fbpx

ಜನಾಂಗಗಳ ನಡುವೆ ಸಾಮರಸ್ಯ ಇರಲಿ: ಸೂರ್ತಲೆ ಸೋಮಣ್ಣ

ತಲಕಾವೇರಿ ಜಾತ್ರೆ ಸಮೀಪಿಸುತ್ತಿದ್ದು, ಇತ್ತೀಚೆಗೆ ಮಾಧ್ಯಮಗಳಲ್ಲಿ ಬಿತ್ತರವಾದ ಜನಾಂಗಗಳ ನಡುವಿನ ವೈಮನಸ್ಸಿನ ಸುದ್ದಿಗೆ ಪ್ರತಿಕ್ರಿಯೆ ನೀಡುವ ಗೌಡ ಸಮಾಜಗಳ ಫೆಡರೇಷನ್ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ, ಜಾತ್ರೆಯ ಪ್ರಾಥಮಿಕ ಹಂತದ ಸಾಂಪ್ರದಾಯಿಕವಾದ ಪತ್ತಾಯಕ್ಕೆ ಅಕ್ಕಿ ಹಾಕುವ ಕಾರ್ಯಕ್ರಮದಲ್ಲಿ ಕೆಲವು ವ್ಯಕ್ತಿಗಳು ಸಂಪ್ರದಾಯ ಮೀರಿ ವರ್ತಿಸುತ್ತಿದ್ದಾರೆ ಎಂದು ವರದಿಗಳು ಹಬ್ಬಿದಾಗ ಭಾಗಮಂಡಲ ಗೌಡ ಸಮಾಜದಲ್ಲಿ ಸ್ಥಳೀಯರ ಸಭೆ ದಿನಾಂಕ 27-9-2020 ರಂದು ನಡೆಸಲಾಗಿದೆ. ಈ ಸಭೆಗೆ ಆಹ್ವಾನದ ಮೇರೆ ಸ್ಥಳೀಯವಾಗಿ ಹಾಜರಾಗಿದ್ದೇನೆಂದು ಗೌಡ ಸಮಾಜಗಳ ಫೆಡರೇಶನ್ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣನವರು ತಿಳಸಿದ್ದಾರೆ.

ಅಲ್ಲಿ ಕೊಡವರ ಸಾಂಪ್ರದಾಯಿಕ ದಿರಿಸನ್ನು ಸಮವಸ್ತ್ರ ಎಂದು ಉಲ್ಲೇಖಿಸುವಷ್ಟು ಹಾಗೂ ಜಾತ್ರಾ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ದಿರಿಸಿನಲ್ಲಿ ಕೊಡವರು ಬರಬಾರದು ಎಂಬ ಯಾವುದೇ ತಾಲೀಬಾನ್ ಸಂಸ್ಕೃತಿಯ ಅಥವಾ ಅನಾಗರೀಕ ಶಬ್ದಗಳ ಬಳಕೆ ಆಗಿರುವುದಿಲ್ಲ. ಸಂಪ್ರದಾಯಗಳ ಉಳಿವಿನ ಬಗ್ಗೆ ಚರ್ಚಿಸಲಾಯಿತು. ಹಾಗೆಯೇ ಸಂಪ್ರದಾಯ ಮೀರಿರುವುದನ್ನು ಖಂಡಿಸಲಾಯಿತು. ಶತಮಾನಗಳಿಂದ ಕಾವೇರಿ ಕ್ಷೇತ್ರದಲ್ಲಿ ರೂಢಿಯಲ್ಲಿರುವ ಪದ್ಧತಿಗಳು ಹಾಗೆಯೇ ಸಂಪ್ರದಾಯಗಳನ್ನು ಕಾಪಾಡುವ ಬಗ್ಗೆ ತೀರ್ಮಾನ ಕೈಗೊಳ್ಳಾಲಾಯಿತು. ವರದಿಗಳಲ್ಲಿ ಕೆಲವು ಶಬ್ದಗಳು ಅಚಾತುರ್ಯದಿಂದ ಬಂದಿರುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ಪಟ್ಟರು.

ಈ ನಿಟ್ಟಿನಲ್ಲಿ ಕೊಡವ ಫೆಡರೇಷನ್ ನ ಅದ್ಯಕ್ಷರೊಂದಿಗೆ ಹಾಗೂ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿ ವಿವರ ನೀಡಿರುವುದಾಗಿ ಹೇಳಿದರು. ಅವರುಗಳು ಕ್ಷೇತ್ರದ ಸಂಪ್ರದಾಯಗಳು ಪದ್ದತಿಗಳ ಉಳಿವಿಗಾಗಿ ಉತ್ತಮ ಸ್ಪಂದನೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮನಸ್ಸುಗಳನ್ನು ಉದ್ರೇಕಗೊಳಿಸುವ ಜಾತಿ ವೈಷಮ್ಯದ ವಿಷ ಬೀಜ ಬಿತ್ತುವ ಹಾಗೆಯೇ ಗಾಳಿ ಸುದ್ದಿಗಳನ್ನು ನಂಬಿ ಮಾಧ್ಯಮಗಳಲ್ಲಿ ಹೇಳಿಕೆ ನೀಡುವ ವ್ಯವಸ್ಥೆ ನಿಲ್ಲಬೇಕೆಂದರು.

ತಲಾಕಾವೇರಿ ಕ್ಷೇತ್ರವನ್ನು ಪುಣ್ಯ ನೆಲೆಯನ್ನಾಗಿ ಉಳಿಸಿಕೊಳ್ಳುವಲ್ಲಿ ಹಾಗೆಯೇ ಸಂಪ್ರದಾಯ ಮತ್ತು ಪದ್ಧತಿಗಳನ್ನು ಉಳಿಸಿ ಬೆಳೆಸುವಲ್ಲಿ ನಾವು ಒಂದಾಗಿ ಬೆರೆತು ಮುಂದುವರಿಯಬೇಕು ಎಂದು ಆಶಿಸಿದ್ದಾರೆ.

error: Content is protected !!