fbpx

ದೇಶದ ಸ್ವದೇಶಿ ಗೋವುಗಳ ರಕ್ಷಣೆ ನಮ್ಮೆಲ್ಲಾ ಭಾರತೀಯರ ಆದ್ಯ ಕರ್ತವ್ಯವಾಗಬೇಕಿದೆ…

ಗೋ ಹತ್ಯೆ ನಿಷೇಧದ ಕಾಯ್ದೆ ಜಾರಿಯಾಗಬೇಕಿದೆ!

ರಜತ್ ರಾಜ್ ಡಿ.ಹೆಚ್, ಸಂಪಾದಕರು.
7483226251

ಇಂದು ಈ ದೇಶದಲ್ಲಿ ರಾಜಕಾರಣ ನೈತಿಕತೆಯ, ನೀತಿಯ ಮಿತಿಗಳಿಲ್ಲದೆ ನೀಚ್ಛವಾಗುತ್ತಿದೆ. ರಾಜಕೀಯ ಪಕ್ಷಗಳು ರಾಜಕೀಯ ಲಾಭವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಪ್ರತಿಯೊಂದಕ್ಕೂ ಪ್ರತಿಕ್ರಿಯಿಸುತ್ತವೆ. ಎಲ್ಲಾ ವಿಚಾರಗಳಲ್ಲೂ ತಮಗೇನು ಲಾಭವಿದೆ? ಎಂಬ ಯೋಚನೆಯನ್ನೇ ರಾಜಕೀಯ ಕ್ಷೇತ್ರದಲ್ಲಿನ ಇಂದಿನ ನಾಯಕರು ಮಾಡುತ್ತಾರೆ. ರಾಜಕೀಯ ಪಕ್ಷಗಳು ತಮಗೆ ಬೇಕಾದ ಜಾತಿ, ಧರ್ಮದ ಜನರ ಓಲೈಕೆಗೆ ಅಧಿಕಾರ ಇರುವಾಗ ಅವರಿಗೆ ತಕ್ಕಂತೆ ನಡೆದುಕೊಂಡು, ಮತ ಬ್ಯಾಂಕ್ ಸೃಷ್ಟಿಸಿ, ತಮ್ಮ ಕುಟಿಲ ನೀತಿಯನ್ನು ಪ್ರದರ್ಶಿಸುತ್ತವೆ.‌ ಅದಕ್ಕೆ ಗೋವುಗಳೂ ಒಂದು ಮುಖ್ಯವಿಷಯವಾಗಿರುವುದು ನಿಜಕ್ಕೂ ವಿಪರ್ಯಾಸ.

ಭಾರತದ 52 ಬಗೆಯ ದೇಶಿಯ ತಳಿಯ ಹಸುಗಳು ಪ್ರಪಂಚದಲ್ಲೇ ಎಲ್ಲೂ ಕಂಡು ಬರದ ಅಮೂಲ್ಯ ಮೂಲ ತಳಿಗಳು. ಸಿಂಧಿ, ಗಿರ್,‌ ರಾಟಿ, ಸಾಹಿವಾಲ್, ಅಮೃತ್ ಮಹಲ್, ಹಳ್ಳಿಕಾರ್, ಸಿರಿ, ಬಾಗುರ್, ಪುಳಿಕುಲಂ, ದಾಗಿ,‌ ವೇಚುರ್, ನಿಮರಿ ಮುಂತಾದ ದೇಸಿ ಹಸುಗಳನ್ನು ಬಿಟ್ಟು,‌ ಹೆಚ್.ಎಫ್ ಜರ್ಸಿ ಹಸುಗಳನ್ನೇ ಜನರು ಹೆಚ್ಚಾಗಿ ಸಾಕುತ್ತಿರುವುದರಿಂದ ದೇಶಿ ತಳಿಯ ಸಂಪತ್ತಿನ ಗೋವುಗಳು ಕಸಾಯಿಖಾನೆಯಲ್ಲಿ ನಾಶವಾಗುತ್ತಿವೆ.‌ ಜನರು ಹಣ ಮಾಡಿ ಲಾಭ ಗಳಿಸುವ ಬರದಲ್ಲಿ ದೇಶದ ಸಂಪತ್ತಾದ ದೇಶಿ ಹಸುಗಳ ಮಹತ್ವವನ್ನು ಅರಿಯದಷ್ಟು ಅವಿವೇಕಿಗಳಾಗಿದ್ದಾರೆ. ಹಿಂದೂ ಧರ್ಮದ ಪ್ರಕಾರ ಹಾಗು ಭಾರತದ ಸಂವಿಧಾನದ ಕಲಮು 48ರ ಪ್ರಕಾರ ಗೋ ಹತ್ಯೆ ಮಹಾ ಪಾಪ ಹಾಗು ಅಪರಾಧವೇ ಆಗಿದೆ. ಆದರೂ ಇಂದು ಅವ್ಯಾಹತವಾಗಿ ಗೋವುಗಳ ಅಕ್ರಮ ಸಾಗಾಟ ಭಕ್ಷಣೆ ದೇಶದಲ್ಲಿ ನಡೆಯುತ್ತಲೇ ಇದೆ.

ಭಾರತೀಯ ಮೂಲದ ಅಸಲಿ ತಳಿಯ ಗೋವುಗಳಲ್ಲಿ ಮಹತ್ತರವಾದ ಔಷಧೀಯ ಅಂಶಗಳಿರುವ ಕಾರಣ ಅವುಗಳ ಸಂರಕ್ಷಣೆ ಭಾರತೀಯರೆಲ್ಲರ ಆದ್ಯ ಕರ್ತವ್ಯವಾಗಿದೆ. ಅದಕ್ಕೆ ಕೋಮುವಾದದ ಬಣ್ಣ ಬಳಿಯದೆ, ವೈಜ್ಞಾನಿಕವಾಗಿ ಎಲ್ಲರೂ ಧರ್ಮಗಳ ಎಲ್ಲೆಗಳನ್ನೂ ಮೀರಿ ಯೋಚಿಸಬೇಕಿದೆ. ಆಹಾರ ಸಂಸ್ಕೃತಿಯೆಂದು ಮನುಷ್ಯ ಮೃಗವಾಗಿ ಗೋವುಗಳ ನಾಶಕ್ಕೆ ಕಾರಣವಾಗಬಾರದು.

ಈ ದೇಶದ ರಾಜಕೀಯ ಪಕನೀತಿಬದ್ಧವಾಗಿ ರಾಜಕೀಯ ನಾಯಕರು ವೋಟ್ ಬ್ಯಾಂಕ್,‌ ಜಾತಿ ಮತಗಳ ಲೆಕ್ಕಾಚಾರ, ಸಮಾಜ ಒಡೆಯುವ ಹುನ್ನಾರಗಳನ್ನು ಮಾಡದೆ ನೀತಿಬದ್ಧವಾಗಿ, ನೈತಿಕವಾಗಿ‌ ನಡೆದುಕೊಳ್ಳುವ ಜರೂರಿ ಇದೆ. ಎಲ್ಲವನ್ನೂ ರಾಜಕೀಯ ಲಾಭದ ದೃಷ್ಟಿಯಿಂದ ಕೋಮುವಾದಿ ಧೋರಣೆಗಳಿಂದ ನೋಡುವ ಹಾಗು ದುರುದ್ದೇಶಕ್ಕೆ ಬಳಸಿಕೊಳ್ಳುವ ಕೆಟ್ಟ ಚಾಳಿಯನ್ನು ಬಿಡಬೇಕಿದೆ.

ಏನದು ಕಾಯ್ದೆ ಕಥೆ?

ಈಗ ಸದ್ದು ಮಾಡುತ್ತಿರುವ ಗೋ ಹತ್ಯಾ ನಿಷೇಧ ಕಾಯ್ದೆ 1964ರಲ್ಲಿ ಜಾರಿಯಾಗಿತ್ತು. ಕರ್ನಾಟಕ ಗೋ ಹತ್ಯೆ ನಿಷೇಧ ಹಾಗು ಗೋ ಸಂರಕ್ಷಣಾ ಕಾಯ್ದೆ ಎಂಬ ಹೆಸರಿನಲ್ಲಿ ಜಾರಿಯಾಗಿದ್ದ ರಾಜ್ಯದ ಕಾನೂನಿನ ಪ್ರಕಾರ, 12 ವರ್ಷದ ಒಳಗಿನ ಯಾವುದೇ ಅರೋಗ್ಯಶಾಲಿ ಹಸು, ಎಮ್ಮೆ, ಎತ್ತುಗಳನ್ನು ಕೊಲ್ಲುವಂತಿಲ್ಲ ಎಂದಿತ್ತು. 2010ರಲ್ಲಿ ಮತ್ತೆ ಬಿ.ಎಸ್ ಯಡಿಯೂರಪ್ಪ ಅವರ ಬಿಜೆಪಿ ಸರಕಾರ ಜಾರಿಗೊಳಿಸಿತ್ತು. ನಂತರ 2013ರಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್ ಸರಕಾರ 1964ರ ಕಾಯ್ದೆಯನ್ನು ಅನುರ್ಜಿತಗೊಳಿಸಿತು. ಅದಕ್ಕೆ ಆಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ತೀವ್ರ ವಿರೋಧ ಹಾಗು ಆಕ್ಷೇಪ ವ್ಯಕ್ತಪಡಿಸಿತ್ತು.

ಈಗೇನಾಗಿದೆ?

ಇವಾಗ ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳಾಗಿ‌ ಬಿಜೆಪಿ ಅಧಿಕಾರದಲ್ಲಿದೆ. ಅದು ಕರ್ನಾಟಕ ಗೋ ಹತ್ಯಾ ನಿಷೇಧ ಹಾಗು ಗೋವು ಸಂರಕ್ಷಣಾ ಕಾಯ್ದೆ 1964ಅನ್ನು ಮತ್ತೆ ಜಾರಿಗೆ ತಂದು ಬಲಗೊಳಿಸುವ ಆಶಯ ವ್ಯಕ್ತಪಡಿಸಿದೆ. ಪಶು ಸಂಗೋಪನ ಸಚಿವರಾದ ಪ್ರಭು ಛಾವನ್ ಅವರು ಇತ್ತೀಚೆಗೆ ಗೋ ಹತ್ಯಾ ನಿಷೇಧ ಹಾಗು ಸಂರಕ್ಷಣಾ ಕಾಯ್ದೆಯನ್ನು ಮತ್ತೆ ಜಾರಿಗೆ ತರುವ ಭರವಸೆಯನ್ನು ವಿಧಾನಸಭೆಯಲ್ಲಿ ನೀಡಿದ್ದರು. ಅವರೇ ಹೇಳಿದಂತೆ ರಾಜಸ್ಥಾನ, ಆಂಧ್ರಪ್ರದೇಶ, ದೆಹೆಲಿ, ಛತ್ತೀಸ್ ಘರ್, ಹರಿಯಾಣ, ಬಿಹಾರ,‌ ಅಸ್ಸಾಂ, ತೆಲಂಗಾಣ, ಹಿಮಾಚಲ ಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧದ ಕುರಿತು ಕಠಿಣವಾದ ಕಾನೂನಿದ್ದು, ನಮ್ಮ ರಾಜ್ಯದಲ್ಲೂ ಆದಷ್ಟು ಬೇಗ ಜಾರಿ ಮಾಡಲಾಗುವುದು ಎಂದು ಹೇಳಿದ್ದರು. 2013ರಲ್ಲಿ ಕಾಂಗ್ರೆಸ್ ಸರಕಾರವು ಉದ್ದೇಶಪೂರ್ವಕವಾಗಿ ಬಲಹೀನಗೊಳಿಸಿದ್ದ ‘Cow Protection Commission'(ಗೋ ಸೇವಾ ಆಯೋಗ)ಅನ್ನು ಗಟ್ಟಿಗೊಳಿಸಿ, ಕಾರ್ಯೋನ್ಮುಕವಾಗಿಸಲಾಗುವುದು ಎಂದೂ ಕೂಡ ಆಶ್ವಾಸನೆ ನೀಡಿದ್ದಾರೆ. ಅದರೊಂದಿಗೆ ಗೋ ಶಾಲೆಗಳನ್ನು ಅಭಿವೃದ್ಧಿ ಪಡಿಸಿ, ಡೈರಿ ಉತ್ಪನ್ನಗಳಿಗೆ ಪ್ರೋತ್ಸಾಹವನ್ನು ಹೆಚ್ಚಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇತ್ತೀಚೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ ರವಿ ಅವರೂ ಕೂಡ ‘ಗೋ ಹತ್ಯಾ‌ ನಿಷೇಧ ಕಾಯ್ದೆಯನ್ನು ಅತಿ ಶೀಘ್ರದಲ್ಲಿ ರಾಜ್ಯದಲ್ಲಿ ಜಾರಿಗೆ ತರಲಾಗುವುದು ಎಂದಿದ್ದಾರೆ.

ಕೊನೆಯದಾಗಿ ಹೇಳುವುದಾದರೆ, ಗೋವು ಎಂಬುದು ಉಳಿದೆಲ್ಲಾ ಪ್ರಾಣಿಗಳಂತಲ್ಲ. ಏಕೆ ಎಂಬುದಕ್ಕೆ ಹಲವಾರು ವೈಜ್ಞಾನಿಕ ಕಾರಣಗಳಿವೆ. ಅವೇನೆಂದು ತಿಳಿದುಕೊಳ್ಳಬೇಕಿದೆ ಜನತೆ ಮೊದಲು. ದೇಶಿ ತಳಿಯ ಗೋವು ‘ಆಹಾರ ಸಂಸ್ಕೃತಿ’ ಎಂಬ ನೆಪದಲ್ಲಿ ನಾಶವಾಗದಿರಲಿ. ಧರ್ಮ-ಜಾತಿಗಳ ಅಂಕೆ ಮೀರಿ ಆಲೋಚಿಸುವ ವಿವೇಚನಾಯುಕ್ತ ವಿಶಾಲ ಹೃದಯಿಗಳಾಗೋಣ! ನೈಜ್ಯ ಭಾರತೀಯರಾಗಿ ಈ ದೇಶದ ಆಸ್ಮಿತೆಯ ಭಾಗವಾದ ಗೋವುಗಳನ್ನು ಧರ್ಮ, ಜಾತಿ, ಕೋಮುಗಳ ಮಿತಿಗಳ ಮೀರಿ ಸಂರಕ್ಷಿಸೋಣ ಎಂದಷ್ಟೇ ಹೇಳುತ್ತೇನೆ.

error: Content is protected !!