ನಲ್ವತ್ತೋಕ್ಲಿನಲ್ಲಿ ನೂತನ ಗ್ರಂಥಾಲಯ ಲೋಕಾರ್ಪಣೆ

ಜುಮಾ ಮಸೀದಿ ಆವರಣದಲ್ಲಿ ಹೊಸ ಪರಿಕಲ್ಪನೆಗೆ ಮಾದರಿಯಾದ ಮುಸ್ಲಿಂ ಜಮಾಅತ್
ವಿರಾಜಪೇಟೆ ಸಮೀಪದ ನಲ್ವತ್ತೋಕ್ಲಿನ ಮೊಹಿದ್ದೀನ್ ಜುಮಾ ಮಸೀದಿ ಅವರಣದಲ್ಲಿ ನೂತನವಾಗಿ ನಿರ್ಮಿಸಲಾದ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ಸುಸಜ್ಜಿತ ಗ್ರಂಥಾಲಯವನ್ನು ಶುಕ್ರವಾರದಂದು ಲೋಕಾರ್ಪಣೆಗೊಳಿಸಲಾಯಿತು. ಈ ಮೂಲಕ ಜುಮಾ ಮಸೀದಿ ಆವರಣದಲ್ಲಿ ಗ್ರಂಥಾಲಯವೊಂದರ ನಿರ್ಮಾಣದ ಹೊಸ ಪರಿಕಲ್ಪನೆ ಹುಟ್ಟು ಹಾಕಿ ನಲ್ವತ್ತೋಕ್ಲಿನ ಮೊಹಿದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿ ಮಾದರಿಯಾಗಿದೆ.

ಲೋಕ ಪ್ರವಾದಿ ಮೊಹಮ್ಮದ್ ಪೈಗಂಬರ್ ರವರು ಜನಿಸಿದ ಪುಣ್ಯ ಮಾಸಾರಂಭದ ದಿನದಂದು ಶುಕ್ರವಾರದ ಪವಿತ್ರ ಜುಮಾ ನಮಾಝಿನ ಬಳಿಕ ನಡೆದ ಕಾರ್ಯಕ್ರಮದಲ್ಲಿ ನಲ್ವತ್ತೋಕ್ಲಿನಲ್ಲಿ ಮೊಹಿದ್ದೀನ್ ಜುಮ್ಮಾ ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿರುವ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ. ಎಂ. ಎ.)ಅಧ್ಯಕ್ಷರಾದ ದುದ್ದಿಯಂಡ ಹೆಚ್.ಸೂಫಿ ಹಾಜಿ ಅವರು ಟೇಪ್ ಕತ್ತರಿಸುವ ಮೂಲಕ ನೂತನ ಗ್ರಂಥಾಲಯವನ್ನು ಲೋಕಾರ್ಪಣೆಗೊಳಿಸಿದರು.
ಗ್ರಾಮದ ನಿವಾಸಿಗಳಿಗೆ ದಿನಪತ್ರಿಕೆಗಳು ಸೇರಿದಂತೆ ಅಗತ್ಯ ಪುಸ್ತಕಗಳನ್ನು ಓದಲು ಸೂಕ್ತ ಸ್ಥಳವಕಾಶ ಕೊರತೆಯನ್ನು ಮನಗಂಡ ಮಸೀದಿ ಆಡಳಿತ ಮಂಡಳಿ ತನ್ನ ಮಸೀದಿಯ ಆವರಣದಲ್ಲೇ ಗ್ರಂಥಾಲಯವೊಂದನ್ನು ಸ್ಥಾಪಿಸಿದ್ದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಇದರೊಂದಿಗೆ ಮಸೀದಿ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಆಡಳಿತ ಮಂಡಳಿ ಆಧುನಿಕ ಕಚೇರಿ ಮತ್ತು ಸುಸಜ್ಜಿತ ಕಾರ್ಯಕಾರಿ ಸಮಿತಿ ಸಭಾಸನವನ್ನು ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ದುದ್ದಿಯಂಡ ಅಶ್ರಫ್ ಅಲಿ ಅವರು ಉದ್ಘಾಟಿಸಿದರು. ಬಳಿಕ ಕಚೇರಿಯ ಕಂಪ್ಯೂಟರ್ ವಿಭಾಗಕ್ಕೆ ಮಸೀದಿಯ ಧರ್ಮಗುರುಗಳಾದ ಸಿದ್ಧಿಖ್ ಪಾಜ್ಹಿಳಿ ಅವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ನಿವೃತ್ತ ಖಜಾನಾಧಿಕಾರಿಗಳಾದ ದುದ್ದಿಯಂಡ ಉಸ್ಮಾನ್ ಹಾಜಿ, ಕನ್ನಡಿಯಂಡ ಆಲಿ ಹಾಜಿ , ಆಡಳಿತ ಮಂಡಳಿ ಕಾರ್ಯದರ್ಶಿ ಡಿ.ಎಂ. ಯೂಸುಫ್, ಪದಾಧಿಕಾರಿಗಳಾದ ಪಿ.ಎಂ. ಹಮೀದ್, ಡಿ.ಎಸ್. ಹಂಸ, ಪಿ.ಎ. ಬಶೀರ್, ಕೆ.ಎಫ್. ಅಬ್ಬಾಸ್, ಸೈಫುದ್ದೀನ್, ಕೆ. ಯು.ಶಂಸುದ್ದೀನ್, ಅಶ್ರಫ್ ನೌಶಾದ್, ಮತ್ತೋರ್ವ ಧರ್ಮಗುರುಳಾದ ಜ್ಹಿಯಾದ್ ದಾರಿಮಿ, ಗ್ರಾಮದ ಹಿರಿಯರಾದ ದುದ್ದಿಯಂಡ ಮಾಹಿನ್ ಹಾಜಿ, ದುದ್ದಿಯಂಡ ಮೊಹಮ್ಮದ್, ಗ್ರಾಮದ ಪ್ರಮುಖರಾದ ಕನ್ನಡಿಯಂಡ ಜುಬೈರ್ ಸೇರಿದಂತೆ ಮಹಲಿನ ನಿವಾಸಿಗಳು ಪಾಲ್ಗೊಂಡಿದ್ದರು.
ಗ್ರಂಥಾಲಯ ಮತ್ತು ಕಚೇರಿ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಸಾಮೂಹಿಕ ಪ್ರಾರ್ಥನೆಗೆ ಮಸೀದಿಯ ಖತೀಬರಾದ ಸಿದ್ದೀಖ್ ಪಾಜ್ಹಿಳಿ ಅವರು ನೇತೃತ್ವ ನೀಡಿದರು.