fbpx

ಕೊಡವ ಭಾಷೆ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಮುಖ್ಯಮಂತ್ರಿ ಅವರಿಗೆ ಮನವಿ

ಮಡಿಕೇರಿ ಸೆ.23:-ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಹಲವು ವರ್ಷಗಳಿಂದ ಕೊಡವ ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನ ನಡೆಸಿದೆ.

2022 ರಲ್ಲಿ ಸಮಗ್ರ ಮಾಹಿತಿಯನ್ನು ಒಳಗೊಂಡ ಮನವಿಯನ್ನು ಅಕಾಡೆಮಿ ವತಿಯಿಂದ ಕಳುಹಿಸಿಕೊಡಲಾಗಿದೆ. ಸಮಗ್ರ ಮಾಹಿತಿಯನ್ನು ಒಳಗೊಂಡ ಈ ದಾಖಲೆಯಲ್ಲಿ ವಿಷಯ ಪ್ರಸ್ತಾವನೆಯಲ್ಲದೆ ಕೊಡವ ಭಾಷೆಯಲ್ಲಿರುವ ಕೊಡವ ಲಿಪಿ, ಕೊಡವ ವ್ಯಾಕರಣ, ಕೊಡವ ಶಬ್ಧಕೋಶ, ಸಂಶೊಧನೆ, ದಾಖಲೀಕರಣ, ಚಲನಚಿತ್ರ, ವಸ್ತುಸಂಗ್ರಹಾಲಯ, ಚಾನೆಲ್, ಪತ್ರಿಕೆಗಳು, ಧಾರವಾಹಿ, ಸಾಕ್ಷ್ಯಚಿತ್ರ, ಕೊಡವ ಭಾಷೆಯನ್ನು ಶಾಲೆಯಲ್ಲಿ, ಕಾಲೇಜಿನಲ್ಲಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಇರುವ ಪಠ್ಯಕ್ರಮ, ಕೊಡವ ಅಧ್ಯಯನ ಪೀಠ ಹೀಗೆ ಸುಮಾರು 150 ಪುಟಗಳನ್ನು ಒಳಗೊಂಡಂತ ದಾಖಲೆಯನ್ನು ನೀಡಲಾಗಿದೆ.

ಈ ಹೊಸ ದಾಖಲೆಗಳನ್ನು ಹಾಗೂ ಹಳೆಯ ದಾಖಲೆಗಳನ್ನು ಸೇರಿಸಿ ಮನವಿ ಪತ್ರದೊಡನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಂಧನ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವರಾದ ಸುನಿಲ್‍ಕುಮಾರ್ ಅವರಿಗೂ, ಲೋಕಸಭಾ ಸದಸ್ಯರಾದ ಪ್ರತಾಪ್‍ಸಿಂಹ ಅವರಿಗೂ, ಸೆಂಟ್ರಲ್ ಇನ್ಸ್‍ಟಿಟ್ಯೂಷನ್ ಆಫ್ ಲ್ಯಾಂಗ್‍ವೇಜ್‍ನ ನಿರ್ದೇಶಕರಿಗೂ ಸೆಪ್ಟೆಂಬರ್, 22 ರಂದು ಸಲ್ಲಿಸಲಾಯಿತು. ಅಲ್ಲದೆ ಕೊಡಗಿನ ಎಲ್ಲಾ ಶಾಸಕರಿಗೂ ಈ ಮನವಿಯನ್ನು ಸಲ್ಲಿಸಲಾಗಿದೆ. ಈ ಬಗ್ಗೆ ಉತ್ತಮ ಸ್ಪಂದನೆ ದೊರಕಿದೆ. 8ನೇ ಪರಿಚ್ಛೇದಕ್ಕೆ ಸೇರಿಸುವ ಆಶ್ವಾಸನೆಯನ್ನು ಎಲ್ಲರು ನೀಡಿದ್ದಾರೆ. ಮನವಿ ಸಲ್ಲಿಸಲು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಸದಸ್ಯರಾದ ಮಾಚಿಮಾಡ ಜಾನಕಿ ಮಾಚಯ್ಯ, ಬಬ್ಬಿರ ಸರಸ್ವತಿ, ಕುಡಿಯರ ಮುತ್ತಪ್ಪ, ನಾಗೇಶ್ ಕಾಲೂರು, ಅಜ್ಜಿನಿಕಂಡ ಮಹೇಶ್ ನಾಚಯ್ಯ ಮತ್ತು ಚಾಮೇರ ದಿನೇಶ್ ನಾಚಯ್ಯ ಅವರು ಹಾಜರಿದ್ದರು.

error: Content is protected !!