ದ. ಭಾರತ ವಲಯ ಕರಾಟೆ ಮಂಡಳಿ ಅಸ್ತಿತ್ವಕ್ಕೆ:ಸಂಸ್ಥಾಪಕ ಅಧ್ಯಕ್ಷರಾಗಿ ಕೊಡಗಿನ ಅರುಣ್ ಮಾಚಯ್ಯ ಆಯ್ಕೆ

ಜೊತೆಗೆ 8ನೇ ಬ್ಲಾಕ್ ಬೆಲ್ಟ್ ಪಡೆದ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರ
ಕರಾಟೆಯನ್ನು ದೇಶದಲ್ಲಿ ಮತ್ತಷ್ಟು ವಿಸ್ತರಿಸುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕರಾಟೆ ಮಂಡಳಿಯಿಂದ (ಕೆ.ಐ.ಓ) ವಿಂಗಡನೆಗೊಂಡು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ದಕ್ಷಿಣ ಭಾರತ ವಲಯ ಕರಾಟೆ ಮಂಡಳಿಯ ಸಂಸ್ಥಾಪಕ ಅಧ್ಯಕ್ಷರಾಗಿ ಹಿರಿಯ ಕರಾಟೆಪಟು, ಮಾಜಿ ಶಾಸಕರಾದ ಕೊಡಗಿನ ಚೆಪ್ಪುಡಿರ ಎಸ್. ಅರುಣ್ ಮಾಚಯ್ಯ ಅವರು ಆಯ್ಕೆಗೊಂಡಿದ್ದಾರೆ.
ಜೊತೆಗೆ ಇದೀಗ ಅವರು ವಿಶ್ವ ಕರಾಟೆ ಮಂಡಳಿ ಯಿಂದ 8ನೇ ಬ್ಲಾಕ್ ಬೆಲ್ಟ್ ಪಡೆದಿರುವ ಅರುಣ್ ಮಾಚಯ್ಯ ಅವರು ಈ ಸಾಧನೆಗೈದ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಅವರು ಕ್ರೀಡಾ ತವರಾದ ಕೊಡಗಿನ ಖ್ಯಾತಿಗೆ ಮತ್ತೊಂದು ಗರಿ ಮೂಡಿಸಿದ್ದಾರೆ.
ವಿಶ್ವ ಕರಾಟೆ ಮಂಡಳಿ, ಏಷ್ಯನ್ ಕರಾಟೆ ಮಂಡಳಿ, ಆಗ್ನೇಯ ಏಷ್ಯಾ ಕರಾಟೆ ಸಂಸ್ಥೆ ಸೇರಿದಂತೆ ಅಂತರರಾಷ್ಟ್ರೀಯ ಒಲಿಂಪಿಕ್ ಅಸೋಸಿಯೇಷನ್ ನಿಂದ ಮಾನ್ಯತೆ ಪಡೆದಿರುವ ಭಾರತದ ಏಕೈಕ ಕರಾಟೆ ಸಂಸ್ಥೆಯಾಗಿರುವ ರಾಷ್ಟ್ರೀಯ ಕರಾಟೆ ಮಂಡಳಿಯು ನೂತನವಾಗಿ ತನ್ನ ಸಂಸ್ಥೆಯನ್ನು ದೇಶದಲ್ಲಿ 5 ವಿಭಾಗಗಳನ್ನಾಗಿ ವಿಂಗಡಿಸಿದೆ.ದಕ್ಷಿಣ ಭಾರತ, ಉತ್ತರ ಭಾರತ, ಈಶಾನ್ಯ ಭಾರತ, ವಾಯುವ್ಯ ಭಾರತ ಹಾಗೂ ಮಧ್ಯಭಾರತ ವಲಯವನ್ನಾಗಿ ವಿಂಗಡಿಸಿದ್ದು, ದಕ್ಷಿಣ ಭಾರತ ಕರಾಟೆ ವಲಯಕ್ಕೆ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳ ರಾಜ್ಯಗಳು ಒಳಪಡಲಿವೆ.
ನೂತನ ದಕ್ಷಿಣ ಭಾರತ ವಲಯ ಕರಾಟೆ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಹೆಸರುಗಳು ಕೇಳಿಬಂದಿದ್ದರೂ, ಅಂತಿಮವಾಗಿ ಜೇಷ್ಠತೆಯ ಆಧಾರದಲ್ಲಿ ಕಳೆದ 12 ವರ್ಷಗಳಿಂದ ರಾಷ್ಟ್ರೀಯ ಕರಾಟೆ ಮಂಡಳಿಯ ಹಿರಿಯ ಉಪಾಧ್ಯಕ್ಷರಾಗಿ, ಅಖಿಲ ಭಾರತ ಶಿಟೋರಿಯೋ ಕರಾಟೆ ಮಂಡಳಿಯ ಮತ್ತು ಕಳೆದ 2009ರಿಂದ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಸಿ. ಎಸ್. ಅರುಣ್ ಮಾಚಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ಇತ್ತೀಚಿಗೆ ಹೈದರಾಬಾದಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವ ಕರಾಟೆ ಮಂಡಳಿಯ ತಾಂತ್ರಿಕ ಆಯೋಗದ ಸದಸ್ಯರಾದ ಭರತ್ ಶರ್ಮ, ರಾಷ್ಟ್ರೀಯ ಕರಾಟೆ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸಂಜೀವ್ ಕುಮಾರ ಜಾಗ್ರ ಹಾಗೂ ರಾಷ್ಟ್ರೀಯ ಕರಾಟೆ ಮಂಡಳಿಯ ತಾಂತ್ರಿಕ ನಿರ್ದೇಶಕರಾದ ಜೇಕಬ್ ದೇವ್ ಕುಮಾರ್ ಈ ಕುರಿತ ಪ್ರಮಾಣಪತ್ರವನ್ನು ಅರುಣ್ ಮಾಚಯ್ಯ ಅವರಿಗೆ ಹಸ್ತಾಂತರಿಸಿದರು.