ಜಿಲ್ಲಾ ಮಟ್ಟದ ಅಧಿಕಾರಿಗಳು ತಿಂಗಳಿಗೊಮ್ಮೆಯಾದರೂ ಗಡಿಪ್ರದೇಶದ ಗ್ರಾಮಗಳಿಗೆ ಭೇಟಿ ನೀಡಿ ಕುಂದುಕೊರತೆ ಆಲಿಸಿ: ಡಾ.ಸಿ.ಸೋಮಶೇಖರ

ಮಡಿಕೇರಿ ಸೆ.21:- ಜಿಲ್ಲಾ ಮಟ್ಟದ ಅಧಿಕಾರಿಗಳು ಗಡಿ ಪ್ರದೇಶದ ಗ್ರಾಮಗಳಿಗೆ  ತಿಂಗಳಿಗೊಮ್ಮೆಯಾದರೂ ಭೇಟಿ ನೀಡಿ, ಗ್ರಾಮ ವಾಸ್ತವ್ಯ ಮಾಡಿ, ಸಾರ್ವಜನಿಕರ ಕುಂದುಕೊರತೆ ಆಲಿಸುವಂತಾಗಬೇಕು ಎಂದು ರಾಜ್ಯ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ ಅವರು ತಿಳಿಸಿದ್ದಾರೆ.  
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಬಿಡುಗಡೆಯಾಗಿರುವ ಅನುದಾನ, ಹಣ ಬಳಕೆ ಪ್ರಮಾಣ ಪತ್ರ ಹಾಗೂ ಪ್ರಗತಿ ಸಂಬಂಧಿಸಿದಂತೆ ಮಾಹಿತಿ ಪಡೆದು ಅವರು ಮಾತನಾಡಿದರು.

ಗಡಿ ಪ್ರದೇಶದ ಗ್ರಾಮಗಳಲ್ಲಿ ಕನ್ನಡದ ಅಸ್ಮಿತೆಯನ್ನು ಹೆಚ್ಚಿಸುವಲ್ಲಿ ಅಗತ್ಯ ಕಾರ್ಯಕ್ರಮ ರೂಪಿಸಬೇಕು. ಗಡಿ ಭಾಗದ ಜನರಲ್ಲಿ ಕನ್ನಡ ಭಾಷೆ, ಸಂಸ್ಕøತಿಯನ್ನು ಉತ್ತೇಜಿಸುವಲ್ಲಿ ಪ್ರಯತ್ನಗಳು ಮುಂದುವರೆಯಬೇಕು ಎಂದು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ನುಡಿದರು. 

ಜಿಲ್ಲೆಯ ಗಡಿ ಪ್ರದೇಶದಲ್ಲಿ ಕೊಡಗಿನ ಇತಿಹಾಸ, ದಾರ್ಶನಿಕರನ್ನು ಒಳಗೊಂಡ ಕಿರುಪುಸ್ತಕ ಪ್ರಕಟ, ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಅಗತ್ಯ ನೆರವು ನೀಡಲಾಗುವುದು ಎಂದು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಇದೇ ಸಂದರ್ಭದಲ್ಲಿ ತಿಳಿಸಿದರು.
‘ರಾಜ್ಯದ ಗಡಿ ಭಾಗದ ಜನರ ಆರ್ಥಿಕ, ಶೈಕ್ಷಣಿಕ, ಸಾಂಸ್ಕøತಿಕ ಮತ್ತು ಸಾಮಾಜಿಕ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡುವ ನಿಟ್ಟಿನಲ್ಲಿ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ ಎಂದು ಡಾ.ಸಿ.ಸೋಮಶೇಖರ್ ಅವರು ಹೇಳಿದರು.’

ರಾಜ್ಯದ 19 ಜಿಲ್ಲೆಗಳ 63 ತಾಲ್ಲೂಕುಗಳ ಹಾಗೂ 6 ರಾಜ್ಯಗಳ(ಕೇರಳ, ತಮಿಳುನಾಡು, ಆಂದ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗೋವಾ) ಗಡಿ ಪ್ರದೇಶವನ್ನು ಹೊಂದಿದ್ದು, ಗಡಿ ಭಾಗದಲ್ಲಿ ಶೈಕ್ಷಣಿಕ, ಸಾಂಸ್ಕøತಿಕ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಮತ್ತಷ್ಟು ಪ್ರಯತ್ನಗಳು ನಡೆಯಬೇಕಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ ಅವರು ವಿವರಿಸಿದರು. 
ರಾಜ್ಯದ 998 ಗ್ರಾಮಗಳು ಗಡಿ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತವೆ. ಈ ಪ್ರದೇಶದಲ್ಲಿ ಕನ್ನಡ ಅಸ್ಮಿತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಹಲವು ಸಾಂಸ್ಕøತಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. 
ಗಡಿ ಭಾಗದಲ್ಲಿ ಕನ್ನಡ ಶಾಲೆಗಳಲ್ಲಿ ಅಗತ್ಯ ಮೂಲ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಬೇಕು. ಗ್ರಂಥಾಲಯ ಮತ್ತು ಪಠ್ಯಪುಸ್ತಕಗಳ ವಿತರಣೆ, ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣ, ಕನ್ನಡ ಶಿಕ್ಷಕರ ನೇಮಕ ಬಗ್ಗೆ ಗಮನಹರಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಿಗೆ ರಾಜ್ಯ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸೂಚಿಸಿದರು.
ಗಡಿಭಾಗದಲ್ಲಿ ಸಾಂಸ್ಕøತಿಕ ಉತ್ಸವ ನಡೆಸುವುದು, ಗಡಿ ಭಾಗದ ಶಾಲೆಗಳಲ್ಲಿ ಕನ್ನಡ ಪಠ್ಯಕ್ರಮ ಬೋಧನೆಯಲ್ಲಿ ತಾರತಮ್ಯವಾಗದಂತೆ ಗಮನಹರಿಸುವುದು, ಶಿಕ್ಷಕರ ಕೊರತೆ ಇದ್ದಲ್ಲಿ ಗೌರವ ಶಿಕ್ಷಕರನ್ನು ನೇಮಕ ಮಾಡುವಂತೆ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ನಿರ್ದೇಶನ ನೀಡಿದರು.

ಗಡಿ ಪ್ರದೇಶಗಳಲ್ಲಿ ಹೊರ ರಾಜ್ಯದಲ್ಲಿ ಹಳ್ಳಿ ಹೆಸರು ಬದಲಾವಣೆಯಾಗಿದೆಯೇ ಎಂಬ ಬಗ್ಗೆ ಖಾತರಿ ಪಡಿಸಿಕೊಳ್ಳುವುದು, ಗಡಿ ಭಾಗದಲ್ಲಿ ಮಹಿಳಾ ಸಂಘಟನೆಗಳ ಮುಖಾಂತರ ಉತ್ಸವಗಳನ್ನು ಆಯೋಜಿಸುವುದು, ಗಡಿ ಪ್ರದೇಶದಲ್ಲಿ ಯುವಕ,  ಯುವತಿಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವುದು ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸೂಚಿಸಿದರು.
ಕೊಡಗು ಜಿಲ್ಲೆಯ ಗಡಿ ಪ್ರದೇಶಗಳಾದ ಕುಟ್ಟ, ಮಾಕುಟ್ಟ, ಕರಿಕೆ ಗಡಿ ಪ್ರದೇಶಗಳಲ್ಲಿ ಪ್ರವೇಶ ದ್ವಾರ ನಿರ್ಮಾಣ ಮಾಡಲು ಅಗತ್ಯ ಅನುದಾನ ನೀಡಲಾಗುವುದು ಎಂದು ಅವರು ತಿಳಿಸಿದರು.

ಸಮಾಜ ಕಲ್ಯಾಣ ಹಾಗೂ ಗಿರಿಜನ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿ ನಿಲಯಗಳು, ವಸತಿ ಶಾಲೆಗಳ ಸ್ಥಿತಿಗತಿಯನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಡಾ.ಸಿ.ಸೋಮಶೇಖರ್ ಅವರು ಹೇಳಿದರು.

ಸ್ಮಾರ್ಟ್ ಕ್ಲಾಸ್‍ಗೆ ಹಣ ಒದಗಿಸಲಾಗುತ್ತಿದೆ. ಗಡಿ ಭಾಗದ ಗ್ರಾಮಗಳಲ್ಲಿ ಸಾಂಸ್ಕøತಿಕ ಭವನ ನಿರ್ಮಾಣ, ಗ್ರಾಮೀಣ ಭಾಗದಲ್ಲಿ ಕಲಾವಿದರಿಗೆ ಪ್ರೋತ್ಸಾಹಿಸುವುದು, ಗಡಿ ಭಾಗದಲ್ಲಿ ಯರವ ಭಾಷೆಯ ಜೊತೆ ಕನ್ನಡ ಭಾಷೆ ಕಲಿಸುವಂತಾಗಬೇಕು ಎಂದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಕೊಡಗು ಜಿಲ್ಲೆಯ ತಾಲ್ಲೂಕುಗಳು ಹಾಗೂ ಗ್ರಾಮಗಳ ವಿವರ: ಮಡಿಕೇರಿ ತಾಲ್ಲೂಕಿನ ಅಯ್ಯಂಗೇರಿ, ಚೆರಂಗಾಲ, ಕರಿಕೆ, ಸಣ್ಣ ಪುಲಿಕೋಟು, ಚೇಲವಾರ, ಕರಡ, ನಾಲಡಿ, ಯವಕಪಾಡಿ, ಕುಂದಲಪಾಡಿ, ಪೆರಾಜೆ, ಕೆ.ಬಾಡಗ ಗ್ರಾಮಗಳು.

ವಿರಾಜಪೇಟೆ ತಾಲ್ಲೂಕಿನ ಹೆಗ್ಗಳ, ಕೆದಮುಳ್ಳೂರು, ಕುರ್ಚಿ, ಕುಟ್ಟ, ಮಂಚಲ್ಲಿ, ನಾಲ್ಕೇರಿ, ಪರಕಟಗೇರಿ, ತೆರಾಲು ಕೇರಳ ರಾಜ್ಯದ ಗಡಿಗೆ ಹೊಂದಿಕೊಂಡಿವೆ ಎಂದು ಡಾ.ಸಿ.ಸೋಮಶೇಖರ್ ಅವರು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ದಾರ್ಶನಿಕರು, ಸಂತರ ಸ್ಮಾರಕವನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಕಿರು ಪುಸ್ತಕ ಪ್ರಕಟಿಸುವಂತಾಗಬೇಕು ಎಂದರು. 
ಗಡಿ ಭಾಗದಲ್ಲಿ ಕನ್ನಡ ಶಾಲೆಗಳು ಸೊರಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಶಾಲೆಗಳಲ್ಲಿ ಗ್ರಂಥಾಲಯ, ಪೀಠೋಪಕರಣ, ಬಯಲು ರಂಗಮಂದಿರ ನಿರ್ಮಾಣ, ಸಾಂಸ್ಕøತಿಕ ಭವನ ನಿರ್ಮಾಣ ಮಾಡುವುದು, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಮತ್ತಿತರ ಕಾರ್ಯಗಳು ಆಗಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ನಗರದಲ್ಲಿ ನಿರ್ಮಾಣ ಆಗುತ್ತಿರುವ ಸುವರ್ಣ ಸಮುಚ್ಚಯ ಭವನ ನಿರ್ಮಾಣ ಕಾಮಗಾರಿಯನ್ನು ಆದಷ್ಟು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದರು.  

ಜಿ.ಪಂ.ಸಿಇಒ ಭಂವರ್ ಸಿಂಗ್ ಅವರು ಮಾತನಾಡಿ ಗಡಿ ಪ್ರದೇಶದ ಶಾಲೆಗಳಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಬೀದಿ ದೀಪ ಅಳವಡಿಕೆ, ಶಾಲೆಗಳಲ್ಲಿ ತಡೆಗೋಡೆ ನಿರ್ಮಾಣ, ಹೀಗೆ ಗಡಿ ಪ್ರದೇಶದ ಶಾಲೆಗಳು, ಅಂಗನವಾಡಿಗಳ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 13 ಗ್ರಾ.ಪಂ.ಗಳು ಗಡಿ ಪ್ರದೇಶಕ್ಕೆ ಬರಲಿದ್ದು, ಅಮೃತ ಗ್ರಾ.ಪಂ. ಯೋಜನೆಯಡಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿ ಎಲ್ಲಾ ಮನೆಗಳಿಗೂ ನಲ್ಲಿ ನೀರು ಸಂಪರ್ಕ ಒದಗಿಸಲು ಪ್ರಯತ್ನಿಸಲಾಗಿದೆ ಎಂದರು.
ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಗಡಿ ಚೇತನ ಪ್ರಶಸ್ತಿಯನ್ನು ಆರಂಭಿಸಲಾಗಿದ್ದು, ಈಗಾಗಲೇ ಕಯ್ಯಾರ ಕಿಂಞಣ್ಣ ರೈ, ಜಯದೇವಿ ತಾಯಿ ಲಿಗಾಡೆ ಅವರಿಗೆ ಪ್ರಶಸ್ತಿ ವಿತರಿಸಲಾಗಿದೆ ಎಂದು ರಾಜ್ಯ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದರು. 

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ ಅವರು 2019 ರಲ್ಲಿ ಜನರಲ್ ತಿಮ್ಮಯ್ಯ ಸ್ಮಾರಕ ಭವನ ಮುಂದುವರೆದ ಕಾಮಗಾರಿಗೆ ರಾಜ್ಯ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ 50 ಲಕ್ಷ ರೂ. ಬಿಡುಗಡೆಗೆ ಆದೇಶವಾಗಿದ್ದು, ಈ ಸಂಬಂಧ ಅನುದಾನ ಬಿಡುಗಡೆಗೆ ಅಧ್ಯಕ್ಷರಲ್ಲಿ ಕೋರಿದರು.
ಗಾಂಧಿ ಮಂಟಪದ ಆವರಣದಲ್ಲಿ ಗಾಂಧಿ ಸ್ಮಾರಕ ಉದ್ಯಾನವನ ಅಭಿವೃದ್ಧಿಗೆ ಅಗತ್ಯ ಸಹಕಾರಕ್ಕೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಜಿ.ಪಂ.ಯೋಜನಾ ನಿರ್ದೇಶಕರಾದ ಜಗದೀಶ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ವೇದಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್, ಐಟಿಡಿಪಿ ಇಲಾಖಾ ಅಧಿಕಾರಿ ಹೊನ್ನೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಎನ್.ಮಂಜುನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್, ಜಿ.ಪಂ.ಎಂಜಿನಿಯರ್ ನಾಗೇಂದ್ರಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪುಟ್ಟರಾಜು, ತಹಶೀಲ್ದಾರರಾದ ಪಿ.ಎಸ್.ಮಹೇಶ್, ಪ್ರಶಾಂತ್, ಅರ್ಚನಾ ಭಟ್, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಚೆನ್ನಕೇಶವ, ಸತೀಶ, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಉಮಾ, ಗ್ರಂಥಾಲಯ ಅಧಿಕಾರಿ ಲೀಲಾವತಿ, ಪೊಲೀಸ್ ಇನ್ಸ್‍ಪೆಕ್ಟರ್ ಮೇದಪ್ಪ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಸಚಿನ್ ಇತರರು ಹಲವು ಮಾಹಿತಿ ನೀಡಿದರು.

error: Content is protected !!