fbpx

ಕೋಣೆಯ ತುಂಬಾ ಕತ್ತಲು ನಲುಗಿ ಮಲಗಿತ್ತು. ದೂರದ ಚಂದಿರನು ಹತ್ತಿರ ಬರಲು ಹೆದರಿ ಅಲ್ಲೇ ನಿಂತಿದ್ದ.

ಪಕ್ಕದ ಸೆಲ್ಲಿನಲ್ಲಿದ್ದಾತನ ಗೊರ ಗೊರ… ಗೊರಕೆ ಸದ್ದಿನ ನಡುವೆಯೂ ದೊಡ್ಡ ಗೋಡೆ ಗಡಿಯಾರದ ಮುಳ್ಳು ಕ್ಲಚ್..ಕ್ಲಚ್..ಕ್ಲಚ್ ಎನ್ನುತ್ತಾ ಶೃತಿ ತಪ್ಪದೆ ರಾಗವಾಡುತ್ತಿತ್ತು!

ಆತ ಕತ್ತಲೆಯಲ್ಲೇ ಎದ್ದ, ಅವನು ಆ ಕತ್ತಲೆಗೆ ಎಷ್ಟು ಹೊಂದಿಕೊಂಡಿದ್ದನೆಂದರೆ ಎಲ್ಲೂ ತಡವರಿಸದೆ ನಡೆದು ಸಾಗಿ, ಸೆಲ್ಲಿನ‌ ಈಶಾನ್ಯ ಮೂಲೆಯಲ್ಲಿರಿಸಿದ್ದ ಮಲಮೂತ್ರ ಮಾಡುವ ಬಕೇಟಿಗೆ ಮೂತ್ರ ಮಾಡಿ ಬಂದು, ಎದ್ದಲ್ಲೇ ಕುಳಿತ. ಕುಡಿಯಲಿಡುವ ನೀರಿನ ಜಗ್ಗಿನಿಂದ ಸ್ವಲ್ಪ ನೀರು ಬಗ್ಗಿಸಿ ಕುಡಿದು, ತನ್ನ ಚಡ್ಡಿ ಜೇಬಿನಿಂದ ಒಂದು ಬೀಡಿಯನ್ನು ಹೊರಗೆಳೆದು ಬಾಯಿಗೆ ಸಿಕ್ಕಿಸಿಟ್ಟು. ಅದೇ ಜೇಬಿನಿಂದ ಬೆಂಕಿಪೊಟ್ಟಣವನ್ನು ಹೊರಕ್ಕೆಳೆದು, ಕಡ್ಡಿ ಗೀರಿದ. ಕತ್ತಲೆ‌ ಆ ಪ್ರಕಾಶಕ್ಕೆ ನಲುಗಿತು.

‌‌‌‌‌ ಕತ್ತಲೆಯಲ್ಲೂ ಮಂಗಳೂರಿನ ಕೇಂದ್ರ ಕಾರಾಗೃಹ ಸೆಖೆಗೆ ಬೆವರುತ್ತಿತ್ತು. ಕೊಡಗಿನ ಖೈದಿ ಉತ್ತಪ್ಪನ ಹಣೆಯಿಂದ ಜಿನುಗುತ್ತಿದ್ದ ಬೆವರ ಹನಿ. ಬೀಡಿಯ ಸಣ್ಣ ಕಿಡಿಯ ಪ್ರಕಾಶಕ್ಕೆ ಮಿನುಗುತ್ತಿತ್ತು.
ಕೊಡಗಿನ ಚಳಿಗೆ, ಗಂಟಲಿಗೆ ಕೊಂಚ ರಮ್ ಸುರುವಿಕೊಂಡು, ಎರಡೆರಡು ಮಳೆ ಕಂಬಳಿಗಳನ್ನು ಮೈಗೆಳೆದುಕೊಂಡು ನಿದ್ರೆ ಹೋಗುತ್ತಿದ್ದ ಉತ್ತಪ್ಪನಿಗೆ, ಆ‌‌ ಕಂಬಳಿಗೆ ಮೂವತ್ತಾರು ವರ್ಷಗಳಿಂದ ಪಾಲುದಾರಳಾಗಿದ್ದ ಪೂವಿ ನೆನಪಾದಳು.

ಸೊಳ್ಳೆಯೊಂದು ಗುಂಯ್….ಗುಡುತ್ತಾ ಬಂದು ಉತ್ತಪ್ಪನ ವಯಸ್ಕ ತೋಳಿನ ಮೇಲೆ ಕುಳಿತು ತನ್ನ ಮೊನಚಾದ ಮೂತಿಯನ್ನು ಕೊಂಚ ಆಳಕ್ಕೆ ಇಳಿಸಿತು.
ಛಟ್….ಎನ್ನುವ ಸಪ್ಪಳಕ್ಕೆ ಅದೇ ಸ್ಥಿತಿಯಲ್ಲಿ ಅಲ್ಲೇ ಸತ್ತು ಮಲಗಿತ್ತು.


ದಕ್ಷಿಣ ಕೊಡಗಿನ ನೈರುತ್ಯ ದಿಕ್ಕಿನ, ಪಶ್ಚಿಮ ಘಟ್ಟದ, ಅಭಯಾರಣ್ಯದ ಬುಡದಲ್ಲಿಯೇ ಈ ಉತ್ತಪ್ಪ ದಂಪತಿಗಳು ಸಣ್ಣ ಕಾಫಿ ತೋಟವೊಂದನ್ನು ಮಾಡಿಕೊಂಡು, ಹಳೆಯ ಹೆಂಚು ಮನೆಯಲ್ಲಿ ಸುಖವಾಗಿದ್ದರು. ಇಬ್ಬರ ಪ್ರಾಯಕ್ಕೂ ವೃದ್ಧಾಪ್ಯದ ಗಂಧ ಆವರಿಸುತ್ತಿತ್ತಾದರೂ ಮೂವತ್ತಾರು ವರ್ಷಗಳಲ್ಲಿ ಪೂವಿಯ ಗರ್ಭದಲ್ಲಿ ಶಿಶುಭಾಗ್ಯ ಉಂಟಾಗಿರಲಿಲ್ಲ. ಹಾಗಂತ ಅವರೇನೂ ಸುಖವಾಗಿರಲಿಲ್ಲ ಅಂತೇನೂ ಅಲ್ಲ. ಗಂಡ ಹೆಂಡತಿಯರಿಬ್ಬರೂ ಸುಖಿ ಜೀವಿಗಳು ತಮ್ಮ ಕಾಫಿ ತೋಟವನ್ನೇ ಮಕ್ಕಳಂತೆ ಪ್ರೀತಿಸುತ್ತಿದ್ದರು, ಅಷ್ಟೇ ಶ್ರಮಿಕರು ಹೌದು.

ತೋಟದಲ್ಲಿ ದುಡಿಯುವುದು, ಪೊನ್ನಂಪೇಟೆಯ ಸಂತೆಗೆ ಹೋಗಿಬರುವುದು, ಸಕ್ಕರೆ ಖಾಯಿಲೆಗೆ ಗುಳಿಗೆ ತರಲು ಔಷಧಾಲಯಕ್ಕೆ ಹೋಗುವುದು, ಹೀಗೆ ಎಲ್ಲಿಗೆ ಹೋದರು ಈ ಉತ್ತಪ್ಪ, ಪೂವಿ ಪ್ರತ್ಯೇಕವಾಗಿ ಹೋಗುತ್ತಿರಲಿಲ್ಲ.
ಒಬ್ಬರನ್ನು ಬಿಟ್ಟು ಒಬ್ಬರು ಕಳೆದ ಮೂವತ್ತಾರು ವರ್ಷಗಳಲ್ಲಿ ಒಂದು ದಿನವೂ ಬದುಕಿಲ್ಲ.
‌‌‌ ಈಗೀಗ ಪೂವಿಗೆ ಸ್ವಲ್ಪ ಮಂಡಿ ನೋವು ಹೆಚ್ಚಾಗಿತ್ತು. ಡಾಕ್ಟರಿಗೆ ತೋರಿಸಿದಾಗ ಮಂಡಿಯ ಚಿಪ್ಪಿನ ತೈಲ‌ ಕಡಿಮೆ ಆದಾಗ ಈ ತರಹದ ನೋವು ಸಹಜವಾಗಿ ಬರುತ್ತದೆ ಎಂದು ಹೇಳಿ. ಔಷಧಿಕೊಟ್ಟು, ಕಳುಹಿಸಿದ್ದರಾದರು ನೋವೇನು ಕಡಿಮೆ ಆಗಿರಲಿಲ್ಲ. ಈಗೀಗ ತೋಟಕ್ಕೆ ಹೋಗಿ, ಮೊದಲಿನಂತೆ ಅವಳಿಗೆ ಕೆಲಸ ಮಾಡಲಾಗುತ್ತಿರಲಿಲ್ಲಾ. ಸ್ವಲ್ಪ ನಡೆಯುವಗಲೇ ಉಸ್ಸಾಪ್ಪಾ….. ಎಂದು ಕುಳಿತು‌, ಅಲ್ಲಲ್ಲೇ ಸುಧಾರಿಸಿಕೊಳ್ಳುತ್ತಿದ್ದಳು.

ಇವರು ಹಿಂದೆಲ್ಲ ಪಶ್ಚಿಮ ಘಟ್ಟದ ಬೆಟ್ಟದ ಮೇಲೂ ಹೋಗಿ ಏಲಕ್ಕಿ ಬೆಳಸುತ್ತಿದ್ದರಂತೆ. ಆ ಆನೆ, ಹುಲಿ ಬದುಕುವ ದಟ್ಟಾರಣ್ಯದಲ್ಲಿ ಸಾಹಸ ಮಾಡಿ ಇವರು ಬೆಳಸುತ್ತಿದ್ದ ಏಲಕ್ಕಿಯನ್ನು ಬೆಟ್ಟದ ಆ ಬದಿಯಿಂದ ಬರುವ ಮಲಯಾಳಿಗಳು ಖರೀದಿಸುತ್ತಿದ್ದರಂತೆ.
ಪೂವಿ, ಉತ್ತಪ್ಪ ದಂಪತಿಗಳಿಗೆ ಯಾವ ಪರಿ ಮಳಯಾಳಂ ಬರುತ್ತಿತ್ತು ಎಂದರೆ. ಇವರ ಜೊತೆ ಕೇರಳದಿಂದ ಬರುತ್ತಿದ್ದ ಮಲಯಾಳಿ ವ್ಯಾಪಾರಿಗಳೂ ಚೌಕಾಸಿ ಮಾಡಲು ಹಿಂದೇಟು ಹಾಕುತ್ತಿದ್ದರು.‌ ಕೊನೆಗೆ ಇವರ ರೇಟಿಗೆ ಒಪ್ಪಿ, ಶರಣಾಗಿ ವ್ಯಾಪಾರ ಮಾಡುತ್ತಿದ್ದರು.
ಪೂವಿ, ಉತ್ತಪ್ಪನವರ ಏಕಮಾತ್ರ ಸಂಗಾತಿಯಾಗಿದ್ದದ್ದು ರೇಡಿಯೋ ಮಾತ್ರ. ಅವರು‌ ಮನೆಯಲ್ಲಿರುತ್ತಿದ್ದ ಅಷ್ಟೂ ಹೊತ್ತು ರೇಡಿಯೋ ಹಾಡುತ್ತಲೇ ಇರುತ್ತಿತ್ತು. ಕೆಲವೊಮ್ಮೆ ಅದು ಕನ್ನಡದಲ್ಲಿ ಹಾಡುತ್ತಿದ್ದರೆ. ಮತ್ತೂ‌ ಕೆಲವೊಮ್ಮೆ ಮಲಯಾಳಂ ಮಾತನಾಡುತ್ತಿತ್ತು. ಪೂವಿ ಹಾಗು ಉತ್ತಪ್ಪ ಹಿಂದೊಮ್ಮೆ ಪೊನ್ನಂಪೇಟೆಯ ಟೆಂಟ್ ಸಿನಿಮಾಕ್ಕೆ ಹೋಗಿ ಮಲಯಾಳಂನ ‘ಚೆಮ್ಮಿನ್’ ಚಿತ್ರ ವೀಕ್ಷಿಸಿದ್ದರಂತೆ. ರೆಡಿಯೋದಲ್ಲಿ ಚೆಮ್ಮಿನ್ ಚಿತ್ರದ ‘ಕಡಲಿನಕ್ಕರೇ…’ ಹಾಡು ಬಂದರೇ ಇಬ್ಬರು ಮಾಡುತ್ತಿದ್ದ ಅಷ್ಟೂ ಕೆಲಸ ಬಿಟ್ಟು ರೇಡಿಯೋ ಬಳಿ ಓಡಿ ಬಂದು ನಿಂತು ಹಾಡುಕೇಳುತ್ತಿದ್ದರು.
ಹಾಗು ಅವರೇ ಆ ಸಿನಿಮಾದ ನಾಯಕ ನಾಯಕಿಯರೇನೋ ಎನ್ನುವಂತೆ ಆ ದಿನ ಪೂರ್ತಿ ಗುಂಗಿನಲ್ಲಿರುತ್ತಿದ್ದರು.

ಕೆಲ ವರ್ಷಗಳಿಂದ ಫಾರೆಸ್ಟಿನವರು ಕಾಡಿಗೆ ಹೋಗುವುದನ್ನು ತಡೆಗಟ್ಟಿದ ಮೇಲೆ, ಇವರ ಬೆಟ್ಟದ ಮೇಲಿನ ಏಲಕ್ಕಿ ತೋಟ ಹಾಗೆ ಉಳಿಯಿತು‌. ಈಗಲೂ ಅಲ್ಲಿ ಇವರ ತೋಟ ಪಾಳು ಬಿದ್ದು ಹಾಗೆ ಇದೆ. ಕೆಲ ಏಲಕ್ಕಿ ಗಿಡಗಳು ಬದುಕಿದೆ. ಒಂದಿಷ್ಟು ಎಳೆಯ ಏಲಕ್ಕಿ ಕಾಯಿಗಳು ಮಂಗ‌ಗಳ ಪಾಲಾದರೆ. ಬಾಕಿ ಉಳಿದವು ಫಾರೆಸ್ಟಿನವರು ಕುಯ್ಯುತ್ತಿದ್ದರು. ಬೆಟ್ಟದ ಆ ತುದಿಯ ಮಲಯಾಳಿಗಳು ಬೆಟ್ಟದ ಮೇಲೆ ಬಿದಿರು ಕಡಿಯಲು ಕಳ್ಳದಾರಿಯಲ್ಲಿ ಬಂದು ಹೋಗುವಾಗ ಅವರ ಪಾಲಿಗೂ ಸ್ವಲ್ಪ ‌ಏಲಕ್ಕಿ ಹೋಗುತ್ತಿತ್ತು.

ಇವರಿಬ್ಬರು‌ ಮಾತ್ರ ಫಾರೆಸ್ಟಿ‌‌ನವರು‌ ಊರಿಗೆ ಡಂಗೂರ ಬಾರಿಸಿದ ದಿನದಿಂದ ಈ ದಿನದವರೆಗೂ ಬೆಟ್ಟದ ಕಡೆ ಹೆಜ್ಜೆ ಹಾಕಲೇ ಇಲ್ಲ.
‌‌ಉತ್ತಪ್ಪನವರ ಹೆಸರಿ‌ನಲ್ಲಿ ಪಾರಂಪರಿಕವಾಗಿ ಬಂದ ಡಬಲ್ ಬೇರಲ್ ಕೋವಿ ಮನೆಯಲ್ಲಿ ಇತ್ತಾದರೂ, ಅದು ಎಂದೂ ಸದ್ದು ಮಾಡಿರಲಿಲ್ಲ. ಇವರು ಕಾಫಿ ಗಿಡದ ನಡುವೆ ಬೆಳೆದ ಬಾಳೆ, ಗೆಣಸು ಕಾಡಂದಿ ಪಾಲಾದರೂ ಇವರು ತಲೆಕಡೆಸಿಕೊಳ್ಳುತ್ತಿರಲಿಲ್ಲ. ವರ್ಷಕ್ಕೊಮ್ಮೆ ಇವರ ತೋಟದಲ್ಲಿ ಕಾಡಾನೆ ಹಿಂಡು ಬಂದು ಒಂದು ರಾತ್ರಿ ತಂಗಿ ಹೋಗುತ್ತಿತ್ತಾದರೂ ಅವುಗಳು ಇವರಿಗೆ, ಇವರು ಅವುಗಳಿಗೆ ಎಂದೂ ತೊಡಕಾಗುತ್ತಿರಲಿಲ್ಲ.

ನರ ಭಕ್ಷಕ ವ್ಯಾಘ್ರವೊಂದು ಊರಿಗೇ ಉಪಟಳವಾದರೂ ಇವರು ಸಹಜವಾಗೆ ಇದ್ದರು. ಇವರ ಪಕ್ಕದ ತೋಟದಲ್ಲಿ ಕೆಲ ಕಾಮಧೇನುಗಳು ಅದಕ್ಕೆ ಬಲಿಯಾಯಿತಾದರೂ ಇವರ ಬಳಿ ಹಸುಗಳೇ ಇರಲಿಲ್ಲ. ‌

ನರಭಕ್ಷಕ ಹುಲಿ ಪಕ್ಕದೂರಿನ ಹುಡುಗಿಯೊಬ್ಬಳನ್ನು ಕೊಂದ ಸುದ್ದಿ ರೇಡಿಯೋ ವಾರ್ತೆಯಲ್ಲಿ ಬಂತಾದರೂ ಇವರ ಊರಿನಲ್ಲಿ ಅಂತಹಾ ಪ್ರಕರಣಗಳು ದಾಖಲಾಗಿರಲಿಲ್ಲ. ಈ ನಡುವೆ ಪೂವಿಗೆ ಸಣ್ಣಗೆ ಎದೆನೋವು ಕಾಣಿಸಿಕೊಂಡು ಈಗ ಅವಳನ್ನು ತೋಟಕ್ಕೂ ಉತ್ತಪ್ಪ ಕರೆದುಕೊಂಡು ಹೋಗುತ್ತಿರಲಿಲ್ಲ.

ವಾರಕ್ಕೊಮ್ಮೆ ಪೊನ್ನಂಪೇಟೆ ಸಂತೆಗೆ ಹೋಗುವುದನ್ನು ಮಾತ್ರ ಇಬ್ಬರೂ ತಪ್ಪಿಸುತ್ತಿರಲಿಲ್ಲ. ಹೀಗೆ ಸಂತೆಗೆ ಹೋದಾಗ ಉಸ್ಮಾನ್ ಕಾಕನ ಹೋಟೆಲಿಗೆ ಹೋಗಿ, ಹುರಿದ ಮೀನಿನ ಫ್ರೈ ಜೊತೆಗೆ ಊಟ ಮಾಡಿ, ಬರುವಾಗ ಎರಡು ಕೆ.ಜೆ‌ ಹಂದಿಮಾಂಸವನ್ನು ಗೋಪಾಲನ ಅಂಗಡಿಯಿಂದ ಪೂವಿ ಕಟ್ಟಿಸುವಷ್ಟರಲ್ಲಿ, ಉತ್ತಪ್ಪ ಹೋಗಿ ಅರ್ಧ ಬಾಟಲಿ ‘ಒರಿಜಿನಲ್ ಚಾಯ್ಸ್ ಬ್ರಾಂಡಿ’ ಪಾರ್ಸಲ್ ತಂದು ಬಿಡುತ್ತಿದ್ದ. ಗಂಡ ಹೆಂಡತಿ ರಾತ್ರಿ ಊಟಕ್ಕೂ ಮುಂಚೆ ಕೊಂಚವೇ ಕೊಂಚ ಕುಡಿಯುತ್ತಿದ್ದರು.
ಈಗೀಗ ಕಾಫಿತೋಟದಲ್ಲಿ ಉತ್ತಪ್ಪನಿಗೂ ಕಷ್ಟ ಎನಿಸಿದಾಗ ಆಗಾಗ್ಗೆ ನಾಪೋಕ್ಲುವಿನಿಂದ ಮೊಡಂಕಿಲ ದಂಪತಿಗಳನ್ನು ಕೆಲಸಕ್ಕೆ ಕರೆಯಿಸಿಕೊಳ್ಳುತ್ತಿದ್ದ. ಅವರು ಹಾಗೆ ಬಂದರೆ ಇವರ‌ ಮನೆಯ ಮತ್ತೊಂದು ಭಾಗದಲ್ಲೆ‌ ಕೆಲದಿನಗಳು ಉಳಿದುಕೊಳ್ಳುತ್ತಿದ್ದರು.
ಹೀಗೆ ಕಾಲ ಚಲಿಸುತ್ತಿತ್ತು. ಎಲ್ಲವೂ ಸೊಗಸಾಗಿತ್ತು. ಊರವರಿಗೆ ಅದೊಂದು ನೋಟೀಸು ಬರುವವರೆಗೂ…
‌‌‌

ಪಶ್ಚಿಮ ಘಟ್ಟವು ಅಂತರಾಷ್ಟ್ರೀಯ ರಕ್ಷಿತಾರಣ್ಯ ವ್ಯಾಪ್ತಿಗೆ ಬರುತ್ತಿದ್ದು. ಕೂಡಲೇ ಘಟ್ಟದ ಬುಡದ ನಿವಾಸಿಗಳು ತಮ್ಮ ತೋಟವನ್ನು ಬಿಟ್ಟು ಕೊಡಬೇಕು. ಎನ್ನುವ ನೋಟೀಸು ಉತ್ತಪ್ಪನ ಕೈ ಸೇರಿದಾಗ ವೃದ್ಧ ದಂಪತಿಗಳು ನಲುಗಿ ಹೋಗಿದ್ದರು.
ಊರಿನವರು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದರಾದರು, ಸರಕಾರದ ಆದೇಶದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.
ಕೆಲ ಹುಡುಗರು ಕೋವಿ ಹಿಡಿದು, ಕಾಡು ಹತ್ತಿ, ಕ್ರಾಂತಿ ಕಾರಿಗಳಂತೆ ಗ್ವಿರಿಲ್ಲ ಯುದ್ಧ ಮಾರ್ಗ ಅನುಸರಿಸಲು ಮುಂದಾದಾಗ. ನಕ್ಸಲ್ ಕಾಯ್ದೆ ಅಡಿ ಅವರೆಲ್ಲರನ್ನು ಹಿಡಿದು ಮುಲಾಜಿಲ್ಲದೆ ಜೈಲಿಗಟ್ಟಿದರು, ಕೆಲವರು ಎನ್‌ಕೌಂಟರ್ ಪಟ್ಟಿಯಲ್ಲಿ ದಾಖಲಾದರು.
ಕೆಲ ಕುಟುಂಬಗಳು ತಾವಾಗಿಯೇ ಸ್ಥಳಗಳನ್ನು ಸರಕಾರಕ್ಕೆ ಬಿಟ್ಟು ‌ಕೊಟ್ಟರೆ, ಮತ್ತೂ ಕೆಲವರನ್ನು ಅಧಿಕಾರಿಗಳು ಬಲವಂತವಾಗಿ ಓಡಿಸಿ, ವಶಪಡಿಸಿಕೊಂಡರು. ಅವರ ಕ್ರೌರ್ಯ ಭಯ ಹುಟ್ಟಿಸುವಂತಿತ್ತು.


ನೋಟೀಸಿನ ಪ್ರಕಾರ ನಾಳೆ ಕಡೆಯ ದಿನ. ಎಂದಿನಂತೆ ಉತ್ತಪ್ಪ ಹಾಗು ಪೂವಿ ಪೊನ್ನಂಪೇಟೆ ಸಂತೆಗೆ ಹೋದರು, ಎಥಾಪ್ರಕಾರ ಕಾಕ ಹೋಟೆಲಿನಲ್ಲಿ ಮೀನೂಟ ಮಾಡಿದರು. ಪೂವಿ ಗೋಪಾಲನ ಅಂಗಡಿಯಲ್ಲಿ ಹಂದಿಮಾಂಸ ಕಟ್ಟಿಸಿಕೊಂಡಾಯ್ತು. ಉತ್ತಪ್ಪ ಒರಿಜಿನಲ್ ‌ಚಾಯ್ಸ್ ಕೊಂಡು ಬಂದಾಯ್ತು.

ಮನೆ‌ ತಲುಪುವಾಗ ನಸುಗತ್ತಲು.
ಈ ಬಾರಿ ಉತ್ತಪ್ಪ ಮನೆಯಿಂದ ಹೊರಡುವಾಗ ಎತ್ತಿಕೊಂಡಿದ್ದ ಹಳೆಯ ಡಬಲ್ ಬೇರಲ್ ಕೋವಿ ಅನ್ನು, ಕೋವಿ ರಿಪೇರಿ ಮಾಡಿಕೊಡುವ ತಮಿಳಿಗ ಗೊಲ್ಲ ಮಣಿವಣ್ಣನ್ ಕೈಗೆ ಕೊಟ್ಟು. ಮರಳುವಾಗ ಆಯಿಲಿಂಗ್ ಮಾಡಿಸಿ, ಅಲ್ಲೆ‌ ಪಕ್ಕದ ಅಂಗಡಿಯಿಂದ ಮೂರು ತೋಟವನ್ನೂ ಖರೀದಿಸಿ ತಂದಿದ್ದ.

ಮನೆ ತಲುಪಿ ಪೂವಿ ಎಂದಿನಂತೆ ಹಂದಿಮಾಂಸದ ಗಸಿ ಮಾಡಿದಳು, ಅನ್ನವೂ ಆಯ್ತು. ಇಬ್ಬರೂ ಕುಳಿತು ಎಂದಿಗಿಂತ ಕೊಂಚ ಹೆಚ್ಚಿಗೆ ಚಾಯ್ಸ್ ಕುಡಿದರು.

ಚೆನ್ನಾಗಿಯೇ ಊಟ ಮಾಡಿದರು.
ಉತ್ತಪ್ಪ ಕೋವಿ ಕೈಗೆತ್ತಿಕೊಂಡ, ಎರಡು ತೋಟ ತುಂಬಿಸಿದ, ಪೂವಿ ಅವನನ್ನೇ ನೋಡುತ್ತಾ ನಿಂತಿದ್ದಳು. ಅವಳ ಕಂಗಳನ್ನೇ ನೋಡಿದ ಉತ್ತಪ್ಪ. ಪೂವಿಯನ್ನು ಗಾಢವಾಗಿ ಒಮ್ಮೆ ಹತ್ತಿರ ಸೆಳೆದು ಅಪ್ಪಿಕೊಂಡ.

ಹಣೆಗೊಂದು‌ ಮುತ್ತು ಕೊಟ್ಟ.
ಪೂವಿಯ ಕಂಗಳು ತುಂಬಿಕೊಂಡವು. ಉತ್ತಪ್ಪ ತಡಮಾಡದೆ ಕೊಂಚ ದೂರ ಸರಿದು, ಕೋವಿಯನ್ನು ಎತ್ತಿ ಪೂವಿಯ ಎದೆಗೆ ಹಿಡಿದು, ಕುದುರೆ ಎಳೆದ.

ಪೂವಿ ಅಂಗಾತ ಮಲಗಿದಳು ಹಾಗೆ ಜೀವ ಬಿಟ್ಟ ಪೂವಿಯ ಮುಖದಲ್ಲಿ ಯಾವುದೇ ವಿಕಾರಗಳಿರಲಿಲ್ಲ. ಶಾಂತವಾಗಿ ಉತ್ತಪ್ಪನನ್ನೇ ನೋಡುತ್ತಾ ಸತ್ತು ಹೋಗಿದ್ದಳು.
ಕೋವಿಯನ್ನು ಉದ್ದಕ್ಕೆ ಬುಡಮೇಲಾಗಿ ನಿಲ್ಲಿಸಿದ ಉತ್ತಪ್ಪ ತನ್ನ ಕುತ್ತಿಗೆಗೆ ಕೋವಿಯ ನಳಿಕೆ ಇಟ್ಟು. ಕಾಲಿನಿಂದ ಕುದುರೆ ಮೆಟ್ಟಿದ.

ಕಣ್ಣು ಬಿಟ್ಟಾಗ ಉತ್ತಪ್ಪ. ಮಡಿಕೇರಿಯ ಆಸ್ಪತ್ರೆಯಲ್ಲಿದ್ದ. ದವಡೆ ಭಾಗದ ಕೊಂಚ ಹಲ್ಲುಗಳು ಚದುರಿ ಮುಖ ವಿಕಾರವಾಗಿತ್ತು, ಜೀವ ಹೋಗಿರಲಿಲ್ಲ, ಬದುಕಿಕೊಂಡ.
ಕೊಲೆ ಹಾಗು ಆತ್ಮಹತ್ಯೆ ಯತ್ನ ಪ್ರಕರಣದಡಿ ಉತ್ತಪ್ಪ ಕೆಲ ತಿಂಗಳು ಮಡಿಕೇರಿ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿದ್ದ. ಕೃತ್ಯಕ್ಕೆ ಎಳುವರ್ಷಗಳ ಸಜೆಯೊಂದಿಗೆ ಮಂಗಳೂರಿ‌ನ ಜೈಲಿಗೆ ವರ್ಗವಾದ.


ಪಕ್ಕದ ಸೆಲ್ಲಿನಿಂದ ಈಗಲೂ ಅದೇ ಗೊರಕೆ ಸದ್ದು. ಅಷ್ಟೇನು ಅನಾರ್ಷವಲ್ಲದ ಗಡಿಯಾರದ ಶೃತಿ ಹಿಡಿದ ಕ್ಲಚ್..ಕ್ಲಚ್…ಕ್ಲಚ್ ಸಪ್ಪಳ, ಅದೇ ತೀಕ್ಷ್ಣ ಅಂಧಕಾರ.

ಉತ್ತಪ್ಪ ನಿಧಾನಕ್ಕೆ ಆ ಕತ್ತಲಲ್ಲೆ ಮತ್ತೆ ಎದ್ದ. ಹೋಗಿ ಈಶಾನ್ಯ ಮೂಲೆಯಲ್ಲಿ ಮೂತ್ರ ಮಾಡಿ ಬಂದು ಮರಳಿ ಅಲ್ಲೇ ಕುಳಿತ. ಜಗ್ಗಿನಲ್ಲಿದ್ದ ನೀರು ಖಾಲಿಯಾಗಿತ್ತು.
ಜೇಬಿಗೆ ಕೈ ಹಾಕಿ ಮತ್ತೊಂದು ಬೀಡಿ ಹೊರಗೆಳೆದು, ಸೇದತೊಡಗಿದ.
ದೂರದಲ್ಲೆಲ್ಲೋ…ಚೆಮ್ಮೀನ್ ಚಿತ್ರದ ಕಡಲಿನಕ್ಕರೆ ಹಾಡು ಕೇಳಿಸಿದಂತಾಯ್ತು……ಜೊತೆಗೆ ಪೂವಿ ಮುಗ್ಧವಾಗಿ ನಕ್ಕಂತೆ ಅನಿಸಿತು.. ಉತ್ತಪ್ಪ ಕತ್ತಲನ್ನೇ ದಿಟ್ಟಿಸುತ್ತಾ ಕುಳಿತ ಬೀಡಿ ಸುಡುತ್ತಿದ್ದ ಸಣ್ಣ ಕಿಡಿ ಕತ್ತಲನ್ನು‌ ಕೆಣಕುತ್ತಿತ್ತು.

ರಂಜಿತ್ ಕವಲಪಾರ

error: Content is protected !!