ಗ್ರಾ.ಪಂ. ಎರಡನೇ ಹಂತದ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ: ಅನೀಸ್ ಕಣ್ಮಣಿ ಜಾಯ್

ಗ್ರಾಮ ಪಂಚಾಯಿತಿ ಎರಡನೇ ಹಂತದ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಸಂಬಂಧ ಎರಡನೇ ಹಂತದಲ್ಲಿ ವಿರಾಜಪೇಟೆ ತಾಲ್ಲೂಕಿನ ಒಟ್ಟು 38 ಗ್ರಾ.ಪಂ.ಗಳ 35 ಗ್ರಾ.ಪಂ.ಗಳಲ್ಲಿ ಚುನಾವಣೆ ನಡೆಯಲಿದೆ. ಹಾಗೆಯೇ 13 ಮತಗಟ್ಟೆಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ.
ಗ್ರಾ.ಪಂ.ಚುನಾವಣೆ ಸಂಬಂಧ ವಿರಾಜಪೇಟೆ ತಾಲ್ಲೂಕಿನ ಒಟ್ಟು 183 ಮತಗಟ್ಟೆಗಳಲ್ಲಿ ಡಿಸೆಂಬರ್ 27 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆ ವರೆಗೆ ಮತದಾನ ನಡೆಯಲಿದೆ. ಹಾಗೆಯೇ 136 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, 366 ಸ್ಥಾನಗಳಿಗೆ 924 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. 54 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಹಾಗೆಯೇ ವಿರಾಜಪೇಟೆ ತಾಲ್ಲೂಕಿನ ತಿತಿಮತಿ ಗ್ರಾ.ಪಂ.ವ್ಯಾಪ್ತಿಯ ಅರಕೆರೆ 1,2,3 ಕ್ಷೇತ್ರಗಳ 4 ಸ್ಥಾನಗಳಿಗೆ ಯಾವುದೇ ನಾಮಪತ್ರ ಸ್ವೀಕೃತವಾಗಿಲ್ಲ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ವಿರಾಜಪೇಟೆ ತಾಲ್ಲೂಕಿನಲ್ಲಿ 50 ಸೂಕ್ಷ್ಮ, 18 ಅತಿ ಸೂಕ್ಷ್ಮ, 4 ನಕ್ಸಲ್ ಮತ್ತು 111 ಸಾಮಾನ್ಯ ಮತಗಟ್ಟೆಗಳೆಂದು ಗುರ್ತಿಸಲಾಗಿದೆ. ಹಾಗೆಯೇ ಚುನಾವಣಾ ಕರ್ತವ್ಯಕ್ಕೆ 54 ಬಸ್ಸು, 24 ಮ್ಯಾಕ್ಸಿಕ್ಯಾಬ್, 29 ಜೀಪು ಸೇರಿದಂತೆ ಒಟ್ಟು 107 ವಾಹನಗಳನ್ನು ನಿಯೋಜಿಸಲಾಗಿದೆ. ಮಸ್ಟರಿಂಗ್ ಕಾರ್ಯವು ಡಿಸೆಂಬರ್, 26 ರಂದು ವಿರಾಜಪೇಟೆಯ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ ಎಂದು ಅನೀಸ್ ಕಣ್ಮಣಿ ಜಾಯ್ ಅವರು ವಿವರಿಸಿದ್ದಾರೆ.
ಪ್ರತಿಯೊಂದು ಮತಗಟ್ಟೆಗೂ ಒಬ್ಬ ಅಧ್ಯಕ್ಷ ಅಧಿಕಾರಿ ಮತ್ತು ಮೂವರು ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ವಿರಾಜಪೇಟೆ ತಾಲ್ಲೂಕಿಗೆ 220 ಪಿಆರ್‍ಒ, 220 ಎಪಿಆರ್‍ಒ ಮತ್ತು 440 ಪೋಲಿಂಗ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು, ಮಾನವ-ವನ್ಯ ಪ್ರಾಣಿ ಸಂಘರ್ಷ ಇರುವ ಪ್ರದೇಶಗಳ ವ್ಯಾಪ್ತಿಯಲ್ಲಿ ಒಟ್ಟು 128 ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದ್ದಾರೆ.
ವಿರಾಜಪೇಟೆ ತಾಲ್ಲೂಕಿನಲ್ಲಿ ನೀತಿ ಸಂಹಿತೆ ಜಾರಿಯಲ್ಲಿ ಇರುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಡಿಸೆಂಬರ್ 26 ರ ಮಧ್ಯರಾತ್ರಿ 12 ಗಂಟೆಯಿಂದ ಡಿಸೆಮಬರ್ 27 ರ ಮಧ್ಯರಾತ್ರಿ 12 ಗಂಟೆಯ ವರೆಗೆ ಎಲ್ಲಾ ವಿಧದ ಸಂತೆ, ಜಾತ್ರೆಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ವಿರಾಜಪೇಟೆ ತಾಲ್ಲೂಕಿನಲ್ಲಿ ನೀತಿಸಂಹಿತೆ ಜಾರಿಯಲ್ಲಿರುವ ಗ್ರಾ.ಪಂ.ವ್ಯಾಪ್ತಿಯಲ್ಲಿ ಡಿಸೆಂಬರ್ 25 ರ ಸಂಜೆ 5 ಗಂಟೆಯಿಂದ ಡಿಸೆಂಬರ್ 27 ರ ಸಂಜೆ 5 ಗಂಟೆಯವರೆಗೆ ಎಲ್ಲಾ ವಿಧದ ಮದ್ಯಗಳ ತಯಾರಿಕೆ, ಸಾಗಾಣಿಕೆ, ಶೇಖರಣೆ ಮತ್ತು ಎಲ್ಲಾ ರೀತಿಯ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್, ಹೋಟೆಲ್ ಮುಂತಾದವುಗಳಲ್ಲಿ ಎಲ್ಲಾ ವಿಧದ ಮದ್ಯಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಗ್ರಾ.ಪಂ.ಚುನಾವಣೆ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿಗೆ ಹೊಂದಿಕೊಂಡಂತೆ ಇರುವ ಕೇರಳ ರಾಜ್ಯದ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಮತದಾನದ ಹಿಂದಿನ ದಿನ ಮತ್ತು ಮತದಾನದ ದಿನದಂದು 5 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್, ಹೋಟೆಲ್ ಮುಂತಾದವುಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಲು ಕೋರಲಾಗಿದೆ.
ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 126, ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 35 ರಡಿ ವ್ಯಾಖ್ಯಾನಿಸಿದ ಅಂಶಗಳಂತೆ ಮತ್ತು ದಂಡ ಪ್ರಕ್ರಿಯಾ ಸಂಹಿತೆ 1973ರ ಸೆಕ್ಷನ್ 144 ರಡಿ ವಿರಾಜಪೇಟೆ ತಾಲ್ಲೂಕಿನಲ್ಲಿ ನೀತಿಸಂಹಿತೆ ಜಾರಿಯಲ್ಲಿರುವ ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ. ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ.
ಅಭ್ಯರ್ಥಿ ಅಥವಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷದ ಪರ ಮತಯಾಚನೆ ನಡೆಸುವುದನ್ನು ಹೊರತುಪಡಿಸಿ, ಉಳಿದಂತೆ ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಸಭೆ-ಸಮಾರಂಭ ನಡೆಸುವುದು, ಮೆರವಣಿಗೆ ಇನ್ನಿತರೆ ಕಾರ್ಯಕ್ರಮ ನಡೆಸುವುದು, ಛಾಯಾಗ್ರಹಣ, ದೂರದರ್ಶನ ಅಥವಾ ಇತರ ರೀತಿಯ ಉಪಕರಣಗಳ ಮೂಲಕ ಯಾವುದೇ ಚುನಾವಣಾ ವಿಷಯವನ್ನು ಸಾರ್ವಜನಿಕರಿಗೆ ಪ್ರದರ್ಶಿಸುವುದನ್ನು ನಿಷೇಧಿಸಿದೆ.
ಅಭ್ಯರ್ಥಿ ಅಥವಾ ಕಾರ್ಯಕರ್ತರು ಮತದಾರರನ್ನು ಮತಗಟ್ಟೆಗೆ ವಾಹನದಲ್ಲಿ ಕರೆತರುವುದು ಹಾಗೂ ಅಲ್ಲಿಂದ ಕರೆದುಕೊಂಡು ಹೋಗುವುದನ್ನು ನಿಷೇಧಿಸಿದೆ.ಐದಕ್ಕಿಂತ ಹೆಚ್ಚಿಗೆ ಜನ ಗುಂಪು ಸೇರುವುದು/ ಸಂಚರಿಸುವುದು ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಎಲ್ಲಾ ಮತಗಟ್ಟೆಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಸ್ಥಳ ನಿರ್ಬಂಧಿತ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಖಾಸಗಿ ವಾಹನಗಳ ನಿಲುಗಡೆ, ಧ್ವನಿ ವರ್ಧಕ ಬಳಕೆ ಮುಂತಾದವುಗಳನ್ನು ನಿಷೇಧಿಸಿದೆ ಹಾಗೂ ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಅಭ್ಯರ್ಥಿ ಪರ ಪ್ರಚಾರ, ಮತದಾರರ ಓಲೈಕೆ ಮುಂತಾದವುಗಳನ್ನು ಮಾಡುವಂತಿಲ್ಲ. ಈಗಾಗಲೇ ಅಂತಿಮ ಕಣದಲ್ಲಿ ಇರುವ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿಕೊಂಡಿರುತ್ತಾರೆ. ಈ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತಿಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲು ಪ್ರತಿ ಎರಡು - ಮೂರು ಗ್ರಾ.ಪಂ.ಗಳಿಗೆ ಒಬ್ಬರಂತೆ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಕೋವಿಡ್ ಶಂಕಿತರು ಮತಗಟ್ಟೆಗೆ ತೆರಳಿ ಮತದಾನ ಮಾಡಲು ಅವಕಾಶ: ಎರಡನೇ ಹಂತದಲ್ಲಿ ಡಿಸೆಂಬರ್ 27 ರಂದು ವಿರಾಜಪೇಟೆ ತಾಲ್ಲೂಕಿನಲ್ಲಿ ಮತದಾನ ನಡೆಯಲಿದ್ದು, ಕೋವಿಡ್-19 ಹಿನ್ನಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಎಸ್‍ಒಪಿ ನೀಡಿದ್ದು, ಎಸ್‍ಒಪಿಯಂತೆ ಕೋವಿಡ್-19 ಸೋಂಕಿತರು ಹಾಗೂ ಮತದಾನದ ದಿನ ತಪಾಸಣೆಯಿಂದ ಕಂಡುಬಂದ ಕೋವಿಡ್ ಶಂಕಿತರು ಮತಗಟ್ಟೆಗಳಿಗೆ ತೆರಳಿ ಖುದ್ದು ಮತದಾನ ಮಾಡಲು ಇಚ್ಚಿಸಿದಲ್ಲಿ ಅಂತವರಿಗೆ ಮತದಾನ ಮಾಡಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ. ತಾಲ್ಲೂಕು ಆರೋಗ್ಯಾಧಿಕಾರಿಗಳು ಮತ್ತು ಆರೋಗ್ಯ ಇಲಾಖಾ ಸಿಬ್ಬಂದಿಗಳು ಕೋವಿಡ್ ಸೋಂಕಿತರು ಹಾಗೂ ಕೋವಿಡ್ ಶಂಕಿತರನ್ನು ಅಗತ್ಯ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ, ಸಂಬಂಧಪಟ್ಟ ಮತಗಟ್ಟೆಗಳಿಗೆ ಮತದಾನದ ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಕರೆತಂದು ಮತದಾನದ ನಂತರ ಅವರನ್ನು ಸ್ವಸ್ಥಾನಕ್ಕೆ ಮರಳಿ ಕರೆದುಕೊಂಡು ಹೋಗಲಿದ್ದಾರೆ. ಪ್ರತಿ ಮತದಾನ ಕೇಂದ್ರಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ನೇಮಕ, ಮತದಾನ ಕೊಠಡಿಗೆ, ಮಸ್ಟರಿಂಗ್, ಡಿ ಮಸ್ಟರಿಂಗ್ ಮತ್ತು ಎಣಿಕೆ ಕೇಂದ್ರಕ್ಕೆ ಆಗಮಿಸುವ ವ್ಯಕ್ತಿಗಳನ್ನು ಪ್ರವೇಶದ್ವಾರದಲ್ಲಿ ಕೋವಿಡ್-19 ಥರ್ಮಲ್ ಜ್ವರ ತಪಾಸಣೆ ಮಾಡಲಾಗುವುದು ಹಾಗೂ ಒಳಪ್ರವೇಶಿಸುವ ವ್ಯಕ್ತಿಗಳು ಮಾಸ್ಕ ಅನ್ನು ಧರಿಸಿರುವುದನ್ನು ಹಾಗೂ ಪ್ರತಿಯೊಬ್ಬರೂ ಸ್ಯಾನಿಟೈಸರ್ ಬಳಸಿ ಕೈಗಳನ್ನು ಶುಚಿಗೊಳಿಸಿಕೊಳ್ಳುವುದನ್ನು ಕಡ್ಡಯ ಪಡಿಸಲಾಗಿದೆ. ಕೋವಿಡ್-19 ಲಕ್ಷಣಗಳು ಕಂಡಬಂದ ವ್ಯಕ್ತಿಗಳನ್ನು ಕೂಡಲೇ ಪ್ರತ್ಯೇಕಿಸಿ, ಹೆಚ್ಚಿನ ತಪಾಸಣೆಗೆ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಡುವ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆಯಿಂದ ಮಾಡಲಾಗುವುದು. ಮತದಾನಕ್ಕೆ ನಿಗಧಿ ಪಡಿಸಿದ ಕೊಠಡಿಯನ್ನು ಮತ್ತು ಮಸ್ಟರಿಂಗ್, ಡಿಮಸ್ಟರಿಂಗ್, ತರಬೇತಿ ಕೇಂದ್ರ ಹಾಗೂ ಎಣಿಕೆ ಕೇಂದ್ರಗಳನ್ನು ಶೇ.1 ಸೋಡಿಯಂ ಹೈಪೋಕ್ಲೋರೈಡ್ ದ್ರಾವಣವನ್ನು ಸಿಂಪಡಿಸಿ ಸಿದ್ಧಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಳ್ಳುವ ಎಲ್ಲಾ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಮತದಾನಕ್ಕೆ ಅನುಕೂಲ ಮಾಡುವ ದೃಷ್ಟಿಯಿಂದ ಅಂಚೆ ಮತಪತ್ರಗಳನ್ನು ವಿತರಿಸಲಾಗಿದೆ. *ಗುರುತಿನ ಚೀಟಿ ತೋರಿಸಿ,* *ಮತ ಚಲಾಯಿಸಿ* : ಮತದಾರರು ಮತದಾನ ಮಾಡುವಾಗ ಭಾರತ ಚುನಾವಣಾ ಆಯೋಗವು ನೀಡಿರುವ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ ಅಥವಾ ಪಾಸ್‍ಪೋರ್ಟ್. ಡ್ರೈವಿಂಗ್ ಲೈಸನ್ಸ್. ಆದಾರ ತೆರಿಗೆ ಗುರುತಿನ ಚೀಟಿ (ಪ್ಯಾನ್). ರಾಜ್ಯ/ ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು. ಸಾರ್ವಜನಿಕ ವಲಯದ ಬ್ಯಾಂಕ್/ ಕಿಸಾನ್ ಮತ್ತು ಅಂಚೆ ಕಚೇರಿ ನೀಡಿರುವ ಭಾವಚಿತ್ರವಿರುವ ಪಾಸ್ ಪುಸ್ತಕ. ಮಾನ್ಯತೆ ಪಡೆದ ನೋಂದಾಯಿತ ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕೊಟ್ಟಿರುವ ಗುರುತಿನ ಚೀಟಿಗಳು. ಭಾವಚಿತ್ರವಿರುವ ನೋಂದಾಯಿತ ಡೀಡ್‍ಗಳು/ ಪಟ್ಟಾಗಳು ಮುಂತಾದ ಆಸ್ತಿ ದಾಖಲೆಗಳು. ಭಾವಚಿತ್ರವಿರುವ ಪಡಿತರ ಚೀಟಿಗಳು. ಸಕ್ಷಮ ಪ್ರಾಧಿಕಾರ ನೀಡಿರುವ ಎಸ್ಸಿ/ಎಸ್ಟಿ/ಒಬಿಸಿ ಭಾವಚಿತ್ರವಿರುವ ಪ್ರಮಾಣ ಪತ್ರಗಳು. ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಪಿಂಚಣಿ ಪಾವತಿ ಆದೇಶಗಳು ಅಥವಾ ಮಾಜಿ ಯೋಧರ ಪಿಂಚಣಿ ಪುಸ್ತಕ/ ಪಿಂಚಣಿ ಸಂದಾಯ ಆದೇಶಗಳಂತಹ ಪಿಂಚಣಿ ದಾಖಲೆಗಳು, ವೃದ್ಧಾಪ್ಯ ವೇತನ ಆದೇಶಗಳು, ವಿಧವಾ ವೇತನ ಆದೇಶಗಳು. ಭಾವಚಿತ್ರವಿರುವ ಸ್ವಾತಂತ್ರ್ಯ ಯೋಧರ ಗುರುತಿನ ಚೀಟಿಗಳು. ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಶಸ್ತ್ರ ಪರವಾನಗಿ. ಅಂಗವಿಕಲರಿಗೆ ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿಗಳು. ಮಾಜಿ ಯೋಧರ ಭಾವಚಿತ್ರವಿರುವ ಸಿಎಸ್‍ಡಿ. ಕ್ಯಾಂಟೀನ್ ಕಾರ್ಡ್. ಸಂಧ್ಯಾ ಸುರಕ್ಷಾ ಯೋಜನೆಯ ಭಾವಚಿತ್ರವಿರುವ ಗುರುತಿನ ಚೀಟಿ. ನರೇಗಾ ಯೋಜನೆಯ ಅಡಿಯಲ್ಲಿ ನೀಡಿರುವ ಭಾವಚಿತ್ರವಿರುವ ಉದ್ಯೋಗ ಕಾರ್ಡ್. ಭಾವಚಿತ್ರವಿರುವ ಯಶಸ್ವಿನಿ ಕಾರ್ಡ್. ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿಗಳು ಮತ್ತಿತರ ಸ್ಥಳೀಯ ಸಂಸ್ಥೆಗಳು ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ. ಸರ್ಕಾರಿ ಇಲಾಖೆ ನೀಡಿರುವ ಭಾವಚಿತ್ರವಿರುವ ಹಿರಿಯ ನಾಗರಿಕರ ಗುರುತಿನ ಚೀಟಿ. ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ನೀಡಿರುವ ಕುಟುಂಬದ ಸದಸ್ಯರ ಹೆಸರು ಮತ್ತು ವಯಸ್ಸು ಹಾಗೂ ಕುಟುಂಬದ ಯಜಮಾನನೊಂದಿಗೆ ಹೊಂದಿರುವ ಸದಸ್ಯರ ಸಂಬಂಧ ಒಳಗೊಂಡ ಭಾವಚಿತ್ರ ಇರುವ ತಾತ್ಕಾಲಿಕ /ಮೂಲ ಪಡಿತರ ಚೀಟಿ. ಭಾವಚಿತ್ರವಿರುವ ಆರೋಗ್ಯ ವಿಮಾ ಯೋಜನೆ, ಸ್ಮಾರ್ಟ್ ಕಾರ್ಡ್‍ಗಳು (ಕಾರ್ಮಿಕ ಮಂತ್ರಾಲಯ ಯೋಜನೆ). ಆಧಾರ್ ಕಾರ್ಡ್ ಈ 22 ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.