ನಟಿ ಶೃತಿ ಹಾಸನ್ ವಿರುದ್ಧ ಬಿಜೆಪಿ ಕಿಡಿ!

ಚೆನ್ನೈ: ಮತಗಟ್ಟೆ ಒಳಗೆ ಅತಿಕ್ರಮ ಪ್ರವೇಶ ಮಾಡಿದ್ದಾರೆಂದು ಆರೋಪಿಸಿ, ಮಕ್ಕಳ್​ ನಿಧಿ ಮೈಯಂ (ಎಂಎನ್​ಎಂ) ಪಕ್ಷದ ಮುಖ್ಯಸ್ಥ ಕಮಲ್​ ಹಾಸನ್​ ಪುತ್ರಿ ಶ್ರುತಿ ಹಾಸನ್​ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಮಂಗಳವಾರ ನಡೆದ ಮತದಾನದ ವೇಳೆ ಪರಿಶೀಲನೆಗೆಂದು ಕೊಯಮತ್ತೂರಿನ ದಕ್ಷಿಣ ವಿಭಾಗದ ಮತಗಟ್ಟೆಗೆ ಕಮಲ್​ ಹಾಸನ್ ಭೇಟಿ ನೀಡಿದ್ದರು. ಈ ವೇಳೆ ಶ್ರುತಿ ಹಾಸನ್​ ಸಹ ತಂದೆಯ ಜತೆಯಲ್ಲಿ ಮತಗಟ್ಟೆಗೆ ಬಂದಿದ್ದರು. ಹೀಗಾಗಿ ಅತಿಕ್ರಮ ಪ್ರವೇಶ ಎಂದು ಬಿಜೆಪಿ ದೂರು ದಾಖಲಿಸಿದೆ.

ಮಂಗಳವಾರ ನಡೆದ ಮತದಾನದ ವೇಳೆ ಚೆನ್ನೈನಲ್ಲಿ ಪುತ್ರಿಯರಾದ ಶ್ರುತಿ ಹಾಸನ್ ಮತ್ತು ಅಕ್ಷರ ಹಾಸನ್ ಜತೆಯಲ್ಲಿ ಮತ ಚಲಾಯಿಸಿದ ಕಮಲ್ ಹಾಸನ್, ಅಲ್ಲಿಂದ ನೇರವಾಗಿ ತಮ್ಮ ಕ್ಷೇತ್ರ ದಕ್ಷಿಣ ಕೊಯಮತ್ತೂರಿಗೆ ಭೇಟಿ ನೀಡಿದರು.

ಮತಗಟ್ಟೆ ಪರಿಶೀಲಿಸಿದ ಕಮಲ್​ ಹಾಸನ್​, ತಮಿಳುನಾಡು ಚುನಾವಣೆಯನ್ನು ಗೆಲ್ಲಲು ಬಿಜೆಪಿ ಹಣದ ಹೊಳೆ ಹರಿಸುತ್ತಿದೆ. ಈ ಬಗ್ಗೆ ಗಮನ ಹರಿಸಬೇಕೆಂದು ಚುನಾವಣಾ ಆಯೋಗಕ್ಕೆ ದೂರಿದರು.

ಆದರೆ, ಬಿಜೆಪಿಯು ಕಮಲ್​ ಹಾಸನ್​ ಪುತ್ರಿ ಶ್ರುತಿ ಹಾಸನ್​ ವಿರುದ್ಧ ತಿರುಗಿಬಿದ್ದಿದೆ. ಮತಗಟ್ಟೆಗೆ ಅತಿಕ್ರಮ ಪ್ರವೇಶ ಮಾಡಿದ ಶ್ರುತಿ​ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಕಮಲ್​ ವಿರುದ್ಧ ಇದೇ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಹಾಗೂ ರಾಷ್ಟ್ರೀಯ ಬಿಜೆಪಿ ಮಹಿಳಾ ವಿಭಾಗದ ನಾಯಕಿ ವಾನಥಿ ಶ್ರೀನಿವಾಸನ್​ ಪರವಾಗಿ ಕೊಯಮತ್ತೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ನಂದಕುಮಾರ್​ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಮತಗಟ್ಟೆ ಏಜೆಂಟ್​ ಬಿಟ್ಟು ಬೇರೆ ಯಾರು ಸಹ ಕೇಂದ್ರದ ಒಳಗೆ ಹೋಗಬಾರದು ಎಂಬ ನಿಯಮವಿದೆ. ಹೀಗಾಗಿ ಅತಿಕ್ರಮ ಪ್ರವೇಶ ಮಾಡಿದ ಶ್ರುತಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. 

error: Content is protected !!