ನಗರಸಭೆ ಚುನಾವಣೆ: ಶಾಂತಿಯುತವಾಗಿ ನಡೆದ ಮತದಾನ

ಮಡಿಕೇರಿ ಡಿ.27:-ನಗರಸಭೆ ಚುನಾವಣೆ ಸಂಬಂಧ ನಗರಸಭೆ ವ್ಯಾಪ್ತಿಯ 23 ವಾರ್ಡ್‍ಗಳ 27 ಮತಗಟ್ಟೆಗಳಲ್ಲಿ ಮಂಗಳವಾರ ಶಾಂತಿಯುತ ಮತದಾನ ನಡೆಯಿತು.

ಪುರುಷರು ಮತ್ತು ಮಹಿಳೆಯರು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಮತಹಕ್ಕು ಚಲಾಯಿಸಿದ್ದು ಕಂಡುಬಂದಿತು. ವಿದ್ಯಾನಗರ, ಕಾವೇರಿ ಬಡಾವಣೆ, ಗದ್ದಿಗೆ, ಆಜಾದ್ ನಗರ, ದೇಚೂರು, ಕನ್ನಂಡಬಾಣೆ, ಗಣಪತಿ ಬೀದಿ, ಮಹದೇವಪೇಟೆ, ಅಂಬೇಡ್ಕರ್ ಬಡಾವಣೆ, ಕನಕದಾಸ ರಸ್ತೆ, ದಾಸವಾಳ ರಸ್ತೆ, ಪುಟಾಣಿ ನಗರ, ಜಯನಗರ, ರೇಸ್‍ಕೋರ್ಸ್ ರಸ್ತೆ, ಗೌಳಿಬೀದಿ, ಕಾನ್ವೆಂಟ್ ರಸ್ತೆ, ಹೊಸ ಬಡಾವಣೆ, ಸುಬ್ರಹ್ಮಣ್ಯ ನಗರ, ಜ್ಯೋತಿ ನಗರ, ಚಾಮುಂಡೇಶ್ವರಿ ನಗರ, ಮಂಗಳಾದೇವಿ ನಗರ, ಅಶೋಕ ಪುರ ಹೀಗೆ ಹಲವು ವಾರ್ಡ್‍ಗಳಲ್ಲಿ ಮತದಾರರು ಉತ್ಸಾಹದಿಂದ ಮತಹಕ್ಕು ಚಲಾಯಿಸಿದರು.

ಹಲವು ಮತಗಟ್ಟೆಗಳಲ್ಲಿ ತಮ್ಮ ಮಕ್ಕಳ ಸಹಾಯದಿಂದ ಹಿರಿಯರು ಮತಗಟ್ಟೆಗೆ ಆಗಮಿಸಿ ಮತಹಕ್ಕು ಚಲಾಯಿಸಿದ್ದು ಕಂಡು ಬಂದಿತು. ಬೆಳಗ್ಗಿನ ವೇಳೆಯಲ್ಲಿ ಬಿರುಸಿನ ಮತದಾನ ನಡೆಯಿತು.

ಕೋವಿಡ್ 19 ಹಿನ್ನೆಲೆ ನಗರಸಭೆ ವ್ಯಾಪ್ತಿಯ ಎಲ್ಲಾ ಮತಗಟ್ಟೆಗಳಲ್ಲಿ ಥರ್ಮೋಸ್ಕ್ಯಾನರ್ ಮೂಲಕ ತಪಾಸಣೆ ಮಾಡಿ ಮತಗಟ್ಟೆಗೆ ಕಳುಹಿಸುವ ದೃಶ್ಯ ಕಂಡುಬಂದಿತು. ಜೊತೆಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು, ಮತದಾನದ ಕೊನೆಯ ಒಂದು ಗಂಟೆ ಅವಧಿಯಲ್ಲಿ ಕೋವಿಡ್-19 ಶಂಕಿತರಿಗೆ ಮತಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಲಾಗಿತ್ತು.

ಒಟ್ಟು ನಗರದಲ್ಲಿ 76%ರಷ್ಟು ಮತದಾನವಾಗಿದ್ದು, 24% ನಷ್ಟು ಜನರು ತಮ್ಮ ಮತದಾನದ ಹಕ್ಕು ಚಲಾಯಿಸಿಲ್ಲ ಎಂದು ತಿಳಿದು ಬಂದಿದೆ.

error: Content is protected !!