ಗಂಗೆಯಲ್ಲಿ ತೇಲುತ್ತಿದೆ ಹೆಣಗಳೆಂದು ಹರಿದಾಡುತ್ತಿರುವ ವಿಡಿಯೋ ನೈಜೀರಿಯಾದ್ದು!

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಹಂಚಿಕೊಳ್ಳುವುದು, ದ್ವೇಷ ಕಾರುವ ಪೋಸ್ಟ್ ಮಾಡುವುದು, ಹಿಂಸೆಗೆ ಪ್ರಚೋದನೆ ನೀಡುವುದು ಇವೆಲ್ಲವೂ ನಟಿ ಕಂಗನಾಗೆ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಇದೇ ಕಾರಣಕ್ಕೆ ಟ್ವಿಟ್ಟರ್ ಖಾತೆ ಕಳೆದುಕೊಂಡಿರುವ ಕಂಗನಾ ಹಳೆಯ ಚಾಳಿಯನ್ನು ಇನ್‌ಸ್ಟಾಗ್ರಾಂನಲ್ಲಿ ಮುಂದುವರೆಸಿದ್ದಾರೆ.

ಗಂಗಾ ನದಿಯಲ್ಲಿ ಹೆಣಗಳು ತೇಲಿಬರುತ್ತಿರುವ ವಿಡಿಯೋಗಳು, ಚಿತ್ರಗಳು ಎಲ್ಲೆಡೆ ಹರಿದಾಡುತ್ತಿವೆ. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಹೆಣಗಳು ಎಲ್ಲಿಂದ ಬರುತ್ತಿವೆ? ಯಾರು ಬಿಸಾಡುತ್ತಿದ್ದಾರೆಂಬ ತನಿಖೆಗೆಂದು ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ದಳವನ್ನು ರಚಿಸಿದೆ. ಆದರೆ ನಟಿ ಕಂಗನಾ ಅವರು, ಗಂಗಾ ನದಿಯಲ್ಲಿ ಹೆಣಗಳು ತೇಲುತ್ತಿರುವ ಚಿತ್ರಗಳು, ವಿಡಿಯೋ ಭಾರತದಲ್ಲ ಅದು ನೈಜೀರಿಯಾ ದೇಶದ್ದು ಎಂದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಕಂಗನಾ, ‘ಭಾರತವನ್ನು ಕಳಪೆಯಾಗಿ ತೋರಿಸಲು ಹಲವರು ಪಿತೂರಿ ನಡೆಸುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಅವಮಾನ ಮಾಡಲು ನಮ್ಮವರೇ ಯತ್ನಿಸುತ್ತಿದ್ದಾರೆ’ ಎಂದಿದ್ದಾರೆ.

‘ಆಮ್ಲಜನಕ ಮಾಸ್ಕ್ ಮುಖಕ್ಕೆ ಹಾಕಿಕೊಂಡಿರುವ ರಸ್ತೆಯಲ್ಲಿ ಕುಳಿತ ಮಹಿಳೆಯ ಚಿತ್ರ ವಿಪರೀತ ಹರಿದಾಡಿತು ಆದರೆ ಅದು ಕೊರೊನಾ ಸಮಯದ್ದಲ್ಲ ಎಂಬುದು ಆಮೇಲೆ ಪತ್ತೆಯಾಯಿತು. ಈಗ ಗಂಗೆಯಲ್ಲಿ ಹೆಣಗಳು ತೇಲುತ್ತಿವೆ ಎನ್ನಲಾಗುತ್ತಿದೆ. ಆದರೆ ಆ ಚಿತ್ರಗಳು ನೈಜೀರಿಯಾದ್ದು ಎಂದು ಗೊತ್ತಾಗಿದೆ’ ಎಂದು ಸತ್ಯ ಬಿಚ್ಚಿಟ್ಟರು ಕಂಗನಾ.

‘ಕೆಲವು ಜನ ಭಾರತೀಯರೇ ಭಾರತದ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ಭಾರತಕ್ಕೆ ಅವಮಾನ ಆಗುವಂಥಹಾ ಸುದ್ದಿಗಳನ್ನು ಹರಡಿಸುತ್ತಿದ್ದಾರೆ. ಇವರಿಗೆ ಮೊದಲು ಬುದ್ಧಿ ಕಲಿಸಬೇಕು. ಇಸ್ರೇಲ್ ರೀತಿ ಭಾರತದ ಎಲ್ಲರೂ ಸೈನ್ಯದಲ್ಲಿ ಕೆಲಸ ಮಾಡುವುದನ್ನು ಕಡ್ಡಾಯ ಮಾಡಬೇಕು. ನಮ್ಮ ಧರ್ಮದ ಜನ ಬಿಟ್ಟು ಉಳಿದವರೆಲ್ಲರೂ ವ್ಯರ್ಥ ಎಂದು ಸಾರುವ ಧರ್ಮಗಳನ್ನು ರದ್ದು ಮಾಡಬೇಕು’ ಎಂದು ತಮ್ಮ ಯೋಚನಾ ಲಹರಿಯನ್ನು ಹಂಚಿಕೊಂಡರು ಕಂಗನಾ.

error: Content is protected !!