fbpx

ಕೊಲೆ ಯತ್ನ ಪ್ರಕರಣಕ್ಕಾಗಿ ಹೈ ಅಲಟ್೯

ವಿಜಯಪುರ, (ನ. 04): ಭೀಮಾ ತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಹೈ ಅಲರ್ಟ್ ಆಗಿದ್ದು, ನಿನ್ನೆ ವಿಜಯಪುರಕ್ಕೆ ಆಗಮಿಸಿದ್ದ ಬೆಳಗಾವಿ ಉತ್ತರ ವಲಯ ಐಜಿ ರಾಘವೇಂದ್ರ ಸುಹಾಸ್ ವಿಜಯಪುರದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಮೊನ್ನೆ ತಡರಾತ್ರಿ ವಿಜಯಪುರಕ್ಕೆ ಆಗಮಿಸಿದ್ದ ಐಜಿ ನಿನ್ನೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸುಮಾರು ಅರ್ಧ ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದರು. ಅಲ್ಲದೇ, ಎಷ್ಟು ಬೇಕೋ ಅಷ್ಟು ಸಿಬ್ಬಂದಿಯನ್ನು ಬಳಸಿ ಘಟನಾ ಸ್ಥಳದಲ್ಲಿ ಇಂಚಿಂಚೂ ತಪಾಸಣೆ ನಡೆಸುವಂತೆ ಸೂಚನೆ ನೀಡಿದ್ದರು. ಅಲ್ಲಿಂದ ಮರಳಿದ ಬಳಿಕ ವಿಜಯಪುರದಲ್ಲಿಯೇ ಠಿಕಾಣಿ ಹೂಡಿದ ಐಜಿ ಈ ಪ್ರಕರಣವನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದು, ವಿಜಯಪುರ ಪೊಲೀಸರಿಗೆ ಹಲವಾರು ರೀತಿಯಲ್ಲಿ ತನಿಖೆ ನಡೆಸುವ ಕುರಿತು ಮಾರ್ಗದರ್ಶನ ನೀಡಿದ್ದಾರೆ.

ಶೂಟೌಟ್ ಸಂದರ್ಭದಲ್ಲಿ ಎರಡೂ ಕಡೆಯಿಂದ 17 ಸುತ್ತು ಗುಂಡಿನ ದಾಳಿ ನಡೆದಿದೆ. ಘಟನಾ ಸ್ಥಳದಲ್ಲಿ 8 ಸುತ್ತು ಖಾಲಿ ಗುಂಡುಗಳು, 5 ಜೀವಂತ ಗುಂಡುಗಳು ಮತ್ತು ಮಹಾದೇವ ಸಾಹುಕಾರ ಭೈರಗೊಂಡ ಸಂಚರಿಸುತ್ತಿದ್ದ ಕಾರಿನಲ್ಲಿ 4 ಖಾಲಿ ಗುಂಡುಗಳು ಪತ್ತೆಯಾಗಿವೆ. ಹೀಗಾಗಿ ಒಟ್ಟು 17 ಸುತ್ತು ಗುಂಡುಗಳನ್ನು ಹಾರಿಸಲಾಗಿದೆ. ಮತ್ತೊಂದೆಡೆ ನಾನಾ ಪೊಲೀಸ್ ಅಧಿಕಾರಿಗಳ ತಂಡಗಳು ಹಲವಾರು ಆಯಾಮಗಳಲ್ಲಿ ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದ ಸಂಪೂರ್ಣ ತನಿಖೆಗೆ ಸುಮಾರು 10ಕ್ಕೂ ಹೆಚ್ಚು ತಂಡಗಳನ್ನು ರಚಿಸಲಾಗಿದ್ದು, ಒಂದೊಂದು ತಂಡಕ್ಕೆ ಒಂದೊಂದು ಜವಾಬ್ದಾರಿಯನ್ನು ನೀಡಲಾಗಿದೆ. ಎಲ್ಲಾ ಪೊಲೀಸ್ ತಂಡಗಳೂ ಕಳೆದ ಮೂರು ದಿನಗಳಿಂದ ನಾನಾ ಕಡೆ ತೆರಳಿ ತನಿಖೆ ಕೈಗೊಂಡಿವೆ. ಈಗಗಾಲೇ ಆರೇಳು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಪ್ರಮುಖ ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ ಮುಂದುವರಿಸಲಾಗಿದೆ. ಈ ಮಧ್ಯೆ ವಿಜಯಪುರ ಜಿಲ್ಲೆಯ 1500 ಜನ ಪೊಲೀಸರನ್ನು ಈ ಪ್ರಕರಣ ತನಿಖೆಯಲ್ಲಿ ಬಳಸಲಾಗುತ್ತಿದ್ದು, ಒಂದೊಂದು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಸಮಾಜ ವಿರೋಧಿ ಚಟುವಟಿಕೆ ನಡೆಸುವವರ ಬಗ್ಗೆ ಮಾಹಿತಿ ಸಂಗ್ರಹಿಸಲು ಐಜಿ ರಾಘವೇಂದ್ರ ಸುಹಾರ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

ಪ್ರಕರಣ ತನಿಖೆಗೆ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ ನೇತೃತ್ವದಲ್ಲಿ 10ಕ್ಕೂ ಹೆಚ್ಚು ತಂಡಗಳ ರಚನೆ ಮಾಡಲಾಗಿದ್ದು, ಹಂತಕರ ಪತ್ತೆಗೆ 37 ಇನ್ಸ್​​​ಪೆಕ್ಟರ್‌ಗಳನ್ನು ನಿಯೋಜಿಸಲಾಗಿದೆ. ಅಲ್ಲದೇ, ಘಟನೆ ನಡೆದ ಸ್ಥಳದ ಸುತ್ತಲೂ 3 ಕೀ.ಮೀ ವ್ಯಾಪ್ತಿಯಲ್ಲಿ ಪೊಲೀಸರಿಂದ ಸಾಕ್ಷಿಗಳಿಗಾಗಿ ಹುಡುಕಾಟ ಮುಂದುವರೆದಿದೆ. ಭೀಮಾ ತೀರದ ಚಡಚಣ, ಕೆರೂರು, ಟಾಕಳಿ, ಉಮರಾಣಿ, ಲೋಣಿ, ಕೊಂಕಣಗಾಂವ ಸುತ್ತಲೂ ದಿನವಿಡೀ ಪೊಲೀಸರ ನಾನಾ ತಂಡಗಳು ಗಸ್ತು ತಿರುಗುತ್ತಿವೆ.

ಐಜಿಪಿ ರಾಘವೇಂದ್ರ ಸುಹಾಸ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪೆಟ್ರೋಲ್ ಬಾಂಬ್ ಪತ್ತೆಯಾಗಿವೆ. ಈ ವರೆಗೆ 10ಕ್ಕೂ ಹೆಚ್ಚು ಪೆಟ್ರೋಲ್ ಬಾಂಬ್, ಹೊಸದಾಗಿ ರೆಡಿ ಮಾಡಿಸಿದ್ದ ತಲವಾರ್‌ಗಳು ಪತ್ತೆಯಾಗಿವೆ. ಈ ಶೂಟೌಟ್ ನಲ್ಲಿ ಹೊರ ರಾಜ್ಯಗಳ ಕಂಟ್ರಿ ಮೇಡ್ ಪಿಸ್ತೂಲು ಬಳಕೆಯಾಗಿರುವ ಸಾಧ್ಯತೆಯಿದೆ. ಪೆಟ್ರೋಲ್ ಬಾಂಬ್, ಕಂಟ್ರಿ ಪಿಸ್ತೂಲ್, ತಲವಾರ್, ಟಿಪ್ಪರ್, ಕಲ್ಲು ತೂರುವ ಗ್ಯಾಂಗ್ ಗಳು ದಾಳಿಯಲ್ಲಿ ಪಾಲ್ಗೊಂಡಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಈ ಘಟನೆಯಲ್ಲಿ ಮಹಾದೇವ ಸಾಹುಕಾರ ಭೈರಗೊಂಡ ಕಡೆಯ ಇಬ್ಬರು ಸಾವಿಗೀಡಾಗಿದ್ದಾರೆ.
ದಾಳಿ ನಡೆಸಿದವರು ಮಹಾರಾಷ್ಟ್ರದ ಪುಣೆ, ನಾಂದೆಡ್, ಉತ್ತರ ಪ್ರದೇಶ ಬಿಹಾರ್ ಕಡೆ ಪರಾರಿಯಾಗಿರುವ ಸಾಧ್ಯತೆ ಇದೆ.

ಕೃಪೆ: ನ್ಯೂಸ್ 18 ಕನ್ನಡ

error: Content is protected !!