ಕೋವಿ ವಿಷಯದಲ್ಲಿ ಎರಡು ಜನಾಂಗದ ನಡುವೆ ಜಾತಿಯ ವಿಷಬೀಜ ಬಿತ್ತುತ್ತಿರುವ ವ್ಯಕ್ತಿಗೆ ಕಾನೂನು ರೀತಿ ಉತ್ತರ ಕೊಡಲು ಅಖಿಲ ಕೊಡವ ಸಮಾಜ ಸಿದ್ಧ!

ಅನಾದಿಕಾಲದಿಂದಲೂ ಕೊಡವರ ಬದುಕಿನ ಅವಿಭಾಜ್ಯ ಅಂಗವಾಗಿರುವ ಕೋವಿ ಮನೆಯ ಒಬ್ಬ ಸದಸ್ಯನಂತೆ ಗುರುತಿಸಿಕೊಂಡಿದೆ. ಹುಟ್ಟಿನಿಂದ ಸಾವಿನವರೆಗೂ ಕೊಡವರ ಹಾಗೂ ಜಮ್ಮ ಹಿಡುವಳಿದಾರರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಕೋವಿ ಹಕ್ಕಿನ ಬಗ್ಗೆ ಕೆಲವರು ಆಗಿಂದಾಗ್ಗೆ ಅಪಸ್ವರ ಎತ್ತುತಿದ್ದು, ಈಗಾಗಲೇ ನ್ಯಾಯಾಲಯದಲ್ಲಿ ಮೊಕದ್ದಮೆ ಎದುರಿಸಿ ಮುಖಭಂಗವಾಗಿದ್ದರೂ ಕೂಡ ಮತ್ತೆ ಕೋವಿ ವಿಷಯದಲ್ಲಿ ತಕರಾರು ಅರ್ಜಿ ಸಲ್ಲಿಸಿರುವ ಚೇತನ್ ಎಂಬ ವ್ಯಕ್ತಿ ಸಾಮರಸ್ಯದಿಂದ ಬದುಕು ಸಾಗಿಸುತ್ತಿರುವ ಎರಡು ಜನಾಂಗದ ನಡುವೆ ವಿಷಬೀಜ ಬಿತ್ತಲು ಪ್ರಯತ್ನಿಸುತ್ತಿದ್ದಾರೆ ಇದನ್ನು ಅಖಿಲ ಕೊಡವ ಸಮಾಜ ತೀವ್ರವಾಗಿ ಖಂಡಿಸಿದೆ. ಈಗಾಗಲೇ ಅಖಿಲ ಕೊಡವ ಸಮಾಜ ಹಾಗೂ ಇತರ ಸಮಾಜಗಳು ಸೇರಿಕೊಂಡು ಕಾನೂನು ಹೋರಾಟ ಮಾಡಿ ಕೋವಿ ಹಕ್ಕು ಯಥಾಸ್ಥಿತಿಯಲ್ಲಿ ಮುಂದುವರಿಸುವಂತೆ ನ್ಯಾಯಾಲಯವೇ ಆದೇಶ ಹೊರಡಿಸಿದ್ದರು ಈ ವ್ಯಕ್ತಿ ಪದೇಪದೇ ಎರಡು ಜನಾಂಗದ ನಡುವೆ ದ್ವೇಷ ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಅಖಿಲ ಕೊಡವ ಸಮಾಜ ಕಿಡಿಕಾರಿದೆ.
ವಿರಾಜಪೇಟೆಯ ಅಖಿಲ ಕೊಡವ ಸಮಾಜದ ಸಂಭಾಗಣದಲ್ಲಿ ಸಮಾಜದ ಅಧ್ಯಕ್ಷರಾದ ಮಾತಂಡ ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಕೋವಿ ಹಕ್ಕಿನ ವಿಷಯವಾಗಿ ಪದೇಪದೇ ಕಾಲುಕೆರೆದುಕೊಂಡು ಸಮಸ್ಯೆ ಹುಟ್ಟುಹಾಕಲು ಪ್ರಯತ್ನಿಸುತ್ತಿರುವವರ ವಿರುದ್ಧ ಖಂಡನಾ ನಿರ್ಣಯ ಮಾಡಿ ಮುಂದಿನ ಕಾನೂನು ಹೋರಾಟಕ್ಕೆ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು.
ಈ ಬಗ್ಗೆ ಸಭೆಗೆ ಮಾಹಿತಿ ನೀಡಿದ ಅಧ್ಯಕ್ಷರಾದ ಮಾತಂಡ ಮೊಣ್ಣಪ್ಪ ಈಗಾಗಲೇ ನಮ್ಮ ವಕೀಲರನ್ನು ಸಂಪರ್ಕ ಮಾಡಿ ಅಖಿಲ ಕೊಡವ ಸಮಾಜವನ್ನು ಕೋವಿ ಹಕ್ಕಿನ ವಿಚಾರದಲ್ಲಿ ಪಾರ್ಟಿ ಮಾಡಿ ಕಾನೂನು ಹೋರಾಟ ಮಾಡಲು ವಕೀಲರಿಗೆ ಮನವಿ ಮಾಡಲಾಗಿದೆ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಲಾಗಿದೆ ಎಂದು ವಿವರಿಸಿದರು. ಈ ವಿಷಯದಲ್ಲಿ ಸರಕಾರದ ಮುಂದಿನ ನಡೆಯನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇಡುವ ಬಗ್ಗೆ ಅಖಿಲ ಕೊಡವ ಸಮಾಜದ ಆಡಳಿತ ಮಂಡಳಿಯ ವಿಶೇಷ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಕೋವಿಯ ವಿಷಯವಾಗಿ ಅನಾವಶ್ಯಕ ಕಿರುಕುಳ ನೀಡುತ್ತಿರುವ ವ್ಯಕ್ತಿಗೆ ಕಾನೂನಿನ ಮೂಲಕವೇ ಉತ್ತರ ನೀಡಬೇಕಾಗುತ್ತದೆ. ಈಗಾಗಲೇ ಈ ವ್ಯಕ್ತಿಗೆ ಕೋವಿ ಹಕ್ಕಿನ ವಿಷಯವಾಗಿ ಹಿನ್ನಡೆಯಾಗಿದ್ದರು ಕೂಡ ಮತ್ತೆ ಮತ್ತೆ ಸಮಾಜದ ಸ್ವಾಸ್ಥ್ಯ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ತಮಗೆ ಏನೂ ಬೇಕು ಕೇಳದೆ ಇನ್ನೊಬ್ಬರ ಹಕ್ಕಿನ ಬಗ್ಗೆ ಪ್ರಶ್ನಿಸುವ ಅಧಿಕಾರ ಈತನಿಗೆ ಕೊಟ್ಟವರು ಯಾರು. ಕೊಡವರ ಕೋವಿ ಹಕ್ಕು ಇಂದು ನಿನ್ನೆಯದಲ್ಲಾ, ಇದು ಅನಾದಿಕಾಲದಿಂದಲೂ ಮುಂದುವರಿದುಕೊಂಡು ಬರುತ್ತಿದೆ. ಬ್ರಿಟಿಷರು ಈ ದೇಶಕ್ಕೆ ಬರುವ ಮೊದಲೇ ಕೊಡವರ ಕೈಯಲ್ಲಿ ಕೋವಿ ಇದೆ. ನಂತರ ದಿನಗಳಲ್ಲಿ ಕೊಡವರು ಹಾಗೂ ಜಮ್ಮ ಹಿಡುವಳಿದ್ದಾರರು ವಿಶೇಷ ಮಾನ್ಯತೆಯಲ್ಲಿ ಕೋವಿಯನ್ನು ಹೊಂದಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಈ ಅವಕಾಶವನ್ನು ಕೊಡವರು ಎಲ್ಲಿಯೂ ದುರ್ಬಳಕೆ ಮಾಡಿಕೊಂಡಿಲ್ಲ. ಬಹಳ ಹಿಂದಿನ ಕಾಲದಿಂದಲೂ ಕೂಡ ಕೋವಿಯನ್ನು ಬೇರೆ ರೀತಿಯಲ್ಲಿ ದುರ್ಬಳಕೆ ಮಾಡಿಕೊಂಡ ಪ್ರಕರಣಗಳೇ ಇಲ್ಲ. ತುರ್ತು ಪರಿಸ್ಥಿತಿಯಂತಹ ಸಮಯದಲ್ಲಿಯೂ ಕೂಡ ಕೊಡವರ ಕೋವಿ ಬೀದಿಗೆ ಬರಲಿಲ್ಲ. ಕೋವಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಜನಾಂಗದ ಹುಟ್ಟು ಸಾವಿನಲ್ಲಿ ಈ ಕೋವಿಗೆ ವಿಶೇಷ ಸ್ಥಾನಮಾನ ನೀಡಲಾಗುತ್ತಿದೆ. ಅದರಲ್ಲೂ ಜನಾಂಗದ ಸಾವಿನಲ್ಲಿ ಆಕಾಶಕ್ಕೆ ಭೋರ್ಗರೆಯುವ ಎರೆಡೆರಡು ಗುಂಡಿನ ಶಬ್ದ ಸಾವಿನ ಸಂದೇಶವನ್ನು ಹೊತ್ತು ತರುತ್ತದೆ. ಹಬ್ಬಹರಿದಿನಗಳಲ್ಲಿ ದೇವರ ಕೋಣೆಯಲ್ಲಿ ಅಥವಾ ದೇವರ ದೀಪದ ಕೆಳಗೆ ಪೂಜಿಸಲ್ಪಡುವ ಕೋವಿಯ ಮಹತ್ವ ಅರಿಯದ ಈ ವ್ಯಕ್ತಿ ಪದೇಪದೇ ತಕರಾರು ಸಲ್ಲಿಸುತ್ತಿರುವುದು ನೋಡಿದ್ದಾಗ ಈತನೀಗೆ ಮೂಲನಿವಾಸಿಗಳ ಪದ್ದತಿ ಸಂಸ್ಕೃತಿಯ ಬಗ್ಗೆ ಮಾಹಿತಿಯ ಕೊರತೆ ಇದೆ ಎಂಬ ಮಾತು ಸಭೆಯಲ್ಲಿ ಕೇಳಿ ಬಂತು. ಸಭೆಯಲ್ಲಿ ಕೋವಿ ವಿಷಯವಾಗಿ ಒಕ್ಕೊರಳಿನ ಬೆಂಬಲ ವ್ಯಕ್ತವಾಗಿ ಖಂಡನಾ ನಿರ್ಣಯದೊಂದಿಗೆ ಕಾನೂನು ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ಸಭೆ ಸೂಚಿಸಿತು. ಸರಕಾರದ ನಡೆಯನ್ನು ಗಮನಿಸಿ ಮುಂದಿನ ಹೆಜ್ಜೆ ಇಡುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, ಅಖಿಲ ಕೊಡವ ಸಮಾಜದ ಪ್ರಧಾನ ಕಾರ್ಯದರ್ಶಿ ಅಮ್ಮುಣಿಚಂಡ ರಾಜ ನಂಜಪ್ಪ ಸೇರಿದಂತೆ ಆಡಳಿತ ಮಂಡಳಿಯ ಪ್ರಮುಖರಾದ ಮಂಡೇಪಂಡ ಸುಗುಣ ಮುತ್ತಣ್ಣ, ನಂದೇಟೀರ ರಾಜ ಮಾದಪ್ಪ, ಐನಂಡ ಪಿ ಗಣಪತಿ, ಕಾಳಿಮಾಡ ಮೋಟಯ್ಯ, ಚೇಮಿರ ಸಿ ಅರ್ಜುನ್, ಮೂವೇರ ರೇಖಾ ಪ್ರಕಾಶ್, ಚೇಂದಂಡ ವಸಂತ್, ಕೋಲತಂಡ ಸುಬ್ರಮಣಿ, ಕುಶಾಲನಗರ ಕೊಡವ ಸಮಾಜ ಅಧ್ಯಕ್ಷ ಮಂಡೇಪಂಡ ಬಿ ಮೊಣ್ಣಪ್ಪ, ಅಮ್ಮತಿ ಕೊಡವ ಸಮಾಜ ಅಧ್ಯಕ್ಷ ಮೂಕೊಂಡ ಬೋಸ್ ದೇವಯ್ಯ, ನಾಪೋಕ್ಲು ಕೊಡವ ಸಮಾಜ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಯೂತ್ ವಿಂಗ್ ಪ್ರಧಾನ ಕಾರ್ಯದರ್ಶಿ ಸಣ್ಣುವಂಡ ದರ್ಶನ್ ಕಾವೇರಪ್ಪ, ಸಂಘಟನಾ ಕಾರ್ಯದರ್ಶಿ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ, ಸದಸ್ಯರಾದ ಮುರುವಂಡ ಸುಮಾ ಕುಟ್ಟಪ್ಪ ಹಾಗೂ ಕಾಣತಂಡ ವಿವೇಕ್ ಅಯ್ಯಪ್ಪ ಮೊದಲಾದವರು ಉಪಸ್ಥಿತರಿದ್ದರು.