ಜಾಹಿರಾತಿಗೆ ಖಂಡನೆ

ಮಂಗಳೂರು(ನ.22): ಫೆವಿಕಾಲ್ ಸಂಸ್ಥೆಯವರು ತಮ್ಮ ಅಂಟಿನ ಉತ್ಪನ್ನದ ಟಿ.ವಿ.ಜಾಹೀರಾತಿನಲ್ಲಿ ಯಕ್ಷಗಾನದ ದೃಶ್ಯಗಳನ್ನು ಅನುಚಿತವಾಗಿ ಬಳಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಶನಿವಾರ ಈ ಜಾಹೀರಾತಿನ ತುಣುಕು ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಯಕ್ಷಗಾನದ ಆಶಯಗಳಿಗೆ ವಿರುದ್ಧವಾಗಿದ್ದು, ಯಕ್ಷಗಾನವನ್ನು ಅವಹೇಳನಕಾರಿಯಾಗಿ ಬಳಸಲಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಕಥಕ್ಕಳಿಯ ಹಿಮ್ಮೇಳದ ಸದ್ದು, ಯಕ್ಷಗಾನದ ರಂಗಸ್ಥಳದಲ್ಲಿ ತೆಂಕಿತಿಟ್ಟಿನ ಪ್ರದರ್ಶನ ಆರಂಭ, ಇದೇ ವೇಳೆ ರಂಗಸ್ಥಳದ ಸಿಂಹಾಸನದಲ್ಲಿ ವೇಷಧಾರಿ ಕುಳಿತುಕೊಳ್ಳುವಾಗ ಅದು ಕುಸಿದು ಬೀಳುತ್ತದೆ.
ಆಗ ಸಿಟ್ಟಿನಿಂದ ವೇಷಧಾರಿ ಅರಚುತ್ತಾ ಎದುರು ವೇಷಧಾರಿ ಸಹಿತ ಹಿಮ್ಮೇಳದವರನ್ನು ಅಟ್ಟಾಡಿಸುತ್ತಾನೆ.
ಈ ಮೂಲಕ ಸಂಸ್ಥೆಯ ಅಂಟಿನ ಉತ್ಪನ್ನಕ್ಕೆ ಯಾವುದೂ ಸರಿಸಾಟ ಇಲ್ಲ ಎಂಬುದನ್ನು ಸಾರುವ ಪ್ರಯತ್ನ ನಡೆಸಲಾಗಿದೆ. ಜಾಹೀರಾತಿನಲ್ಲಿ ಕಾಣಿಸಿಕೊಂಡ ಕಲಾವಿದರ ಪೈಕಿ ಕೆಲವರು ವೃತ್ತಿಪರ ಕಲಾವಿದರು ಎಂದು ನೆಟ್ಟಿಗರು ಗುರುತಿಸಿದ್ದಾರೆ. ಜಾಹಿರಾತನ್ನು ಕೂಡಲೇ ನಿರ್ಬಂಧಿಸುವಂತೆ ಕಲಾಪ್ರೇಮಿಗಳು ಆಗ್ರಹಿಸಿದ್ದಾರೆ.