ಕೋವಿಡ್ ಹೆಸರಿನಲ್ಲಿ ಅಮಾಯಕ ಜೀವ ಬಲಿ

ಯಡಿಯೂರಪ್ಪ ಸರ್ಕಾರ ವಜಾಕ್ಕೆ ಸರಿತಾ ಪೂಣಚ್ಚ ಆಗ್ರಹ

ಮಡಿಕೇರಿ : ಅಮಾಯಕ ಜೀವಗಳೊಂದಿಗೆ ಚೆಲ್ಲಾಟವಾಡುತ್ತಿರುವ ಸರ್ಕಾರದ ವಿರುದ್ಧ ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೇಚಮಾಡ ಸರಿತಾ ಪೂಣಚ್ಚ ಆಕ್ರೋಶ ವ್ಯಕ್ತಪಡಿಸಿ ವಜಾ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಬಿಜೆಪಿ ಸರ್ಕಾರ ಬಂದ ಮೇಲೆ ಜನಸಾಮಾನ್ಯರಿಗೆ ನೆಮ್ಮದಿ ಇಲ್ಲದಂತಾಗಿದೆ .

ಕೋವಿಡ್ ಹೆಸರಿನಲ್ಲಿ ನಿರಂತರವಾಗಿ ಅಮಾಯಕ ಜೀವಗಳು ಬಲಿಯಾಗುತ್ತಿದ್ದು ಕುಟುಂಬಕ್ಕೆ ಆಧಾರವಾಗಿರುವ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡು ಕುಟುಂಬ ಸಂಕಷ್ಟಕ್ಕೊಳಗಾಗಿದೆ.
ಕೋವಿಡ್ 19 ಸಂಬಂಧಿಸಿದಂತೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ
ಅಸಹಾಯಕತೆ ತೋರಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಔಷಧಿಗಳು. ಆರೈಕೆ ಸಿಗದೆ ಆಮ್ಲಜನಕ ಕೊರತೆಯಿಂದ ರೋಗಿಗಳು ಸಾವನ್ನಪ್ಪುತ್ತಿದ್ದಾರೆ.

ಜನ ಸೇವೆ ಮಾಡಬೇಕಾದ ಮಂತ್ರಿಗಳು ಆರಂಭದಲ್ಲೇ ಗಂಭೀರವಾಗಿ ಪರಿಗಣಿಸದೆ ಕಡೆಗಣಿಸಿದ ಪರಿಣಾಮವೇ ಎಲ್ಲಾ ಜಿಲ್ಲೆಗಳಲ್ಲೂ ಸಾವು ನೋವುಗಳು ಸಂಭವಿಸುತ್ತಿವೆ.
ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟ ಘಟನೆ ರಾಜ್ಯವೇ ತಲೆತಗ್ಗಿಸುವಂತಾಗಿದೆ.

ಪ್ರಕರಣದ ಗಂಭೀರತೆಯನ್ನು ಪರಿಗಣಿಸದೆ.
ಅಧಿಕಾರಿಗಳ ಮೇಲೆ ಗೂಬೆ ಕೂರಿಸುವ ಷಡ್ಯಂತ್ರ ನಡೆಯುತ್ತಿದ್ದು ತನಿಖೆ ಮೂಲಕ
ಪ್ರಕರಣವನ್ನ ಮುಚ್ಚಿ ಹಾಕಲು ಮುಂದಾಗಿದ್ದಾರೆ.
ಈ ಕಾರಣಕ್ಕಾಗಿಯೇ ಸಂಸದ ತೇಜಸ್ವಿ ಸೂರ್ಯ ಬೆಡ್ ಬ್ಲಾಕ್ ದಂದೆ ಹೆಸರಿನಲ್ಲಿ ಒಂದು ವರ್ಗವನ್ನು ದೂಷಿಸುವ ಮೂಲಕ ಸ್ವಪಕ್ಷದ ಅಕ್ರಮವನ್ನು ಮುಚ್ಚಿ ಹಾಕಲು ಮುಂದಾಗಿದ್ದಾರೆ.
ಕೇಂದ್ರ, ರಾಜ್ಯ, ಬಿಬಿಎಂಪಿ ಇವರ ಆಡಳಿತದಲ್ಲಿದ್ದರೂ, ಬೆಡ್ ಬ್ಲಾಕ್ ಷಡ್ಯಂತ್ರದಲ್ಲಿ ಬಿಜೆಪಿಯೇ ನೇರ ಶಾಮೀಲಾಗಿದ್ದು, ಪ್ರಕರಣವನ್ನು ತಿರುಚುವ ಮೂಲಕ ಒಂದು ಸಮುದಾಯದವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದೆ.
ಕರ್ನಾಟಕದಿಂದ ಗೆದ್ದ ಸಂಸದರ ಕೊಡುಗೆ ರಾಜ್ಯಕ್ಕೆ ಏನಿದೆ ಎಂದು ಪ್ರಶ್ನಿಸಿದ ಅವರು ಪ್ರವಾಹ, ಪ್ರಕೃತಿ ವಿಕೋಪ, ರೈತರ ಬೇಡಿಕೆ, ಕಾರ್ಮಿಕರ ಬೇಡಿಕೆ, ಜನಸಾಮಾನ್ಯರು ಸಂಕಷ್ಟದ ಪರಿಸ್ಥಿತಿಯ ಬಗ್ಗೆ ಮಾತನಾಡದ ಇವರು ಜಾತಿ ಹೆಸರಿನಲ್ಲಿ ರಾಜಕಾರಣ ಮಾಡಿ ಅಶಾಂತಿ ಸೃಷ್ಟಿಸುವ ಹೇಳಿಕೆಗಳಿಗೆ ಸೀಮಿತ ವಾಗಿದ್ದಾರೆಯೇ ಹೊರತು ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುತ್ತಿಲ್ಲ.
ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂತ್ರಿಯ ವಿರುದ್ಧ ಯಾವುದೇ ಕ್ರಮಕೈಗೊಳ್ಳದ ಸರ್ಕಾರ ಅವರ ರಕ್ಷಣೆಗೆ ನಿಂತಿದ್ದು ರಾಜ್ಯದ ಜನತೆ ಪ್ರಶ್ನಿಸುವಂತಾಗಿದೆ.
ಇಂಥ ಘಟನೆಗಳನ್ನು ಮುಚ್ಚಿಹಾಕುವ ಪ್ರಯತ್ನ ಸಂದರ್ಭದಲ್ಲೇ ಕೋವಿಡ್ ಹೆಸರಿನಲ್ಲಿ ನಿರ್ಬಂಧ ಹೇರುವ ಮೂಲಕ ಚಾಮರಾಜನಗರ ಪ್ರಕರಣ ಸೇರಿದಂತೆ ಹಲವು ಘಟನೆಗಳನ್ನು ತಿರುಚುವ ಯತ್ನ ನಡೆಯುತ್ತಿದೆ.

ಕಳೆದ ಹಲವು ವರ್ಷಗಳಿಂದ ಕೊಡಗಿನ ರೈತರು, ಕಾರ್ಮಿಕರು ,ಸಾಮಾನ್ಯ ಜನರು ಪ್ರವಾಹ, ಪ್ರಕೃತಿ ವಿಕೋಪ, ಕಾಡುಪ್ರಾಣಿಗಳ ಹಾವಳಿ ಸೇರಿದಂತೆ ಹಲವು ಸಮಸ್ಯೆಗಳಿಂದ ಸಂಕಷ್ಟದಲ್ಲಿದ್ದಾರೆ.
ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದರೂ ಇಲ್ಲಿನ ಜನಪ್ರತಿನಿಧಿಗಳು ಅಭಿವೃದ್ಧಿ ಬಗ್ಗೆ ಯಾವುದೇ ಕಾಳಜಿ ವಹಿಸದೆ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ.

ಕೂಡಲೇ ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡುವ ಮೂಲಕ.ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ಅಗತ್ಯ ಸೇವೆಗಳನ್ನು ಸಾರ್ವಜನಿಕರಿಗೆ ನೀಡಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ .

error: Content is protected !!