ಜುನಾ ಅಕಾಡದಿಂದ ಕುಂಭ ಮೇಳ ಸಮಾಪ್ತಿಯ ಘೋಷಣೆ!

ಹರಿದ್ವಾರ: ಉತ್ತರಾಖಂಡದ ಹರಿದ್ವಾರದಲ್ಲಿ ಕುಂಭಮೇಳವು ಸಾಂಕೇತಿಕವಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ ಕೆಲವೇ ಗಂಟೆಗಳ ಬಳಿಕ ಜುನಾ ಅಖಾಡದ ಪ್ರಮುಖರಾದ ಸ್ವಾಮಿ ಅವಧೇಶಾನಂದಗಿರಿ ಹಾಗೂ ಇನ್ನಿತರರು ಒಂದು ತಿಂಗಳ ಕುಂಭಮೇಳಕ್ಕೆ ಶೀಘ್ರ ಸಮಾಪ್ತಿಯನ್ನು ಘೋಷಿಸಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
“ನಮ್ಮ ಮೊದಲ ಆದ್ಯತೆಯೆಂದರೆ ಭಾರತದ ಜನರ ರಕ್ಷಣೆ (ಕೋವಿಡ್ ವಿರುದ್ಧ)ಆಗಿದೆ. ಕೊರೋನ ವೈರಸ್ ಸಾಂಕ್ರಾಮಿಕದ ದೃಷ್ಟಿಯಿಂದ, ನಾವು ಈಗಾಗಲೇ ಎಲ್ಲಾ ದೇವರುಗಳ ವಿಸರ್ಜನೆ ಮಾಡಿದ್ದೇವೆ. ಇದು ಜುನಾ ಅಖಾಡಾಗೆ ಕುಂಭದ ಅಂತ್ಯವಾಗಿದೆ” ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
“ಪ್ರಧಾನಮಂತ್ರಿ ನೀಡಿರುವ ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳಿ ಮತ್ತು ಉಳಿದ ಎರಡು ಶಾಹಿ ಸ್ನಾನ್ ಗಳಲ್ಲಿ ಸಾಂಕೇತಿಕವಾಗಿ ಪಾಲ್ಗೊಳ್ಳಿ ಎಂದು ವೀಡಿಯೋ ಸಂದೇಶದಲ್ಲಿ ಅವಧೇಶಾನಂದಗಿರಿ ಸ್ವಾಮಿ ತಿಳಿಸಿದ್ದಾರೆ.