fbpx

ತೋಟದ ಮಾಲೀಕರೇ ಕರುಣೆ ತೋರಿ ಮಾನವೀಯತೆ ಮೆರೆಯಿರಿ…

ಸಮಸ್ಯೆಗಳ ಸುಳಿಯಲ್ಲಿ ಹೊಯ್ದಾಡುವ ಮಾನವ ಜನ್ಮ ನಿಜಕ್ಕೂ ಒಂದು ರೀತಿಯ ವಿಸ್ಮಯ…..! ಹುಟ್ಟಿನಿಂದ ಸಾಯುವವರೆಗಿನ ಕ್ಷಣಗಳು ಅನೇಕ ಏರಿಳಿತಗಳ ಮಿಲನ.. ಎಡರು ತೊಡರುಗಳ ಜೀವನ.. ಬದುಕು ಎನ್ನುವುದು ಕೆಲವರ ಪಾಲಿಗೆ ಅವಿಸ್ಮರಣೀಯ ಇನ್ನು ಕೆಲವರ ಪಾಲಿಗೆ ಚಿಂತಾಜನಕ.ಬಡವರು ಶ್ರೀಮಂತರು ಮಧ್ಯಮ ವರ್ಗದವರು ಎಂಬ ರೂಪಗಳು ಬೇರೆ.

ಶ್ರೀಮಂತರೆನ್ನಿಸಿಕೊಳ್ಳುವವರು ಶ್ರೀಮಂತರಾಗಲು ಈ ಬಡವರೇ ಕಾರಣ ಎನ್ನುವುದನ್ನು ಮರೆಯುತ್ತಾರೆ .ಅದರಲ್ಲಂತೂ ತೋಟದ ಮಾಲೀಕರ ಶ್ರೀಮಂತಿಕೆಯಲ್ಲಿ ಅವರ ತೋಟದಲ್ಲಿ ದುಡಿಯುವವರ ಬೆವರಹನಿ ಕಾರಣ ಎಂಬುದನ್ನು ಶ್ರೀಮಂತಿಕೆಯ ದರ್ಪದಲ್ಲಿ ಮರೆಯುತ್ತಾರೆ. ಹಾಗಂತ ಎಲ್ಲಾ ತೋಟದ ಮಾಲೀಕರು ಕೂಡ ಹೀಗೇ ಎಂದು ಅಲ್ಲ.ಹೊಟ್ಟೆಪಾಡಿಗಾಗಿ ಜೀವನ ಸಾಗಿಸಲು ದುಡಿಮೆಯನ್ನು ನಂಬಿಕೊಂಡು ಬರುವವರನ್ನು ನಮ್ಮ ತೋಟದಲ್ಲಿ ದುಡಿಯಲು ಬಳಸಿಕೊಂಡು ಪ್ರಾರಂಭದಲ್ಲಿ ಏನೊ ಚೆನ್ನಾಗಿನೋಡಿಕೊಳ್ಳುತ್ತಾರೆ. ದುಡಿಯುವವರು ಕೂಡಾ ನಿಷ್ಠೆಯಿಂದ ತನ್ನ ಸಾಹುಕಾರನ ಏಳಿಗೆಗಾಗಿ,ಅನ್ನ ಕೊಟ್ಟ ಋುಣಕ್ಕಾಗಿ ಶ್ರಮವಹಿಸಿ ಬೆವರುಹರಿಸಿ ದುಡಿಯುತ್ತಾರೆ.

ಮುಪ್ಪು ಎನ್ನುವುದು ಪ್ರಕೃತಿದತ್ತ ಸಹಜ ಮುಪ್ಪು ಯಾರನ್ನೂ ಕಾಡದೇ ಬಿಡುವುದಿಲ್ಲ ತೋಟದಲ್ಲಿ ದುಡಿಯುವವ ಕೂಡ ಇದರಿಂದ ಹೊರತಾಗಿಲ್ಲ ….ದುಡಿಯುವ ಸಮಯದಲ್ಲಿ ಬೆನ್ನೆಲುಬಾಗಿ ನಿಂತಿದ್ದ ಇವರನ್ನು ಮುಪ್ಪಿನ ಕಾಲದಲ್ಲಿ ಕೆಲಸಕ್ಕೆ ಬಾರದವನು ಎಂದು ಹೊರ ದೂಡುವುದು ಎಷ್ಟು ಸರಿ…? ಅವರು ಕೂಡ ನಮ್ಮ ನಿಮ್ಮಂತೆ ಮನುಷ್ಯರಲ್ಲವೇ ವಯಸ್ಸಾದಾಗ ಶಕ್ತಿ ಹೀನರಾಗಿ, ಅರಳು ಮರುಳಾಗಿ ಆಡುವುದು ಸಹಜ.. ಹಾಗಂತ ನಿಮ್ಮ ಅಭ್ಯುದಯಕ್ಕಾಗಿ ದುಡಿದಿದ್ದ ಇವರನ್ನು ಜೀವನದ ಸಂಧ್ಯಾ ಕಾಲದಲ್ಲಿ ಬೆಳಕಾಗ ಬೇಕಾಗಿದ್ದ ನೀವುಗಳೇ ಹೊರದಬ್ಬಿದರೆ.. ಇವರು ಹೋಗುವುದಾದರೂ ಎಲ್ಲಿಗೆ ..?ನಿಮ್ಮನ್ನು ನಂಬಿ ನೀಡುವ ಅನ್ನಕ್ಕಾಗಿ ನಿಮಗೆ ಋಣಿಯಾಗಿ ನಿಮ್ಮ ಏಳಿಗೆಗಾಗಿ ದುಡಿದವರು ಅಲ್ಲವೇ ಇವರು ದಯಮಾಡಿ ಇವರು ಕೂಡ ನಮ್ಮ ನಿಮ್ಮಂತೆ ಮಾನವರು ಎಂದು ಅರಿತು ಅವರ ಕಣ್ಣೀರನ್ನು ಒರೆಸಿ.. ಕೊನೆಗಾಲದಲ್ಲಿ ನೆಮ್ಮದಿಯ ಬದುಕು ಸಾಗಿಸಲು ಅವಕಾಶ ಮಾಡಿಕೊಡಿ ಇಲ್ಲವೇ ಅವರಿಗೊಂದು ನೆಲೆ ಕಲ್ಪಿಸಿ ಅಥವಾ ಯಾವುದಾದರೂ ವೃದ್ಧಾಶ್ರಮಕ್ಕೆ ಸೇರಿಸಿ ಪುಣ್ಯ ಕಟ್ಟಿಕೊಳ್ಳಿ ಅದು ಬಿಟ್ಟು ಇವರನ್ನು ಮುಪ್ಪು ಕಾಲದಲ್ಲಿ ಶಕ್ತಿ ಹೀನರಾದಾಗ ಕೆಲಸಕ್ಕೆ ಬಾರದವರೆಂದು…..ತಮಗೆ ಭಾರವದರೆಂದು… ಬೀದಿಗೆ ತಳ್ಳಬೇಡಿ.

ಸಹಜವಾಗಿ ಆಗುವ ಮುಪ್ಪಿನಿಂದಲೊ..ಯಾವುದೋ ಕಾರಣದಿಂದ ಬುದ್ಧಿಮಾಂದ್ಯ ರಾಗುವುದು ಇವರ ತಪ್ಪಲ್ಲ ದುಡಿಯುವ ಸಮಯದಲ್ಲಿ ಶಕ್ತಿ ಮೀರಿ ನಿಮ್ಮ ಸಂಪತ್ತಿನ ಅಭಿವೃದ್ಧಿಗಾಗಿ ದುಡಿದಿರುತ್ತಾರೆ ಎನ್ನುವುದನ್ನು ಮರೆಯದಿರಿ ಮಾಲೀಕರೆ….

ನಿರ್ಗತಿಕ ಎಂಬ ಹಣೆಪಟ್ಟಿ ಅಂಟಿಸಿಕೊಂಡು ವೃದ್ಧರಾಗಿ ಬೀದಿಗೆ ಬೀಳುವ ಇವರ ಬದುಕು ಚಿಂತಾಜನಕ… ಶೋಚನೀಯ …ಸಾವು ಕ್ರೂರವಲ್ಲ ..ಸಾವಿನ ದವಡೆಯಲ್ಲಿರುವ ಇಂಥವರ ನೋವಷ್ಟೇ ಭಯಾನಕ …

ಸುಕ್ಕುಗಟ್ಟಿದ ಮುಖ, ನಿಸ್ತೇಜ ಕಣ್ಣುಗಳು, ಊಟ ಮಾಡದೆ ಅದೆಷ್ಟೋ ದಿನಗಳಾಗಿತ್ತು ಎಂಬಂತೆ ಇದ್ದ ಕರ್ಕಶ ದೇಹ, ವಯೋಸಹಜ ಮುಪ್ಪು, ಬುದ್ಧಿಮಾಂದ್ಯನಂತಾಗಿ ನಾನು ಎಲ್ಲಿದ್ದೇನೆ.. ಎಲ್ಲಿದ್ದೆ .. ಎಂಬ ಅರಿವೇ ಇಲ್ಲದೆ ರಸ್ತೆಯ ತಂಗುದಾಣದ ಮೂಲೆಯೊಂದರಲ್ಲಿ ನರಳುತ್ತಾ ಬಿದ್ದಿದ್ದನ್ನು ಕಂಡ ನನ್ನ ಮನ ಮಮ್ಮಲ ಮರುಗಿತ್ತು.😓

ತನ್ನ ಪೂರ್ವಾಪರ ತಿಳಿಯದೆ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದ ಇವರು ಏನನ್ನು ಹೇಳಲಾರದಷ್ಟು ನಿಶ್ಶಕ್ತಿಯಲ್ಲಿದ್ದರು ತನ್ನ ನೆನಪಿನ ಶಕ್ತಿಯನ್ನು ಕಳೆದುಕೊಂಡು ಅರೆಬರೆ ನೆನಪಿನಲ್ಲಿ ನಾನು ತೋಟದ ಕೆಲಸ ಮಾಡುತ್ತಿದ್ದೆ ಆ ತೋಟ ಈ ತೋಟ ಎಂದು ಸಿಕ್ಕ ಸಿಕ್ಕ ಕಡೆ ಕೈ ತೋರಿಸುತ್ತಾ ಮರುಗುತ್ತಿದ್ದನು ನೋಡಿದರೆ ಎಂಥವರ ಮನಸ್ಸು ಕರಗದಿರದ್ದು ಅವರನ್ನು ಆಶ್ರಮಕ್ಕೆ ಸೇರಿಸಲು ಎಷ್ಟೊ ಪ್ರಯತ್ನ ಪಟ್ಟರೂ ಕೂತಲ್ಲಿಂದ ಒಂದು ಚುರು ಕದಲಲಿಲ್ಲ ನನ್ನಲ್ಲಿದ್ದ ಚೂರುಪಾರು ತಿಂಡಿ ತಿನಿಸು ನೀರನ್ನು ಕೊಟ್ಟಾಗ ಅವಸರ ಅವಸರವಾಗಿ ತಿನ್ನುತ್ತಿದ್ದುದನ್ನು ನೋಡಿದರೆ ಜೀವನ ಇಷ್ಟೇ ಅವಶ್ಯಕತೆ ಇದ್ದಾಗ ಬೇಕು ಇಲ್ಲದಿದ್ದಾಗ ಬೀದಿಗೆ ಬೀಳೊ ಸ್ಥಿತಿ ಇಂಥವರದ್ದು .

ಇವರನ್ನು ನೋಡಿ ಏನೇ ಆದರೂ ಇವರಿಗೊಂದು ನೆಲೆ ಕಲ್ಪಿಸಿ ಕೊಟ್ಟೇ ಕೊಡುತ್ತೇನೆ ಎಂಬ ಸಂಕಲ್ಪದಿಂದ ಭಾರವಾದ ಮನಸ್ಸಿನಿಂದ ಹಿಂತಿರುಗಿದೆ ಮುಂದಿನ ದಿನಗಳಲ್ಲಿ ಇವರು ಕೆಲಸ ಮಾಡುತ್ತಿದ್ದ ಮಾಲೀಕರನ್ನು ಪತ್ತೆ ಹಚ್ಚಲು ಅಸಾಧ್ಯವಾದಲ್ಲಿ ವೃದ್ಧಾಶ್ರಮಕ್ಕೆ ಸೇರಿಸಿ ಇವರಿಗೊಂದು ನೆಮ್ಮದಿಯ ಬದುಕು ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ.

ಕೊನೆಯ ಮಾತು:- ಹುಟ್ಟು ಸಾವುಗಳ ನಡುವಿನ ಬದುಕಿನಲ್ಲಿ ಮಾನವೀಯತೆ ಸಾಯದಿರಲಿ. ಮಾನವೀಯತೆ ಇದ್ದರೆ ನೀ ಮನುಷ್ಯನಾಗಿ ಹುಟ್ಟಿರುವುದಕ್ಕೆ ಸಾರ್ಥಕ.. ಮಾನವೀಯತೆಯ ಮರೆತ ಮನುಷ್ಯ ಮೃಗದಂತೆ….ಮಾನವೀಯತೆಯಿಂದ ಮೆರೆದ ಮನುಜ ಮಹಾದೇವನಂತೆ …ಹಸಿದ ಹೊಟ್ಟೆ ನೊಂದ ಮನಸ್ಸು ಕಣ್ಣಿದ್ದವರಿಗೆಲ್ಲ ಕಾಣಲ್ಲ…ಅದು ತಿಳಿಯೊದು ಮಾನವೀಯತೆ ಇದ್ದವರಿಗೆ ಮಾತ್ರ ಮನುಷ್ಯನ ಅಸ್ತಿತ್ವಕ್ಕೆ ನಿಜವಾದ ಬೆಲೆ ಇರುವುದು ಅವನಲ್ಲಿರುವ ಅಂತಃಕರಣದ ಮಾನವೀಯತೆಯಿಂದ .

ಉಮೇಶ್ ಗೌಡ, ಸಮಾಜ ಸೇವಕರು

.

error: Content is protected !!