ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾ.ಪಂ ಚುನಾವಣೆ ಶಾಂತಯುತ

ಕೊಡಗು: ಗ್ರಾಮ ಪಂಚಾಯತ್ ಮೊದಲ ಹಂತದ ಚುನಾವಣೆ ಸಂಬಂಧ ಮಡಿಕೇರಿ ತಾಲ್ಲೂಕಿನ 108 ಕ್ಷೇತ್ರಗಳ 267 ಸ್ಥಾನಗಳಿಗೆ ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ 177 ಕ್ಷೇತ್ರಗಳ 462 ಸ್ಥಾನಗಳಿಗೆ ಮಂಗಳವಾರ ನಡೆದ ಮತದಾನ ಶಾಂತಿಯುತವಾಗಿತ್ತು. ಬಹುತೇಕ ಎಲ್ಲಾ ಮತಗಟ್ಟೆಗಳಲ್ಲಿ ಬೆಳಗಿನಿಂದಲೇ ಬಿರುಸಿನ ಮತದಾನ ಆರಂಭವಾಗಿದ್ದು ವಿಶೇಷವಾಗಿತ್ತು.

ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕಿನ ಎಲ್ಲಾ ಮತಗಟ್ಟೆಗಳಲ್ಲಿ ಮಹಿಳೆಯರು ಮತ್ತು ಪುರುಷರು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದು ಕಂಡುಬಂದಿತು. ಸುಂಟಿಕೊಪ್ಪ, ಕೆದಕಲ್, ಏಳನೇ ಹೊಸಕೋಟೆ, ಗುಡ್ಡೆಹೊಸೂರು, ಹಾರಂಗಿ ಸೇರಿದಂತೆ ಹಲವು ಮತಗಟ್ಟೆಗಳಲ್ಲಿ ಪುರುಷರು ಮತ್ತು ಮಹಿಳೆಯರು ಪ್ರತ್ಯೇಕ ಸಾಲಿನಲ್ಲಿ ನಿಂತು ಮತ ಹಕ್ಕು ಚಲಾಯಿಸಿದ್ದು ವಿಶೇಷವಾಗಿತ್ತು.

ಜಿಲ್ಲೆಯ ಹಲವು ಮತಗಟ್ಟೆಗಳಲ್ಲಿ ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳ ಸಹಾಯದೊಂದಿಗೆ ಹಿರಿಯರು ಮತಗಟ್ಟೆಗೆ ಆಗಮಿಸಿ ಮತ ಹಕ್ಕು ಚಲಾಯಿಸಿದ್ದು ಕಂಡುಬಂದಿತು.

ಹಲವು ಮತಗಟ್ಟೆಗಳಲ್ಲಿ ಬೆಳಗಿನ ವೇಳೆಯಲ್ಲಿ ಮಹಿಳಾ ಮತ್ತು ಪುರುಷ ಮತದಾರರು ಸಾಲಿನಲ್ಲಿ ನಿಂತು ಮತಹಕ್ಕು ಚಲಾಯಿಸಿದರು.

ಸುಂಟಿಕೊಪ್ಪ ಮತಗಟ್ಟೆಯಲ್ಲಿ 95 ವರ್ಷದ ಮಹಿಳೆಯೊಬ್ಬರು ಮಗಳ ಸಹಕಾರದಿಂದ ಮತಗಟ್ಟೆಗೆ ಆಗಮಿಸಿ ಮತ ಹಕ್ಕು ಚಲಾಯಿಸಿದ್ದು ವಿಶೇಷವಾಗಿತ್ತು. ಕೆಲವು ಮತಗಟ್ಟೆಗಳಲ್ಲಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಲ್ಲಿ ವಾಸ ಇರುವವರು ಸಹ ಸ್ವಗ್ರಾಮಕ್ಕೆ ಆಗಮಿಸಿ ಮತದಾನ ಮಾಡಿದ್ದು ಮತಹಕ್ಕಿನ ಮಹತ್ವ ಸಾರುವಂತಿತ್ತು.
ಮೊದಲ ಹಂತದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಎಲ್ಲಾ ಮತಗಟ್ಟೆಗಳಲ್ಲಿ ಥರ್ಮೋ ಸ್ಕ್ಯಾನರ್ ಮೂಲಕ ಮತದಾರರನ್ನು ತಪಾಸಣೆ ಮಾಡಿ ಮತಗಟ್ಟೆಗೆ ಕಳುಹಿಸುತ್ತಿದ್ದ ದೃಶ್ಯ ಕಂಡುಬಂದಿತು. ಜತೆಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು, ಹಾಗೆಯೇ 4 ರಿಂದ 5 ಗಂಟೆ ಅವಧಿಯಲ್ಲಿ ಕೋವಿಡ್-19 ಶಂಕಿತರಿಗೆ ಮತಹಕ್ಕು ಚಲಾಯಿಸಲು ಅವಕಾಶ ನೀಡಲಾಗಿತ್ತು.
ಮತದಾನ ದಿನವಾದ ಮಂಗಳವಾರ ಬೆಳಗ್ಗೆ 9 ಗಂಟೆ ವೇಳೆಗೆ ಶೇ.14 ರಷ್ಟು ಮತದಾನವಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಶೇ.14.40, ಸೋಮವಾರಪೇಟೆ ತಾಲ್ಲೂಕಿನಲ್ಲಿ ಶೇ.13.12 ಮತದಾನವಾಗಿತ್ತು. ಬೆಳಗ್ಗೆ 11 ಗಂಟೆ ವೇಳೆಗೆ ಶೇ.29 ರಷ್ಟು ಮತದಾನವಾಗಿತ್ತು, ಮಡಿಕೇರಿ ತಾಲ್ಲೂಕಿನಲ್ಲಿ 31.08, ಸೋಮವಾರಪೇಟೆ ತಾಲ್ಲೂಕಿನಲ್ಲಿ 28.54 ರಷ್ಟು ಮತದಾನವಾಗಿತ್ತು. ಹಾಗೆಯೇ ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.48 ರಷ್ಟು ಮತದಾನವಾಗಿತ್ತು, ಮಡಿಕೇರಿ ತಾಲ್ಲೂಕಿನಲ್ಲಿ ಶೇ.50, ಸೋಮವಾರಪೇಟೆ ತಾಲ್ಲೂಕಿನಲ್ಲಿ ಶೇ.47.35 ರಷ್ಟು ಮತದಾನವಾಗಿತ್ತು.

ಮಧ್ಯಾಹ್ನ 3 ಗಂಟೆ ವೇಳೆಗೆ ಶೇ.62 ರಷ್ಟು ಮತದಾನವಾಗಿದ್ದು, ಮಡಿಕೇರಿ ತಾಲ್ಲೂಕಿನಲ್ಲಿ ಶೇ.62.21, ಸೋಮವಾರಪೇಟೆ ತಾಲ್ಲೂಕಿನಲ್ಲಿ ಶೇ.61.82 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಗುಡ್ಡೆಹೊಸೂರು ಸೇರಿದಂತೆ ವಿವಿಧ ಮತಗಟ್ಟೆಗೆ ತೆರಳಿ ಪರಿಶೀಲಿಸಿದರು.

ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಕುಂಬೂರು ಮತಗಟ್ಟೆಗೆ ಪತ್ನಿಯ ಜೊತೆ ತೆರಳಿ ಮತದಾನ ಮಾಡಿ ಗಮನ ಸೆಳೆದರು.

ಒಟ್ಟಾರೆ ಜಿಲ್ಲೆಯ ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕುಗಳ ಗ್ರಾ.ಪಂ.ವ್ಯಾಪ್ತಿಯ ಎಲ್ಲಾ ಮತಗಟ್ಟೆಗಳಲ್ಲಿ ಉತ್ತಮ ಮತದಾನವಾಗಿದೆ.

ಜಿಲ್ಲೆಯಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಸುಮಾರು ಶೇ.62 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

error: Content is protected !!