ಜೋರಿದೆ ಕೊರೊನಾ ಅಲೆ, ಗೆಣಸಿಗೆ ಸಿಗುತ್ತಿಲ್ಲ ‘ಬೆಲೆ’!

ವಿಶೇಷ ವರದಿ: ಗಿರಿಧರ್ ಕೊಂಪುಳೀರ

ಕೊಡಗು: ಇದು ಅಚ್ಚರಿಯಾದರೂ ಸತ್ಯ,ರಸ್ತೆ ಬದಿಯಲ್ಲೊ ಮಾರುಕಟ್ಟೆಯಲ್ಲಿ 30 ರಿಂದ 40 ರುಪಾಯಿ ಕೊಟ್ಟು ಮರಗೆಣಸು, ಸಿಹಿಗೆಣಸನ್ನು ಖರೀದಿಸಿರುತ್ತೀರಿ,ಆದರೆ ಬೆಳೆ ಬೆಳೆದ ರೈತ ಮಾರುತ್ತಿರುವ ಬೆಲೆ ಕೇಳಿದರೆ ಅಚ್ಚರಿ ಅನ್ನಿಸದೇ ಇರೋದಿಲ್ಲ. ಹೌದು ರೈತ ದಲ್ಲಾಳಿಗೆ ಸಿಹಿಗೆಣಸನ್ನು ಕೆ.ಜಿಗೆ 2 ರುಪಾಯಿಯಂತೆ ಮಾರಿದರೆ ಮರಗೆಣಸನ್ನು 3 ರುಪಾಯಿಯಂತೆ ಮಾರುತ್ತಿದ್ದಾನೆ. ಅದರಲ್ಲೂ ಗೆಣಸಿನ ಕೆಲಸಕ್ಕೆ ಕಾರ್ಮಿಕರಿಲ್ಲದೆ ಗೆಣಸು ಕೊಯಿಲು ಕಷ್ಟವಾದ್ದರಿಂದ ಖರೀದಿಸುವವರೇ ಅಗೆದು ತೆಗೆದರೆ, ಈ ಬೆಲೆಯ ಅರ್ಧದಷ್ಟು ಮಾತ್ರ ಸಿಗುತ್ತಿದೆ ಇಷ್ಟಕೆಲ್ಲಾ ಕಾರಣವಾಗಿರುವುದು ಕೊರೊನಾ ಮಹಾಮಾರಿ!

ಗುಡ್ಡೆಹೊಸೂರು, ಕೂಡ್ಲೂರು, ತೊರೆನೂರು, ಶ್ರೀರಂಗಾಲ, ಕೊಡಿಗೆ, ಚಿಕ್ಕತ್ತೂರು, ದೊಡ್ಡತ್ತೂರು, ಹೆಬ್ಬಾಲೆ, ಕಣಿವೆ ಹೀಗೆ ಸುತ್ತಮುತ್ತಲಿನ ಜಮೀನಿನಲ್ಲಿ ಹೇರಳವಾಗಿ ಬೆಳೆದಿರುವ ಗೆಣಸು ಸಿಕ್ಕಿದ ಬೆಲೆಗೆ ಮಾರಾಟ ಮಾಡುವಂತಾಗಿದೆ.
ಮರಗೆಣಸು ಮತ್ತು ಸಿಹಿಗೆಣಸು ಹೆಚ್ಚುದಿನ ಇಡುವಂತಿಲ್ಲ. ಮುಖ್ಯವಾಗಿ ಕೇರಳದ ಚಿಪ್ಸ್ ಮತ್ತು ಕೆಲವೊಂದು ಔಷಧಿ ಪದಾರ್ಥಗಳ ತಯಾರಿಕೆಗೆ ಇವುಗಳು ಇಲ್ಲಿಂದ ಮಾರಾಟವಾದರೂ, ಗಡಿಯಲ್ಲಿ ಯಾವುದೇ ವಾಹನ ಪ್ರವೇಶಕ್ಕೆ ಅವಕಾಶವಿಲ್ಲದಿರುವುದು ಭಾರೀ ಹೊಡೆತ ಬಿದ್ದಿದೆ.

ಈ ಹಿಂದೆ ಶುಂಠಿ ಬೆಳೆದು ಕೈ ಸುಟ್ಟುಕೊಂಡ ರೈತರು ಕೆಜಿಗೆ 8 ರಿಂದ 10 ರುಪಾಯಿ ಕನಸು ಹೊತ್ತು ಬೆಳೆದರು. ಫಲ ಕೊಡುವ ಸಮಯದಲ್ಲಿ ಧಿಡೀರ್ ಬೆಲೆ ಕುಸಿತದಿಂದ ರೈತರಿಗೆ ದಿಕ್ಕೇ ತೋಚದಂತಾಗಿದೆ. ಇನ್ನು ಈ ಬಾರಿಯಂತೆ ಲಾಕ್ ಡೌನ್ ನಿರೀಕ್ಷೆ ಮಾಡದ್ದ ರೈತರು ಕೊಳವೆ ಬಾವಿಗಳನ್ನೂ ತೆಗೆದು ನೀರು ಹಾಯಿಸಿ ಕೃಷಿ ಮಾಡಿದವರೂ ಇದ್ದಾರೆ. ಇದರ ಬಳ್ಳಿಗಳು ಹೈನುಗಾರಿಕೆಗೆ ಹಸುಗಳ ಆಹಾರಕ್ಕಾಗಿ ಬಳಕೆಯಾಗಿರುವುದು ಒಂದು ಲಾಭ ಬಿಟ್ಟರೆ, ಗಣಸು ಮಾತ್ರ ಹಾಳಾಗುವ ಭೀತಿಯಿಂದ ಅಗೆದು ಸಿಕ್ಕಿದ ಬೆಲೆಗೆ ಮಾರಾಟ ಮಾಡುವಲ್ಲಿ ತೊಡಗಿದ್ದಾರೆ ರೈತರು.

error: Content is protected !!