ನಮ್ಮ ಬೆಂಗಳೂರಿನ ಬಗ್ಗೆ ಅಸಮಾಧಾನವೇಕೆ?

ಬರಹ: ಹೇಮಂತ್ ಸಂಪಾಜೆ

ಕೊರೊನಾ ಆತಂಕ ನಮ್ಮ ಬೆಂಗಳೂರಿಗರನ್ನು ಚಿಂತೆಗೀಡು ಮಾಡಿದೆ. ದಿನನಿತ್ಯ ವೈರಸ್ ಪ್ರಕರಣ ಹೆಚ್ಚುತ್ತಿದೆ. ಇದರ ಜತೆಗೆ ದುಡಿಮೆ, ಹಣವಿಲ್ಲದೆ ಬ್ಯಾಗ್ ಹಿಡಿದು ಊರಿನ ಕಡೆ ನಡೆಯುತ್ತಿರುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ.

ಬೆಂಗಳೂರು ಅಂತಲ್ಲ, ನೀವು ದೇಶದ ಯಾವುದೇ ನಗರವನ್ನು ತೆಗೆದುಕೊಳ್ಳಿ, ಅಲ್ಲಿ ಬದುಕು ನೀವು ಅಂದುಕೊಂಡಂತೆ ಸುಲಭವಾಗಿರುವುದಿಲ್ಲ. ದುಭಾರಿ ಬಾಡಿಗೆ, ಕರೆಂಟ್ ಬಿಲ್, ವಾಟರ್ ಬಿಲ್, ಹಾಲು, ತರಕಾರಿ, ದಿನಸಿ, ಜತೆಗೆ ನಿಮ್ಮ ವೈಯಕ್ತಿಕ ಕಮಿಟ್ಮೆಂಟ್ ಸೇರಿದರೆ ನಿಮಗೆ ಬರುವ ವೇತನದಲ್ಲಿ ತಿಂಗಳಿಗೆ ಉಳಿಯುವುದು ಶೂನ್ಯ, ಎಷ್ಟು ಸಂಪಾದನೆ ಇದ್ದರೂ ನಗರದಲ್ಲಿ ಸಾಕಾಗುವುದಿಲ್ಲ ಎನ್ನುವ ಮಾತಿದೆ.

ಅದು ನಿಜವೂ ಹೌದು, ಅಂತಹುದರಲ್ಲಿ ಕೊರೊನಾ ವಕ್ಕರಿಸಿಕೊಂಡರೆ ಜನರ ಪಾಡು ಏನಾಗಬೇಡ ಹೇಳಿ? ಅದರಲ್ಲೂ ಕೆಲಸವನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿರುವ ಮಧ್ಯಮ ವರ್ಗದ ಜನರ ದಿಕ್ಕೇನು?
ಇಂದು ನಾಳೆ ಅಂತ ಜನ ಕಾದಿದ್ದಾಯಿತು, ಕೊರೊನಾ ಮಾರಿ ಹೆಚ್ಚಾಗುತ್ತಿದೆ ಹೊರತು ಕಡಿಮೆ ಅಂತೂ ಆಗುತ್ತಿಲ್ಲ, ಹಾಗಂತ ಬೆಂಗಳೂರಲ್ಲಿ ಸದ್ಯ ಯಾವುದರ ದರವೂ ಕಡಿಮೆ ಆಗಿಲ್ಲ, ಮನೆ ಬಾಡಿಗೆ ಹಾಗೇ ಇದೆ, ಕರೆಂಟ್ ಬಿಲ್, ವಾಟರ್ ಬಿಲ್, ದಿನಸಿ ದರಗಳು ಗಗನಕ್ಕೇರಿದೆ.

ಇಂತಹ ಸಂದರ್ಭದಲ್ಲಿ ಕೆಲಸವಿಲ್ಲ, ಜನರಲ್ಲಿ ದುಡ್ಡಿಲ್ಲ. ಕೆಲಸ ಇದ್ದರೂ ಅರ್ಧ ಸಂಬಳ!, ತಿಂಗಳಾದರೆ ಮನೆ ಮಾಲೀಕ ಬಾಡಿಗೆ ಕೇಳುವುದಕ್ಕೆ ಮನೆ ಮುಂದೆ ನಿಲ್ಲುತ್ತಾನೆ, ಕರೆಂಟ್ ಬಿಲ್, ವಾಟರ್ ಬಿಲ್ ಕಟ್ಟಲೇ ಬೇಕು, ಮನೆಗೆ ದಿನಸಿ ತರಲೇಬೇಕು, ಕೆಲಸವೇ ಇಲ್ಲದವರು, ಸಂಸಾರಸ್ಥರು, ಅರೆಬರೆ ಸಂಬಳ ತೆಗೆದುಕೊಳ್ಳುವವರು ಇದನ್ನೆಲ್ಲ ಅರಗಿಸಿಕೊಂಡು ಬೆಂಗಳೂರಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಹೆಂಡತಿ, ಮಕ್ಕಳನ್ನು‌ ಕಟ್ಟಿಕೊಂಡು ಹೇಗೆ ಬದುಕುತ್ತಾರೆ ಹೇಳಿ? ದುಡ್ಡಿಲ್ಲದೆ ಜಗದಲ್ಲಿ ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ ಅಂತಾರೆ ಅಂತಹುದರಲ್ಲಿ ಬೆಂಗಳೂರಲ್ಲಿ ಜೀವನ ಸಾಗುತ್ತದೆಯೇ?,
ಸಾಂಕ್ರಾಮಿಕ ರೋಗಕ್ಕೆ ಯಾರನ್ನೂ ಹೊಣೆ ಮಾಡಿ ಪ್ರಯೋಜನವಿಲ್ಲ, ಸಾಮಾಜಿಕ ಜಾಲತಾಣ, ಟೀವಿಯಲ್ಲಿ ಕೆಲವರು ಬೆಂಗಳೂರನ್ನು ಬೈಯ್ಯುತ್ತಾ ಊರು ಕಡೆ ಹೋಗುತ್ತಿರುವುದನ್ನು ನೋಡಿದ್ದೇನೆ.

ಇದು ಮನಸ್ಸಿಗೆ ಬೇಸರವಾಗುವ ವಿಷಯ, ಯಾರೋ ವ್ಯಕ್ತಿ ಅಥವಾ ಕಂಪನಿ ಮಾಡಿದ ಅನ್ಯಾಯಕ್ಕೆ ಬೆಂಗಳೂರನ್ನು ಟೀಕಿಸಿದರೆ ಏನು ಪ್ರಯೋಜನ?, ಇಷ್ಟು ದಿನ ನಿಮಗೆ ಜೀವನಕೊಟ್ಟ ಬೆಂಗಳೂರನ್ನು ನಿಂದಿಸುವುದು ಎಷ್ಟು ಸರಿ?.

ಬರಹ: ಹೇಮಂತ್ ಸಂಪಾಜೆ

error: Content is protected !!
satta king chart