fbpx

“ನಾಗರ ಪಂಚಮಿ “

-ಶಿರೀನ್ ವಿಶ್ವನಾಥ್

ಮಳೆಗಾಲದ ಅಬ್ಬರ ,ಆಷಾಢದ ಸೂತಕಗಳೆಲ್ಲ ಕಳೆದ ನಂತರ ಬರುವ ಮಾಸವೇ ಶ್ರಾವಣ. ಪ್ರತೀವರ್ಷ ಶ್ರಾವಣ ಮಾಸದ ಶುಕ್ಲಪಕ್ಷದ ಐದನೇ ದಿನ (ಪಂಚಮಿ) ಆಚರಿಸಲ್ಪಡುವ ಈ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ . ಇದರ ನಂತರವೇ ಸಾಲು ಸಾಲು ಹಬ್ಬಗಳ ಆಗಮನವಾಗುವುದರಿಂದ ,ಮಾಸದ ಮೊದಲ ಹಬ್ಬ ಎನ್ನುವ ಹೆಗ್ಗಳಿಕೆಯಿದೆ. ಭಾರತದ ಹಲವು ಭಾಗಗಳಲ್ಲಿ ಹಿಂದೂ ನಾಗ ಭಕ್ತರು ಈ ಹಬ್ಬವನ್ನು ಆಚರಿಸುತ್ತಾರೆ. ನಮ್ಮ ಕರ್ನಾಟಕದಲ್ಲೂ ಈ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತೇವೆ.ಹಾವಿನ ಹುತ್ತವನ್ನು ನೀರಿನಿಂದ ಶುಚಿ ಗೊಳಿಸಿ,ಅರಿಸಿಣ- ಕುಂಕುಮ ಹಚ್ಚಿ, ಹೂವಿನಿಂದ ಅಲಂಕರಿಸಿ, ಫಲಗಳನ್ನಿಟ್ಟು ಹಾಲೆರೆದು ಇಷ್ಟಾರ್ಥಗಳ ಪ್ರಾಪ್ತಿಗಾಗಿ ನಾಗದೇವನನನ್ನು ಬೇಡುತ್ತೇವೆ.ಪ್ರತೀ ಹಬ್ಬಗಳಿಗಿರುವಂತೆ ಈ ಹಬ್ಬಕ್ಕೂ ಸಾಕಷ್ಟು ಪುರಾಣ ಕಥೆಗಳಿವೆ. ಹಾವು ಕಚ್ಚಿ ಮರಣ ಹೊಂದಿದ ತನ್ನ ಸಹೋದರನನ್ನು ಬದುಕಿಸಲು ಆತನ ಸಹೋದರಿ ನಾಗದೇವನನ್ನು ಭಕ್ತಿಯಿಂದ ಪೂಜಿಸಿ ಅಣ್ಣನನ್ನು ಬದುಕಿಸಿಕೊಂಡ ದಿನ ಇದಾಗಿತ್ತು ಎನ್ನಲಾಗುತ್ತದೆ. ಆದ್ದರಿಂದ ಈ ದಿನವನ್ನು “ಭಾತೃತ್ವದ” ಸಂಕೇತವಾಗಿಯೂ ಕೆಲವೆಡೆ ಆಚರಿಸುತ್ತಾರೆ. ಮಹಾಭಾರತ ಕಥನದಲ್ಲೂ ಈ ದಿನದ ಉಲ್ಲೇಖವಿದೆ, ಇದರ ಪ್ರಕಾರ ಪರೀಕ್ಷಿತ ಮಹಾರಾಜ ನು ತನ್ನ ತಂದೆಯ ಸಾವಿಗೆ ನಾಗ ದೇವ ಕಾರಣವೆಂದು ತಿಳಿದು ಭೂಲೋಕದಲ್ಲಿರುವ ಸರ್ಪ ಸಂಕುಲವನ್ನೆಲ್ಲ ನಾಶ ಮಾಡಲು ಹೊರಟಾಗ ,ಸಂತರೊಬ್ಬರು ನಾಗ ಹಿಂಸೆ ಮಹಾಪಾಪವೆಂದು ಹಿತವಚನ ನೀಡುತ್ತಾರೆ ಇದನ್ನಾಲಿಸಿದ ಮಹಾರಾಜ ಸರ್ಪಯಜ್ಞ ವನ್ನು ನಿಲ್ಲಿಸಲು ನಿರ್ಧರಿಸಿದ ದಿನ ಶ್ರಾವಣ ಶುಕ್ಲ ಪಕ್ಷ ದ ಪಂಚಮಿಯಾಗಿತ್ತು ಎನ್ನಲಾಗುತ್ತದೆ. ಇನ್ನೂ ಹಲವು ಕಥೆಗಳು ವಾಡಿಕೆಯಲ್ಲಿವೆ. ಆದರೆ ವಾಸ್ತವವಾಗಿ ಈಗ ಮಳೆಗಾಲವಾಗಿರುವ ಕಾರಣ ಹಾವುಗಳ ಹರಿದಾಡುವಿಕೆ ಜಾಸ್ತಿಯಿರುತ್ತದೆ , ಜನರು ಹಾವುಗಳಿಂದ ರಕ್ಷಣೆ ಪಡೆಯುವ ಉದ್ದೇಶದಿಂದ ನಾಗನಿಗೆ ಪೂಜೆ ಸಲ್ಲಿಸಿ ನಮಸ್ಕರಿಸುವುದು ಆಚರಣೆಗೆ ಬಂದಿರಬಹುದು. ರೈತರ ಬೆಳೆಗಳನ್ನು ಉಳಿಸುವಲ್ಲಿ ಸಹಕಾರಿಯಾಗಿರುವ ಹಾವುಗಳನ್ನು “ರೈತರ ಮಿತ್ರ” ಎಂದೇ ಕರೆಯಲಾಗುತ್ತಿದೆ. ಹಾವುಗಳ ಮಾರಣ ಹೋಮ ತಪ್ಪಿಸಲು ನಮ್ಮ ಪೂರ್ವಜರು ಇವುಗಳ ರಕ್ಷಣೆಗೋಸ್ಕರ ಈ ಆಚರಣೆಯನ್ನು ಹಮ್ಮಿಕೊಂಡಿರಬಹುದು. ಏನೇ ಇರಲಿ ಇಂದು ಅಳಿವಿನ ಅಂಚಿನಲ್ಲಿರುವ ಉರಗಗಳ ರಕ್ಷಿಸಿ ಪರಿಸರ ಸಮತೋಲನೆಗೆ ನಾವೆಲ್ಲರೂ ಪಣ ತೊಟ್ಟರೆ ನಾಗರ ಪಂಚಮಿ ಹಬ್ಬದಾಚರಣೆಗೂ ಮೌಲ್ಯ ಸಿಕ್ಕಂತಾಗುತ್ತದೆ.

error: Content is protected !!