ಚಿಕನ್ ಸಾಬಾರ್ ವಿಷಯಕ್ಕೆ ಮರ್ಡರ್

ಮಡಿಕೇರಿ: ಊಟ ಮಾಡುವ ಸಂದರ್ಭ ಚಿಕನ್ ಸಾಂಬಾರ್ ಕಡಿಮೆ ಹಾಕಿದಕ್ಕೆ ಆರಂಭವಾದ ಜಗಳವು ಕೊಲೆಯಲ್ಲಿ ಕೊನೆಯಾಗಿದೆ.
25 ವರ್ಷದ ಕುಮಾರ್ ದಾಸ ಕೊಲೆಯಾದ ಯುವಕ. ನಂಜನಗೂಡು ತಾಲೂಕಿನ ಕೊತ್ತೆನಾಹಳ್ಳಿಯ ಕುಮಾರ್ ಮತ್ತು 17 ವರ್ಷದ ಹುಡುಗನ ಜೊತೆ ನಾಲ್ಕೇರಿ ಗ್ರಾಮದ ಮಹೇಶ್ ಎಂಬವರ ಕಾಫಿ ತೋಟದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. 25 ದಿನಗಳ ಹಿಂದೆ ಕೆಲಸಕ್ಕೆ ಸೇರಿದ್ದ ಇಬ್ಬರು ಜೊತೆಯಲ್ಲಿಯೇ ವಾಸವಾಗಿದ್ದರು.
ಸೋಮವಾರ ಸಂಜೆ ಮಹೇಶ್ ಅವರ ಕಾಫಿ ತೋಟದ ಅಂಗಳಲ್ಲಿ ಬಾಡೂಟಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಸುಮಾರು ರಾತ್ರಿ 10.30ಕ್ಕೆ ಊಟ ಮಾಡುತ್ತಿರುವಾಗ ತನಗೆ ಕಡಿಮೆ ಚಿಕನ್ ಸಾಂಬಾರ್ ಹಾಕಲಾಗಿದೆ ಎಂದು ಬಾಲಕ ಜಗಳ ತೆಗೆದಿದ್ದಾನೆ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿದೆ. ಈ ವೇಳೆ ಕೋಪಗೊಂಡ ಆರೋಪಿ ಬ್ಯಾಟ್ ಮತ್ತು ಒಲೆಯಲ್ಲಿದ್ದ ಸೌದೆಯಿಂದ ಕುಮಾರ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಕುಮಾರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸದ್ಯ ಪೊಲೀಸರು ಅಪ್ರಾಪ್ತ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.