fbpx

“ತುಳುವರು ಮತ್ತು ಆಟಿ ತಿಂಗಳು “

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಬೇರೆ ಬೇರೆ ರೀತಿಯ ವೇಷಭೂಷಣ ಭಾಷೆ ಸಂಸ್ಕೃತಿ ಪದ್ಧತಿ ಪರಂಪರೆ ನಂಬಿಕೆ ಆಚಾರ-ವಿಚಾರವನ್ನು ಕಾಣುವ ದೇಶ ನಮ್ಮ ಭಾರತ.

ಇಂತಹ ದೇಶದಲ್ಲಿ ಹಿಂದಿನಿಂದಲೇ ನಮ್ಮ ನೆಲ ಜಲದ ಸಂಸ್ಕೃತಿಯನ್ನು ಅದರಲ್ಲೂ ಬೇಸಾಯ ಪದ್ಧತಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ಭೂಪ್ರದೇಶದಲ್ಲಿ ತುಳುವಿನವರು ಮೊದಲಿಗರು.
ಭಾರತೀಯ ಕಾಲಮಾನ ಪದ್ಧತಿಯಲ್ಲಿ ಚಂದ್ರಮಾನ ಮತ್ತು ಸೂರ್ಯಮಾನ ಎನ್ನುವ ಎರಡು ಪದ್ಧತಿಗಳಿವೆ. ಇದರಲ್ಲಿ ಸೌರಮಾನ ಪದ್ಧತಿಯ ಕಾಲಕ್ಕೆ ಅನುಗುಣವಾಗಿ ಸರಿಯಾಗಿ ನಡೆದುಕೊಂಡು ಬಂದಿರುವ ಸಾಲಿನಲ್ಲಿ ತುಳುವಿನ ಅವರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ.

ಬಿಸು ಹಬ್ಬದ ಮೊದಲಾಗಿ ಪಗ್ಗು, ಬೇಶ,ಕಾರ್ತೆಲ್, ಎಂಬ ತುಳು ತಿಂಗಳುಗಳು ಕಳೆದು ಮತ್ತೆ ಪ್ರಾರಂಭವಾಗುವ ತಿಂಗಳೇ ಆಟಿ ತಿಂಗಳು.
ಆಟಿ ತಿಂಗಳು ಹಿಂದಿನ ತಲೆಮಾರಿನವರಿಗೆ ದೊಡ್ಡಮಟ್ಟದ ಸಂತೋಷ ಸಡಗರದಿಂದ ಕೂಡಿದ ತಿಂಗಳಾಗಿತ್ತು ಈ ತಿಂಗಳಿನಲ್ಲಿ ಬಗೆ ಬಗೆಯ ಆಹಾರ ಪದಾರ್ಥ ಶೈಲಿ ಮನೆಯಲ್ಲಿ ಕಾಣಸಿಗುತ್ತಿತ್ತು. ತುಳುವಿನ ವರು ವಾಸವಿರುವ ಬೇರೆ ಬೇರೆ ಜಿಲ್ಲೆಯಲ್ಲಿ ಅಲ್ಲಿನ ಪರಿಸರಕ್ಕೆ ಹೊಂದಿಕೊಂಡು ಅಲ್ಲಿನ ಪದ್ಧತಿ ಪರಂಪರೆಗೆ ಸರಿಯಾಗಿ ಆಹಾರ ಶೈಲಿ ಮಾಡಿಕೊಂಡು ಬಂದಿರುತ್ತಾರೆ. ಕೊಡಗು ಜಿಲ್ಲೆಯಲ್ಲಿ ಆಟಿ ತಿಂಗಳು ಪ್ರಾರಂಭವಾಗಿ 18ನೇ ದಿನದಂದು ಆಟಿ ಪಾಯಸದ ಎಲೆಯಲ್ಲಿ ಪಾಯಸ ಮಾಡಿ ಸೇವಿಸಿದರೆ.. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ‘ಪಾಲೆ ‘ಮರದ ತೊಗಟೆಯಿಂದ ಕಷಾಯ ತಯಾರಿಸಿ ಬೆಳಗಿನ ಜಾವ ಖಾಲಿ ಹೊಟ್ಟೆಗೆ ಕುಡಿಯುತ್ತಾರೆ. ಆಟಿ ಅಮಾವಾಸ್ಯೆಯಂದು ಹಾಲೆ ಮರದ ಕಷಾಯ ಕುಡಿಯುವ ಪದ್ಧತಿ ಹಿಂದಿನಿಂದಲೂ ಬೆಳೆದುಬಂದಿದೆ. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ವಿಶೇಷ ಸಂಪ್ರದಾಯವಿದೆ. ಸೂರ್ಯೋದಯಕ್ಕೆ ಮೊದಲೇ ಹಾಲೆಮರದ ಸನಿಹ ಹೋಗಿ ಕಲ್ಲಿನಿಂದ ಜಜ್ಜಿ ಆ ಮರದ ತೊಗಟೆಯನ್ನು ತೆಗೆದುಕೊಂಡು ಬರುತ್ತಾರೆ. ತೊಗಟೆಯನ್ನು ತೆಗೆಯುವಾಗ ಕಬ್ಬಿಣದ ವಸ್ತುವನ್ನು ತಾಗಿಸಬಾರದು ಎಂಬುದು ಪ್ರತೀತಿ. ಅಂದು ಮನೆಮಂದಿಯೆಲ್ಲರೂ ಆರೋಗ್ಯವರ್ಧಕ ಹಾಲೆಯ ಅತಿ ಕಹಿಯಾದ ರಸವನ್ನು ಕುಡಿಯುತ್ತಾರೆ. ಹಾಲೆಮರದ ರಸವು ಅತಿಯಾಗಿ ಉಷ್ಣಾಂಶದಿಂದ ಕೂಡಿರುವುದರಿಂದ ಮೆಂತೆ, ತೆಂಗಿನ ಕಾಯಿ ತುರಿ ಹಾಕಿದ ಗಂಜಿಯನ್ನು ಕುಡಿಯುತ್ತಾರೆ. ಹಾಲೆ ತೊಗಟೆಯ ರಸ ಒಂದು ವರ್ಷದ ಕಾಲ ಯಾವುದೇ ರೋಗರುಜಿನಗಳನ್ನು ದೂರ ಮಾಡುತ್ತದೆ ಎಂಬುದು ನಂಬಿಕೆ. ಹಾಲೆ ಮರದ ರಸದಿಂದ ಜ್ವರ ಕ್ಯಾನ್ಸರ್ನಂತಹ ಕಾಯಿಲೆಗಳನ್ನು ಗುಣಪಡಿಸುವ ಹಲವು ಬಗೆಯ ಔಷಧೀಯ ಗುಣವಿದೆ ಆಯುರ್ವೇದ ಔಷಧಿಗಳಲ್ಲಿ ಇದು ದಾರಾಳವಾಗಿ ಬಳಕೆಯಾಗುತ್ತಿದೆ.

ತುಳುವಿನ ಅವರಲ್ಲಿ ಆಟಿ ತಿಂಗಳಿನಲ್ಲಿ ಬರುವ ಕಷ್ಟ ಸಂಕಷ್ಟಗಳಿಗೆ ಹಿಂದೆ ತೀರಿಕೊಂಡ ಹಿರಿಯರು ನಮ್ಮನ್ನು ರಕ್ಷಣೆ ಮಾಡುತ್ತಾರೆ ನಮಗೆ ಯಾವ ರೀತಿಯ ದೋಷ ಬರುವುದಿಲ್ಲ ಎಂಬ ನಂಬಿಕೆಯಿಂದ ಆಟಿಅಮವಾಸ್ಯೆ ದಿನದಲ್ಲಿ ವಿವಿಧ ರೀತಿಯ ಆಹಾರ ಪದಾರ್ಥವನ್ನು ಆಗೆಲು ಬಳಸುವ ಕ್ರಮ ತುಳುವಿನ ಅವರಲ್ಲಿದೆ. ತುಳುನಾಡಿನಲ್ಲಿ ಸರ್ವವಿಧದ ಅನಿಷ್ಟಗಳನ್ನು ದೂರಮಾಡಲು ಆಟಿ ತಿಂಗಳಿನಲಿ ಆಗಮಿಸುವ ಮಹಾವಿಷ್ಣು ದೇವರ ಅವತಾರದಲ್ಲಿ ವೇಷತೊಟ್ಟು ಬರುವ ಆಟಿಕಳಂಜ ಎಲ್ಲರ ಮನೆ ಮನೆಗೆ ಹೋಗಿ ಆಶೀರ್ವದಿಸು ವುದು ಕೂಡ ವಾಡಿಕೆ ಆಗಿದೆ.

ಅಂದಿನ ಆ ಕಾಲದಲ್ಲಿ ಆಟಿ ತಿಂಗಳಿನಲ್ಲಿ ಬೇಸರ ಕಳೆಯಲು ‘ಚೆನ್ನಮಣೆ’ ಆಟವನ್ನು ಆಡುತ್ತಿದ್ದರು. ಈ ರೀತಿ ಬೇಸರ ಕಳೆಯಲು ಬೇರೆಬೇರೆ ರೀತಿಯ ಸಣ್ಣಪುಟ್ಟ ಆಟ ಪಾಡ್ದನ ,ಕಥೆ ,ಕವಿತೆಯನ್ನು ಹೇಳುತ್ತಿದ್ದರು.
ಹೆಚ್ಚಾಗಿ ಆಟಿ ತಿಂಗಳಿನಲ್ಲಿ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗದೆ ವಿಪರೀತ ಮಳೆಯಿಂದಾಗಿ ಮನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು. ಆ ತಿಂಗಳಿಗೆ ಬೇಕಾಗಿರುವ ಎಲ್ಲಾ ಆಹಾರ ಇನ್ನಿತರ ಸಾಮಗ್ರಿಯನ್ನು ಮನೆಯಲ್ಲಿ ದಾಸ್ತಾನು ಇಡುವುದು ಆ ಕಾಲದ ಹಿರಿಯರು ಮಾಡಿಕೊಂಡು ಬರುತ್ತಿದ್ದರು. ಆಟಿ ತಿಂಗಳಿನಲ್ಲಿ ಮತ್ತೊಂದು ವಿಶೇಷತೆಯೇನೆಂದರೆ ಹೊಸದಾಗಿ ಮದುವೆಯಾಗಿರುವ ವಧು ತನ್ನ ತವರು ಮನೆಗೆ ಹೋಗುವ ಕ್ರಮ ಅ ಕಾಲದಿಂದಲೂ ನಡೆದುಕೊಂಡು ಬಂದಿದೆ.
ಒಟ್ಟಿನಲ್ಲಿ ತುಳುವಿನ ವರಿಗೆ ಆಟಿ ತಿಂಗಳು ವಿಶೇಷವಾದ ತಿಂಗಳು ಆಗಿದೆ.

ಯಾವುದೇ ಒಂದು ಸಂಸ್ಕೃತಿ ವಿಕೃತಿ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕಾಗಿದೆ.

ಪಿ.ಎಂ .ರವಿ ಸದಸ್ಯರು
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ

ಪಿ

error: Content is protected !!