ತ್ವರಿತ ನ್ಯಾಯ ವಿತರಣಾ ವ್ಯವಸ್ಥೆಗೆ ನಾವು ದಾರಿ ಕಂಡುಕೊಳ್ಳುವ ಅಗತ್ಯವಿದೆ: ಸಂತೋಷ್ ಹೆಗ್ಡೆ

ಬೆಂಗಳೂರು: ‘ತ್ವರಿತ ನ್ಯಾಯ ವಿತರಣಾ ವ್ಯವಸ್ಥೆಗೆ ನಾವು ದಾರಿ ಕಂಡುಕೊಳ್ಳುವ ಅಗತ್ಯವಿದೆ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಆಯೋಜಿಸಿದ್ದ ಮೆಗಾ ಲೋಕ ಅದಾಲತ್ ಉದ್ಘಾಟಿಸಿದ ಅವರು, ‘ನ್ಯಾಯ ಕಂಡುಕೊಳ್ಳಲು ಜನರಿಗೆ ಇರುವ ಮಾರ್ಗ ಎಂದರೆ ನ್ಯಾಯಾಂಗ. ಆದರೆ, ನ್ಯಾಯ ವಿತರಣಾ ವ್ಯವಸ್ಥೆ ಒಂದು ಕೊರತೆಯಿಂದ ಬಳಲುತ್ತಿದೆ. ವ್ಯಾಜ್ಯಗಳ ಇತ್ಯರ್ಥ ವಿಳಂಬವಾಗುತ್ತಿರುವುದು ಜನರಲ್ಲಿ ನಿರಾಸೆಗೆ ಕಾರಣವಾಗುತ್ತಿದೆ’ ಎಂದರು.

‘ಮೊಕದ್ದಮೆಗಳು ಸುಪ್ರೀಂ ಕೋರ್ಟ್‌ ತನಕ ಹೋಗಿ ಬಗೆಹರಿಯಲು 35ರಿಂದ 40 ವರ್ಷಗಳಾಗುತ್ತಿದೆ. ಈ ಸಂದರ್ಭದಲ್ಲಿ ಮಧ್ಯಂತರ ಆದೇಶಗಳ ಪ್ರಯೋಜನವನ್ನು ಒಬ್ಬರು ಪಡೆದುಕೊಳ್ಳುತ್ತಾರೆ.

ಊಹಾತ್ಮಕ ದಾವೆಗಳು ನ್ಯಾಯ ವಿತರಣೆ ವ್ಯವಸ್ಥೆ ಮೇಲೆ ಹೊರೆಯಾಗುತ್ತಿವೆ. ಆದ್ದರಿಂದ ತ್ವರಿತ ನ್ಯಾಯ ವಿತರಣೆಗೆ ಮಾರ್ಗವೊಂದನ್ನು ಹುಡುಕಿಕೊಳ್ಳಬೇಕಿದೆ. ಆ ಕೆಲಸ ಲೋಕ ಅದಾಲತ್ ಮೂಲಕ ಆಗುತ್ತಿದೆ’ ಎಂದರು.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ, ಕೆಎಸ್‌ಎಲ್‌ಎಸ್‌ಎ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ಅರವಿಂದ್‌ಕುಮಾರ್ ಇದ್ದರು. ಕೋವಿಡ್‌ ನಡುವೆಯೇ ಕಳೆದ ಏಳು ತಿಂಗಳಲ್ಲಿ ಮೂರನೇ ಮೆಗಾ ಲೋಕ್ ಅದಾಲತ್‌ ನಡೆಸಲಾಗಿದ್ದು, ಸುಮಾರು 2.74 ಲಕ್ಷ ಪ್ರಕರಣಗಳನ್ನು ಈ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗಿದೆ.

error: Content is protected !!