ಜಿಲ್ಲಾ ಕೋವಿಡ್ ಆಸ್ಪತ್ರೆ: ಟಾಸ್ಕ್ ಪೋರ್ಸ್ ಸಮಿತಿ ರಚನೆಗೆ ಜಿಲ್ಲಾಧಿಕಾರಿ ಆದೇಶ

ಕೊಡಗು: ಜಿಲ್ಲಾ ಕೋವಿಡ್ ಆಸ್ಪತ್ರೆಯನ್ನು ಮತ್ತಷ್ಟು ಸುಧಾರಣೆ ಮಾಡುವಲ್ಲಿ ಉಪ ವಿಭಾಗಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ಸಮಿತಿ ರಚನೆ ಮಾಡುವ ಬಗ್ಗೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಉಪ ವಿಭಾಗಾಧಿಕಾರಿ ಅವರು ಅಧ್ಯಕ್ಷರಾಗಿ, ತಾಂತ್ರಿಕ ವಿಭಾಗದಿಂದ ಡಾ.ನವೀನ್ ಕುಮಾರ್, ಆಡಳಿತ ವಿಭಾಗದಿಂದ ಡಾ.ನಂಜುಂಡೇಗೌಡ ಸದಸ್ಯರನ್ನಾಗಿ ಮಾಡುವ ಬಗ್ಗೆ ಸಭೆಯಲ್ಲಿ ತಿರ್ಮಾನಿಸಲಾಗಿದ್ದು, ಸಭೆಯ ಆರಂಭದಲ್ಲಿ ಮಾತನಾಡಿದ ಡಾ.ನವೀನ್ ಕುಮಾರ್ ಅವರು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಪ್ರತಿ ದಿನದ 24 ಗಂಟೆಯಲ್ಲಿ ಎಷ್ಟು ಮಂದಿ ಸೋಂಕಿತರು ದಾಖಲಾಗಿದ್ದಾರೆ. ಎಷ್ಟು ಮಂದಿ ಮರಣ ಹೊಂದಿದ್ದಾರೆ. ಮರಣಕ್ಕೆ ಕಾರಣವೇನು? ಹಾಗೂ ಸೋಂಕಿತರು ದಾಖಲಾಗುವ ಸಂದರ್ಭದಲ್ಲಿ ಯಾವ ಸ್ಥಿತಿಯಲ್ಲಿದ್ದರು. ಸಾಮಾನ್ಯ ವಾರ್ಡ್‍ನಲ್ಲಿ ಎಷ್ಟು ಮಂದಿ ಇದ್ದಾರೆ? ಐಸಿಯು ವಾರ್ಡ್‍ನಲ್ಲಿ ಎಷ್ಟು ಮಂದಿ ಇದ್ದಾರೆ? ಹೀಗೆ ಹಲವು ವಿಚಾರಗಳ ಕುರಿತು ಪ್ರತಿನಿತ್ಯ ಪರಿಶೀಲಿಸಿ ವರದಿ ನೀಡಲಾಗುತ್ತದೆ ಎಂದರು.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಎಷ್ಟು ಮಂದಿ ತಜ್ಞ ವೈದ್ಯರು, ಸಾಮಾನ್ಯ ವೈದ್ಯರು, ಶ್ರುಶ್ರೂಷಕರು, ಡಿ ದರ್ಜೆ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು.
ಕೋವಿಡ್ 19 ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿಕೊಂಡ ನಂತರ ಸೊಂಕಿತರ ಸ್ಥಿತಿಗತಿ ಬಗ್ಗೆ ತಪಾಸಣೆ ಮಾಡಬೇಕು. ವಿಳಂಭ ಮಾಡದೆ ಸರಿಯಾದ ಚಿಕಿತ್ಸೆ ನೀಡಬೇಕು ಎಂದು ಡಾ.ನವೀನ್ ಅವರು ಸಲಹೆ ಮಾಡಿದರು.
ಸೋಂಕಿತರ ಆರೋಗ್ಯ ಸುಧಾರಣೆ ಬಗ್ಗೆ ಸದಾ ಗಮನ ಹರಿಸಬೇಕು. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದು ಡಾ.ನವೀನ್ ಅವರು ಹೇಳಿದರು.

ಕೋವಿಡ್ ನಿರ್ವಹಣೆ ಸಂಬಂಧ ಕಳೆದ ಬಾರಿ ಯಾವ ರೀತಿ ಇತ್ತು, ಈ ಬಾರಿ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂಬ ಬಗ್ಗೆ ಡಾ.ನವೀನ್ ಅವರು ಮಾಹಿತಿ ಪಡೆದರು.
ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಮಾತನಾಡಿದರು. ಕೋವಿಡ್ 19 ಸೋಂಕಿನಿಂದ ದಾಖಲಾಗುವವರನ್ನು ಸರಿಯಾಗಿ ನೋಡಿಕೊಳ್ಳಬೇಕು. ಔಷದೋಪಚಾರ ನೀಡಬೇಕು. ಒಳ್ಳೆಯ ವಾತಾವರಣ ಕೋವಿಡ್ ಆಸ್ಪತ್ರೆಯಲ್ಲಿ ಇರಬೇಕು ಎಂದು ಸೂಚಿಸಿದರು.
ಕೋವಿಡ್ ಸೋಂಕಿತರನ್ನು ಸರಿಯಾಗಿ ಉಪಚರಿಸಬೇಕು. ಯಾವುದೇ ರೀತಿಯ ದೂರು ಬರದಂತೆ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ನಿರ್ದೇಶನ ನೀಡಿದರು.

ಹಾಲಿ ಇರುವ ವೈದ್ಯರು ಪಾಳಿಯಲ್ಲಿ ಶ್ರದ್ದೆಯಿಂದ ಕಾರ್ಯ ನಿರ್ವಹಿಸಬೇಕು. ಖಾಲಿ ಇರುವ ತಜ್ಞ ವೈದ್ಯರು, ಶ್ರುಶ್ರೂಷಕರು ಹಾಗೂ ಇತರೆ ಹುದ್ದೆಗೆ ನೇರ ಸಂದರ್ಶನ ಆಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಕೋವಿಡ್ 19 ನಿರ್ವಹಣೆ ಸಂಬಂಧ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಗಮನಹರಿಸಬೇಕು ಎಂದರು.

ಡಾ.ಅಜೀಜ್ ಅವರು ಮಾತನಾಡಿ ಶ್ರುಶ್ರೂಷಕರು ಹಾಗೂ ಡಿ ದರ್ಜೆ ನೌಕರರ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ ಎಂದರು.

error: Content is protected !!