fbpx

ನವಣೆ ಹಾಲುಬಾಯಿ

ಮಣ್ಣಿ, ಹಾಲುಬಾಯಿ ಮತ್ತು ಕಿಲ್ಸಾ ಅಂತೆಲ್ಲಾ ಕರೆಯುವ ಹಲ್ವಾ ಒಂದು ಮಲೆನಾಡಿನ ಸಾಂಪ್ರದಾಯಿಕ ಅಡುಗೆ, ಇದನ್ನು ಪ್ರಮುಖವಾಗಿ ರಾಗಿ ಮತ್ತು ಅಕ್ಕಿಯಿಂದ ತಯಾರಿಸುವ ಸಿಹಿ ಇಲ್ಲಿ ನಾನು ಸಿರಿಧಾನ್ಯಗಳಲ್ಲಿ ಒಂದಾದ ನವಣೆ ಉಪಯೋಗಿಸಿ ಮಾಡಿದ್ದೇನೆ.

ಬೇಕಾಗುವ ಸಾಮಗ್ರಿಗಳು
1) ನವಣೆ – 1 ಪಾವು
2) ತೆಂಗಿನಕಾಯಿ ತುರಿ – 1 ಪಾವು
3)ಏಲಕ್ಕಿ ಪುಡಿ – 1/4 ಚಮಚ
4)ಬೆಲ್ಲದ ಪುಡಿ – 1 ಪಾವು
5)ತುಪ್ಪ ಸ್ವಲ್ಪ

ಮೊದಲಿಗೆ ನವಣೆಯನ್ನು ತೊಳೆದು 6-8 ಘಂಟೆಗಳ ಕಾಲ ನೆನೆಸಿ, ಈಗ ನೆನೆಸಿದ ನವಣೆ, ತಾಜಾ ತೆಂಗಿನಕಾಯಿ ತುರಿ ಎರಡನ್ನೂ ನುಣ್ಣಗೆ ರುಬ್ಬಿಕೊಳ್ಳಿ ನಂತರ ಹಿಟ್ಟು ಜಾಲಿಸುವ ಜರಡಿಯಲ್ಲಿ ರುಬ್ಬಿದ ಮಿಶ್ರಣವನ್ನು ಸೋಸಿ ಅದಕ್ಕೆ ಪುಡಿ ಮಾಡಿದ ಬೆಲ್ಲ ಹಾಕಿ ಕರಗಿಸಿ(ಬೆಲ್ಲದಲ್ಲಿ ಕಸ ಕಡ್ಡಿ ಇದ್ದರೆ ಮತ್ತೊಮ್ಮೆ ಸೋಸಿಕೊಳ್ಳಿ).

ಈಗ ಒಂದು ದಪ್ಪ ತಳದ ಬಾಣಲೆಯಲ್ಲಿ ಮಾಡಿರುವ ಮಿಶ್ರಣ ಹಾಕಿ ಒಲೆ ಮೇಲೆ ಇಟ್ಟು ಕೈ ಬಿಡದೆ ಕಲೆಸುತ್ತ ಇರಬೇಕು ಮಿಶ್ರಣ ಗಟ್ಟಿಯಾಗುತ್ತಾ ಬಂದಾಗ ಮದ್ಯೆ ಮದ್ಯೆ ಸ್ವಲ್ಪ ಸ್ವಲ್ಪವೇ ತುಪ್ಪ ಹಾಕುತ್ತಾ ಕಲೆಸುತ್ತಾ ಇರಿ, ಸುಮಾರು ಸಮಯದ ನಂತರ ಅದು ತಳ ಬಿಡುವ ಹಂತಕ್ಕೆ ಬಂದಾಗ ಏಲಕ್ಕಿ ಪುಡಿಯನ್ನು ಸೇರಿಸಿ ಕಲೆಸಿ ಒಂದು ತುಪ್ಪ ಸವರಿದ ತಟ್ಟೆಗೆ ಹಾಕಿ ಹದ ಮಾಡಿ ಸಂಪೂರ್ಣ ತಣ್ಣಗೆ ಆಗಲು ಬಿಡಿ. ನಂತರ ನಿಮಗೆ ಬೇಕಾದ ಆಕಾರಕ್ಕೆ ತಕ್ಕಂತೆ ಕತ್ತರಿಸಿ ಸವಿಯಿರಿ.

ಬೇಕಾದಲ್ಲಿ ಇದಕ್ಕೆ ಹುರಿದ ಗಸ ಗಸೆ ಹಾಗೂ ಒಣ ಕೊಬ್ಬರಿ ತುರಿ ಹಾಕಿ ಅಲಂಕರಿಸಬಹುದು.

ಶ್ರುತಿ
error: Content is protected !!