ಜಿಲ್ಲೆಯ ಕ್ರೀಡಾಂಗಣ ಹಾಗೂ ಕ್ರೀಡಾ ಶಾಲೆ ಅಭಿವೃದ್ಧಿಗೆ ಅನುದಾನ: ಸಚಿವ ನಾರಾಯಣ ಗೌಡ

ಜಿಲ್ಲೆಯ ವಿರಾಜಪೇಟೆ ಕ್ರೀಡಾಂಗಣ ಮತ್ತು ಜನರಲ್ ತಿಮ್ಮಯ್ಯ ಕ್ರೀಡಾಂಗಣ ಉನ್ನತ್ತೀಕರಣಕ್ಕೆ 50 ಲಕ್ಷ ಹಾಗೂ ಕೂಡಿಗೆ ಕ್ರೀಡಾ ಶಾಲೆಯ ವಿವಿಧ ಆಭಿವೃದ್ಧಿ ಕಾಮಗಾರಿಗಳಿಗೆ 1.50ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಾ.ನಾರಾಯಣಗೌಡ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನೆ, ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಬಳಕೆ ಮತ್ತು ಬೆಳೆ ವಿಮೆ ಪರಿಹಾರ ಕುರಿತು ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು
ಜಿಲ್ಲೆಯ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಹಾಗೂ ಕ್ರೀಡಾಂಗಣ ಅಭಿವೃದ್ದಿಗಾಗಿ ರೂಪಿಸಿರುವ ಯೋಜನೆಗಳ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಕೋವಿಡ್-19 ಮಹಾಮಾರಿಯಿಂದಾಗಿ ಕೀಡಾ ಚಟುವಟಿಕೆಗಳು ಸ್ಥಗಿತವಾಗಿದ್ದು, ಜಿಲ್ಲೆಯ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಜಿಲ್ಲೆಯಲ್ಲಿ ಕ್ರೀಡೆ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದರು.
ಜಿಲ್ಲೆಯ ಪೊನ್ನಂಪೇಟೆ ಕ್ರೀಡಾ ವಸತಿ ನಿಲಯಕ್ಕೆ ಈಗಾಗಲೇ ಖೇಲೋ ಇಂಡಿಯಾ ಘೋಷಣೆಯಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಪಡಿಸಲಾಗುವುದು ಎಂದು ಸಚಿವರು ಹೇಳಿದರು.
ನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿಗೆ ಭೇಟಿ ನೀಡಿದ ಸಚಿವರು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯಗಳನ್ನು ವೀಕ್ಷಿಸಿದರು.
ನಂತರ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಸಚಿವರು ಕ್ರಿಡಾಂಗಣದ ಸ್ವಚ್ಛತೆ, ಆಗಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳು ವೀಕ್ಷಿಸಿದರು.