ತಾಯಿ ಅಂತ್ಯಕ್ರಿಯೆಗೆ ಆಕ್ಸಿಜನ್ ಸಿಲಿಂಡರ್ ಹೊತ್ತು ಬಂದ ಮಗ!

ಬೆಂಗಳೂರು(ಏ.22): ಕುಟುಂಬದ ನಾಲ್ಕು ಜನರಿಗೆ ಕೊರೋನಾ. ತಾಯಿ ಸೋಂಕಿಗೆ ಬಲಿ. ಆಕೆಯ ಅಂತ್ಯ ಸಂಸ್ಕಾರಕ್ಕೆ ಸೋಂಕು ಗೆದ್ದರೂ ಆಕ್ಸಿಜನ್‌ ಸಿಲಿಂಡರ್‌ನೊಂದಿಗೆ ಚಿತಾಗಾರಕ್ಕೆ ಆಗಮಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಪುತ್ರ!

ಇದು ರಾಜಧಾನಿಯ ಕೊರೋನಾ ಸೋಂಕಿತ ಕುಟುಂಬದ ದುರಂತ ಕಥೆ. ಈ ಕುಟುಂಬದಲ್ಲಿ ನಾಲ್ವರು ಕೊರೋನಾ ಸೋಂಕಿಗೆ ತುತ್ತಾಗಿದ್ದು, ಕೊನೆಗೆ ತಾಯಿ ಕೊರೋನಾಗೆ ಬಲಿಯಾದರು. ಆಕೆಯ ಅಂತ್ಯಸಂಸ್ಕಾರಕ್ಕೆ ಪೀಣ್ಯದ ಚಿತಾಗಾರಕ್ಕೆ ಬಂದಿದ್ದ ಚೇತನ್‌ ಎಂಬುವರು ಕೊರೋನಾ ಇಲ್ಲ ಎನ್ನುವವರು ಮೂರ್ಖರು. ಕೊರೋನಾ ಬಗ್ಗೆ ಯಾರೂ ನಿರ್ಲಕ್ಷ್ಯ ಮಾಡಬೇಡಿ ಎಂದು ಕೈ ಮುಗಿದು ಮನವಿ ಮಾಡಿದರು.

ಕರುನಾಡಿನ ಕೊರೋನಾ ಕಣ್ಣೀರ ಕತೆ; ಚಿಕಿತ್ಸೆ ಸಿಗುತ್ತಿಲ್ಲ, ಶವಗಾರದಲ್ಲೂ ನೆಮ್ಮದಿ ಇಲ್ಲ!

ನಾನು ಹಾಗೂ ತಂದೆ ಮೊನ್ನೆಯಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದೇವೆ. ಚಿಕಿತ್ಸೆ ಫಲಿಸದೇ ತಾಯಿ ಕಳೆದುಕೊಂಡಿದ್ದೇವೆ. ಕೊರೋನಾದಿಂದ ಗುಣಮುಖನಾಗಿದ್ದರೂ ವೈದ್ಯರ ಸಲಹೆ ಮೇರೆಗೆ ಆಕ್ಸಿಜನ್‌ ಸಿಲಿಂಡರ್‌ ಜೊತೆಯಲ್ಲೇ ಇರಿಸಿಕೊಂಡು ಓಡಾಡುತ್ತಿದ್ದೇನೆ. ಸ್ಯಾಚುರೇಷನ್‌ ಮಟ್ಟ ಕಡಿಮೆಯಾದರೆ ಆಕ್ಸಿಜನ್‌ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಇಲ್ಲಿಗೂ ಆಕ್ಸಿಜನ್‌ ಸಿಲಿಂಡರ್‌ ತಂದಿದ್ದೇನೆ ಎಂದರು.

ನಾನು ಸೋಂಕಿಗೆ ತುತ್ತಾಗಿದ್ದಾಗ ಖಾಸಗಿ ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ದಿನಕ್ಕೆ ಕನಿಷ್ಠ ಇಬ್ಬರು ಸೋಂಕಿತರು ಕಣ್ಣೆದುರೇ ಸಾವನಪ್ಪುತ್ತಿದ್ದರು. ಹೀಗಾಗಿ ಯಾರೂ ಕೊರೋನಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ ಎಂದು ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ.

error: Content is protected !!