಿದ್ದರೂ ಕೂಡ, ಈ ನಿರ್ಧಾರವನ್ನ ಖುಷಿಯಿಂದಲೇ ಸ್ವೀಕರಿಸಬೇಕು.

error: Content is protected !!