ದ್ವಂದ್ವ ನಿಯಮಗಳನ್ನು ಜಾರಿಗೆ ತಂದು ಜನರ ವಿಶ್ವಾಸ ಕಳೆದುಕೊಳ್ಳುತ್ತಿರುವ ಕೊಡಗು ಜಿಲ್ಲಾಡಳಿತ: ನೌಶಾದ್ ಜನ್ನತ್ತ್

ಕೊಡಗಿನಲ್ಲಿ ಈಗಾಗಲೇ ಕೋವಿಡ್ ಎಂಬ ಮಹಾಮಾರಿ ಸೋಂಕು ಮಿಂಚಿನ ವೇಗದಲ್ಲಿ ಹಬ್ಬುತ್ತಿರುವ ಕಾರಣದಿಂದಾಗಿ ಜನಸಾಮಾನ್ಯರು ಭಯದಿಂದ ತತ್ತರಿಸಿ ಹೋಗಿದ್ದಾರೆ. ಇವುಗಳ ನಡುವೆ ಸಮಸ್ಯೆಗಳನ್ನು ತಹಬದಿಗೆ ತರಲು ಶ್ರಮಿಸಬೇಕಾದ ಜಿಲ್ಲಾಡಳಿತ. ತಾವೇ ಜಾರಿಗೆ ತಂದಿರುವ ಕೆಲವೊಂದು ನಿಯಮಾವಳಿಗಳನ್ನು ತಾಸಿಗೊಂದು ಬಾರಿ ಬದಲಾವಣೆ ಮಾಡುತ್ತಾ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಇದರಿಂದಾಗಿ ವ್ಯಾಪಾರಿಗಳು, ಗ್ರಾಹಕರು, ವಾಹನ ಸವಾರರು ಹೀಗೆ ಪ್ರತಿಯೊಬ್ಬರು ಪೇಚಿಗೆ ಸಿಲುಕಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.

ಈ ಮೊದಲು ಕಾರ್ಯನಿರ್ವಹಿಸಿದ್ದ ಅಂದಿನ ಜಿಲ್ಲಾಡಳಿತ ಕೋವಿಡ್ ನ ಪ್ರಥಮ ಅಲೆಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲು ಯಶಸ್ವಿಯಾಗಿದ್ದರು. ಅಂದು ಜಿಲ್ಲಾಡಳಿತ “ಹಸಿದವರಿಗೆ ದಣಿವು ಪೆಟ್ಟಿಗೆ” ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡು ದಾನಿಗಳಿಂದ ಆಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿ ಕೂಲಿಕಾರ್ಮಿಕರಿಗೆ ಸರಕಾರದ ಸಹಾಯವಿಲ್ಲದೆ ದವಸಧಾನ್ಯಗಳನ್ನು ಸಕಾಲಕ್ಕೆ ತಲುಪಿಸಿ ಜನರ ನೋವಿಗೆ ಸ್ಪಂದಿಸಿದ್ದರು. ಜೊತೆಗೆ ತರಕಾರಿ, ಹಣ್ಣು, ದವಸಧಾನ್ಯಗಳ ಖರೀದಿಯ ವೇಳೆ ಮಧ್ಯವರ್ತಿಗಳು ಮತ್ತು ವ್ಯಾಪಾರಸ್ಥರು ದುಪ್ಪಟ್ಟು ಬೆಲೆಪಡೆದು ಜನಸಾಮಾನ್ಯರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ಒಂದು ದಿನದ ಮೊದಲೇ ಸಾಮಗ್ರಿಗಳ ಬೆಲೆ ನಿಗದಿಮಾಡಿ “ಜನಪರ ಜಿಲ್ಲಾಡಳಿತ” ಎಂದು ರಾಷ್ಟ್ರಮಟ್ಟದಲ್ಲಿ ಜನಮನ್ನಣೆಗೆ ಪಾತ್ರವಾಗಿತ್ತು. ಹೀಗಿರುವಾಗ ತಿಂಗಳುಗಳಿಗೆ ಮೊದಲೇ ಎರಡನೇ ಅಲೆ ಬರುವ ಮಾಹಿತಿಯಿದ್ದರು ಕೂಡ ಆ ನಿಟ್ಟಿನಲ್ಲಿ ಯಾವುದೇ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳದೆ ಇಂದಿನ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದ್ದಾರೆ ಎಂಬುದು ದಿನಂಪ್ರತಿ ಬರುತ್ತಿರುವ ನೂರಾರು ಪಾಸಿಟಿವ್ ಕೇಸ್ ಗಳು ಮತ್ತು ಪ್ರತಿನಿತ್ಯ, ಸಾವಿನ ಸಂಖ್ಯೆ ಎರಡಂಕಿ ದಾಟುತ್ತಿರುವುದನ್ನ ನೋಡಿದರೆ ನಮಗೆ ಸಾಭೀತಾಗುತ್ತದೆ. ಇದರ ನಡುವೆ ಮದುವೆ ಸಮಾರಂಭಕ್ಕೆ 50 ಜನರು ಸೇರಬಹುದು, 6 ರಿಂದ 10ರವರೆಗೆ ಮದ್ಯ ಖರೀದಿಸಬಹುದು ಎಂದು ಕಾನೂನು ಸಡಿಲಿಸಿ ಸೋಂಕು ಹರಡಲು ಮತ್ತಷ್ಟು ಎಡೆಮಾಡಿಕೊಟ್ಟಿದ್ದಾರೆ. ಇವೆಲ್ಲವುಗಳ ನಡುವೆ ಕೊಡಗು ಜಿಲ್ಲಾಡಳಿತ ವಾರದ ಎರಡು ದಿನ ಸಾಮಗ್ರಿಗಳ ಖರೀದಿಗೆ ಅವಕಾಶವಿದೆ ಎಂದು ಹೇಳಿ ಸೋಮವಾರ – ಮಂಗಳವಾರ ಅಂತ ಗೊಂದಲ ಸೃಷ್ಟಿಸಿ ಗ್ರಾಹಕರಲ್ಲಿ ಮತ್ತು ವ್ಯಾಪಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಜೊತೆಗೆ ವಾಹನಗಳನ್ನು ಮಡಿಕೇರಿಯ ಹೊರಭಾಗದಲ್ಲಿ ನಿಲ್ಲಿಸಿ ಬರಬೇಕು ಎಂಬ ವಿಚಿತ್ರ ನಿಯಮವನ್ನು ಹೇರಿ ಕಿ. ಮೀಟರ್ ಗಟ್ಟಲೆ ಜನರು ನಡೆದುಕೊಂಡು ಹೋಗಿ ಸಾಮಗ್ರಿ ಖರೀದಿಸುವ ಪ್ರಮೇಯ ಎದುರಾಗಿದೆ. ಈ ವಿಚಾರವಾಗಿ ಸಾರ್ವಜನಿಕರಲ್ಲಿ ಅಭಿಪ್ರಾಯ ಕೇಳಿದರೆ, ನಾವು ವಾಹನಗಳಲ್ಲಿ ತೆರಳಿ ಅಗತ್ಯ ವಸ್ತುಗಳನ್ನು ಖರೀದಿಸಿ ಈ ಸೋಂಕಿನ ಸಮಯದಲ್ಲಿ ಆದಷ್ಟು ಬೇಗ ಮನೆ ಸೇರಿಕೊಳ್ಳುವ ಎಂದರೆ ಇವರು ಎರಡುಮೂರು ಕಿ. ಮೀ. ದೂರದಲ್ಲಿ ವಾಹನ ನಿಲ್ಲಿಸಲು ಆದೇಶ ಹೊರಡಿಸಿದ್ದಾರೆ. ಇವರು ಕೊಟ್ಟಿರುವ ಸಮಯದಲ್ಲಿ ಅಂಗಡಿಗಳಿಗೆ ತಲುಪಬಹುದೇ ಹೊರತು ಸಾಮಗ್ರಿಗಳು ಖರೀದಿಸಲು ಸಾಧ್ಯವಾಗುತ್ತಿಲ್ಲ ಇಂಥಹ ಸಂದರ್ಭದಲ್ಲಿ ಜನಜಂಗುಳಿ ಆಗುವುದು ಸಹಜ. ಒಂದು ವೇಳೆ ಆಗೇನಾದರು ಸಂಭವಿಸಿದರೆ ಪೊಲೀಸರು ಬಂದು ಸಾಮಾಜಿಕ ಅಂತರ ಎಲ್ಲಿ ಎಂದು ಲಾಠಿ ಬೀಸಲು ಪ್ರಾರಂಭಮಾಡುತ್ತಾರೆ. ಜಿಲ್ಲಾಡಳಿತದ ಈ ರೀತಿಯ ಅಪ್ರಬುದ್ಧ ನಿರ್ಣಯಗಳಿಂದ ಸಮಸ್ಯೆ ಎದುರಿಸುತ್ತಿರುವುದು ನಾವು!

ನಮಗೆ ಏನು ಮಾಡಬೇಕು ಎಂದು ತೋಚುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ರೀತಿಯಾಗಿ ಸೋಂಕು ಹತ್ತಿಕ್ಕುವಲ್ಲಿ ಮತ್ತು ಜನರ ಸಮಸ್ಯೆಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಜಿಲ್ಲಾಡಳಿತ ಇನ್ನಾದರು ಎಚ್ಚೆತ್ತುಕೊಂಡು, ಈ ರೀತಿಯ ಗೊಂದಲಗಳನ್ನು ನಿರ್ಮಿಸದೆ ಜನಪರವಾಗಿ ಕೆಲಸ ನಿರ್ವಹಿಸಬೇಕು ಎಂದು ಮಾಧ್ಯಮದ ಮೂಲಕ ಹೇಳಬಯಸುತ್ತೇನೆ ಎಂದು ನಮ್ಮ ಕೊಡಗು ತಂಡದ ಅಧ್ಯಕ್ಷರಾದ ಯುವ ನಾಯಕರೂ ಆದ ನೌಶಾದ್ ಜನ್ನತ್ತ್ ಅವರು ಸುದ್ದಿ ಸಂತೆಯೊಂದಿಗೆ ತಮ್ಮ ಅಭಿಪ್ರಾಯವನ್ನು ಜಿಲ್ಲಾಡಳಿತದ ನಡೆಗಳ ಕುರಿತು ವ್ಯಕ್ತ ಪಡಿಸಿದ್ದಾರೆ

error: Content is protected !!