ಕೋವಿಡ್ ಸಂಬಂಧ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಅವಮಾನ ಅಸಹನೀಯ: ಹೆಚ್.ಎನ್ ಮಂಜುನಾಥ್

ಕೊಡಗು: ಜಿಲ್ಲೆಯ ಶಿಕ್ಷಕರಿಗೆ ಕೋವಿಡ್ ಸಂಬಂಧ ಕಾರ್ಯ ನಿರ್ವಹಿಸಲು ಅಗತ್ಯ ಪರಿಕರಗಳನ್ನು ನೀಡಬೇಕಾಗಿ ಜಿಲ್ಲಾ ಪಂಚಾಯತ್ ಆದೇಶಿಸಿದ್ದರೂ ಇನ್ನು ಅವುಗಳನ್ನು ನೀಡದ ಕುರಿತು ಹಾಗು ಜಿಲ್ಲಾ ಪಂಚಾಯತ್ ನ ಉಪ ಕಾರ್ಯದರ್ಶಿಗಳಾದ ಶ್ರೀಮತಿ ಲಕ್ಷ್ಮೀರವರು ಶಿಕ್ಷಕರನ್ನು ಅವಮಾನಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿರುವ ಕುರಿತು ಕ.ರಾ.ಪ್ರಾ.ಶಾ.ಶಿ ಸಂಘ(ರಿ)ದ ಅಧ್ಯಕ್ಷರಾದ ಹೆಚ್.ಎನ್ ಮಂಜುನಾಥ್ ಅವರು ಖಂಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿ, ‘ಕೋವಿಡ್-19 ಗೆ ಸಂಬಂಧಿಸಿದಂತೆ ಜಿಲ್ಲೆಯ ಸಮಸ್ತ ನೌಕರರು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ತಮಗೆ ಸೂಚಿಸಿದ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಅದರಲ್ಲೂ ವಿಶೇಷವಾಗಿ ರಜಾ ಸಹಿತ ಇಲಾಖೆಯಾದ ಶಿಕ್ಷಣ ಇಲಾಖೆಯ ಗೌರವಾನ್ವಿತ ಶಿಕ್ಷಕರು ಕೂಡ ಕಳೆದ ವರ್ಷದಿಂದಲೂ ಕೋವಿಡ್ ಸಂಬಂಧಿತ ಕೆಲಸ ಮಾಡುತ್ತಾ ಬಂದಿದ್ದು, ಅದರಲ್ಲೂ ಈ ಬಾರಿ ಇನ್ನೂ ಹೆಚ್ಚಿನ ಜವಾಬ್ದಾರಿ ನಮ್ಮ ಶಿಕ್ಷಕರ ಮೇಲಿರುತ್ತದೆ.

ಕೊರೊನಾ ಸೋಂಕಿತರ ಮನೆಯ ಬಳಿ ತೆರಳಿ ಸ್ಥಳದಲ್ಲೇ ಆ ಮನೆಯ ಪೋಟೋ ತೆಗೆದು upload ಮಾಡುವುದಲ್ಲದೆ, ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರ ಹೆಸರನ್ನು ಅವರಿಂದಲೇ ಮಾಹಿತಿ ಪಡೆದು ನಮೂದಿಸುವ ಗುರುತರವಾದ ಜವಾಬ್ದಾರಿ ನಮ್ಮ ಶಿಕ್ಷಕ ವೃಂದದವರ ಮೇಲಿದೆ ಅಲ್ಲದೆ, ಚೆಕ್ ಪೋಸ್ಟ್ ಗಳಲ್ಲೂ, ಸಹಾಯ ವಾಣಿಯಲ್ಲೂ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇದರ ಜೊತೆಗೆ ನಮ್ಮ ಇಲಾಖೆ ಕೇಳುವ ಅಗತ್ಯ ಮಾಹಿತಿಗಳನ್ನು ಕೂಡ ನೀಡುತ್ತಿದ್ದೇವೆ ಎಂದು ತಮ್ಮ ಶಿಕ್ಷಕ ವೃಂದದ ಸೇವೆಯನ್ನು ನೆನೆದರು.

ಕೋವಿಡ್ ಕರ್ತವ್ಯ ದ ಹಿನ್ನೆಲೆಯಲ್ಲಿ ದಿನಾಂಕ 6-5- 2021ರಂದು ಮಾನ್ಯ ಉಸ್ತುವಾರಿ ಸಚಿವರು, ಶಾಸಕದ್ವಯರು, ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಮನವಿ ಸಲ್ಲಿಸಿ ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದೆವು. ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದಾಗ್ಯೂ ಇದುವರೆಗೆ ಪ್ರಮುಖವಾಗಿ ಸೋಂಕಿತರ ಮನೆಗೆ ತೆರಳುವ ಸಂದರ್ಭದಲ್ಲಿ ಅಗತ್ಯವಾಗಿ ಬೇಕಾದ ಪರಿಕರಗಳನ್ನು ನೀಡಲು ಮನವಿ ಮಾಡಿದ್ದು 6ನೇ ತಾರೀಖಿನಂದೇ ಪ್ರತಿ ತಾ.ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಗಳಿಗೆ ಆದೇಶ ಮಾಡಿ ಕರ್ತವ್ಯ ನಿರತರಿಗೆ ಪರಿಕರಗಳನ್ನು ಒದಗಿಸಲು ಜಿಲ್ಲಾ ಪಂಚಾಯ್ತಿಯು ಈಗಾಗಲೇ ತಿಳಿಸಿದ್ದರೂ, ಇದುವರೆಗೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಆದರೂ ನಮ್ಮ ಶಿಕ್ಷಕ ವೃಂದ ತಮ್ಮ ತಮ್ಮ ರಕ್ಷಣೆಗೆ ಬೇಕಾದ ವ್ಯವಸ್ಥೆ ತಾವೆ ಮಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ಜಿಲ್ಲಾ ಪಂಚಾಯತ್ ನ ಉಪ ಕಾರ್ಯದರ್ಶಿಗಳಾದ ಶ್ರೀಮತಿ ಲಕ್ಷ್ಮೀ ರವರು ಸಾಮಾಜಿಕ ಜಾಲತಾಣದಲ್ಲಿ ನೌಕರರಿಗೆ ಅವಮಾನ, ಸ್ವಾಭಿಮಾನಕ್ಕೆ ಧಕ್ಕೆ ತರುವ ಹೇಳಿಕೆಯಾದ ಪರಿಕರಗಳನ್ನು ಕೊಂಡುಕೊಳ್ಳಲು ಶಕ್ತರಲ್ಲವೇ? 100 ರೂಪಾಯಿಗಳನ್ನು ಖರ್ಚು ಮಾಡಲು ಶಕ್ತಿ ಇಲ್ಲವೇ? ವಿದ್ಯಾವಂತರಾದ ನಾವು ಅವಿವೇಕಿಗಳ ವರ್ತನೆ ಬಿಡಬೇಕು ಎಂದಿರುವುದು ಎಷ್ಟರಮಟ್ಟಿಗೆ ಸರಿ? ಎಂಬುದು ನಮ್ಮ ಪ್ರಶ್ನೆ. ಗೌರವಯುತವಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಮಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಷ್ಟಕ್ಕೂ ನೆರೆಯ ಜಿಲ್ಲಾಡಳಿತ ಎಲ್ಲಾ ತರಹದ ವ್ಯವಸ್ಥೆ ಕಲ್ಪಿಸಿರುವಾಗ ನಾವುಗಳು ಕೇಳುವುದು ತಪ್ಪಾ? ಅವುಗಳಿಗೆ ನಮ್ಮಲ್ಲಿ ಅವಕಾಶ ಇಲ್ಲ ಎಂದಿದ್ದರೆ, ನಾವು ಕೇಳುತ್ತಿರಲಿಲ್ಲ. ಜಿಲ್ಲಾಡಳಿತವೇ ಆದೇಶ ಮಾಡಿ, ಆ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಿರುವ ನಡುವೆ ಇವರ ಹೇಳಿಕೆಯನ್ನು ಖಂಡಿಸುತ್ತಾ ಇಡೀ ಜಿಲ್ಲೆಯ ಬಂಧುಗಳು ಕೊರೊನಾ ಮಹಾಮಾರಿಯ ಕರಿನೆರಳಿನಲ್ಲಿರುವಾಗ ನಮ್ಮ ವೃತ್ತಿ ಬಾಂದವರು ಜೀವ ಭಯದಲ್ಲಿಯೇ ತಮ್ಮ ಕರ್ತವ್ಯವನ್ನು ಚ್ಯುತಿ ಬಾರದಂತೆ ನಿರ್ವಹಿಸುತ್ತಿರುವ ಈ ಸಂದರ್ಭದಲ್ಲಿ ಹೇಳಿಕೆ ವಿರುದ್ಧ ಹೋರಾಟಕ್ಕಿಳಿಯುವುದು ಅಮಾನವೀಯ ಲಕ್ಷಣವೆಂದು ತೀರ್ಮಾನಿಸಿ ಲಾಕ್ ಡೌನ್ ಮುಗಿದ ತಕ್ಷಣ ಮಾನ್ಯ ಉಸ್ತುವಾರಿ ಸಚಿವರು, ಶಾಸಕರು, ಮಾನ್ಯ ಜಿಲ್ಲಾಧಿಕಾರಿಗಳ ಗಮನ ಸೆಳೆದು ಕೆಳ ಹಂತದ ನೌಕರರಿಗೆ ಅವಮಾನ, ಸ್ವಾಭಿಮಾನಕ್ಕೆ ಧಕ್ಕೆ ಯಾಗುವಂತಹ ಹೇಳಿಕೆ ನೀಡಿರುವ ಅಧಿಕಾರಿಗಳ ವಿರುದ್ದ ಹೋರಾಟ ನಡೆಸಬೇಕಾಗುತ್ತದೆಂದು ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಕ.ರಾ.ಪ್ರಾ.ಶಾ.ಶಿ ಸಂಘ (ರಿ)ದ ಅಧ್ಯಕ್ಷರಾದ ಶ್ರೀ ಹೆಚ್.ಎನ್. ಮಂಜುನಾಥ್ ಅವರು ತಿಳಿಸಿದ್ದಾರೆ.

error: Content is protected !!