ಕೋವಿಡ್ 19 ಸರಪಳಿ ತುಂಡರಿಸಲು ಎಲ್ಲರೂ ಕೈಜೋಡಿಸಿ: ಅಪ್ಪಚ್ಚು ರಂಜನ್

-ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಪಂಚಾಯತ್ ಕೆಡಿಪಿ ಸಭಾಂಗಣದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳೊಂದಿಗೆ ಶುಕ್ರವಾರ ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಯಿತು.ಶಾಸಕ ಒಪ್ಪು ರಂಜನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಡಿಕೇರಿ ತಾಲ್ಲೂಕಿನ ಹೊದಕಾನ ಗ್ರಾಮದಲ್ಲಿ ಇದುವರೆಗೆ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ, ಅದೇ ರೀತಿ ಉಳಿದ ಗ್ರಾಮಗಳನ್ನೂ ಕೋವಿಡ್ ಮುಕ್ತ ಮಾಡಲು ಶ್ರಮಿಸಬೇಕು ಎಂದು ಶಾಸಕರು ನಿರ್ದೇಶನ ನೀಡಿದರು.ಕೋವಿಡ್ 19 ನಿಯಂತ್ರಣಕ್ಕೆ ಪ್ರತಿ ಹಂತದ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಕೋವಿಡ್ 19 ಸಾಂಕ್ರಾಮಿಕ ರೋಗದಂತಹ ಸಂದಿಗ್ಧ ಹಾಗೂ ಸಂಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಆರೋಗ್ಯದ ಜೊತೆಗೆ ಇತರರ ಆರೋಗ್ಯದ ಕಡೆಯೂ ಗಮನಹರಿಸುವುದು ಅಗತ್ಯ. ಆ ದಿಸೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಪ್ರತಿ ಹಂತದಲ್ಲಿಯೂ ಮುನ್ನೆಚ್ಚರ ವಹಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ತಿಳಿಸಿದರು.

ಗೃಹ ಸಂಪರ್ಕ ತಡೆಯಲ್ಲಿರುವವರ ಬಗ್ಗೆ ತುಂಬಾ ಎಚ್ಚರ ವಹಿಸಬೇಕು. ಮನೆಯಲ್ಲಿ ಇತರ ಸದಸ್ಯರಿಗೆ ಹರಡದಂತೆ ನೋಡಿಕೊಳ್ಳಬೇಕು. ಕೊಡಗು ಜಿಲ್ಲೆಯಲ್ಲಿ ವಾರದಲ್ಲಿ ಬೆಳಗ್ಗೆ 6 ರಿಂದ 10 ಗಂಟೆ ವರೆಗೆ ತರಕಾರಿ, ಹಾಲು, ದಿನಸಿ ಇತರ ಪದಾರ್ಥಗಳನ್ನು ಕೊಳ್ಳಲು ಅವಕಾಶ ಮಾಡಿದ್ದರಿಂದ ಜಿಲ್ಲೆಯಲ್ಲಿ ಆದಷ್ಟು ಕೋವಿಡ್ 19 ನಿಯಂತ್ರಣಕ್ಕೆ ಬಂದಿದೆ ಎಂದು ಅಪ್ಪಚ್ಚು ರಂಜನ್ ಅವರು ಅಭಿಪ್ರಾಯಪಟ್ಟರು.
ಕೋವಿಡ್ 19 ಸರಪಳಿ ತುಂಡರಿಸಲು ಪ್ರತಿಯೊಬ್ಬರೂ ಕೈಜೋಡಿಸಿ ಕರ್ತವ್ಯ ನಿರ್ವಹಿಸಬೇಕು. ಜೂನ್ 7 ರ ನಂತರವೂ ಲಾಕ್‍ಡೌನ್ ಮುಂದುವರೆಯಬಾರದು. ಆ ದಿಸೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಾರ್ವಜನಿಕರೂ ಸಹಕರಿಸುವಂತಾಗಬೇಕು ಎಂದರು.

ಕೋವಿಡ್ 19 ಪಾಸಿಟಿವ್ ಬಂದಿರುವ ಎಲ್ಲಾ ಬಡ ಕುಟುಂಬಗಳಿಗೂ ಆಹಾರ ಕಿಟ್‍ನ್ನು ಕಡ್ಡಾಯವಾಗಿ ವಿತರಿಸಬೇಕು. ಯಾವುದೇ ಕಾರಣಕ್ಕೂ ಬಡವರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದು ಶಾಸಕರು ಸಲಹೆ ಮಾಡಿದರು.
ಸರ್ಕಾರದ ನಿರ್ದೇಶನದಂತೆ ಅರ್ಹರಿಗೆ ಲಸಿಕೆ ನೀಡುವುದು, ಕೋವಿಡ್ ಪರೀಕ್ಷೆ ಮಾಡುವುದು ಹೀಗೆ ಹಲವು ಕಾರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರು ನಿರ್ದೇಶನ ನೀಡಿದರು.
ಕೋವಿಡ್ 19 ನಿಯಂತ್ರಣ ಜೊತೆಗೆ ಮುಂಗಾರು ಎದುರಿಸಲು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಸಲಹೆ ಮಾಡಿದರು.

ಜಿ.ಪಂ.ಉಪ ಕಾರ್ಯದರ್ಶಿ ಲಕ್ಷ್ಮಿ ಅವರು ಮಾತನಾಡಿ ಕೋವಿಡ್ 19 ಪಾಸಿಟಿವ್ ಬಂದವರಲ್ಲಿ ಮನೆಯಲ್ಲಿ ಅಗತ್ಯ ಸೌಲಭ್ಯ ಇಲ್ಲದವರನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಸೇರ್ಪಡೆ ಮಾಡಬೇಕು. ಯಾವುದೇ ಕಾರಣಕ್ಕೂ ಗೃಹ ಸಂಪರ್ಕ ತಡೆಯಲ್ಲಿರಿಸಬಾರದು ಎಂದರು.

error: Content is protected !!