ಘನತ್ಯಾಜ್ಯ ಸಂಸ್ಕರಣ ಮತ್ತು ವಿಲೇವಾರಿ ಘಟಕ ನಿರ್ಮಾಣ ಕುರಿತು ಚರ್ಚೆ

ಮಡಿಕೇರಿ ಸೆ.22 :-2ನೇ ಮೊಣ್ಣಂಗೇರಿ ಗ್ರಾಮದ ಸರ್ವೆ ನಂ. 20/1 ರಲ್ಲಿ ಒಟ್ಟು 10 ಎಕರೆ ಪ್ರದೇಶದಲ್ಲಿ ರೂ.6.84 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 65 ಟಿಪಿಡಿ ಸಾಮಥ್ರ್ಯದ ಘನತ್ಯಾಜ್ಯ ಸಂಸ್ಕರಣ ಮತ್ತು ವಿಲೇವಾರಿ ಘಟಕವನ್ನು ನಿರ್ಮಿಸುವ ಕುರಿತು ಸಾರ್ವಜನಿಕರ ಹೇಳಿಕೆಗಳನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಆಲಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನಗರಸಭೆ ಸಂಯೋಗದಲ್ಲಿ ಯೋಜನೆಯ ಕಾರ್ಯಚಟುವಿಕೆಯ ಬಗ್ಗೆ ಪರಿಸರ ಸಾರ್ವಜನಿಕ ಸಭೆ ಗುರುವಾರ ನಡೆಯಿತು.
ದಿನದಿಂದ ದಿನಕ್ಕೆ ನಗರ ಬೆಳೆಯುತ್ತಿದ್ದು, ಘನತ್ಯಾಜ್ಯಗಳು ಹೆಚ್ಚುತ್ತಿದೆ. ಇದರಿಂದ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ಇದನ್ನು ವೈಜ್ಞಾನಿಕವಾಗಿ ನಿರ್ವಹಿಸಬೇಕಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ನಗರದ ಹೊರವಲಯದ 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ನಿಗದಿಪಡಿಸಿರುವ ಜಾಗವನ್ನು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸ್ಥಳವನ್ನು ಗುರುತಿಸಲಾಗಿದೆ. ನಗರದಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು 2ನೇ ಮೊಣ್ಣಂಗೇರಿಯ ಸರ್ವೆ ನಂ20/1 ರಲ್ಲಿ 10 ಎಕರೆ ಪ್ರದೇಶವನ್ನು ಗುರುತಿಸಲಾಗಿದ್ದು, ಘನತ್ಯಾಜ್ಯ ಸಂಸ್ಕರಣ ಮತ್ತು ವಿಲೇವಾರಿ ಘಟಕವನ್ನು ನಿರ್ಮಿಸಲು ಎಲ್ಲರೂ ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಹೇಳಿದರು.
ಕಸದ ನಿರ್ವಹಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಕುರಿತು ಜಿಲ್ಲಾಡಳಿತ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ನಗರಸಭೆ ವತಿಯಿಂದ ಪ್ರತಿವಾರ ಅಂಗಡಿಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಳಕೆ ಕುರಿತು ಇನ್ನೊಬ್ಬರಿಗೆ ಹೇಳುವ ಮೊದಲು ನಾವು ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಬೇಕು ಎಂದು ಅವರು ಸಲಹೆ ಮಾಡಿದರು.
ಹೈ ಕೋರ್ಟ್ ಆದೇಶದಂತೆ ಘನತಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲು ಜಾಗವನ್ನು ಗುರುತಿಸಿ ವೀಕ್ಷಣೆ ಮಾಡಲಾಗಿದೆ. ಘನತಾಜ್ಯಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮನೆಯಲ್ಲಿಯೇ ಸ್ವಯಂ ಪ್ರೇರಿತರಾಗಿ ನಿರ್ವಹಣೆ ಮಾಡುವಂತಾಗಬೇಕು. ಈ ರೀತಿ ನಿರ್ವಹಣೆ ಮಾಡುವವರಿಗೆ ಆಸ್ತಿ ತೆರಿಗೆಯಲ್ಲಿ ವಿನಾಯತಿ ನೀಡಲು ಅವಕಾಶವಿದೆಯೇ ಎಂದು ಪರಿಶೀಲಿಸುವಂತೆ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರು.
ಸಾರ್ವಜನಿಕರ ಸಲಹೆ ಆಕ್ಷೇಪಗಳ ನಡುವೆಯೂ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಅನಿವಾರ್ಯವಾಗಿದೆ. ಆ ನಿಟ್ಟಿನಲ್ಲಿ ಎಲ್ಲರ ಅಭಿಪ್ರಾಯಗಳನ್ನು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯವರಿಗೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಹಿರಿಯ ಪರಿಸರ ಅಧಿಕಾರಿ ಪ್ರಕಾಶ್ ಅವರು ಮಾತನಾಡಿ ಈ ಹಿಂದೆ ಹಳ್ಳಿಗಳಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿಯೇ ತ್ಯಾಜ್ಯವನ್ನು ನಿರ್ವಹಣೆ ಮಾಡುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಘನ ತ್ಯಾಜ್ಯಗಳ ನಿರ್ವಹಣೆ ಮಾಡುವುದು ಕಡಿಮೆಯಾಗಿದೆ. ನಗರ ಪ್ರದೇಶದಲ್ಲಿ ತ್ಯಾಜ್ಯಗಳ ನಿರ್ವಹಣೆ ಕಷ್ಟಕರವಾಗಿದೆ. ಆ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಕಾರದೊಂದಿಗೆ ನಗರ ಪ್ರದೇಶಗಳಲ್ಲಿ ನಗರಸಭೆ ಮೂಲಕ ಘನತ್ಯಾಜ್ಯಗಳನ್ನು ನಿರ್ವಹಣೆ ಮಾಡಲಾಗುತ್ತಿದೆ ಎಂದರು.
ತ್ಯಾಜ್ಯವನ್ನು ಕಡಿಮೆ ಮಾಡಿದಷ್ಟು ಲ್ಯಾಂಡ್ ಫಿಲ್ಲಿಂಗ್‍ನ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಲ್ಯಾಂಡ್ ಫಿಲ್ಲಿಂಗ್‍ನ್ನು ನಿಲ್ಲಿಸುವಂತೆ ಧ್ವನಿಗಳು ಕೇಳಿಬರುತ್ತಿದೆ. ಆದರೆ ಸರ್ಕಾರದಿಂದ ಲ್ಯಾಂಡ್ ಫಿಲ್ಲಿಂಗ್‍ನ್ನು ನಿಲ್ಲಿಸಬೇಕೆಂಬ ಯಾವುದೇ ಆದೇಶವಿರುವುದಿಲ್ಲ ಎಂದು ಅವರು ಮಾಹಿತಿ ನೀಡಿದರು.
2ನೇ ಮೊಣ್ಣಂಗೇರಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಜಲಮೂಲಗಳ ಬಗ್ಗೆ ಜನರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆ ನಿಟ್ಟಿನಲ್ಲಿ ಆ ಪ್ರದೇಶವನ್ನು ಪುನರ್ ಪರಿಶೀಲಿಸುವಂತೆ ಸಲಹೆ ಮಾಡಿದರು.
ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಮಾತನಾಡಿ ನಗರದಲ್ಲಿ 25 ಟಿಪಿಡಿ ರಷ್ಟು ಕಸ ಉತ್ಪತ್ತಿಯಾಗುತ್ತಿದ್ದು, ನಗರಸಭೆಯು ಕಸವನ್ನು ಸಂಗ್ರಹಿಸಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ಕರ್ಣಂಗೇರಿ ಗ್ರಾಮದಲ್ಲಿ ಸಣ್ಣ ಮಟ್ಟದಲ್ಲಿ ಗೊಬ್ಬರ ತಯಾರಿಸಿ ಮತ್ತು ಕಸವನ್ನು ವಿಲೇವಾರಿ ಮಾಡಲಾಗುತ್ತಿದೆ. ಜನಸಂಖ್ಯೆ ಆಧಾರದ ಮೇಲೆ ಮುಂದಿನ 20 ವರ್ಷಗಳಲ್ಲಿ ಕಸದ ಪ್ರಮಾಣ 65 ಟಿಪಿಡಿ ಆಗುವುದಾಗಿ ಅಂದಾಜಿಸಿ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮತ್ತು ವಿಲೇವಾರಿ ಘಟಕವನ್ನು 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ಗುರುತಿಸಿರುವ ಜಾಗದಲ್ಲಿ ಯಾವುದೇ ತೊಂದರೆಯಾಗದ ರೀತಿಯಲ್ಲಿ ಮತ್ತು ಸುತ್ತಮುತ್ತಲಿನ ಜನರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಗರಸಭೆ ಸದಸ್ಯರಾದ ಮಹೇಶ್ ಜೈನಿ, ಉಮೇಶ್ ಸುಬ್ರಮಣಿ, ಅಪ್ಪಣ್ಣ, ಮತ್ತಿತರರು ಈಗಾಗಲೇ ಇರುವ ಕಸ ವಿಲೇವಾರಿ ಘಟಕದಿಂದ ಸುಬ್ರಮಣ್ಯ ನಗರ ಮತ್ತು ಸುತ್ತಮುತ್ತಲಿನ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಈಗ ಆಯ್ಕೆ ಮಾಡಿರುವ ಎರಡನೇ ಮೊಣ್ಣಂಗೇರಿ ಜಾಗವು ಘನತ್ಯಾಜ್ಯ ಘಟಕವನ್ನು ನಿರ್ಮಿಸಲು ಸೂಕ್ತವಾಗಿದ್ದು, ಸುತ್ತಮುತ್ತಲಿನ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವೈಜ್ಞಾನಿಕವಾಗಿ ನಿರ್ಮಿಸಲಾಗುವುದು. ಇದಕ್ಕೆ ಎಲ್ಲರ ಸಹಕಾರ ನೀಡುವಂತೆ ಮನವಿ ಮಾಡಿದರು.
ಕೆ.ನಿಡುಗಣೆ ಗ್ರಾಮಸ್ಥರಾದ ದಯಾನಂದ ಅವರು ಮಾತನಾಡಿ 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ಗುರುತಿಸಿರುವ ಜಾಗದಲ್ಲಿ ಜಲ ಮೂಲವಿದೆ. ಆ ನೀರನ್ನು ಕುಡಿಯಲು ಮತ್ತು ತೋಟಗಳಿಗೆ ಬಳಸಲಾಗುತ್ತದೆ. ಒಂದು ವೇಳೆ ಇಲ್ಲಿ ಘನತ್ಯಾಜ್ಯ ಘಟಕವನ್ನು ನಿರ್ಮಿಸಿದರೆ ಸ್ಥಳೀಯರಿಗೆ ತೊಂದರೆಯಾಗುತ್ತದೆ. ಹಾಗೂ 2018 ಮತ್ತು 2022 ರಲ್ಲಿ ಈ ಪ್ರದೇಶದಲ್ಲಿ ಭೂಕುಸಿತವಾಗಿದ್ದು, ಮುಂದಿನ ದಿನಗಳಲ್ಲಿಯೂ ಭೂಕುಸಿತವಾಗುವ ಸಂಭವವಿರುವುದರಿಂದ ಘನತ್ಯಾಜ್ಯ ಘಟಕವನ್ನು ನಿರ್ಮಿಸಲು ಬೇರೆ ಕಡೆ ಜಾಗ ಗುರುತಿಸುವುದು ಉತ್ತಮ ಎಂದು ಮನವಿ ಮಾಡಿದರು.
ಸುಬ್ರಮಣ್ಯ ನಗರದ ನಿವಾಸಿಯಾದ ಮನು ನಾಚಪ್ಪ ಅವರು ಮಾತನಾಡಿ ಈಗಾಗಲೇ ಇರುವ ಕಸವಿಲೇವಾರಿ ಘಟಕದಿಂದ ಸ್ಥಳೀಯರಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತಿದ್ದು, ಇದರ ಬದಲು ನಗರ ವ್ಯಾಪ್ತಿಯ ಹೊರ ವಲಯದ ಇಂಟೀರಿಯಲ್ ಪ್ರದೇಶದಲ್ಲಿ ಘನತ್ಯಾಜ್ಯ ಘಟಕ ನಿರ್ಮಿಸುವುದು ಸೂಕ್ತ ಎಂದು ಸಲಹೆ ಮಾಡಿದರು.
ಸುಬ್ರಮಣ್ಯ ನಗರದ ನಿವಾಸಿ ಡಾ.ಮೋಹನ ಅಪ್ಪಾಜಿ ಅವರು ಮಾತನಾಡಿ ಒಂದು ಪ್ರದೇಶದಲ್ಲಿ ದೊಡ್ಡದಾಗಿ ಘನತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸುವ ಬದಲು ಬೇರೆ ಬೇರೆ ಕಡೆ ಸಣ್ಣ ಘನತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸುವುದು ಉತ್ತಮ ಎಂದು ಸಲಹೆ ಮಾಡದರು.
ಕ್ಲೀನ್ ಕೂರ್ಗ್ ಸದಸ್ಯರಾದ ಅಪರ್ಣಾ ಅವರು ಮಾತನಾಡಿ ಲ್ಯಾಂಡ್ ಫಿಲ್ಲಿಂಗ್ ವ್ಯವಸ್ಥೆಯು ಕೊಡಗಿಗೆ ಅವಶ್ಯಕತೆಯಿಲ್ಲ. ಪ್ಲಾಸ್ಟಿಕ್ ಬಳಕೆಯನ್ನು ಸಾರ್ವಜನಿಕರು ಕಡಿಮೆ ಮಾಡಿದಷ್ಟು ಘನತ್ಯಾಜ್ಯ ಉತ್ಪತ್ತಿ ಕಡಿಮೆಯಾಗುತ್ತದೆ. ಜನರು ಹಸಿ ಕಸವನ್ನು ತಮ್ಮ ಮನೆಯಲ್ಲಿಯೇ ಕಾಂಪೋಸ್ಟ್ ಮಾಡುವುದರಿಂದ ನಗರದಲ್ಲಿ ಕಸ ಉತ್ಪತ್ತಿಯ ಪ್ರಮಾಣ ಕಡಿಮೆಯಾಗುತ್ತದೆ ಎಂದರು.
ಪರಿಸರ ಸಂಯೋಜಕರಾದ ಮುನಿರಾಜು ಅವರು ಘನತ್ಯಾಜ್ಯ ಸಂಸ್ಕರಣ ಮತ್ತು ವಿಲೇವಾರಿ ಘಟಕದ ನಿರ್ಮಾಣ ಯೋಜನೆ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ನಗರಸಭೆ ಉಪಾಧ್ಯಕ್ಷರಾದ ಸವಿತಾ ರಾಕೇಶ್, ವಲಯ ಪರಿಸರ ಅಧಿಕಾರಿ ರಘುರಾಮ್, ಪೌರಾಯುಕ್ತರದ ವಿಜಯ, ನಗರಸಭೆ ಸದಸ್ಯರು, ನಗರಸಭೆ ಆರೋಗ್ಯ ಶಾಖೆಯ ಎಇಇ ಸೌಮ್ಯ, ಗ್ರಾಮಸ್ಥರು ಇತರರು ಇದ್ದರು.