ದೈವಾರಾಧನೆಯಲ್ಲಿ ಮಿಂಚುತಿರುವ ಮಧ್ಯಸ್ತರು

ಸಾಮಾನ್ಯವಾಗಿ ತುಳುನಾಡು ಎಂದು ಕರೆಯಲ್ಪಡುವ ಕೇರಳದ ಕಾಸರಗೋಡುವಿನಿಂದ ಹಿಡಿದು ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿರುವ ದಕ್ಷಿಣ ಕನ್ನಡದ ಹಲವಾರು ಭಾಗಗಳಲ್ಲಿ ಮತ್ತು ಉಡುಪಿ ಹಾಗೂ ಕೊಡಗಿನ ಕೆಲ ಭಾಗಗಳಲ್ಲಿ ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಯೇ ದೈವಾರಾಧನೆ. ಇದು ಇಂದು ನೆನ್ನೆಯ ನಂಬಿಕೆಯಲ್ಲಾ, ಶತ ಶತಮಾನಗಳಿಂದಲೂ ದೈವಗಳೆಂದು ನಂಬಿರುವ ಶಕ್ತಿಗಳ ಆರಾಧನೆಯೇ ದೈವಾರಾಧನೆ. ಇಂತಹ ಪವಿತ್ರ ಧಾರ್ಮಿಕ ಆಚರಣೆಯಲ್ಲಿ ಕೆಲವರ್ಷಗಳಿಂದ ಪ್ರಮುಖ ಆಕರ್ಷಣೆಯಾಗಿ ಗೋಚರಿಸುತ್ತಿರುವವರು ಮಧ್ಯಸ್ತರು.

ದೈವಾರಾಧನೆಯಲ್ಲಿ ಪ್ರಮುಖವಾಗಿರುವ ದೈವನರ್ತಕರು ನಿರ್ದಿಷ್ಟ ಜಾತಿ ಅಥವಾ ಸಮುದಾಯದವರಾಗಿರುತ್ತಾರೆ. ಅವರನ್ನು ಹೊರತುಪಡಿಸಿ ಬೇರೆ ಜಾತಿಯವರು ನರ್ತಕರಾಗಲು ಸಾಧ್ಯವಿಲ್ಲ. ಆದರೆ ಈ ಮಧ್ಯಸ್ತರು ನಿರ್ದಿಷ್ಟ ಜಾತಿಯವರಾಗಿರುವುದಿಲ್ಲ, ದೈವದ ಮೇಲೆ ನಂಬಿಕೆ, ಜನರ ಮುಂದೆ ಮಾತನಾಡುವ ಧೈರ್ಯವಿರುವ ಯಾವುದೇ ವ್ಯಕ್ತಿಗೂ ಮಧ್ಯಸ್ತ ನಾಗುವ ಅವಕಾಶವಿದೆ. ಅಸಲಿಗೆ ಈ ಮಧ್ಯಸ್ತ ರು ಕೆಲ ವರ್ಷಗಳಿಂದ ದೈವಕಳಗಳಲ್ಲಿ ಕಾಣಿಸಲು ಆರಂಭಿಸಿದ್ದಾರೆ.

ಹಿಂದಿನ ಕಾಲದಲ್ಲಿ ಕುಟುಂಬದ ಹಿರಿಯರು ದೈವದ ಪಾರಿ/ಮದಿಪು / ಪ್ರಾರ್ಥನೆ ಹೇಳುತ್ತಿದ್ದರು, ತಮ್ಮ ಕುಟುಂಬದ ಏಳಿಗೆಗಾಗಿ ದೈವದ ಬಳಿ ಮೊರೆಯಿಡುತಿದ್ದರು. ಆಧುನಿಕತೆಯ ಹೊಡೆತಕ್ಕೆ ಸಿಲುಕಿದ ದೈವಾರಾಧನೆಯಲ್ಲಿ ಅಪಾರ ಪ್ರಮಾಣದ ಬದಲಾವಣೆ ಕಂಡುಬರಲಿಲ್ಲವಾದರೂ, ಕೆಲವು ಕ್ರಮಗಳು ಕೊಂಚ ಮಟ್ಟಿಗೆ ಬದಲಾದದ್ದು ಒಪ್ಪಿಕೊಳ್ಳಲೇಬೇಕಾದ ಸತ್ಯ. ಇಂತಹ ಬದಲಾವಣೆಯಲ್ಲಿ ಈ ಮದಿಪು ಕೂಡ ಒಂದು, ಹಿಂದಿನ ಕಾಲದಲ್ಲಿ ಮನೆಗೊಂದು ಮದಿಪುಗಾರರಿದ್ದರು, ಈಗ ಕುಟುಂಬಕೊಂದು ಮದಿಪುಗಾರರಿರುವುದು ಅಪರೂಪವಾಗಿದೆ. ಹೀಗೆ ದೈವಾರಾಧನೆಗಳಲ್ಲಿ ಕುಟುಂಬದ ಸರ್ವರ ಒಪ್ಪಿಗೆಯೊಂದಿಗೆ, ಕುಟುಂಬದ ದೈವಗಳಲ್ಲಿ ಪ್ರಾರ್ಥನೆ ಮಾಡುವ ವ್ಯಕ್ತಿಯೇ ಮಧ್ಯಸ್ತ.

ಮಧ್ಯಸ್ತರ ಕ್ರಮಗಳು

ಸಾಮಾನ್ಯವಾಗಿ ಕುಟುಂಬಸ್ಥರಿಂದ ವೀಳ್ಯ ಪಡೆದು ದೈವಕಳಕ್ಕೆ ಆಗಮಿಸುವ ಮಧ್ಯಸ್ತರು, ಮತ್ತೊಮ್ಮೆ ದೈವಕಳದಲ್ಲಿ ಹಿರಿಯರ ಆಶೀರ್ವಾದವನ್ನು ಪಡೆದು ವೀಳ್ಯ ಸ್ವೀಕರಿಸಿ, ಫಲಹಾರ ಸೇವಿಸಿ, ನಂತರ ಸ್ನಾನ ಮಾಡಿ ಸುಚಿರ್ಭೂತರಾಗಿ ದೈವದ ಭಂಡಾರ ಇಳಿಸುವ ಕಾರ್ಯಕ್ಕೆ ಮುಂದಾಗುತ್ತಾರೆ. ನಂತರ ದೈವ ಕಾರ್ಯಗಳು ಅಂದರೆ ದೈವದ ನುಡಿ ಅಥವಾ ಮಾತನ್ನು ಕುಟುಂಬಸ್ಥರಿಗೆ ಅರ್ಥೈಸುವುದು, ದೈವಗಳ ಆಯುಧ ಧಾರಣೆ ಆದ ಮೇಲೆ ದೈವದ ಧಾರ್ಮಿಕ ಹಿನ್ನಲೆಯನ್ನು, ಕುಟುಂಬದ ಏಳಿಗೆಗೆಗಾಗಿ ಪ್ರಾರ್ಥನೆ ಮಾಡುತ್ತಾರೆ. ಒಟ್ಟಾರೆ ದೈವಾರಾಧನೆಯಲ್ಲಿ ಪ್ರಮುಖರಾಗಿರುತ್ತಾರೆ ಮಧ್ಯಸ್ತರು.

ತಮ್ಮ ಮಿಂಚಿನ ಕಂಠದ ಪ್ರಾರ್ಥನೆಯ ಮೂಲಕ ದೈವದ ಸೇವೆಯಲ್ಲಿ ನಿರತರಾಗಿ, ದೈವಾರಾಧನೆ ಎಂಬ ಪವಿತ್ರ ಧಾರ್ಮಿಕ ಆಚರಣೆಯಲ್ಲಿ ಪ್ರಮುಖರಾಗಿರುವ ಎಲ್ಲಾ ಮಧ್ಯಸ್ತರಿಗೂ ಶುಭವಾಗಲಿ

✍🏻 ಪ್ರತೀಕ್ ಪರಿವಾರ, ಮರಗೋಡು

error: Content is protected !!