June 13, 2021

‘ದೇ-ಜವು’

ಸಣ್ಣ ಕಥೆ

ಈ ಮಳೆ ಎಂದಿಗಿಂತ ಬೇಗನೆ ಕತ್ತಲಾಗಿಸುತ್ತದೆ. ಸುದೀರ್ಘ ಮಳೆಯಿಂದ ರಕ್ಷಿಸಿ ಕೊಳ್ಳುವ ಸಲುವಾಗಿ ಪಳೆಯುಳಿಕೆಯಂತಹ ಬಸ್ಸು ನಿಲ್ದಾಣ ಪ್ರವೇಶಿಸುವ ಮುನ್ನವೇ ಆತ ಮಳೆಗೆ ಸಂಪೂರ್ಣ ತೊಯ್ದು ಹೋಗಿದ್ದ, ಪ್ರಸಿದ್ಧ ಕಂಪೆನಿಯ ಮಳೆಕೋಟನ್ನು ಧರಿಸಿದ್ದನಾದರೂ ರಾಕ್ಷಸ ಮಳೆ ಆ ಕೋಟನ್ನೂ ವಂಚಿಸಿ ಒಳಪ್ರವೇಶ ಮಾಡಿತ್ತು. ಮಳೆಯ ಹೊಡೆತಕ್ಕೆ ತೊಳೆದಂತೆ ನಿಂತುಕೊಂಡಿದ್ದ ಅವನ ಕೆಂಪು ಸ್ಕೂಟರು ಹೊಳೆಯುತ್ತಿತ್ತು. ಅದರ ಸೈಲೆನ್ಸರ್‌ನಿಂದ ಬಿಸಿ ದೋಸಾ ಕಾವಲಿನಂಗೆ ಆವಿ ಏಳುತ್ತಿತ್ತು. ಏಳದೇ? ಒಂದು ದಾರಿ ಅರವತ್ತು ಸವೆಸಿ ಮರಳುವ ದಾರಿ ಇಪ್ಪತ್ತು ಕಿಲೋ ಮೀಟರ್ ಇಂಜಿನ್ ಬೆಚ್ಚಗಾಗಿರುವಾಗ.
“ಹಾಳು ಮಳೆ ಬೆಳಗ್ಗೆ ಇರಲಿಲ್ಲ, ಮಧ್ಯಾಹ್ನ ನೆತ್ತಿ ಸುಡುವಂತಿತ್ತು ಬಿಸಿಲು. ಅದೆಲ್ಲಿತ್ತೋ? ಇಷ್ಟೊತ್ತು. ಹಿಂಗ್ ಸುರಿತಿದೆಯಲ್ಲ” ಅಂದುಕೊಳ್ಳುತ್ತಲೇ ಎಡಗೈ ರೈನ್ ಕೋಟ್‌ಅನ್ನು ಕೊಂಚ ಮೇಲೆತ್ತಿ ಗಡಿಯಾರದೆಡೆಗೆ ದೃಷ್ಟಿ ಹಾಯಿಸಿದ. ವಾಟರ್ ಪ್ರೂಫ್ ವಾಚಿನ ಗಾಜಿನ ಒಳ ಭಾಗಕ್ಕೂ ನೀರು ನುಗ್ಗಿ, ಗಡಿಯಾರ ನಾಲ್ಕರಿಂದ ಮುಂದೆ ಸಾಗಲಾರದೆ ನಿಂತಿತ್ತು…

ಆತ ನಿಂತುಕೊಂಡಿದ್ದ “ಚೌಂಡಿಕಾಡು” ಬಸ್ ನಿಲ್ದಾಣ ಸೋಮವಾರಪೇಟೆಯಿಂದ ಸುಮಾರು ಅರ್ಧ ತಾಸು ದಾರಿ. ಎನ್ನುವ ಲೆಕ್ಕಾಚಾರವನ್ನು ಮನದಲ್ಲೇ ಹಾಕಿಕೊಂಡು. ಗಡಿಯಾರ ಈಗಷ್ಟೇ ನೀರು ನುಗ್ಗಿ ಸತ್ತು ಹೋಗಿದೆ ಎಂದು ಕೊಂಡ.
ಈ ಚೌಂಡಿಕಾಡು ಬಸ್ಸು‌ ನಿಲ್ದಾಣ ಮಡಿಕೇರಿ, ಸೋಮವಾರಪೇಟೆ ಹೆದ್ದಾರಿಯ ಬಳಿ ಇದ್ದರು ಕೂಡ ಬೇಗನೆ ಯಾರ ಕಣ್ಣಿಗೂ ಕಾಣದ ಹಾಗೆ ಇತ್ತು. ಬಸ್ಸು‌ ನಿಲ್ದಾಣ ಕುರುಚಲು ಕಾಡುಗಳಿಂದ, ತೋಟದ ದೈತ್ಯಮರಗಳ ನೆರಳಿನಿಂದ, ಮಳೆಗಾಲದ ಮೋಡ, ಕತ್ತಲಿನಿಂದ ಕಾಣಿಸುವುದೇ ಕಷ್ಟವಾಗಿತ್ತು. ಆ ಹೆದ್ದಾರಿಗೆ ಹೊಂದಿಕೊಂಡಿದ್ದ ಬಸ್ ತಂಗುದಾಣಕ್ಕೆ ‘ಚೌಂಡಿ ಕಾಡು’ ಬಸ್ ನಿಲ್ದಾಣ ಎಂದು ಹೆಸರು ಬರಲು ಕಾರಣವೂ ಇತ್ತು.
ಆ ಬಸ್ಸು ನಿಲ್ದಾಣದ ಹಿಂಬದಿ‌ಯಲ್ಲೇ ಫಲವತ್ತಾದ ಕಾಫಿತೋಟ, ಆ ಕಾಫಿತೋಟದ ನಡುವಲ್ಲೊಂದು ಪುರಾತನ ಆಲದ ಮರ, ಆ ಮರದ ಬುಡದಲ್ಲಿ ಚೌಂಡಿಯನ್ನು ಸ್ಥಾಪಿಸಿ ಆ ತೋಟದದವರು ವರ್ಷಕ್ಕೊಮ್ಮೆ ಚೌಂಡಿಗೆ ಹರಕೆ ಕೊಡುತ್ತಿದ್ದರು. ತೋಟದೊಳಗಿನ ಚೌಂಡಿಯೂ, ಕಾಡಿನಂತಹ ತೋಟವು ಸೇರಿ ಆ ಎಸ್ಟೇಟ್ ಹೆಸರು‌ ‘ಚೌಂಡಿಕಾಡು ಎಸ್ಟೇಟ್’ ಆದರೆ. ಪಂಚಾಯತಿ ಅವರು ಕಟ್ಟಿಸಿದ್ದ ಈ ಬಸ್ಸು ನಿಲ್ದಾಣಕ್ಕೂ ಅದೇ ಹೆಸರು ಬಂತು.

ಆ ಬಸ್ಸು ನಿಲ್ದಾಣದ ಒಳಾಂಗಣದಲ್ಲಿ ಈಗ ಯಾರೂ ಇರಲಿಲ್ಲ. ಇದ್ದವನು ಮಳೆಯಿಂದ ರಕ್ಷಿಸಿಕೊಳ್ಳಲು ನಿಂತಿದ್ದ ‘ಆರ್ಯನ್’ ಮಾತ್ರ.
“ಥೂ ಹಾಳಾದ್ ಮಳೆ’ ಮಳೆಗಾಲ ನಿಂತ್ರು ಈ ಮಳೆ ನಿಲ್ಲಲ್ಲ ಕೊಡಗಲ್ಲಿ” ಅಂತ ಗೊಣಗುತ್ತಾ ತನ್ನ ರೈನ್ ಪ್ಯಾಂಟನ್ನು ಸೊಂಟದಿಂದ ಹಿಡಿದು ಕೊಂಚ ಜಾರಿಸಿ, ಪ್ಯಾಂಟಿನ ಕಿಸೆಯಿಂದ ಮೊಬೈಲ್ ತೆಗೆದ. ವಾಟ್ಸ್ ಆಪ್ ನಲ್ಲಿ ಒಂದಿಷ್ಟು ಮೆಸೇಜ್ ಬಂದಿತ್ತು ಬಿಟ್ಟರೆ. ಫೋನ್ ಕಾಲ್‌ಗಳೇನು ದಾಖಲಾಗಿರಲಿಲ್ಲ.
ಹೀಗೆ ಇದೇ ಬಸ್ ಸ್ಟಾಪಿನಲ್ಲಿ ಹೆಚ್ಚು ಕಡಿಮೆ ಇದೇ ಹೊತ್ತಿನಲ್ಲಿ, ಇಂತಹದ್ದೇ ಮಳೆಯಲ್ಲಿ ಈ ಹಿಂದೆಯೂ ನಿಂತುಕೊಂಡಿದ್ದೇ ಅನಿಸತೊಡಗಿತು. ತಲೆಕೊಡವಿಕೊಂಡು ಛೇ ನಾನ್ಯಾಕೆ ಹೀಗೆ ಬಂದು ಹೀಗೆ ಬಂದು‌ ಇಲ್ಲಿ ನಿಂತುಕೊಳ್ಳಲಿ. ಇದೇ ಮೊದಲು ನಾನು ಈ ನಿಲ್ದಾಣದ ಒಳಗೆ ಹತ್ತಿದ್ದು ಅಂದುಕೊಂಡ. ಬಸ್ ತಂಗುದಾಣಕ್ಕೆ ಮೊದಲು ಹತ್ತಿದ್ದು ನಿಜವಾದರೂ ಅವನು ಆ ರಸ್ತೆಯಲ್ಲಿ ವಾರಕ್ಕೆ ಎರಡು ಬಾರಿ ಸಂಚರಿಸುತ್ತಿದ್ದ. ಮಳೆಗಳಲ್ಲೂ ಸಂಚರಿಸಿದ್ದಾನೆ, ಇವತ್ತು ಇದೀಗ ಸುರಿಯುತ್ತಿರುವ ಭಾರಿ ಮಳೆಗಿಂತಲೂ ದೊಡ್ಡ ದೊಡ್ಡ ಹನಿಗಳ ಮಳೆ, ಗಾಳಿಯಲ್ಲೂ ಆತ ಅದೇ ಮಾರ್ಗವಾಗಿ ಸಂಚರಿಸಿದ್ದಾನೆ. ಮಳೆಗೆ ತೊಯ್ದು ಒದ್ದೆ ಮುದ್ದೆಯಾದರೂ ಆತ ಎಂದೂ ಕೂಡ ಆ ಬಸ್ಸು ನಿಲ್ದಾಣ ಹತ್ತಿರಲಿಲ್ಲ. ಇಂದ್ಹೇಕೆ ಹತ್ತಿದೆ? ಎನ್ನುವ ಯೋಚನೆಯೊಂದು ಮೆದುಳಿಗೆ ಕುಕ್ಕಿತು.
ಕಳೆದ ಒಂದು ವಾರದಿಂದ ಮಳೆ ಸುರಿದಿರಲಿಲ್ಲ. ಬಿಸಿಲಿನ ತೀವ್ರತೆ ಹೆಚ್ಚಿಲ್ಲದ್ದಿದ್ದರು ಹಿತವಾತಾವರಣ ಕಳೆದ ಹತ್ತು ದಿನಗಳಿಂದ ಕೊಡಗಿನಲ್ಲಿ ನೆಲೆಸಿತ್ತು. ಹತ್ತು ದಿನಗಳಲ್ಲಿ ಆತ ಎರಡು ಬಾರಿ ಸೋಮವಾರಪೇಟೆಗೆ ಬಂದು ಹೋಗಿದ್ದ. ಆ ಸಾಲು ಮರಗಳು, ತಿರುವುಗಳು, ಏರು ತಗ್ಗುಗಳ ರಸ್ತೆಯಲ್ಲಿ ಬೈಕನ್ನು ಆತ ಚಲಿಸುತ್ತಲೇ “ಆಹಾ! ಎಂಥಹಾ ಚೆಂದದ ವಾತಾವರಣ ಬೈಕ್ ಓಡಿಸಲು” ಅಂದುಕೊಂಡಿದ್ದ. ಅವನಿಗೆ ಏಕಾಂಗಿಯಾಗಿ ಬೈಕ್ ಓಡಿಸುವುದು ಎಂದರೆ ಏನೋ ಸಂತೋಷ. ಹಾಗೆ ಅವನು ಬೈಕ್ ಓಡಿಸುತ್ತಾ ಮನಸ್ಸಾದಾಗಲೆಲ್ಲ ಯಾವುದಾದರೂ ಕಾಕ ಹೋಟೆಲಿನ ಬಳಿಗೆ ಬೈಕ್ ಸ್ಟಾಂಡ್ ಹಾಕಿ, ಬಿಸಿ ಬಿಸಿ ಕರಿ ಟೀ ಕುಡಿಯುತ್ತಿದ್ದ. ಅಪರೂಪಕ್ಕೆ ಒಂದು ಸಿಗರೇಟನ್ನು ತೆಗೆದು ತುಟಿಗೇರಿಸಿ ಒಂದೆರೆಡು ಧಮ್ ಅನ್ನು ಹೊಡೆಯುತ್ತಿದ್ದ. ಅಲ್ಲಿಂದ ಮರಳಿ ಬೈಕ್ ಹತ್ತಿ ಮುಂದುವರೆಯುತ್ತಿದ್ದ. ಅವನು ಬೈಕನ್ನು ಪ್ರೇಯಸಿಯಂತೆ ಪ್ರೀತಿಸುತ್ತಿದ್ದ, ವೇಗವಾಗಿ ಹೋದರೆ ಎಲ್ಲಿ ತನ್ನ ಪ್ರೇಯಸಿಗೆ ನೋವಾದೀತೋ? ಎನ್ನುವಂತೆ ನಿಧಾನಕ್ಕೆ ಬೈಕನ್ನು ಚಾಲೂ ಮಾಡುತ್ತಿದ್ದ. ಹಳೆಯ ಹಿಂದಿ ಪ್ರೇಮಗೀತೆಗಳನ್ನು ಹಾಡುತ್ತಾ…

ಹಾಗೇ ಹಾಡುತ್ತಾ ಚಲಿಸುವಾಗ ಇದೇ ಮಾರ್ಗದಲ್ಲಿ, ಇದೇ ಸ್ಥಳದಲ್ಲಿ, ಇದೇ ಬೈಕಿನಲ್ಲಿ ನಾನು ಈ ಹಿಂದೆಯೂ ಇದೇ ಹಾಡನ್ನು ಹಾಡುತ್ತಾ ಸಾಗಿದ್ದೆ. ಅನಿಸುತ್ತಿತ್ತು ಕೆಲವೊಮ್ಮೆ. “ಛೇ ಇತ್ತೀಚೆಗೆ ನನಗೇನೋ ಆಗಿದೆ ಎಂದು” ಅಂದುಕೊಳ್ಳುತ್ತಿದ್ದ.
ಈಗ ‘ಚೌಂಡಿಕಾಡು’ ಬಸ್ಸು ನಿಲ್ದಾಣದಲ್ಲಿ ಹೀಗೆ, ಇದೇ ಸಮಯಕ್ಕೆ, ಇಂತದ್ದೇ ಮಳೆಯಲ್ಲಿ ಈ ಹಿಂದೆ ಕೂಡ ನಿಂತಿದ್ದೆ ಅಂದುಕೊಂಡಂತೆ.
ಇತ್ತೀಚೆಗೆ ಇದೊಂದು ಹೊಸ ಖಾಯಿಲೆ ನನಗೆ ಶುರುವಾಗಿದೆ ಅಂದುಕೊಂಡ. ಯಾಕ್ಹೀಗೆ ಆಗುತ್ತಿದೆ ಎಂದು ಅರೆಗಳಿಗೆ ಯೋಚಿಸುತ್ತಾ ನಿಂತ.
ಎಡೆ ಬಿಡದೆ ಸುರಿಯುತ್ತಿದ್ದ ಮಳೆ ನಿಂತು ಹೋಗಿತ್ತು, ಮಳೆಯಿಂದಾದ ಆಘಾತದಿಂದ ಇನ್ನೂ ಸುಧಾರಿಸಿಕೊಳ್ಳಲಾಗುತ್ತಿಲ್ಲ ಎನ್ನುವಂತೆ ಆ ರಸ್ತೆಯ ಇಕ್ಕೆಲಗಳಲ್ಲೂ ನಿಂತಿದ್ದ ಮರಗಳಿಂದ ಹನಿಗಳು ತೊಟ್ಟಿಕ್ಕುತ್ತಲೇ ಇತ್ತು. ಮೋಡ ಕೊಂಚ ಸರಿದು ಅಲ್ಲಿ ಸ್ಥಾಪಿತವಾಗಿದ್ದ ಕತ್ತಲ ಛಾಯೆಯನ್ನು ಕೊಂಚ ನಿವಾರಿಸಿತು.

ಆರ್ಯನ್ ತನ್ನ ಕೋಟನ್ನು ಕೈಗಳಿಂದ ಕೊಡವಿ, ಕೋಟಿನ ಮೇಲಿದ್ದ ಹನಿಗಳನ್ನು ನೆಲಕಾಣಿಸಿದ. ನಿಲ್ದಾಣದಿಂದ ಹೊರಕ್ಕೆ ಬಂದು ಬೈಕ್ ಬಳಿ ಸರಿದ. ಬೈಕ್ ಹತ್ತಿ, ಬೈಕಿನ ಕಣ್ಣಿಗೆ ಕೀ ಚುಚ್ಚಿ ಇಗ್ನಿಷನ್ ಆನ್ ಮಾಡಿದ. ಜೀವಬಂದ ಬೈಕ್ ಘರ್ಜಿಸತೊಡಗಿತು. ಒಂದು ಕ್ಷಣ ಹಾಗೆ ನಿಂತು ಏನನ್ನೋ ಯೋಚಿಸಿದ. “ಛೇ…ಅಂದು ಕೂಂಡ. ನಾನು ಹೀಗೆ ಇದೇ ಸ್ಥಳದಲ್ಲಿ ಈ ಹಿಂದೆ ಕೂಡ ಬೈಕ್ ಸ್ಟಾರ್ಟ್ ಮಾಡಿದ್ದೆ. ಅನಿಸಿತು ಅವನಿಗೆ. ಈ ಬಾರಿ ಕೊಂಚ ಗಂಭೀರನಾದ. ಬೈಕ್ ಇಗ್ನಿಷನ್ ಅನ್ನು ತಿರುಗಿಸಿ ಬೈಕನ್ನು ಮರಳಿ ಆಫ್ ಮಾಡಿ ಹಾಗೆ ಕೊಂಚ ಹೊತ್ತು ಕುಳಿತುಕೊಂಡ.
ಇಲ್ಲ ಇದೆಲ್ಲ ನನ್ನ ಭ್ರಮೆ, ಹಾಗೆ ಇದೇ ಘಟನೆ ಅಂದು ಕೂಡ ಇದೇ ರೀತಿ ನಡೆದಿದ್ದರೆ. ಮರಳಿ ನಾನು ಬೈಕ್‌ಅನ್ನು ಆಫ್ ಮಾಡಿ ಹೀಗೆ ಕೂರಬೇಕಿತ್ತಲ್ಲ ಅಂದುಕೊಂಡು ಅಲ್ಲಿಂದ ಹೊರಟ, ಹೊರಟು ಸಾಗುವಾಗ “ಹೀಗೆ ಇದೇ ರೀತಿ ಹಿಂದೆಯೂ ನಡೆದಿದೆ” ಅನ್ನುವ ಈ ವಿಚಿತ್ರ ಅನುಭವ ಇತ್ತೀಚಿನ ಸಮಸ್ಯೆ ಅಲ್ಲ ಅನ್ನುವುದು ನೆನಪಾಯಿತು.


ಮೂರು ತಿಂಗಳ ಹಿಂದೆ ಆತ ಮೂರ್ನಾಡಿನ ಬಳಿಯ ‘ಹುಲಿಯೂರು’ ಎಸ್ಟೇಟಿನ ಚೌಂಡಿಗೆ ಕೊಡುವ ಕಾರ್ಯಕ್ರಮಕ್ಕೆ ಹೋಗಿದ್ದ. ಆರ್ಯನ್ ಬಿಲ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿರುವ ‘ವುಡ್ & ಫರ್ನಿಚರ್ಸ್’ ಕಂಪೆನಿಯ ಮಾಲೀಕ ‘ರಾಯ್ ಕಾರ್ಯಪ್ಪನ’ ಎಸ್ಟೇಟಿನಲ್ಲಿ ವರ್ಷಕ್ಕೊಮ್ಮೆ ನಡೆಯುವ ಚೌಂಡಿ ಹರಕೆಗೆ ‘ವುಡ್ & ಫರ್ನಿಚರ‍್ಸಿನ ಎಲ್ಲಾ ಸಿಬ್ಬಂದಿಗಳಿಗೂ ವಿಶೇಷ ಆಹ್ವಾನವಿತ್ತು. ಅಂದು ಸಿಬ್ಬಂದಿಗಳೆಲ್ಲರೂ ಕಂಪೆನಿಯ ಟಾಟಾ ಸುಮೋದಲ್ಲೇ ಅಲ್ಲಿಗೆ ಹೋಗಿದ್ದರು. ಜೊತೆಗೆ ಅಕೌಂಟೆಂಟ್ ರೇಖ, ಆಚಾರಿ ಗೋಪಾಲ, ಸೂಪರ್ ವೈಸರ್ ವಿನ್ಸೆಂಟ್ ಜೊತೆಯಾಗಿದ್ದರು. ಮಡಿಕೇರಿಯಿಂದ ಹೊರಟ ಕಾರು ಮೂರ್ನಾಡು ತಲುಪಿ, ಅಲ್ಲಿಂದ ಎಡಭಾಗದ ರಸ್ತೆ ಹಿಡಿದು ನಾಪೋಕ್ಲು ಮಾರ್ಗವಾಗಿ ಕೊಂಚ ಒಳಕ್ಕೆ ಹೋಗಿ “ಹುಲಿಯೂರು” ಎಸ್ಟೇಟ್ ತಲುಪಿಕೊಂಡಿತು. ಕಾರಿನಿಂದ ಎಲ್ಲರೂ ಕಾಫಿ ತೋಟಕ್ಕೆ ಜಿಗಿದರು, ಸ್ವತಃ ರಾಯ್ ಕಾರ್ಯಪ್ಪನೇ ಬಂದು ಎಲ್ಲರನ್ನು ಸ್ವಾಗತಿಸಿದ. ಅರ್ಧ ಫರ್ಲಾಂಗು ನಡೆದು, ಎಲ್ಲರು ಪೂಜಾ ಸ್ಥಳಕ್ಕೆ ತಲುಪಿಕೊಂಡರು. ಅಲ್ಲಿಗೆ ತಲುಪುತ್ತಿದ್ದಂತೆ ಆರ್ಯನಿಗೆ “ಈ ಹಿಂದೆ ನಾ ಇಲ್ಲಿಗೆ ಇದೇ ಸಮಯಕ್ಕೆ ಬಂದಿದ್ದೇ..” ಎಂದು ಮೊದಲ ಬಾರಿಗೆ ಅನಿಸತೊಡಗಿತು. ಅವನು ಕೊಂಚ ಆ ಕುರಿತು ಯೋಚಿಸಿ ಈ ರಸ್ತೆಯಾಗಿ ಬಂದದ್ದೇ ನಾ ಮೊದಲು. ಅಂದುಕೊಳ್ಳುತ್ತಾ ಸುಮ್ಮನಾದ. ಸ್ಥಳದಲ್ಲಿ ಹತ್ತಿಪ್ಪತ್ತು ಮಂದಿಯಷ್ಟೇ ಇದ್ದರು. ರಾಯ್ ಕಾರ್ಯಪ್ಪನ ಕುಟುಂಬಸ್ಥರು ಹಾಗು ಆ ತೋಟದಲ್ಲಿ ಕೆಲಸಕ್ಕಿರುವ ಕೆಲವರು ಪರಸ್ಪರ ಕೊಡವ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಪೂಜಾರಿಯಂತೆ ವಸ್ತ್ರಧರಿಸಿ ಫೂಜಾ ವಿಧಿವಿಧಾನಗಳಲ್ಲಿ ಮಗ್ನನಾಗಿದ್ದ ವ್ಯಕ್ತಿಯನ್ನು ಕುರಿತು ಆರ್ಯನ್ ಗೋಪಾಲ ಆಚಾರಿಯ ಕಿವಿಯ ಬಳಿಗೆ ತುಸು ಬಾಗಿ ಮೆತ್ತಗೆ “ಅವರು ಯಾರು?” ಎಂದು ಕೇಳಿದ. “ಅವರೇ ರಾಯ್ ಸರ್ ತಂದೆ ಭೀಮಯ್ಯ” ಅಂದನು ಗೋಪಾಲ. ಅಷ್ಟರಲ್ಲಿ ಕೆಲಸದರ‍್ಯಾರೋ ಬಲಿಕೊಡಲು ತಂದು ಸಂತೆಯ ವೈಯರ್ ಬ್ಯಾಗಿನೊಳಗೆ ಬಂಧಿಸಿ, ಮರದ ಕೊಂಬೆಗೆ ನೇತು ಹಾಕಿದ್ದ ಹೂಂಜ ಒಂದು ತಪ್ಪಿಸಿಕೊಂಡು ತೋಟಕ್ಕೆ ಹಾರಿತು. ಹಾರುತ್ತಾ “ಕೋ ಕೋ ಕೋ ಕೋ ಕೋ. . . . .” ಎಂದು ಸದ್ದೊರಡಿಸುತ್ತಾ ಅಲ್ಲೆಲ್ಲಾ ಗದ್ದಲ ಮಾಡಿತ್ತು. ಅದರ ಕೂಗು ಕೇಳಿ ಇನ್ನುಳಿದ ಬಲಿ ಕೋಳಿಗಳು ಗಂಟಲು ಹರಿದುಕೊಳ್ಳಲು ಶುರುವಿಟ್ಟುಕೊಂಡವು. ಕೋಳಿಗಳ ಮಾಲೀಕರು ಚುರುಕಾಗಿ ತಮ್ಮ ತಮ್ಮ ಕೋಳಿಗಳನ್ನು ಭಧ್ರಪಡಿಸಿಕೊಂಡರು. ಈ ಗದ್ದಲದ ನಡುವೆ ಪೂಜಾ ಕೈಂಕರ್ಯಗಳು ಗಡಿಬಿಡಿಯಲ್ಲಿ ಸಾಗಿದವು. ಅದೇನೂ ದೇವಸ್ಥಾನವಾಗಿರಲಿಲ್ಲ, ದೈತ್ಯ ಆಲದ ಮರದ ಕೆಳಗೆ ಒಂದು ಕಾಡುಗಲ್ಲನ್ನು ಇಟ್ಟು ಅದರ ಆಜುಬಾಜಿನಲ್ಲಿ ಒಂದೆರೆಡು ತ್ರಿಶೂಲ ನೆಟ್ಟು ಅದನ್ನೇ ಪೂಜಿಸುತ್ತಿದ್ದರು. ಆ ಮರದಿಂದ ಕೊಂಚ ದೂರದಲ್ಲಿ ಅದೇ ಮಾದರಿಯ ಕಲ್ಲನ್ನು ಮಕಾಡೆ ಮಲಗಿಸಿ ಅಲ್ಲೂ ತ್ರಿಶೂಲನೆಟ್ಟಿದ್ದರು, ಅದು ಬಲಿ ಕಲ್ಲು. ಮೊದಲು ಮರದ ಬುಡದ ದೇವರಿಗೆ ಪೂಜಾ ವಿಧಿ ವಿಧಾನ ಮುಗಿಸಿ, ನಂತರ ಬಲಿ ಕಲ್ಲಿನ ಬಳಿ ತೆರಳಿ ದೇವರನ್ನು ಪ್ರಾರ್ಥಿಸಿ ಬಲಿಕೋಳಿಗಳನ್ನು ತರಲು ಸೂಚಿಸಿದ್ದರು ಭೀಮಯ್ಯ. ಅಷ್ಟರಲ್ಲಾಗಲೇ ತಪ್ಪಿಸಿಕೊಂಡ ಕೋಳಿಯನ್ನು ಹುಡುಕಿ ತೋಟದ ಇಳಿಜಾರಿನಲ್ಲಿ ಜಾರುತ್ತಾ ಸಾಗಿದ್ದ ಒಂದಿಬ್ಬರು ಕೋಳಿ ಸಿಕ್ಕದೆ ಬರಿಗೈಯಲ್ಲಿ ಮರಳಿದರು, ಕೋಳಿ ಕಳೆದುಕೊಂಡ ತೋಟದ ಆಳು ತನ್ನ ಹೆಂಡತಿಯನ್ನು ಕೊಂಚ ರೇಗಿ. ಪೆಚ್ಚು ಮೋರೆ ಹಾಕಿಕೊಂಡು ಬದಿಯಲ್ಲಿ ನಿಂತುಕೊಂಡಿದ್ದ. ಬಲಿಕೋಳಿಯನ್ನು ಬಲಿ ಕಲ್ಲಿನ ಬಳಿಗೆ ತಂದು ಕೋಳಿಯ ಮಾಲೀಕರು ಕಾಲಿಗೆ ಕಟ್ಟಿದ್ದ ಹಗ್ಗದ ಕಟ್ಟನ್ನು ಬಿಚ್ಚಿ, ಭೀಮಯ್ಯನಿಗೆ ಸಹಾಯಕ ಅರ್ಚಕನಂತಿದ್ದ ಕೇಶವನ ಕೈಗೆ ಕೊಟ್ಟರು. ಕೇಶವ ಕೋಳಿಯ ತಲೆಗೆ ಅಲ್ಲೆ ಪಾತ್ರೆಯಲ್ಲಿ ಸಿದ್ಧವಾಗಿದ್ದ ಅರಶಿನದ ನೀರನ್ನು ಚುಮುಕಿಸಿ ಎರಡು ಕಾಳು ಅಕ್ಕಿಯನ್ನು ತಿನ್ನಿಸಲು ಪ್ರಯತ್ನಿಸಿದ, ಗಾಬರಿಯಲ್ಲಿದ್ದ ಕೋಳಿ ಕೈಯಲ್ಲಿದ್ದ ಅಕ್ಕಿಯನ್ನು ನೆಲಕ್ಕೆ ತಟ್ಟಿ ಹಾಕಿತು, ಕೇಶವ ಅದರ ಬಾಯಿಗೆ ಒತ್ತಾಯಿಸಿ ಅರಶಿನ ನೀರನ್ನು ಹುಯ್ದ. ಅದನ್ನು ಕಷ್ಟದಲ್ಲಿ ನುಂಗಿಕೊಂಡು, ತಲೆಯನ್ನು ಪಟಪಟನೆ ಕೊಡವಿಕೊಂಡಿತು ಕೋಳಿ.
ಅದರ ರೆಕ್ಕೆಯನ್ನು, ಕಾಲನ್ನೂ ಒಂದು ಮಾಡಿ ತಲೆಯನ್ನು ಚೌಂಡಿಗೆ ಪೂಜೆ ಮುಗಿಸಿ, ಈಗ ಬಲಿಪೂಜೆಗೆ ತಯಾರಾಗಿ ನಿಂತಿದ್ದ ಭೀಮಯ್ಯನ್ನ ಕೈಗೆ ಕೊಟ್ಟ, ಭೀಮಯ್ಯ ಕೋಳಿಯ ತಲೆಯನ್ನು ಒಂದು ಕೈಯಲ್ಲಿ ಹಿಡಿಕೊಂಡು ಮತ್ತೊಂದು ಕೈಯಿಂದ ಹರಿತವಾದ ಕತ್ತಿಯಿಂದ ಕೋಳಿಯ ಕತ್ತನ್ನು ಹಿಡಿದು ಕುಯ್ದು ತುಂಡು ಮಾಡಿದ, ಕುತ್ತಿಗೆ ಇಲ್ಲದ ಕೋಳಿ ಪಟಪಟನೇ ರೆಕ್ಕೆ ಬಡಿಯಿತು, ಅದರ ಕುತ್ತಿಗೆಯಿಂದ ಹಾರುತ್ತಿದ್ದ ರಕ್ತವನ್ನು ಕೇಶವ ಅಲ್ಲೇ ಎರಡು ಹೋಳು ಮಾಡಿ ಇಟ್ಟಿದ್ದ ತೆಂಗಿನಕಾಯಿಗೆ ಅರೆ ಕ್ಷಣ ಹಿಡಿದ, ಅದು ತುಂಬಿಕೊಂಡಿತು. ನಂತರ ರುಂಡವಿಲ್ಲದ ಕೋಳಿಯನ್ನು ಎತ್ತಿ ದೂರಕ್ಕೆ ಎಸೆದ. ಅದು ತೋಟದ ಇಳಿಜಾರಿನಲ್ಲಿ ರೆಕ್ಕೆ ಬಡಿಯುತ್ತಾ ಉರುಳಿತು. ಈ ದೃಶ್ಯವನ್ನು ಗಮನಿಸುತ್ತಿದ್ದ ಇತರೇ ಕೋಳಿಗಳು “ಕ್ಕೊ ಕ್ಕೊ ಕ್ಕೋ ಕ್ಕೋ. . . .” ಎಂದು ಗಂಟಲು ಹರಿದುಕೊಳ್ಳುತ್ತಿದ್ದವು. ಬಲಿಕೋಳಿಗಳು ಇಳಿಜಾರಿನಲ್ಲಿ ಒಂದರ ಹಿಂದೆ ಒಂದರಂತೆ ಹೊರಳಿತು.


ಇದೇಲ್ಲವೂ ಹೀಗೆ, ಇದೇ ಮಾದರಿಯಲ್ಲಿ, ಇದೇ ಸ್ಥಳದಲ್ಲಿ ಈ ಹಿಂದಿಯೂ ನಡೆದಿತ್ತು. ನಾನು ಹೀಗೆ, ಇಲ್ಲೇ, ಇದೇ ಸ್ಥಳದಲ್ಲಿ ಆಗಲೂ ಹೀಗೆ ನಿಂತುಕೊಂಡಿದ್ದೆ. ಅಂತ ಅನಿಸಿತು “ಆರ್ಯನಿಗೆ” ಆಗ ಅವನು ಆ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇದು ಪದೇ ಪದೇ ಮರುಕಳಿಸುತ್ತಿದ್ದಂತೆ ಆರ್ಯನ್ ಚಡಪಡಿಸತೊಡಗಿದ.

ಎಲ್ಲವೂ ಅವನ ತಲೆಯೊಳಗೆ ಸಿನಿಮಾ ರೀಲಿನಂತೆ ಓಡುತ್ತಿತ್ತು. ಆರ್ಯನಿನ ಬೈಕು ತನ್ನಪಾಡಿಗೆ ತಾನು ಮಡಿಕೇರಿಯತ್ತ ಓಡುತ್ತಿತ್ತು. ಮಳೆ ನಿಂತು ಹೋಗಿತ್ತು.‌ ಸಣ್ಣಗೆ ಸುಳಿದ ಬಿಸಿಲು ರಸ್ತೆಯನ್ನು ಝಳಪಿಸುತ್ತಿತ್ತು.

ದೈತ್ಯತಿರುವಿನಲ್ಲಿ ವೇಗವಾಗಿ ಎದುರಾದ ಕೆ.ಎಸ್.ಆರ್.ಟಿ.ಸಿ ಬಸ್ಸು ದಿಢೀರ್ ನುಗ್ಗಿ ಬಂದ ರಭಸಕ್ಕೆ ಆರ್ಯನ್ ಗಾಡಿಯನ್ನು ಪಕ್ಕದ ಚರಂಡಿ ಎಡೆಗೆ ಬೈಕನ್ನು ತಿರುಗಿಸಿದ.‌ ಸ್ವಲ್ಪದರಲ್ಲೇ ಭಾರಿ ಅನಾಹುತ ಒಂದು ತಪ್ಪಿತ್ತು. ಬಸ್ಸಿನೊಳಗಿದ್ದ ಅಷ್ಟೂ ಜನ ಕಿಟಕಿಯಿಂದ ತಲೆ ಹೊರಕ್ಕೆ ಹಾಕಿ ಆರ್ಯನ್‌ನನ್ನೇ ನೋಡುತ್ತಿದ್ದರು. ಬಸ್ಸು ಡ್ರೈವರ್ರು ವಾಚಾಮಗೋಚರ ಬೈಯುತ್ತಿದ್ದಾ..


ಹೀಗೆ ಇಲ್ಲೆ ಇದೇ ಸ್ಥಳದಲ್ಲಿ ಹಿಂದೆಯೂ…. ಅಂದುಕೊಳ್ಳುತ್ತಾ ಆರ್ಯನ್ ಚರಂಡಿಯಿಂದ ಎದ್ದು‌. ಬೈಕನ್ನೂ ನಿಲ್ಲಿಸಿದ. ಬಸ್ಸು ಅಲ್ಲಿಂದ ತೆರಳಿತು. ಆರ್ಯನ್ ಅಲ್ಲೇ ಕೆಲಕಾಲ‌ ಕಲ್ಲಿನಂತೆ ನಿಂತಿದ್ದ. ಮಳೆ ಪುನಃ ಶುರುವಾಯಿತು..

ರಂಜಿತ್ ಕವಲಪಾರ

error: Content is protected !!