ದ್ವಿತೀಯ ಪಿಯು ಪರೀಕ್ಷೆ ರದ್ದು: ಸುರೇಶ್ ಕುಮಾರ್

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಈ ಬಾರಿ ರದ್ದು ಮಾಡಲಾಗಿದೆ, ಪ್ರಥಮ ಪಿಯುಸಿಯಲ್ಲಿ ತೆಗೆದುಕೊಂಡಿರುವ ಅಂಕಗಳ ಆಧಾರದ ಮೇಲೆ ಗ್ರೆಡೇಷನ್ ನೀಡಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯ ತಿಳಿಸಿದರು.
ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಈಗ ಮಾಡದೇ ಇರುವುದಕ್ಕೆ ತೀರ್ಮಾನ ತೆಗೆದುಕೊಂಡಿದ್ದೇವೆ. ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ಇಲ್ಲದೆನೇ ಯಾವ ರೀತಿ ಗ್ರೇಡಿಂಗ್ ಕೊಡಬಹುದು, ಯಾವ ರೀತಿಯಲ್ಲಿ ಅವರ ಕಲಿಕಾ ಮಟ್ಟವನ್ನು ಅಳೆಯಬಹುದು ಎಂಬ ಬಗ್ಗೆ ಯೋಚನೆ ಮಾಡಿದ್ದೇವೆ. ರದ್ದು ಮಾಡಿದ ರಾಜ್ಯಗಳನ್ನು ಸಂಪರ್ಕ ಮಾಡಿ ರಿಸಲ್ಟ್ ಹೇಗೆ ಮಾಡುತ್ತೀರಿ ಎಂದು ಕೇಳಿದ್ದೇವೆ. ಯಾರು ಕೂಡ ತೆಗೆದುಕೊಳ್ಳಬಹುದಾದ ಮಾನದಂಡದ ಬಗ್ಗೆ ಖಚಿತತೆ ಇಲ್ಲ.
ಮುಂದೆ ಯೋಚನೆ ಮಾಡುತ್ತೇವೆ ಎಂದಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಸೂಕ್ತವಾದ ನಿರ್ಧಾರ ತೆಗೆದುಕೊಂಡ ಮೇಲಷ್ಟೇ ಈ ಕ್ರಮ ತೆಗೆದುಕೊಳ್ಳಲಾಗಿದೆ. ಆದ್ದರಿಂದ ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲು ತೀರ್ಮಾನಿಸಲಾಗಿದೆ ಎಂದರು.
ಕಳೆದ ವರ್ಷ ಅಂದರೆ ಮೊದಲ ವರ್ಷದ ಪಿಯುಸಿಯನ್ನು ಎಲ್ಲಾ ಕಾಲೇಜುಗಳ ಮಕ್ಕಳು ಡಿಸ್ಟ್ರಿಕ್ಟ್ ಲೆವೆಲ್ ಮಟ್ಟದಲ್ಲಿ ಎದುರಿಸಿದ್ದರು. ಅದರ ಆಧಾರದ ಮೇಲೆ ಗ್ರೇಡಿಂಗ್ ಕೊಡುತ್ತೇವೆ. ಈ ಗ್ರೇಡೇಷನ್ ಸಮಾಧಾನ ಇಲ್ಲ, ತುಂಬಾ ಓದಿದ್ದೇನೆ. ತುಂಬಾ ಪರಿಶ್ರಮ ಪಟ್ಟಿದ್ದೇನೆ ಎನ್ನುವ ಮಕ್ಕಳ ಸಂಖ್ಯೆಯೂ ಹೆಚ್ಚಿದೆ. ಈ ರೀತಿ ಮಕ್ಕಳು ಬೇಸರ ವ್ಯಕ್ತಪಡಿಸುವ ಅಗತ್ಯವಿಲ್ಲ. ಏಕೆಂದರೆ ಕೋವಿಡ್ ಮುಗಿದ ಮೇಲೆ ಇಂಥ ಮಕ್ಕಳಿಗೆ ಪರೀಕ್ಷೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತೇವೆ. ಈಗ ದ್ವಿತೀಯ ಪಿಯುಸಿ ಮಕ್ಕಳು ಪ್ರಮೋಟೆಡ್ ಎಂದು ಮಾಡಿದ್ದೇವೆ. ಬೇರೆ ಬೇರೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡವರು ಚಿಂತಿಸುವ ಅಗತ್ಯವಿಲ್ಲ ಎಂದಿದ್ದಾರೆ.
ಗ್ರೇಡೇಷನ್ ಯಾವ ರೀತಿ ಇರಬೇಕು ಎಂಬ ಬಗ್ಗೆ ಶೀಘ್ರದಲ್ಲಿಯೇ ತೀರ್ಮಾನ ತೆಗೆದುಕೊಳ್ಳಲಾಗುವುದು, ನಮ್ಮ ಬಳಿ ಎಲ್ಲಾ ಕಾಲೇಜುಗಳ ಪ್ರಥಮ ಪಿಯುಸಿಯ ಫಲಿತಾಂಶ ಇದ್ದು, ಅದರ ಆಧಾರದ ಮೇಲೆ ಗ್ರೇಡೇಷನ್ ಮಾಡುತ್ತೇವೆ ಎಂದು ಸಚಿವರು ಹೇಳಿದರು. ಕಳೆದ ವರ್ಷ ರಾಜ್ಯಮಟ್ಟದಲ್ಲಿ ಪ್ರಥಮ ಪಿಯು ಪರೀಕ್ಷೆ ಆಯೋಜನೆ ಮಾಡಿದ್ದು, ಎಲ್ಲರೂ ಪಾಸ್ ಆಗಿದ್ದಾರೆ. ಇದರಿಂದ ಆ ಎಲ್ಲ ವಿದ್ಯಾರ್ಥಿಗಳು ಸಹ ಈ ಬಾರಿ ದ್ವಿತೀಯ ಪಿಯುನಲ್ಲೂ ಪಾಸ್ ಆಗಲಿದ್ದಾರೆ.
ಮೂರನೇ ವೇವ್ ಮಕ್ಕಳ ಮೇಲೆ ಅಫೆಕ್ಟ್ ಆಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ವಿಭಿನ್ನ ನಿಲುವು ವ್ಯಕ್ತವಾಗುತ್ತಿದೆ. ಆದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋದರೆ ಯಾವ ರೀತಿ ತೀರ್ಮಾನ ತೆಗೆದುಕೊಳ್ಳಬೇಕೋ ಎಂಬ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಸಚಿವರು ಹೇಳಿದರು.