fbpx

ನಗರದ ವಸತಿ ರಹಿತರಿಗೆ ಸಿಗಲಿದೆಯೇ ‘ತಲೆಗೊಂದು ಸೂರು’?!

ಮನುಷ್ಯನ ಜೀವನ ನಡೆಸುವಲ್ಲಿ ಮೂಲಭೂತ ಅವಶ್ಯಕತೆಗಳಲ್ಲಿ ಮನೆ, ಆಶ್ರಯ, ಬಟ್ಟೆ ಅತೀ ಕನಿಷ್ಠವೆನ್ನಿಸುವ ಅಗತ್ಯತೆ. ಅದು ಕೂಡ ಇಲ್ಲದ ಜನರು ನಿಜಕ್ಕೂ ಯಾತನೆಯ ಬದುಕೇ ನಡೆಸುತ್ತಿರುತ್ತಾರೆ ಎನ್ನಬಹುದು.

ಮಡಿಕೇರಿ‌ ನಗರ ಸಭಾ ವ್ಯಾಪ್ತಿಯಲ್ಲೂ ಮೂಲಭೂತ ಅವಶ್ಯಕತೆಯಾದ ಮನೆ ಬಹಳಷ್ಟು ಕುಟುಂಬಗಳಿಗೆ ಮನೆಗಳಿಲ್ಲ. ಅವರಿಗೆ ಮನೆಗಳನ್ನು ನೀಡಲು ನಗರ ಸಭೆ ವಿಳಂಬ ಧೋರಣೆ ಮಾಡುತ್ತಿದೆ ಎಂಬ ಟೀಕೆ ಜನ ವಲಯದಿಂದ ಕೇಳಿ ಬಂದಿತ್ತು. ಆದರೆ ನಗರ ಸಭೆ ಅದೇ ಪ್ರಯತ್ನದಲ್ಲಿ ತೊಡಗಿದೆ ಎಂದು ಸಂಬಂಧಿಸಿದವರು ತಿಳಿಸಿದ್ದಾರೆ.

ವಿಷೇಶ ವರದಿ: ರಜತ್ ರಾಜ್ ಡಿ.ಹೆಚ್,
ಸುದ್ದಿ ಸಂತೆ ಸಂಪಾದಕರು

2018ರಲ್ಲೇ ಹೆಬ್ಬೆಟಗೇರಿ ಗ್ರಾಮದಲ್ಲಿ ಈ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡಲು ಜಾಗ ಗೊತ್ತು ಮಾಡಲಾಗಿತು. ನಂತರ ಕೊಡಗಿನಲ್ಲಿ ನಡೆದ ಪ್ರಕೃತಿ ವಿಕೋಪದಿಂದ ಇದು ತೀರಾ ವಿಳಂಬಗೊಂಡು ಬೇರೆ ಜಾಗ ಗೊತ್ತು ಮಾಡಬೇಕಾದ ಅನಿವಾರ್ಯತೆ ಉಂಟಾಯಿತು.

ಈಗ ನಗರಸಭಾ ಆಡಳಿತದ ಚುಕ್ಕಾಣಿಯಲ್ಲಿರುವ ಬಿಜೆಪಿಯ ಅಧ್ಯಕ್ಷರು, ಸದಸ್ಯರು ಕೂಡ ಇದೇ ಪ್ರಯತ್ನದಲ್ಲಿದ್ದಾರೆ. ಮನೆಗಳ ನಿರ್ಮಾಣಕ್ಕಾಗಿ ಸೂಕ್ತವೆನಿಸುವ 10 ಎಕರೆ ಜಾಗವನ್ನು ಗೊತ್ತು ಮಾಡಲು ಯತ್ನಗಳು ನಡೆಯುತ್ತಿವೆ.


‘ಮಡಿಕೇರಿ ನಗರದಲ್ಲಿ ನಾವು ಕಂಡಂತೆ 3,000ದಿಂದ 3,500 ಕುಟುಂಬಗಳು ವಸತಿ ರಹಿತವಾಗಿವೆ. ಈ ಹಿಂದೆ 2018ರಲ್ಲೇ ಜಾಗ ಗೊತ್ತು ಮಾಡಲಾಗಿತ್ತು. ಆದರೆ ನಂತರ ಪ್ರಕೃತಿ ವಿಕೋಪದ ನೆಪವೊಡ್ಡಿ ವಿಳಂಬ ನೀತಿ ಅನುಸರಿಸಲಾಯಿತು.  ಪ್ರತಿ ವರ್ಷವೂ ನಗರ ಸಭೆ ಪೊಳ್ಳು ಆಶ್ವಾಸನೆ ನೀಡಿ, ಭ್ರಮನಿರಸನ ಮಾಡುತ್ತಿದೆ. ಇಂತಹ ಜರೂರಿ ವಿಚಾರಗಳ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು, ಹಿಜಾಬ್, ಹಲಾಲ್ ವಿಚಾರಗಳನ್ನು ವಿವಾದ ಮಾಡಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಲಾಭ ಪಡೆಯಲು ನೋಡುತ್ತಿದೆ. ಜನರ ದಾರಿ ತಪ್ಪಿಸುತ್ತಿದೆ.   ವಸತಿ ರಹಿತರಿಗೆ ಮನೆಗಳನ್ನು ನೀಡುವ ತನಕವೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಬಡವರ, ನಿರ್ಗತಿಕರ ಒಳಿತಿಗಾಗಿ ಹೋರಾಡಲು ಜೆ.ಡಿ.ಎಸ್ ಸದಾ ಸಜ್ಜಾಗಿರುತ್ತದೆ.

ಕೆ.ಎಂ ಗಣೇಶ್, ಜೆಡಿಎಸ್ ಕೊಡಗು ಜಿಲ್ಲಾಧ್ಯಕ್ಷರು.

2018ರಲ್ಲಿ ಅನಿರೀಕ್ಷಿತವಾಗಿ ನಡೆದ ಪ್ರಕೃತಿ ವಿಕೋಪದಿಂದ ಈ ಕೆಲಸ ವಿಳಂಬವಾಯಿತು. ಸೂಕ್ತ ಜಾಗ ಹುಡುಕಲಾಗುತ್ತಿದೆ. ತಹಶೀಲ್ದಾರರ ಗಮನವನ್ನೂ ಈ ಕುರಿತು ಸೆಳೆಯಲಾಗಿದೆ. 1821 ಮನೆಗಳಿಗಾಗಿ ಅರ್ಜಿ ಈವರೆಗೆ ಬಂದಿದ್ದು, ನಗರಸಭಾ ಆಡಳಿತ ಪಕ್ಷದ ಸದಸ್ಯರ ಸಹಕಾರದೊಂದಿಗೆ ಆದಷ್ಟು ಬೇಗ ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಲಾಗುವುದು.

ಎಸ್.ವಿ ರಾಮ್ ದಾಸ್, ಮಡಿಕೇರಿ ನಗರಸಭಾ ಆಯುಕ್ತರು

ನಮ್ಮ ಪಕ್ಷ ಈ ಬಾರಿ ಭರ್ಜರಿ ಜಯಗಳಿಸಿ ಆಡಳಿತಕ್ಕೆ ಬಂದಾಗಲೇ ವಸತಿ ರಹಿತರಿಗೆ ಮನೆ ನಿರ್ಮಿಸಿ ಕೊಡುವ ಕಾರ್ಯ ಆದಷ್ಟು ಬೇಗ ಮಾಡಬೇಕು ಅಂದುಕೊಂಡಿದ್ದೆವು. ಜೆ.ಡಿ.ಎಸ್ ಪಕ್ಷ ಸುಮ್ಮನೆ ಗಿಮಿಕ್ ಮಾಡಲೆಂದು ಪ್ರತಿಭಟನೆಯನ್ನು ನಗರದಲ್ಲಿ ಹಮ್ಮಿಕೊಂಡಿತು. ಜಾಗ ಹುಡುಕುತ್ತಿದ್ದು, ಸೂಕ್ತ ಭೂ ಪ್ರದೇಶ ಸಿಕ್ಕಿದ ಕೂಡಲೆ ಮನೆಗಳ ನಿರ್ಮಾಣ ಕಾರ್ಯ ನಡೆಯಲಿದೆ.

ಅರುಣ್ ಕುಮಾರ್, ನಗರಸಭಾ ಸದಸ್ಯರು

ಮಡಿಕೇರಿ ನಗರ ಸಭೆಯು ನಡೆಸುವ ಕಾಮಗಾರಿಗಳೆಲ್ಲವೂ ಬಹುತೇಕ ಕಳಪೆಯಾಗಿಯೇ ಇರುತ್ತದೆ. ಕೊಡಗು ರಕ್ಷಣಾ ವೇದಿಕೆ ಈ ಹಿಂದೆ ಕೂಡ ನಗರ ಸಭೆಯ ಕಾರ್ಯವೈಖರಿ ವಿರುದ್ಧ ಅಹೋ ರಾತ್ರಿ ಧರಣಿ, ಅಣಕು ಶವ ಯಾತ್ರೆ, ಪ್ರತಿಭಟನಾ ಮೆರವಣಿಗೆಯನ್ನು ಯಶಸ್ವಿಯಾಗಿ ಮಾಡಿತ್ತು. ಆದಷ್ಟು ಕ್ಷಿಪ್ರ ಗತಿಯಲ್ಲಿ ವಸತಿ ರಹಿತರಿಗೆ ಮನೆ ನಿರ್ಮಿಸಿ ಕೊಡುವಂತಾಗಬೇಕು. ಮನೆ ಕೊಡುವುದರಲ್ಲಿ ಸ್ವಜನ ಪಕ್ಷಪಾತ ಹಾಗು ಒಂದು ವೇಳೆ ವಲಸಿಗರಿಗೆ ನೀಡುವುದಾದರೆ‌ ಅದನ್ನು ನಮ್ಮ ಸಂಘಟನೆ ಕಡಾಖಂಡಿತವಾಗಿ ವಿರೋಧಿಸಿ ಧ್ವನಿ ಎತ್ತಲಿದೆ.

ಪವನ್ ಪೆಮ್ಮಯ್ಯ, ಅಧ್ಯಕ್ಷರು, ಕೊಡಗು ರಕ್ಷಣಾ ವೇದಿಕೆ
error: Content is protected !!