ತೆಂಗಿನ ಮರಕ್ಕೆ ಹೆಚ್ಚು ನೀರೇಕೆ ಬೇಕು…?

ತೆಂಗಿನ ಮರ ಎಂದರೆ ಭಾರತೀಯರಿಗೆ ಪೂಜ್ಯ ಭಾವ. ತೆಂಗಿನ ಮರವನ್ನು ಕಲ್ಪವೃಕ್ಷ ಎಂತಲೂ ಕರೆಯುತ್ತಾರೆ. ಏಕೆಂದರೆ ತೆಂಗಿನಮರ ಕೊಡುವ ತೆಂಗಿನ ಕಾಯಿ, ಇದರ ಎಲೆ/ಗರಿ, ಕತ್ತ, ಕಾಂಡ ಎಲ್ಲ ಉಪಯೋಗಕಾರಿಯಾಗಿವೆ. ತೆಂಗಿನ ಮರದ ಪ್ರತಿಯೊಂದು ಭಾಗವು ಮನುಷ್ಯನಿಗೆ ಬಹುಪಯೋಗಿ. ಭಾರತದಲ್ಲಿ ಹೆಚ್ಚಾಗಿ ತೆಂಗು ಕೃಷಿ ಮಾಡುವ ರೈತರಿದ್ದಾರೆ. ಕೆಲ ರೈತರು ಕನಿಷ್ಠ ಪ್ರಮಾಣದಲ್ಲಿ ತೆಂಗಿನ ಮರಕ್ಕೆ ನೀರುಣಿಸುವ ಕೆಲಸ ಮಾಡ್ತಾರೆ. ಆದ್ರೆ ತೆಂಗಿನ ಮರಕ್ಕೆ ಹೆಚ್ಚು ನೀರು ಕೊಟ್ಟಷ್ಟೂ ಫಲ ಹೆಚ್ಚುತ್ತದೆ ಎನ್ನುತ್ತಾರೆ ಕೃಷಿ ತಜ್ಞನರು. ಹಾಗಿದ್ರೆ ತೆಂಗಿನ ಮರಕ್ಕೆ ಹೆಚ್ಚಾಗಿ ನೀರು ಯಾಕೆ ಕೊಡಬೇಕು ಅನ್ನೋದನ್ನು ಹೇಳುತ್ತೇವೆ.

ಕೆಲವು ಪ್ರದೇಶಗಳಲ್ಲಿ ಬೇಸಿಗೆ, ಮಳೆಗಾಲ ಈ ಎರಡು ಕಾಲಾವಧಿಯಲ್ಲಿ ಏಕ ಪ್ರಕಾರದ ತೆಂಗಿನ ಕಾಯಿ ಇರುತ್ತದೆ. ಆದ್ದರಿಂದ ಅಂಗಡಿಗಳಲ್ಲಿ ಬೇಸಿಗೆಯಲ್ಲೂ ಎಳನೀರು ಕುಡಿಯಲು ಸಿಗುತ್ತದೆ.

ಒಂದು ತೆಂಗೊನ ಮರಕ್ಕೆ ದಿನಕ್ಕೆ 30-40 ಲೀ ನೀರು ಸಾಕು ಎನ್ನುತ್ತಾರೆ. ಆದರೆ ಅಷ್ಟು ನೀರು ಸಾಕಾಗುವುದಿಲ್ಲ. ದಿನಕ್ಕೆ ಕನಿಷ್ಠ 100 ಲೀನಷ್ಟು ನೀರು ಬೇಕಾಗುತ್ತದೆ. ತೆಂಗಿನ ಮರಕ್ಕೆ ನೀರು ಕೊಡುವ ಉದ್ದೇಶ ಮರದ ಸುತ್ತ 3-4 ಮೀ ಸುತ್ತಳತೆಯವರೆಗಿನ ಮಣ್ಣು ತೇವವಾಗಿ ಸಡಿಲವಾಗಿರಲು. ತೇವಾಂಶ ಇದ್ದರೆ ಮಾತ್ರ ಮಣ್ಣು ಸಡಿಲವಾಗುತ್ತದೆ. ಮಣ್ಣು ಸಡಿಲ ಇದ್ದರೆ ಮಾತ್ರ ಬೇರುಗಳು ಸಲಲಿತವಾಗಿ ಬೆಳೆದು ಮರಕ್ಕೆ ನೀರು ಪೂರೈಕೆ ಮಾಡುತ್ತಿರುತ್ತವೆ.

ಹೆಚ್ಚು ನೀರು ಯಾಕೆ ಬೇಕು

ತೆಂಗಿನ ಮರ 12 ತಿಂಗಳಲ್ಲೂ ಹೂ ಗೊಂಚಲು ಬಿಡುವ ಸಸ್ಯ. ಪ್ರತಿ ಹೂ ಗೊಂಚಲಿನಲ್ಲಿ ಸರಾಸರಿ 25ಕ್ಕೂ ಹೆಚ್ಚು ಕಾಯಿಯಾಗುವ ಮಿಡಿಗಳು ಇರುತ್ತವೆ. ನೀರಿನ ಲಭ್ಯತೆ ಧಾರಾಳ ಇದ್ದಾಗ ಅದರಲ್ಲಿ ಹೆಚ್ಚಿನವು ಕಾಯಿ ಕಚ್ಚಿಕೊಳ್ಳುತ್ತವೆ. ಕಡಿಮೆಯಾಗುವ ಸಮಯದಲ್ಲಿ ಹೆಚ್ಚಿನ ಉದುರುತ್ತವೆ. ಮಳೆಗಾಲ ಪ್ರಾರಂಭದ ಸಮಯ ಮತ್ತು ಮಳೆಗಾಲ ಮುಗಿಯವವರೆಗಿನ ಅವಧಿಯಲ್ಲಿ ಹೊರ ಬರುವ ಹೂ ಗೊಂಚಲಿನ ಕಾಯಿ ಹೆಚ್ಚು ಕಾಯಿ ಕಚ್ಚುತ್ತವೆ. ಚಳಿಗಾಲದ ನಂತ್ರ ಮೇ ತಿಂಗಳವರೆಗೆ ಬಿಡುವ ಹೂ ಗೊಂಚಲಿನಲ್ಲಿ ಕಾಯಿಗಳು ತುಂಬಾ ಕಡಿಮೆಯಾಗುತ್ತವೆ. ಎಲ್ಲಾ ಧಾರಾಳ ನೀರಿನ ಲಭ್ಯತೆ ಇರುತ್ತದೆಯೋ ಅಲ್ಲಿ ವರ್ಷದ ಎಲ್ಲಾ ತಿಂಗಳುಗಳಲ್ಲಿ ಬರುವ ಹೂ ಗೊಂಚಲುಗಳಲ್ಲಿ ಹೆಚ್ಚು ಕಾಯಿ ಕಚ್ಚಿ ಅಧಿಕ ಫಸಲು ಇರುತ್ತದೆ.

ತೆಂಗು ಬೆಳೆಯುವ ಕರಾವಳಿ ತೀರ ಪ್ರದೇಶಗಳಲ್ಲಿ ಹೆಚ್ಚು ಇಳುವರಿ ದೊರೆಯುತ್ತದೆ. ಕಾರಣ ಅಲ್ಲಿ ವಾತಾವರಣದಲ್ಲಿ ತೇವಾಂಶದ ಜೊತೆಗೆ ನೀರಿನ ಮಟ್ಟ ತುಂಬಾ ಮೇಲೆ ಇರುತ್ತದೆ. ಮಣ್ಣು ತುಂಬಾ ಸಡಿಲವಾಗಿದ್ದು, ಬೇರುಗಳು 5 ಮೀ ತನಕ ಹಬ್ಬಿರುತ್ತದೆ.

ನೀರು ಹೇಗೆ ಕೊಡಬೇಕು

ನೀರಾವರಿ ಮಾಡುವಾಗ ಬುಡ ಭಾಗ ಒಂದೇ ಕಡೆ ಒದ್ದೆಯಾಗುವಂತೆ ಕೊಡುವುದು ಹೆಚ್ಚಿನ ಕಡೆಯಲ್ಲಿ ಹೊಂದಿಕೆಯಾಗಲಾರದು. ಎಷ್ಟು ವಿಸ್ತಾರದ ತನಕ ಬೇರು ಹಬ್ಬಿದೆಯೋ ಆ ತನಕದ ಮಣ್ಣು ತೇವಾಂಶವಾಗಿರುವಂತೆ ನೀರುಣಿಸುವ ವ್ಯವಸ್ಥೆ ಮಾಡಬೇಕು. ಆಗಬೇರುಗಳು ಹೆಚ್ಚು ಹೆಚ್ಚು ಆಹಾರ ಹೀರಿಕೊಳ್ಳುತ್ತದೆ. ಬಬ್ಲರ್ ಮೂಲಕ ನೀರುಣಿಸುವುದು ಉತ್ತಮ.

ಹನಿ ನೀರಾವರಿಯಲ್ಲಿ ಮರಕ್ಕೆ 6-7 ತನಕ ಡ್ರಿಪ್ಪರನ್ನು ಸುತ್ತಲೂ ಹಂಚಿ ಹಾಕಬೇಕು. ಮೈಕ್ರೋ ಟ್ಯೂಬ್ ಆಗಿದ್ದಲ್ಲಿ ಮರಕ್ಕೆ ನಾಲ್ಕೂ ದಿಕ್ಕಿಗೆ ಬೀಳುವಂತೆ ಅಳವಡಿಸಬೇಕು. ಹೀಗೆ ವ್ಯವಸ್ಥೆ ಇದ್ದರೆ ಕಾಯಿ ಹೆಚ್ಚಿ ಪ್ರಮಾಣದಲ್ಲಿ ಕಚ್ಚಿಕೊಳ್ಳುತ್ತದೆ. ತೆಂಗಿನ ಮರಕ್ಕೆ ನೆಲದ ಮೇಲುಭಾಗ ಒದ್‌ಎಯಾಗುವ ತರಹದ ನೀರಾವರಿ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಅದು ಗರಿಗಳು ಹಬ್ಬಿರುವ ತನಕ ಇರಬೇಕು. ಸಾವಯವ ತ್ಯಾಜ್ಯಗಳನ್ನು ಹಾಕಿ ತೇವಾಂಶ ಉಳಿಯುವಂತೆ ಮಾಡಬೇಕು.

error: Content is protected !!