ಟಿಪ್ಪು ಎಕ್ಸ್ ಪ್ರೆಸ್ ಬದಲು ಒಡೆಯರ್ ಎಕ್ಸ್ ಪ್ರೆಸ್ ಎಂದು ಹೆಸರಿಡಿ: ಸಂಸದ ಪ್ರತಾಪ್ ಸಿಂಹ

ಮೈಸೂರು: ಟಿಪ್ಪು ಎಕ್ಸ್‌ಪ್ರೆಸ್ ಬದಲು ಮೈಸೂರಿಗೆ ರೈಲು ಸಂಪರ್ಕ ತಂದ ಮಹಾರಾಜರ ಕೊಡುಗೆ ಪ್ರತೀಕವಾಗಿ ಒಡೆಯರ್ ಎಕ್ಸ್‌ಪ್ರೆಸ್ ಎಂದು ಹೆಸರಿಡುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಸಂಸದ ಪ್ರತಾಪ್ ಸಿಂಹ ಲಿಖಿತ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು ಮೈಸೂರು ರಾಜ್ಯ ಬೆಂಗಳೂರು-ಮೈಸೂರು ನಡುವೆ 1870ರಲ್ಲಿ ಯೋಜನೆ ರೂಪಿಸಲಾಯಿತು. 1882ರ ಫೆ.25ರಂದು ರೈಲ್ವೆ ಸೇವೆ ಆರಂಭವಾಯಿತು. 10ನೇ ಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ರೈಲ್ವೆ ಅಭಿವೃದ್ಧಿಗೆ ಮಹತ್ತರ ಕಾಣಿಕೆ ನೀಡಿದ್ದಾರೆ.
ಹಾಗಾಗಿ ಮೈಸೂರು-ಬೆಂಗಳೂರು ನಡುವೆ ಪ್ರತಿನಿತ್ಯ ಸೇವೆ ನೀಡುತ್ತಿರುವ ಟಿಪ್ಪು ಎಕ್ಸ್‌ಪ್ರೆಸ್ ಹೆಸರನ್ನು ಒಡೆಯರ್ ಎಕ್ಸ್‌ಪ್ರೆಸ್ ಎಂದು ಬದಲಾಯಿಸಿ ಮೈಸೂರು ಒಡೆಯರಿಗೆ ಗೌರವ ಸಲ್ಲಿಸಬೇಕೆಂದು ಕೋರಿದ್ದಾರೆ. ಜತೆಗೆ ಮೈಸೂರು ರೈಲ್ವೆ ನಿಲ್ದಾಣವನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ರೈಲ್ವೆ ನಿಲ್ದಾಣವೆಂದು ಮರು ನಾಮಕರಣ ಮಾಡಬೇಕೆಂದೂ ಮನವಿ ಮಾಡಿದ್ದಾರೆ.
ಬೆಂಗಳೂರು-ಮೈಸೂರು ನಡುವೆ ಜೋಡಿ ರೈಲು ಮಾರ್ಗ ಯೋಜನೆ ಬಳಿಕ ಹೈ ಸ್ಪಿಡ್ ರೈಲು ಯೋಜನೆಗೆ ಉದ್ದೇಶಿಸಲಾಗಿದೆ. ಚೆನ್ನೈ- ಬೆಂಗಳೂರು- ಮೈಸೂರು ಸೇರಿ ದೇಶದ 7 ಕಡೆಗಳಲ್ಲಿ ಹೈ ಸ್ಪೀಡ್ ರೈಲು ಯೋಜನೆ ಅನುಷ್ಠಾನಕ್ಕೆ ರೈಲ್ವೆ ಇಲಾಖೆ ಮುಂದಾಗಿದೆ.
ಈ ಯೋಜನೆ ಸಂಬಂಧ ಕೇಂದ್ರ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ರಾಜ್ಯಸಭೆಗೆ ಶುಕ್ರವಾರ ಮಾಹಿತಿ ನೀಡಿದ್ದಾರೆ. ಸರ್ವೆ ಸೇರಿ ವಿಸ್ತೃತ ಯೋಜನಾ ವರದಿ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ದೆಹಲಿ-ವಾರಾಣಸಿ, ಮುಂಬೈ-ನಾಗಪುರ್, ದೆಹಲಿ-ಅಹಮದಾಬಾದ್, ಮುಂಬೈ-ಹೈದ್ರಾಬಾದ್, ಚೆನ್ನೈ-ಬೆಂಗಳೂರು-ಮೈಸೂರು, ವಾರಾಣಸಿ-ಹೌರ, ದೆಹಲಿ-ಅಮೃತ್‌ಸರ್‌ಗೆ ಹೈ ಸ್ಪೀಡ್ ರೈಲು ಯೋಜನೆ ರೂಪಿಸಲಾಗಿದೆ. ವಿಮಾನಯಾನ ಆರಂಭದ ಜತೆಗೆ ಹೈ ಸ್ಪೀಡ್ ರೈಲು ಮೈಸೂರಿಗೆ ಬರುವಂತಾದರೆ ಮೈಸೂರು ಭಾಗದ ಅಭಿವೃದ್ಧಿಗೆ ವರದಾನವಾಗಲಿದೆ. ಮೈಸೂರು-ಬೆಂಗಳೂರು-ಮಾರ್ಗವಾಗಿ 473 ಕಿಲೋ ಮೀಟರ್ ಇದೆ. 3 ನಗರಗಳ ನಡುವಿನ ಸಂಪರ್ಕವೂ ಉದ್ಯಮದ ಬೆಳವಣಿಗೆಗೆ ಪೂರಕವಾಗಲಿದೆ ಎಂದಿದ್ದಾರೆ.